ಅಮೆರಿಕ ಚುನಾವಣೆ ನಡೆಯೋದು ಯಾವಾಗ, ಮತ ಎಣಿಕೆ ಎಷ್ಟು ಗಂಟೆಗೆ, ಅಮೆರಿಕನ್ನರು ಹೇಗೆ ಅಧ್ಯಕ್ಷರನ್ನು ಆಯ್ಕೆ ಮಾಡ್ತಾರೆ- ಇಲ್ಲಿದೆ ವಿವರ
Nov 05, 2024 04:35 PM IST
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024: ರಿಪಬ್ಲಿಕನ್ ಪಾರ್ಟಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಅಭ್ಯರ್ಥಿ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಡುವೆ ಸ್ಪರ್ಧೆ ಇದೆ.
US Elections: ಅಮೆರಿಕ ಚುನಾವಣೆ ನಡೆಯೋದು ಯಾವಾಗ, ಮತ ಎಣಿಕೆ ಎಷ್ಟು ಗಂಟೆಗೆ, ಅಮೆರಿಕನ್ನರು ಹೇಗೆ ಅಧ್ಯಕ್ಷರನ್ನು ಆಯ್ಕೆ ಮಾಡ್ತಾರೆ ಎಂಬ ಕುತೂಹಲ ಸಹಜ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಜಾಗತಿಕ ರಾಜಕಾರಣದ ಮೇಲೆ ಪರಿಣಾಮ ಬೀರಬಲ್ಲ ವಿಚಾರ. ಹೀಗಾಗಿ ಅದರ ವಿವರ ಇಲ್ಲಿದೆ.
ನವದೆಹಲಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನೆರಡು ದಿನ ಬಾಕಿ. ನವೆಂಬರ್ 5ಕ್ಕೆ ಮತದಾನ ನಡೆಯಲಿದ್ದು, ಅದಾದ ಬಳಿಕ ಫಲಿತಾಂಶ ಘೋಷಣೆಯಾಗಲಿದೆ. ಅಧ್ಯಕ್ಷೀಯ ಅಭ್ಯರ್ಥಿಗಳಾಗಿ ಡೆಮಾಕ್ರಟಿಕ್ ಪಕ್ಷದಿಂದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ರಿಪಬ್ಲಿಕನ್ ಪಕ್ಷದಿಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ. ಈ ಸಲದ ಚುನಾವಣೆ ಪ್ರಕ್ರಿಯೆಯು ಅಧ್ಯಕ್ಷ ಜೋ ಬಿಡೆನ್ ಅವರು 2024ರ ಜೂನ್ 27ರಂದು ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದ ಬಳಿಕ ಕಳೆದ ಬೇಸಿಗೆಯಲ್ಲಿ ನಾಟಕೀಯ ತಿರುವು ಪಡೆದುಕೊಂಡಿತು. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಾಮ ನಿರ್ದೇಶಿತರಾದರು. ಅದುವರೆಗೂ ಪ್ರಚಾರದಲ್ಲಿ ಹಿನ್ನಡೆ ಅನುಭವಿಸಿದ್ದ ಡೆಮಾಕ್ರಟಿಕ್ ಪಕ್ಷ ಚೇತರಿಸಿಕೊಂಡಿತು. ರಿಪಬ್ಲಿಕನ್ ಪಾರ್ಟಿಗೆ ಪೈಪೋಟಿ ನೀಡಲಾರಂಭಿಸಿತು. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನವೆಂಬರ್ ಮೊದಲ ಮಂಗಳವಾರದಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೆಲವು ತಿಂಗಳು ಮುಂಚೆಯೇ ಪ್ರಾರಂಭವಾಗುತ್ತದೆ. ಈಗ ಅಂತಿಮ ಘಟ್ಟ ತಲುಪಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ರಿಪಬ್ಲಿಕನ್ ಪಾರ್ಟಿ ನಾಮನಿರ್ದೇಶಿತರಾಗಿ ಡೊನಾಲ್ಡ್ ಟ್ರಂಪ್ ಮತ್ತು ಅವರ ಸಹವರ್ತಿಯಾಗಿ ಜೆ ಡಿ ವ್ಯಾನ್ಸ್, ಡೆಮಾಕ್ರಟಿಕ್ ಪಾರ್ಟಿ ನಾಮ ನಿರ್ದೇಶಿತರಾಗಿ ಕಮಲಾ ಹ್ಯಾರಿಸ್ ಮತ್ತು ಗವರ್ನರ್ ಟಿಮ್ ವಾಲ್ಜ್ ಕಣದಲ್ಲಿದ್ದಾರೆ.
