logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Hath Se Hath Jodo: ಕೈ ಜತೆಗೆ ಕೈ ಜೋಡಿಸಿ ಅಭಿಯಾನದ ಲಾಂಛನ ಬಿಡುಗಡೆ ಮಾಡಿದ ಕಾಂಗ್ರೆಸ್‌

Hath se Hath Jodo: ಕೈ ಜತೆಗೆ ಕೈ ಜೋಡಿಸಿ ಅಭಿಯಾನದ ಲಾಂಛನ ಬಿಡುಗಡೆ ಮಾಡಿದ ಕಾಂಗ್ರೆಸ್‌

HT Kannada Desk HT Kannada

Jan 21, 2023 03:28 PM IST

google News

ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಲಾಂಛನ ಬಿಡುಗಡೆ

  • Hath se Hath Jodo: ಹಾತ್‌ ಸೇ ಹಾತ್‌ ಜೋಡೋ ಅಭಿಯಾನಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚಾಲನೆ ನೀಡಲಿದ್ದಾರೆ. ಇದು ಮೊದಲ ಹಂತದಲ್ಲಿ ಗ್ರಾಮ ಮತ್ತು ಬ್ಲಾಕ್‌ ಮಟ್ಟದಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ ಮತ್ತು ಮೂರನೇ ಹಂತದಲ್ಲಿ ರಾಜ್ಯಮಟ್ಟದಲ್ಲಿ ಆಯೋಜನೆಯಾಗಲಿದೆ ಎಂದು ಜೈರಾಮ್‌ ರಮೇಶ್‌ ವಿವರಿಸಿದರು.

ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಲಾಂಛನ ಬಿಡುಗಡೆ
ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಲಾಂಛನ ಬಿಡುಗಡೆ (HT)

ಕಾಂಗ್ರೆಸ್‌ ಪಕ್ಷವು ಜನವರಿ 26ರಿಂದ ಶುರುಮಾಡಲಿರುವ ʻಹಾತ್‌ ಸೇ ಹಾತ್‌ ಜೋಡೋʼ(Hath se Hath Jodo) ಅಭಿಯಾನದ ಲಾಂಛನವನ್ನು ಶನಿವಾರ ಅನಾವರಣಗೊಳಿಸಿದೆ.

ಕೈ ಜತೆಗೆ ಕೈ ಜೋಡಿಸಿ ಅಭಿಯಾನದ ಲಾಂಛನ ಬಿಡುಗಡೆ ಸಮಾರಂಭದಲ್ಲೇ ಕಾಂಗ್ರೆಸ್‌ ನಾಯಕರು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ವಿರುದ್ದ 8 ಪುಟಗಳ ಚಾರ್ಜ್‌ಶೀಟ್‌ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಈ ಚಾರ್ಜ್‌ಶೀಟನ್ನು ಕಾಂಗ್ರೆಸ್‌ ಪಕ್ಷವು ಮನೆ ಮನೆ ಅಭಿಯಾನದ ವೇಳೆ ಬಳಸಿಕೊಳ್ಳಲಿದೆ.

ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ಕೈ ಜತೆಗೆ ಕೈ ಜೋಡಿಸಿ ಅಭಿಯಾನದ ಲಾಂಛನ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ್ದು, ಭಾರತ್‌ ಜೋಡೋ ಯಾತ್ರೆ ಒಂದು ಸೈದ್ಧಾಂತಿಕ ಚಳವಳಿಯಾಗಿತ್ತು. ಈಗ ಹಾತ್‌ ಸೇ ಹಾತ್‌ ಜೋಡೋ ಅಭಿಯಾನವು ಮನೆ ಮನೆಗೆ ಚುನಾವಣಾ ಪ್ರಚಾರ ಅಭಿಯಾನವಾಗಿ ರೂಪುಗೊಳ್ಳಲಿದೆ. ಇದು ಮೋದಿ ಸರ್ಕಾರದ ವೈಫಲ್ಯಗಳನ್ನು ಪ್ರತಿಯೊಬ್ಬ ಭಾರತೀಯನಿಗೂ ತಲುಪಿಸಲಿದೆ ಎಂದು ಹೇಳಿದರು.

ಹಾತ್‌ ಸೇ ಹಾತ್‌ ಜೋಡೋ ಅಭಿಯಾನಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಚಾಲನೆ ನೀಡಲಿದ್ದಾರೆ. ಇದು ಮೊದಲ ಹಂತದಲ್ಲಿ ಗ್ರಾಮ ಮತ್ತು ಬ್ಲಾಕ್‌ ಮಟ್ಟದಲ್ಲಿ ನಡೆಯಲಿದೆ. ಎರಡನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ ಮತ್ತು ಮೂರನೇ ಹಂತದಲ್ಲಿ ರಾಜ್ಯಮಟ್ಟದಲ್ಲಿ ಆಯೋಜನೆಯಾಗಲಿದೆ ಎಂದು ಜೈರಾಮ್‌ ರಮೇಶ್‌ ವಿವರಿಸಿದರು.

