ಇಹಲೋಕಕ್ಕೆ ರತನ್ “ಟಾಟಾ”: ಫೋರ್ಡ್ ಮಾಡಿದ ಅವಮಾನಕ್ಕೆ ಜಾಗ್ವಾರ್ ಖರೀದಿಸಿ ತಿರುಗೇಟು ನೀಡಿದ ರತನ್ ಟಾಟಾರ ಸ್ಪೂರ್ತಿದಾಯಕ ಕಥೆ
ದಿವಂಗತ ರತನ್ ಟಾಟಾ ಬದುಕಿನ ಸ್ಪೂರ್ತಿದಾಯಕ ಕಥೆಗಳು: ಕೈಗಾರಿಕೋದ್ಯಮಿ ರತನ್ ಟಾಟಾ(86) ನಿಧನ ಸುದ್ದಿ ಅವರ ಅಪಾರ ಅಭಿಮಾನಿಗಳಿಗೆ ನೋವು ಉಂಟುಮಾಡಿದೆ.ಟಾಟಾ ಬದುಕಿನ ಸಕ್ಸಸ್ ಸ್ಟೋರಿಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಫೋರ್ಡ್ ಮಾಡಿದ ಅವಮಾನಕ್ಕೆ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಟಾಟಾ ಕಥೆಯಂತೂ ಸ್ಪೂರ್ತಿದಾಯಕ.
ದಿವಂಗತ ರತನ್ ಟಾಟಾ ಬದುಕಿನ ಸ್ಪೂರ್ತಿದಾಯಕ ಕಥೆಗಳು: ಕೈಗಾರಿಕೋದ್ಯಮಿ ರತನ್ ಟಾಟಾ(86) ಬುಧವಾರ ರಾತ್ರಿ ನಿಧನರಾಗಿದ್ದಾರೆ. ಇಂದು ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಟಾಟಾ ಗ್ರೂಪ್ ಅನ್ನು ಎಲ್ಲರೂ ನಿಬ್ಬೆರಗಾಗುವಂತೆ ಬೆಳೆಸಿದ ರತನ್ ಟಾಟಾರ ನಿಧನ ಸುದ್ದಿ ಅವರ ಅಪಾರ ಅಭಿಮಾನಿಗಳಿಗೆ ನೋವು ಉಂಟುಮಾಡಿದೆ. ದಿವಂಗತ ರತನ್ ಟಾಟಾ ಬದುಕಿನ ಸಕ್ಸಸ್ ಸ್ಟೋರಿಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಫೋರ್ಡ್ ಕಂಪನಿಯು ಮಾಡಿದ ಅವಮಾನಕ್ಕೆ ಪ್ರತಿಯಾಗಿ ಜಾಗ್ವಾರ್ ಆಂಡ್ ಲ್ಯಾಂಡ್ ರೋವರ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಟಾಟಾ ಕಥೆಯಂತೂ ರೋಚಕ ಮತ್ತು ಸ್ಪೂರ್ತಿದಾಯಕ. ಟಾಟಾ ಕಂಪನಿಯು ಜೆಎಲ್‌ಆರ್ ಕಂಪನಿಯನ್ನು ಖರೀದಿಸಿದ್ದು ಪ್ರತಿಕಾರಕ್ಕಾಗಿಯೇ? ಫೋರ್ಡ್ ಕಂಪನಿ ಟಾಟಾ ಮೋಟಾರ್ಸ್‌ಗೆ ಅವಮಾನಿಸಿದ ಕಥೆಯೇನು? ಬನ್ನಿ ನೆನಪಿಸಿಕೊಳ್ಳೋಣ.
