logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ, ಇಲ್ಲಿದೆ 5 ಅಂಶಗಳ ವಿವರ

ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ, ಇಲ್ಲಿದೆ 5 ಅಂಶಗಳ ವಿವರ

Umesh Kumar S HT Kannada

Nov 05, 2024 04:35 PM IST

google News

ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ ಎಂಬುದನ್ನು ವಿವರಿಸುವ 5 ಅಂಶಗಳ ವಿವರಣೆ. (ಸಾಂಕೇತಿಕ ಚಿತ್ರ)

  • ಅಮೆರಿಕ ಚುನಾವಣೆ 2024: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಮತದಾನ ಇಂದು (ನವೆಂಬರ್ 5). ಮತದಾನ ಮುಗಿದ ಕೂಡಲೇ ಮತ ಎಣಿಕೆ ಶುರುವಾಗುತ್ತದೆ. ಭಾರತದ ಚುನಾವಣಾ ವ್ಯವಸ್ಥೆಯಂತೆ ಇಲ್ಲ ಅಮೆರಿಕದ್ದು. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ ಎಂಬುದರ 5 ಅಂಶಗಳ ವಿವರಣೆ ಇಲ್ಲಿದೆ.

ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ ಎಂಬುದನ್ನು ವಿವರಿಸುವ 5 ಅಂಶಗಳ ವಿವರಣೆ. (ಸಾಂಕೇತಿಕ ಚಿತ್ರ)
ಅಮೆರಿಕ ಚುನಾವಣೆ: ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶಗಳು ಭಾರತೀಯ ಕಾಲಮಾನ ಪ್ರಕಾರ ಯಾವಾಗ ಎಂಬುದನ್ನು ವಿವರಿಸುವ 5 ಅಂಶಗಳ ವಿವರಣೆ. (ಸಾಂಕೇತಿಕ ಚಿತ್ರ) (AFP/ Bloomberg)

ನವದೆಹಲಿ/ಬೆಂಗಳೂರು: ಅಮೆರಿಕ ಚುನಾವಣೆ ಸದ್ಯ ಹೆಚ್ಚು ಟ್ರೆಂಡಿಂಗ್‌ನಲ್ಲಿರುವ ವಿಷಯ. ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ 5 ರಂದು ಮಂಗಳವಾರ ನಡೆಯಲಿದೆ. ಅಂದರೆ ಇಂದೇ ನಡೆಯಲಿದೆ. ವಾಸ್ತವದಲ್ಲಿ ಅಮೆರಿಕ ಚುನಾವಣೆ ಈಗಾಗಲೇ ಶುರುವಾಗಿದ್ದರೂ, ನವೆಂಬರ್ 5 ಮಂಗಳವಾರ ಅಧಿಕೃತ ಮತದಾನದ ದಿನ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನೇರ ಸ್ಪರ್ಧೆ. ಮತದಾನಕ್ಕೆ ಅಧಿಕೃತ ದಿನ ನವೆಂಬರ್ 5 ಆದರೂ ಅಧಿಕೃತ ಫಲಿತಾಂಶ ಪ್ರಕಟವಾಗುವುದು ಕೆಲವು ದಿನಗಳ ಬಳಿಕ. ಮತ ಪತ್ರಗಳ ಎಣಿಕೆ ಇಂದು ಮತದಾನ ಮುಗಿಯುತ್ತಿದ್ದಂತೆ ಶುರುವಾಗುತ್ತದೆ. ಆರಂಭಿಕ ಎಣಿಕೆಯ ಫಲಿತಾಂಶದ ಆಧಾರದ ಮೇಲೆ ವಿಜೇತರು ಯಾರು ಎಂಬುದನ್ನು ಅಂದಾಜಿಸಲಾಗುತ್ತದೇ ಹೊರತು ಅದು ನಿಖರ ಅಥವಾ ಅಧಿಕೃತ ಫಲಿತಾಂಶವಲ್ಲ. 2020 ರಲ್ಲಿ, ಅಂದರೆ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕೆಲವು ರಾಜ್ಯಗಳಲ್ಲಿ ರಿಪಬ್ಲಿಕ್ ಪಾರ್ಟಿ ಆರಂಭದಲ್ಲಿ ಮುನ್ನಡೆ ಸಾಧಿಸಿದ್ದರೂ, ಅಧಿಕೃತ ಫಲಿತಾಂಶ ಬಂದಾಗ ಹಿನ್ನಡೆ ಅನುಭವಿಸಿತ್ತು. ಆ ರಾಜ್ಯಗಳಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್ ಗೆಲುವು ಕಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು.

