ಗೂಗಲ್ ಮ್ಯಾಪ್ ತೋರಿಸಿದ ದಾರಿ ನಂಬಿ ಕಣಿವೆಗೆ ಬಿದ್ದ ಟಾಟಾ ಟಿಗೋರ್ ಕಾರು; ಮಧ್ಯಪ್ರದೇಶದಲ್ಲಿ ನಡೆದ ಘಟನೆಯ ವಿವರ
Dec 03, 2024 06:31 PM IST
ಗೂಗಲ್ ಮ್ಯಾಪ್ ತೋರಿಸಿದ ದಾರಿ ನಂಬಿ ಕಣಿವೆಗೆ ಬಿದ್ದ ಟಾಟಾ ಟಿಗೋರ್ ಕಾರಿನ ರಕ್ಷಣೆ ಕಾರ್ಯ
- Google Maps misguides incident: ಉತ್ತರ ಪ್ರದೇಶದ ಬರೇಲಿಯಲ್ಲಿ ಮೂವರು ಪ್ರಯಾಣಿಕರಿದ್ದ ಟಾಟಾ ಟಿಗೋರ್ ಕಾರೊಂದು ಕಣಿವೆಗೆ ಉರುಳಿಬಿದ್ದಿದೆ. ಗೂಗಲ್ ಮ್ಯಾಪ್ ತಪ್ಪಾಗಿ ತೋರಿಸಿದ ದಾರಿಯನ್ನುಅನುಸರಿಸಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಬೆಂಗಳೂರು: ಅಪರಿಚಿತ ರಸ್ತೆಯಲ್ಲಿ ಸಾಗುವಾದ ದಾರಿದೀಪವಾಗುವ ಗೂಗಲ್ ಮ್ಯಾಪ್‌ನಿಂದ ಸಾಕಷ್ಟು ಪ್ರಯೋಜನವಿದೆ. ಆದರೆ, ಕೆಲವೊಮ್ಮೆ ಗೂಗಲ್ ಮ್ಯಾಪ್ ನ್ಯಾವಿಗೇಷನ್ ನಂಬಿ ಯಡವಟ್ಟಾಗುವುದುಂಟು. ಉತ್ತರ ಪ್ರದೇಶದಲ್ಲಿ ಗೂಗಲ್ ಮ್ಯಾಪ್ ನಂಬಿ ಸಾಗಿದ ಟಾಟಾ ಟಿಗೋರ್ ಕಾರೊಂದು ಕಣಿವೆಗೆ ಉರುಳಿಬಿದ್ದಿದೆ. ಮೂವರು ಪ್ರಯಾಣಿಕರಿದ್ದ ಟಾಟಾ ಟಿಗೋರ್ ಕಾರು ರಸ್ತೆಯಿಂದ ಆಯತಪ್ಪಿ ಕಣಿವೆಗೆ ಬಿದ್ದಿದೆ. ರಕ್ಷಣಾ ಪಡೆಗಳು ತಕ್ಷಣ ಮೂವರು ಪ್ರಯಾಣಿಕರನ್ನು ರಕ್ಷಿಸಿದೆ. ಟಾಟಾ ಟಿಗೋರ್ ಕಾರಿನ ಸುರಕ್ಷತಾ ಫೀಚರ್‌ಗಳಿಂದಾಗಿ ಕಣಿವೆಯಲ್ಲಿ ಹಲವು ಸುತ್ತು ಉರುಳಿಬಿದ್ದರೂ ಪ್ರಯಾಣಿಕರು ಜೀವ ಉಳಿಸಿಕೊಂಡಿದ್ದಾರೆ. ಈ ಘಟನೆ ಇಂದು ಅಂದರೆ ಡಿಸೆಂಬರ್ 3ರಂದು ನಡೆದಿದೆ. ನವೆಂಬರ್ 24ರಂದು ಇದೇ ರೀತಿಯ ಘಟನೆ ನಡೆದಿತ್ತು. ಬರೇಲಿ ಬಳಿ ಅಪೂರ್ಣ ಸೇತುವೆಯ ಮೇಲಿನಿಂದ ಕಾರು ಕೆಳಕ್ಕೆ ಬೀಳಲು ಗೂಗಲ್ ಮ್ಯಾಪ್ ಕಾರಣವಾಗಿತ್ತು.