ದಿವಂಗತ ರತನ್ ಟಾಟಾ ಬದುಕಿನ ಸ್ಪೂರ್ತಿದಾಯಕ ಕಥೆ
ಜಗತ್ತಿಗೆ ಟಾಟಾ ನ್ಯಾನೋ ಎಂಬ ಅಗ್ಗದ ಕಾರು ನೀಡಿದ ಖ್ಯಾತಿ ರತನ್ ಟಾಟಾ ಅವರದ್ದು. ಇದೇ ಸಮಯದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ದುಬಾರಿ ಕಾರುಗಳ ಮಾರುಕಟ್ಟೆಯಲ್ಲೂ ಸಾಕಷ್ಟು ಸಾಧನೆ ಮಾಡಿದೆ. ರೇಂಜ್ ರೋವರ್ ಮತ್ತು ಜಾಗ್ವಾರ್ ಎಫ್ ಮಾದರಿಯ ಕಾರುಗಳನ್ನು ನೀಡಿದ್ದ ಜಾಗ್ವಾರ್ ಲ್ಯಾಂಡ್‌ರೋವರ್ ಅನ್ನು ಟಾಟಾ ಮೋಟಾರ್ಸ್ ಸ್ವಾಧೀನಪಡಿಸಿಕೊಂಡದ್ದು ಜಗತ್ತಿನ ಗಮನ ಸೆಳೆಯಿತು. ಇದು ಸಾಮಾನ್ಯ ವ್ಯವಹಾರದಂತೆ ಕಂಡರೂ ಇದರಲ್ಲಿ ವೈಯಕ್ತಿಕ ನೋವಿನ ಕಥೆಯೂ ಇದೆ. ರತನ್ ಟಾಟಾರಿಗೆ ಅವಮಾನ ಮಾಡಿದ ಕಂಪನಿಯ ಪ್ರಮುಖ ಅಂಗಸಂಸ್ಥೆಯನ್ನೇ ಸ್ವಾಧೀನ ಪಡಿಸಿಕೊಂಡ ಕಥೆ ಇದಾಗಿದೆ. ಅವಮಾನಗಳಾದಗ ಕುಗ್ಗದೆ ಹೇಗೆ ಯಶಸ್ಸಿನತ್ತ ನಡೆಯಬೇಕು ಎನ್ನುವ ಸ್ಪೂರ್ತಿದಾಯಕ ಪಾಠವನ್ನು ದಿವಂಗತ ರತನ್ ಟಾಟಾ ಬಿಟ್ಟು ಹೋಗಿದ್ದಾರೆ.
ಫೋರ್ಡ್ ಕಂಪನಿಯ ಜತೆ ನಡೆದ ಚರ್ಚೆ
ಇದು 1999ರಲ್ಲಿ ನಡೆದ ಘಟನೆ. ಟಾಟಾ ಕಂಪನಿಯ ನಷ್ಟದಲ್ಲಿರುವ ಪ್ರಯಾಣಿಕ ಕಾರು ವಿಭಾಗದ ಮಾರಾಟಕ್ಕೆ ಸಂಬಂಧಪಟ್ಟಂತೆ ಚರ್ಚೆ ಮಾಡಲು ರತನ್ ಟಾಟಾ ಮತ್ತು ತಂಡವು ಫೋರ್ಡ್ ಕಂಪನಿಯನ್ನು ಭೇಟಿಯಾಗಿತ್ತು. ಟಾಟಾ ಇಂಡಿಕಾ ಕಾರಿಗೆ ಗ್ರಾಹಕರ ನೀರಸ ಪ್ರತಿಕ್ರಿಯೆ ಇದಕ್ಕೆ ಕಾರಣ. ಡೆಟ್ರಾಯಿಟ್‌ನಲ್ಲಿ ನಡೆದ ಸಂಭೆಯಲ್ಲಿ ಫೋರ್ಡ್‌ನ ಎಕ್ಸಿಕ್ಯೂಟಿವ್‌ಗಳು ಟಾಟಾ ಕಂಪನಿಗೆ ಅವಮಾನ ಮಾಡಿದ್ದಾರೆ ಎಂದು ವರದಿಗಳು ಹೇಳಿವೆ. “ಅಲ್ಲಾ... ನೀವ್ಯಾಕೆ ಪ್ರಯಾಣಿಕ ಕಾರು ಮಾರುಕಟ್ಟೆಗೆ ಪ್ರವೇಶಿಸಿದ್ದೀರಿ” ಎಂದು ಟೀಕಿಸಿದ್ದರು. ಈ ಸಂದರ್ಭದಲ್ಲಿ ನಾವು ನಿಮಗೆ ಸಹಾಯ ಮಾಡುವ ಸಲುವಾಗಿ ಪ್ರಯಾಣಿಕ ಕಾರು ವಿಭಾಗ ಖರೀದಿಸುವೆವು ಎಂದು ಅಹಂಕಾರದ ಮಾತುಗಳನ್ನು ರತನ್ ಟಾಟಾ ಕೇಳಬೇಕಾಯಿತು. ರತನ್ ಟಾಟಾ ತಕ್ಷಣ ಆ ಡೀಲ್‌ಗೆ ಗುಡ್‌ಬೈ ಹೇಳಿದರು. ಫೋರ್ಡ್ ಕಂಪನಿಯ ಆಲೋಚನೆ ತಪ್ಪು ಎಂದು ತೋರಿಸುವೆ ಎಂದು ದೃಢ ನಿರ್ಧಾರ ಕೈಗೊಂಡರು. ಅಂದಿನಿಂದ ಟಾಟಾ ಬ್ರ್ಯಾಂಡ್ ಕಟ್ಟುವ ಕುರಿತು ವಿಶೇಷ ಛಲ ಹೊಂದಿದ್ದರು.
ಜೆಎಲ್‌ಆರ್ ಸ್ವಾಧೀನ: ರತನ್ ಟಾಟಾ ರಿವೇಂಜ್
2008ರಲ್ಲಿ ಫೋರ್ಡ್ ಕಂಪನಿಯು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿ ದಿವಾಳಿಯಂಚಿಗೆ ತಲುಪಿತ್ತು. ಈ ಸಮಯದಲ್ಲಿ ರತನ್ ಟಾಟಾರಿಗೆ ಇದು ಅವಕಾಶದಂತೆ ಕಾಣಿಸಿತ್ತು. ವಾಹನೋದ್ಯಮದಲ್ಲಿ ಟಾಟಾ ಮೋಟಾರ್ಸ್ ದೊಡ್ಡ ಕಂಪನಿಯಾಗಿ ಬೆಳೆದಿತ್ತು. ಸುಮಾರು 230 ಕೋಟಿ ಡಾಲರ್‌ಗೆ ಫೋರ್ಡ್‌ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಒಂದು ಸಮಯದಲ್ಲಿ ಅವಮಾನ ಮಾಡಿದ ಕಂಪನಿಯ ಪ್ರಮುಖ ಕಾರು ವಿಭಾಗವನ್ನೇ ತನ್ನದಾಗಿಸಿಕೊಂಡ ಸಾಧನೆಯ ಕಥೆಯಾಗಿ ಎಲ್ಲೆಡೆ ಇದು ಪ್ರಚಾರ ಪಡೆಯಿತು.
ಆ ಸಮಯದಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ನ ಹಳೆಯ ವೈಭವವನ್ನು ಮತ್ತೆ ಜಗತ್ತಿಗೆ ನೀಡುವ ಸಂಕಲ್ಪ ರತನ್ ಟಾಟಾರಿಗಿತ್ತು. ಜನಪ್ರಿಯ ಬ್ರಿಟಿಷ್ ಬ್ರಾಂಡ್‌ನ ಗುಣಮಟ್ಟವನ್ನು ಟಾಟಾ ಮೋಟಾರ್ಸ್ ಕಾಯ್ದುಕೊಳ್ಳಬಲ್ಲುದೇ ಎಂಬ ಪ್ರಶ್ನೆಯೂ ಆ ಸಂದರ್ಭದಲ್ಲಿ ಎದುರಾಗಿತ್ತು. ನಂತರ ನಡೆದದ್ದು ಇತಿಹಾಸ.