ಭಾರತೀಯ ಕಾಲಮಾನ ಪ್ರಕಾರ ಅಮೆರಿಕ ಚುನಾವಣೆ ದಿನಾಂಕ ಮತ್ತು ಇತರೆ ಅಂಶಗಳು

1) ಅಮೆರಿಕ ಚುನಾವಣೆ 2024: ಪ್ರಮುಖ ದಿನಾಂಕ ಮತ್ತು ಮತದಾನ ಮಾಹಿತಿ: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಮತದಾನ ನಡೆಯುವ ದಿನ ನವೆಂಬರ್‌ 1ರ ನಂತರ ಬರುವ ಮೊದಲ ಮಂಗಳವಾರ. ಅಂದರೆ ಈ ವರ್ಷ ಇದು ನವೆಂಬರ್ 5. ಇಂದು ಅಲ್ಲಿನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿದೆ. ಭಾರತೀಯ ಕಾಲಮಾನ ಪ್ರಕಾರ ಇಂದು (ನವೆಂಬರ್ 5) ಸಂಜೆ 4.30ರಿಂದ ನವೆಂಬರ್ 6ರ ಬೆಳಗ್ಗೆ 6.30ರ ತನಕ ಅಮೆರಿಕ ಚುನಾವಣೆಯ ಅಧಿಕೃತ ಮತದಾನ ನಡೆಯಲಿದೆ.

2) ಅಮೆರಿಕ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಯಾವಾಗ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ, ಮತದಾರರ ಅಭಿಪ್ರಾಯ ಸಮೀಕ್ಷೆಗಳು ಅಲ್ಲಿನ ಸ್ಥಳೀಯ ಕಾಲಮಾನ ಪ್ರಕಾರ ಇಂದು ಸಂಜೆ 5 ಗಂಟೆಗೆ ಶುರುವಾಗುತ್ತದೆ. ಭಾರತದಲ್ಲಿ ಇದು ನವೆಂಬರ್ 6 ರಂದು ನಸುಕಿನ 2.30ಕ್ಕೆ ಎಂದು ನಾವು ಅರ್ಥ ಮಾಡಿಕೊಳ್ಳಬಹುದು.

3) ಅಮೆರಿಕ ಚುನಾವಣೆ 2024ರ ಫಲಿತಾಂಶ ಪ್ರಕಟವಾಗುವುದು ಯಾವಾಗ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಧಿಕೃತ ಮತದಾನ ಇಂದು ಕೊನೆಗೊಂಡ ಕೂಡಲೇ ಮತ ಎಣಿಕೆ ಶುರುವಾಗುತ್ತದೆ. ಅಮೆರಿಕದ ಸುದ್ದಿವಾಹಿನಿಗಳು ರಾಜ್ಯ-ನಿರ್ದಿಷ್ಟ ಮತದಾನದ ಡೇಟಾವನ್ನು ವರದಿ ಮಾಡಬಹುದಾದರೂ, ಎಲ್ಲಾ ಮತಗಳನ್ನು ಸಂಪೂರ್ಣವಾಗಿ ಎಣಿಸಿದ ನಂತರ ಮಾತ್ರ ಅಧಿಕೃತ ವಿಜೇತ ಘೋಷಣೆಗಳನ್ನು ಮಾಡಲಾಗುತ್ತದೆ. ನಿರ್ಣಾಯಕ ಸ್ವಿಂಗ್ ರಾಜ್ಯಗಳಲ್ಲಿ, ಅಂತಿಮ ಲೆಕ್ಕಾಚಾರವು ಅಂತಿಮಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ವಿಶೇಷವಾಗಿ ಬಿಗಿ ಸ್ಪರ್ಧೆ ಇರುವಲ್ಲಿ ನಿರ್ಣಾಯಕ ಮುನ್ನಡೆಯೊಂದಿಗೆ ಇರುವಂತಹ ಸಂದರ್ಭಗಳಲ್ಲಿ, ವಿಜೇತರು ಯಾರು ಎಂಬುದನ್ನು ಗಂಟೆಗಳಲ್ಲಿ ಘೋಷಿಸಬಹುದು. ಇದಕ್ಕೆ ವ್ಯತಿರಿಕ್ತವಾಗಿ ನಿಕಟ ಸ್ಪರ್ಧೆ ಇರುವಲ್ಲಿ ಮತ ಎಣಿಕೆಯ ವೇಗ, ಸಂಭಾವ್ಯ ಕಾನೂನು ಸವಾಲುಗಳಿರುವಲ್ಲಿ ಅಂತಿಮ ಫಲಿತಾಂಶ ಪ್ರಕಟವಾಗುವುದು ದಿನಗಳು ಅಥವಾ ಕೆಲವು ವಾರ ವಿಳಂಬವಾಗಬಹುದು.