ನವೆಂಬರ್ 5ಕ್ಕೆ ಮತದಾನ, ನಂತರ ಫಲಿತಾಂಶ
ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 5 ರಂದು ಮಂಗಳವಾರ ನಡೆಯಲಿದೆ. ವಿಜೇತರಾಗುವವರು 2025ರ ಜನವರಿ 20 ರಂದು ಹೊಸ ಸರ್ಕಾರ ರಚನೆ ಮಾಡಿ ನಾಲ್ಕು ವರುಷ ಆಡಳಿತ ನಡೆಸಲಿದ್ದಾರೆ. ಮತದಾನ ಪ್ರಕ್ರಿಯೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ತನಕ (ಭಾರತೀಯ ಕಾಲಮಾನ ಸಂಜೆ 4.30 ರಿಂದ ನವೆಂಬರ್ 6 ಬೆಳಗ್ಗೆ 6.30ರ ತನಕ) ನಡೆಯಲಿದೆ. ಮತದಾರರ ಸೆಂಟಿಮೆಂಟ್ಸ್ ಮತ್ತು ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಸಂಜೆ 5 ಗಂಟೆ ಬಳಿಕ (ಭಾರತೀಯ ಕಾಲಮಾನ ನವೆಂಬರ್ 6ರ ನಸುಕಿನ 2.30) ಶುರುವಾಗುತ್ತದೆ.
ಮತದಾನ ಕೇಂದ್ರಗಳನ್ನು ಮುಚ್ಚಿದ ನಂತರ ಪ್ರತಿ ರಾಜ್ಯದಲ್ಲಿ ಮತಗಳನ್ನು ಎಣಿಸಲಾಗುತ್ತದೆ. ಮತದಾನದ ಮುಕ್ತಾಯದ ಸಮಯವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ, ಸಾಮಾನ್ಯವಾಗಿ ಸ್ಥಳೀಯ ಸಮಯ ಸುಮಾರು 7 ಗಂಟೆಗೆ ಪ್ರಾರಂಭವಾಗುತ್ತದೆ. ಅಮೆರಿಕದಲ್ಲಿನ ಬಹು ಸಮಯ ವಲಯಗಳ ಕಾರಣದಿಂದಾಗಿ, ಅಲಾಸ್ಕಾ ಮತ್ತು ಹವಾಯಿಯಂತಹ ರಾಜ್ಯಗಳ ಮತದಾರರು ತಮ್ಮ ಮತಗಳನ್ನು ಚಲಾಯಿಸುವುದನ್ನು ಮುಗಿಸುವ ಮೊದಲು ಪೂರ್ವ ಕರಾವಳಿಯಲ್ಲಿ ಮತಪತ್ರಗಳ ಎಣಿಕೆ ಶುರುವಾಗಿರುತ್ತದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿ ಸುದ್ದಿ ಸಂಸ್ಥೆಗಳು ನಿರ್ದಿಷ್ಟ ಡೇಟಾವನ್ನು ಹಂಚಿಕೊಳ್ಳುತ್ತವೆ. ಆದರೆ ಅಧಿಕೃತ ವಿಜೇತರ ವಿವರ ಪ್ರಕಟವಾದ ಬಳಿಕವಷ್ಟೇ ಆ ವಿವರನ್ನು ಅವರು ಪ್ರಕಟಿಸುತ್ತಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ; ಮುಂದಿನ ಪ್ರಮುಖ ದಿನಾಂಕಗಳಿವು
ನವೆಂಬರ್ 1ರ ಬಳಿಕ ಬರುವ ಮೊದಲ ಮಂಗಳವಾರ ಅಂದರೆ ಈ ಸಲ ನವೆಂಬರ್ 5 ರಂದು ಅಮೆರಿಕ ಚುನಾವಣೆ (ಮತದಾನ) ನಡೆಯಲಿದೆ.