ಹಾತ್‌ ಸೇ ಹಾತ್‌ ಜೋಡೋ ಅಭಿಯಾನವು ನೇರವಾತಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳನ್ನು ಉದ್ದೇಶಿಸಿದ್ದಾಗಿದ್ದು, ನಿಶ್ಚಿತವಾಗಿಯೂ ರಾಜಕೀಯ ಅಭಿಯಾನವಾಗಿರಲಿದೆ. ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಎರಡು ಅಥವಾ ಮೂರನೇ ಹಂತದಲ್ಲೂ ಆಯೋಜನೆ ಆಗಬಹುದು. ಈ ಅಭಿಯಾನದಲ್ಲಿ ಬಿಜೆಪಿ ವಿರುದ್ಧದ ಚಾರ್ಜ್‌ಶೀಟ್‌ನ ಜತೆಗೆ ರಾಹುಲ್‌ ಅವರ ಪತ್ರವೂ ಮನೆ ಮನೆಗೆ ತಲುಪಿಸುವುದು ನಮ್ಮ ಉದ್ದೇಶ ಎಂದು ಜೈರಾಮ್‌ ರಮೇಶ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಕೂಡಾ ಇದ್ದರು. ಅವರು, ಈ ಭಾರತ್‌ ಜೋಡೋ ಯಾತ್ರೆಯು ಜನವರಿ 30ರಂದು ಕೊನೆಯಾಗಲಿದೆ. ಆದರೆ ಇದರ ಉದ್ದೇಶ ಕೊನೆಯಾಗುವುದಿಲ್ಲ. ಅದು ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಮೂಲಕ ಮುಂದುವರಿಯಲಿದೆ ಎಂದು ಹೇಳಿದರು.

ಭಾರತ್‌ ಜೋಡೋ ಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಈ ಪಾದಯಾತ್ರೆಯು ಜನವರಿ 29ಕ್ಕೆ ಕೊನೆಯಾಗಲಿದೆ. ಆದಾಗ್ಯೂ ಜನವರಿ 30ರಂದು ಅಧಿಕೃತವಾಗಿ ಯಾತ್ರೆ ಸಂಪನ್ನಗೊಳ್ಳಲಿದೆ. ಅದೇ ದಿನ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ರಾಹುಲ್‌ ಗಾಂಧಿ ಅವರು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಅದೇ ದಿನ ದೇಶಾದ್ಯಂತ ಪಕ್ಷದ ನಾಯಕರು ಜಿಲ್ಲಾ ಮಟ್ಟದಲ್ಲಿ ಕಚೇರಿಗಳಲ್ಲಿ ತಿರಂಗಾ ಹಾರಿಸಲಿದ್ದಾರೆ. ಶ್ರೀನಗರದಲ್ಲಿ ಬೃಹತ್‌ ಸಾರ್ವಜನಿಕ ಸಮಾರಂಭವನ್ನೂ ಕಾಂಗ್ರೆಸ್‌ ಆಯೋಜಿಸಲಿದೆ.

ದೇಶದ ಉದ್ದಗಲಕ್ಕೂ 130 ದಿನ ನಡೆದ ಐತಿಹಾಸಿಕ ಭಾರತ್‌ ಜೋಡೋ ಯಾತ್ರೆಯ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ದೇಶವಾಸಿಗಳಿಂದ ಸಾಕಷ್ಟು ಮಾಹಿತಿ ಲಭ್ಯವಾಗಿದೆ. ಪಾದಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರ ಜತೆಗೆ ಲಕ್ಷಾಂತರ ಜನ ಮಾತುಕತೆ ನಡೆಸಿದ್ದಾರೆ. ಅವರ ನೋವುಗಳನ್ನು ಹಂಚಿಕೊಂಡಿದ್ದಾರೆ. ಮೋದಿ ಸರ್ಕಾರದ ಆಡಳಿತದ ದುಷ್ಪರಿಣಾಮಗಳನ್ನು ವಿವರಿಸಿದ್ದಾರೆ. ಇದನ್ನೆಲ್ಲ ಸಂಗ್ರಹಿಸಿ ನಾವು ಇವತ್ತು ಮೋದಿ ಸರ್ಕಾರದ ವಿರುದ್ದ ಚಾರ್ಜ್‌ಶೀಟ್‌ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ವೇಣುಗೋಪಾಲ್‌ ಹೇಳಿದರು.

ಅಗತ್ಯ ಇದೆ ಎಂದಾದರೆ ಪ್ರದೇಶ ಕಾಂಗ್ರೆಸ್‌ ಕಚೇರಿಗಳಲ್ಲೂ ಈ ಜಾರ್ಜ್‌ಶೀಟ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಪ್ರತಿ ರಾಜ್ಯದಲ್ಲೂ ಬಿಜೆಪಿ ಅಟ್ರಾಸಿಟಿಗಳು ಜನರಿಗೆ ಗೊತ್ತಾಗಬೇಕಿದೆ. ನಮಗೆ ದೇಶದ ನಾಡಿಮಿಡಿತದ ನೈಜ ಅನುಭವ ಉಂಟಾಗಿದೆ. ಹೀಗಾಗಿ ಹಾತ್‌ ಸೇ ಹಾತ್‌ ಜೋಡೋ ಅಭಿಯಾನದ ಸಂದರ್ಭದಲ್ಲಿ ಈ ಚಾರ್ಜ್‌ಶೀಟ್‌ ಮನೆ ಮನೆ ತಲುಪಲಿದೆ ಎಂದು ವೇಣುಗೋಪಾಲ್‌ ವಿವರಿಸಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