ಮೂವರು ಪ್ರಯಾಣಿಕರು ಬಿಳಿ ಬಣ್ಣದ ಟಾಟಾ ಟಿಗೋರ್ ಸೆಡಾನ್ ಕಾರಿನಲ್ಲಿ ಉತ್ತರ ಪ್ರದೇಶದ ಪಿಲಿಭಿತ್ ಕಡೆಗೆ ಹೋಗುತ್ತಿದ್ದರು. ಅವರಿಗೆ ಆ ದಾರಿಯ ಪರಿಚಯ ಇರಲಿಲ್ಲ. ದಾರಿಗಾಗಿ ಅವರು ಗೂಗಲ್ ಮ್ಯಾಪ್ ನ್ಯಾವಿಗೇಷನ್ ಬಳಸಿದ್ದರು. ಮ್ಯಾಪ್ ಮೂಲಕ ಬರೇಲಿಯ ಬಡಾ ಬೈಪಾಸ್ ತಲುಪಲು ಪ್ರಯತ್ನಿಸುತ್ತಿದ್ದರು. ಆಗ ಗೂಗಲ್ ಮ್ಯಾಪ್ ಅವರಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ಬರೇಲಿ-ಪಿಲಿಭಿತ್ ರಾಜ್ಯ ಹೆದ್ದಾರಿಯ ಮೂಲಕ ಸಾಗುವ ಆಯ್ಕೆ ಮತ್ತು ಹಳ್ಳಿಯ ಚಿಕ್ಕ ದಾರಿಯಲ್ಲಿ ಸಾಗುವ ಆಯ್ಕೆ ನೀಡಿತ್ತು. ಈ ಮೂವರು ಬೇಗ ತಲುಪುವ ಉದ್ದೇಶದಿಂದ ಚಿಕ್ಕ ಮಾರ್ಗದಲ್ಲಿ ಹೋಗಲು ನಿರ್ಧರಿಸಿದರು. ಈ ದಾರಿಯಲ್ಲಿ ಸುಮಾರು ಐದು ಕಿಲೋಮೀಟರ್ ಸಾಗಿದ ಬಳಿಕ ಬರ್ಕಾಪುರ ಗ್ರಾಮದ ಕ್ರಾಸಿಂಗ್ ಬಳಿ ರಸ್ತೆ ಕುಸಿತವಾದ ಸ್ಥಳದಲ್ಲಿ ಕಾರು ಪಲ್ಟಿಯಾಗಿ ಕಾಳಾಪುರ ಕಣಿವೆಗೆ ಬಿದ್ದಿದೆ ಎಂದು ವರದಿಗಳು ತಿಳಿಸಿವೆ.
ನವೆಂಬರ್ 24ರಂದು ಕೂಡ ಇದೇ ರೀತಿಯ ಘಟನೆ ವರದಿಯಾಗಿತ್ತು. ಗೂಗಲ್ ಮ್ಯಾಪ್ಸ್ ನ್ಯಾವಿಗೇಷನ್ ನಂಬಿ ಸಾಗಿದ ಮೂವರು ಸ್ನೇಹಿತರು ಅಪೂರ್ಣ ಸೇತುವೆ ಮೇಲೆ ಸಾಗಿ ನೀರಿಗೆ ಬಿದ್ದಿದ್ದರು. ಮೂವರು ಮೃತಪಟ್ಟಿದ್ದರು. ಕಾರು ಅತಿವೇಗದಲ್ಲಿ ಚಲಿಸಿ ಸೇತುವೆಯಿಂದ ರಾಮಗಂಗಾ ನದಿಗೆ ಬಿದ್ದು ಮೂವರೂ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ನಿರ್ಲಕ್ಷ್ಯದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಎಂಜಿನಿಯರ್‌ಗಳು ಮತ್ತು ಗೂಗಲ್ ಮ್ಯಾಪ್ಸ್ ಅಧಿಕಾರಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.
ಗೂಗಲ್ ಮ್ಯಾಪ್ ಎಂದರೇನು?