ನವೆಂಬರ್ 25 ರಂದು 17 ರಾಜ್ಯಗಳು ಮತ್ತು ಕೊಲಂಬಿಯಾ ಜಿಲ್ಲೆಯಲ್ಲಿ ಅಂಚೆ ಮತಗಳ ಸಂಗ್ರಹ ಎಣಿಕೆ ನಡೆಯುತ್ತದೆ. 2020ರಲ್ಲಿ 66 ಲಕ್ಷ ಮತದಾರರು ಇಮೇಲ್ ಮೂಲಕ ಮತ ಚಲಾಯಿಸಿದ್ದರು.
ಡಿಸೆಂಬರ್ 11 - ಪ್ರತಿ ರಾಜ್ಯದ ಗವರ್ನರ್‌ಗಳು ತಮ್ಮ ವ್ಯಾಪ್ತಿಯ ಎಲೆಕ್ಟೋರಲ್ ಕಾಲೇಜುಗಳ ಮತಗಳನ್ನು ಸಲ್ಲಿಸಬೇಕಾದ ಅಂತಿಮ ದಿನಾಂಕ.
ಡಿಸೆಂಬರ್ 17- ಎಲ್ಲ 538 ಎಲೆಕ್ಟೋರಲ್ ಕಾಲೇಜು ಮತಗಳು ವಾಷಿಂಗ್ಟನ್‌ಗೆ ಬರಬೇಕು. ಇಲ್ಲಿ 270 ಎಲೆಕ್ಟೋರಲ್ ಮತ ಯಾರಿಗೆ ಸಿಕ್ಕಿದೆ ಎಂಬುದು ನಿರ್ಧಾರವಾಗಬೇಕು.
2025 ಜನವರಿ 6- ಜಾಯಿಂಟ್ ಸೆಷನ್ಸ್ ಆಫ್ ಕಾಂಗ್ರೆಸ್ ಎದುರು ಎಲೆಕ್ಟೋರಲ್ ಕಾಲೇಜುಗಳ ಮತ ಎಣಿಕೆ ನಡೆಯುತ್ತದೆ. ಅಧಿಕೃತವಾಗಿ ಫಲಿತಾಂಶ ಖಚಿತವಾಗುತ್ತದೆ.
2025ರ ಜನವರಿ 20 - ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಪ್ರಮಾಣ ವಚನ ಸ್ವೀಕರಿಸಿ ಹೊಸ ಸರ್ಕಾರ ರಚಿಸುತ್ತಾರೆ.
ಈ ಹಿಂದೆ ಚುನಾವಣೆಯಲ್ಲಿ ಗೆಲ್ಲುವವರನ್ನು ನಿರ್ಧರಿಸಲು ದಿನಗಳು ಬೇಕಾಗುತ್ತಿತ್ತು. 2020 ರಲ್ಲಿ, ಪೆನ್ಸಿಲ್ವೇನಿಯಾದ ಫಲಿತಾಂಶವನ್ನು ಅಂತಿಮಗೊಳಿಸಿದ ನಂತರ, ನವೆಂಬರ್ 3 ರ ಚುನಾವಣೆಯ ನಾಲ್ಕು ದಿನಗಳ ನಂತರ ಜೋ ಬಿಡೆನ್ ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಯಿತು. ರಾಜ್ಯದಿಂದ 20 ಎಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದುಕೊಳ್ಳುವುದು ಮತ್ತು ಬಿಡೆನ್ ಅವರ ಒಟ್ಟು 270 ಕ್ಷೇತ್ರಗಳ ಗೆಲುವು ಖಚಿತಪಡಿಸಬೇಕಾಗಿತ್ತು. ಅದಕ್ಕೂ ಮೊದಲು ಅಂದರೆ 2016 ರಲ್ಲಿ, ಹಿಲರಿ ಕ್ಲಿಂಟನ್ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಎದುರು ಸೋಲು ಒಪ್ಪಿಕೊಂಡರು.