4) ಅಮೆರಿಕ ಚುನಾವಣೆಯ ಮುಂದಿನ ಪ್ರಮುಖ ದಿನಾಂಕಗಳಿವು: ನವೆಂಬರ್ 1ರ ಬಳಿಕ ಬರುವ ಮೊದಲ ಮಂಗಳವಾರ ಅಂದರೆ ಈ ಸಲ ನವೆಂಬರ್ 5 ರಂದು ಅಮೆರಿಕ ಚುನಾವಣೆ (ಮತದಾನ) ನಡೆಯಲಿದೆ. ನವೆಂಬರ್ 25 ರಂದು 17 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆಯಲ್ಲಿ ಅಂಚೆ ಮತಗಳ ಸಂಗ್ರಹ ಎಣಿಕೆ ನಡೆಯುತ್ತದೆ. ಡಿಸೆಂಬರ್ 11 ರಂದು ಪ್ರತಿ ರಾಜ್ಯದ ಗವರ್ನರ್‌ಗಳು ತಮ್ಮ ವ್ಯಾಪ್ತಿಯ ಎಲೆಕ್ಟೋರಲ್‌ ಕಾಲೇಜುಗಳ ಮತಗಳ ವಿವರವನ್ನು ಸಲ್ಲಿಸಬೇಕಾದ ಅಂತಿಮ ದಿನಾಂಕ. ಡಿಸೆಂಬರ್ 17 ರಂದು ಎಲ್ಲ 538 ಎಲೆಕ್ಟೋರಲ್ ಕಾಲೇಜು ಮತಗಳು ವಾಷಿಂಗ್ಟನ್‌ಗೆ ಬರಬೇಕು. ಇಲ್ಲಿ 270 ಎಲೆಕ್ಟೋರಲ್ ಮತ ಯಾರಿಗೆ ಸಿಕ್ಕಿದೆ ಎಂಬುದು ನಿರ್ಧಾರವಾಗಬೇಕು. 2025 ಜನವರಿ 6- ಜಾಯಿಂಟ್ ಸೆಷನ್ಸ್ ಆಫ್ ಕಾಂಗ್ರೆಸ್ ಎದುರು ಎಲೆಕ್ಟೋರಲ್ ಕಾಲೇಜುಗಳ ಮತ ಎಣಿಕೆ ನಡೆಯುತ್ತದೆ. ಅಧಿಕೃತವಾಗಿ ಫಲಿತಾಂಶ ಪ್ರಕಟವಾಗುತ್ತದೆ. 2025ರ ಜನವರಿ 20 - ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿ ಹೊಸ ಸರ್ಕಾರ ರಚಿಸುತ್ತಾರೆ.

5) ಭಾರತದಲ್ಲಿ ಅಮೆರಿಕ ಚುನಾವಣೆ ವೀಕ್ಷಣೆ ಹೇಗೆ, ನೇರ ಪ್ರಸಾರ ಇದೆಯೇ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ, ಫಲಿತಾಂಶ, ಎಕ್ಸಿಟ್ ಪೋಲ್‌, ಒಪಿನಿಯನ್ ಪೋಲ್‌ಗಳನ್ನು ಅಲ್ಲಿನ ಮಾಧ್ಯಮಗಳು ಪ್ರಸಾರ ಮಾಡುತ್ತವೆ. ವಿವಿಧ ಅಂತರ್ಜಾಲ ತಾಣಗಳಲ್ಲಿ, ಚಾನೆಲ್‌ಗಳಲ್ಲಿ ಇವು ಇಂದು ರಾತ್ರಿ ಇಡೀ ಪ್ರಸಾರವಾಗುತ್ತವೆ. ಭಾರತದಲ್ಲಿ ಇದರ ವಿವರ ತಿಳಿದುಕೊಳ್ಳುವುದಕ್ಕೆ ನೀವು ಹಿಂದೂಸ್ತಾನ್ ಟೈಮ್ಸ್ ಜಾಲತಾಣ ಮತ್ತು ಯೂಟ್ಯೂಬ್ ಚಾನೆಲ್ ಗಮನಿಸಬಹುದು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