ಈಗ ಬಹುತೇಕ ಎಲ್ಲರೂ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಮ್ಯಾಪ್ ಬಳಸುತ್ತಿದ್ದಾರೆ. ನ್ಯಾವಿಗೇಷನ್‌ಗೆ ಸಹಾಯ ಮಾಡುವ ಗೂಗಲ್‌ನ ಅಪ್ಲಿಕೇಷನ್ ಇದಾಗಿದೆ. ಇದು ಆಪಲ್ ಮತ್ತು ಆಂಡ್ರಾಯ್ಡ್ ಸಾಧನಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಜಗತ್ತಿನಾದ್ಯಂತ ಅತ್ಯಧಿಕ ಸಂಖ್ಯೆಯಲ್ಲಿ ಜನರು ಇದನ್ನು ಬಳಸುತ್ತಿದ್ದಾರೆ. ಟ್ರಾಫಿಕ್ ಪರಿಸ್ಥಿತಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರಸ್ತೆ ಪರಿಸ್ಥಿತಿಗಳು, ಪರ್ಯಾಯ ಮಾರ್ಗಗಳು ಮತ್ತು ಗಮ್ಯಸ್ಥಾನಕ್ಕೆ ಅಂದಾಜು ಸಮಯದ ಕುರಿತು ನೈಜ-ಸಮಯದ ಡೇಟಾವನ್ನು ಗೂಗಲ್ ಮ್ಯಾಪ್ ನೀಡುತ್ತದೆ. ಕಾರುಗಳಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯಲ್ಲಿ ಗೂಗಲ್ ಮ್ಯಾಪ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಗೂಗಲ್ ಮ್ಯಾಪ್ ಸಂಪೂರ್ಣ ಅವಲಂಬನೆ ಸರಿಯೇ?
10 ದಿನಗಳ ಅಂತರದಲ್ಲಿ ಬರೇಲಿಯಲ್ಲಿ ಸಂಭವಿಸಿದ ಎರಡು ರಸ್ತೆ ಅಪಘಾತಗಳನ್ನು ನೋಡುವಾಗ "ಗೂಗಲ್ ಮ್ಯಾಪ್ ಅನ್ನು ಕುರುಡಾಗಿ ನಂಬಬಾರದು" ಎಂಬ ಸಂಗತಿ ಮನದಟ್ಟಾಗಿರಬಹುದು. ಇದಕ್ಕೂ ಹಿಂದೆಯೂ ಇದೇ ರೀತಿಯ ಘಟನೆಗಳು ನಡೆದಿದ್ದವು. ಗೂಗಲ್ ಮ್ಯಾಪ್ ತೋರಿಸಿದ ದಾರಿಯದಲ್ಲಿ ಸಾಗಿದ ಫೋರ್ಡ್ ಎಂಡೀವರ್ ಎಸ್‌ಯುವಿ ತೆಲಂಗಾಣದ ಕಾಲುವೆಗೆ ಇಳಿದಿತ್ತು. ಅಮೆರಿಕದಲ್ಲಿ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ಅನುಸರಿಸಿ ಸಾಗುವಾಗ ಮುರಿದ ಸೇತುವೆಯಿಂದ ಕಾರು ಬಿದ್ದು ಮೃತಪಟ್ಟಿದ್ದರು. ಹೀಗಾಗಿ, ನ್ಯಾವಿಗೇಷನ್ ಅನ್ನು ಬಳಸುವಾಗಲೂ ಕೆಲವೊಂದು ಅಪರಿಚಿತ ರಸ್ತೆಯಲ್ಲಿ ಅಲ್ಲಿನ ಜನರಲ್ಲಿ ವಿಚಾರಿಸಿ ಮುಂದೆ ಸಾಗುವುದು ಉತ್ತಮ. ಗೊತ್ತಿಲ್ಲದ ರಸ್ತೆಯಲ್ಲಿ ಅತಿವೇಗದಲ್ಲಿ ಸಾಗಬಾರದು. ಮಂಜು ಮುಸುಕಿರುವ ರಸ್ತೆಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಸಾಗಿ.