Bharat Jodo Yatra: ಭಾರತ್ ಜೋಡೋ ಸಮಾರೋಪ ಕಾರ್ಯಕ್ರಮಕ್ಕೆ 21 "ಸಮಾನ ಮನಸ್ಕ" ಪಕ್ಷಗಳನ್ನು ಆಹ್ವಾನಿಸಿದ ಕಾಂಗ್ರೆಸ್
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಮಾಪ್ತಿಗೊಳ್ಳಲಿದ್ದು, ಈ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಪಕ್ಷವು 21 "ಸಮಾನ ಮನಸ್ಕ" ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ 21 ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ನವದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ಜನವರಿ 30ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಸಮಾಪ್ತಿಗೊಳ್ಳಲಿದ್ದು, ಈ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಪಕ್ಷವು 21 "ಸಮಾನ ಮನಸ್ಕ" ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವಂತೆ, 21 "ಸಮಾನ ಮನಸ್ಕ" ರಾಜಕೀಯ ಪಕ್ಷಗಳ ಅಧ್ಯಕ್ಷರುಗಳಿಗೆ ಪತ್ರ ಬರೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಹ್ವಾನಿತ ಪಕ್ಷಗಳ ಪಟ್ಟಿಯಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ), ಜನತಾ ದಳ ಯುನೈಟೆಡ್ (ಜೆಡಿಯು), ತೆಲುಗು ದೇಶಂ ಪಕ್ಷ(ಟಿಡಿಪಿ), ಸಿಪಿಎಂ, ಆರ್‌ಜೆಡಿ, ಸಮಾಜವಾದಿ ಪಕ್ಷ(ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಸೇರಿವೆ. ಆದರೆ ಭಾರತ್ ಜೋಡೋ ಸಮಾರೋಪ ಸಮಾರಂಭಕ್ಕೆ ಆಮ್ ಆದ್ಮಿ ಪಕ್ಷ(ಆಪ್)ಕ್ಕೆ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ಕಳುಹಿಸದಿರುವುದು ಗಮನ ಸೆಳೆದಿದೆ.
ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ, ಕೋವಿಡ್ ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಜಾರಿಗಳಿಸುವಂತೆ, ಆಪ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಇದು ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸುವ ಆಪ್‌ನ ಪರೋಕ್ಷ ಪ್ರಯತ್ನ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಬರೆದಿರುವ ಪತ್ರಕ್ಕೆ, ಈ 21 ರಾಜಕೀಯ ಪಕ್ಷಗಳು ಇದುವರೆಗೂ ಉತ್ತರಿಸಿಲ್ಲ.
"ಈ ಸಮಾರಂಭದಲ್ಲಿ, ನಾವು ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಹೋರಾಡಲು, ಸತ್ಯ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಹರಡಲು ಮತ್ತು ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ.." ಎಂದು ಮಲ್ಲಿಕಾರ್ಜುನ ಖರ್ಗೆ ಅವರು 21 ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ತನ್ನ 3,750 ಕಿ.ಮೀ. ಮಾರ್ಗದಲ್ಲಿ, ವಿವಿಧ ಸಮಾನ ಮನಸ್ಕ ಪಕ್ಷಗಳ ನಾಯಕರು ಮತ್ತು ನಾಗರಿಕ ಸಮಾಜದ ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಆದಾಗ್ಯೂ ಈ ಯಾತ್ರೆಯ ಕುರಿತು ಹಲವು ವಿರೋಧ ಪಕ್ಷಗಳು ಮೌನವಹಿಸಿವೆ. ಇದು ಬಿಜೆಪಿ ವಿರೋಧಿ ವಿಪಕ್ಷಗಳ ನಡುವಿನ ಕಂದಕವನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದೆ.
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಯಾತ್ರೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಾಗೆಯೇ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್(ಬಿಆರ್‌ಎಸ್) ಕೂಡ ಈ ಯಾತ್ರಯಿಂದ ದೂರ ಉಳಿದಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಮಿತ್ರಪಕ್ಷ ಶಿವಸೇನೆಯ ಸ್ಥಳೀಯ ಘಟಕದ ನಾಯಕರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾಗೆಯೇ ಗುಪ್ಕರ್ ಒಕ್ಕೂಟದ ಮತ್ತೊಬ್ಬ ಸದಸ್ಯ ಸಿಪಿಎಂನ ಎಂವೈ ತರಿಗಾಮಿ ಕೂಡ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.
ದೇಶದ ಕೋಮುಸೌಹಾರ್ದತೆ ಗಟ್ಟಿಗೊಳಿಸುವ ಉದ್ದೇಶದಿಂದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯು, ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಸಂಚರಿಸಿದೆ. ಯಾತ್ರೆ ಸದ್ಯ ಪಂಜಾಬ್‌ನಲ್ಲಿ ಸಂಚರಿಸುತ್ತಿದೆ.