logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Transporters Strike: ಹಿಟ್‌ ಆಂಡ್ ರನ್‌ ಕಾನೂನು ಮನವಿ ಪರಿಗಣಿಸುವುದಾಗಿ ಹೇಳಿದ ಕೇಂದ್ರ, ಸಾರಿಗೆ ವಾಹನಗಳ ಮುಷ್ಕರ ವಾಪಸ್‌

Transporters Strike: ಹಿಟ್‌ ಆಂಡ್ ರನ್‌ ಕಾನೂನು ಮನವಿ ಪರಿಗಣಿಸುವುದಾಗಿ ಹೇಳಿದ ಕೇಂದ್ರ, ಸಾರಿಗೆ ವಾಹನಗಳ ಮುಷ್ಕರ ವಾಪಸ್‌

Umesh Kumar S HT Kannada

Jan 03, 2024 06:57 AM IST

google News

ಹೊಸ ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ ನಾಗಪುರದ ಹೆದ್ದಾರಿಯಲ್ಲಿ ಮಂಗಳವಾರ ಟ್ರಕ್ ಚಾಲಕರು ರಸ್ತೆ ತಡೆ ಪ್ರತಿಭಟನೆ ನಡೆಸಿದ ಕಾರಣ ಸಾಲುಗಟ್ಟಿ ನಿಂತ ವಾಹನಗಳು

  • ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌)ಯಲ್ಲಿರುವ ಹಿಟ್ ಆಂಡ್ ರನ್‌ ಕಾನೂನು ಅಂಶಗಳನ್ನು ವಿರೋಧಿಸಿ ಟ್ರಕ್‌ ಮತ್ತು ಸಾರಿಗೆ ಚಾಲಕರು ಎರಡು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಹಿಂಪಡೆದಿದ್ದಾರೆ. ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಜತೆಗೆ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳು ನಡೆಸಿದ ಮಾತುಕತೆ ಯಶಸ್ವಿಯಾಗಿದೆ.

ಹೊಸ ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ ನಾಗಪುರದ ಹೆದ್ದಾರಿಯಲ್ಲಿ ಮಂಗಳವಾರ ಟ್ರಕ್ ಚಾಲಕರು ರಸ್ತೆ ತಡೆ ಪ್ರತಿಭಟನೆ ನಡೆಸಿದ ಕಾರಣ ಸಾಲುಗಟ್ಟಿ ನಿಂತ ವಾಹನಗಳು
ಹೊಸ ಹಿಟ್ ಆಂಡ್ ರನ್ ಕಾನೂನು ವಿರೋಧಿಸಿ ನಾಗಪುರದ ಹೆದ್ದಾರಿಯಲ್ಲಿ ಮಂಗಳವಾರ ಟ್ರಕ್ ಚಾಲಕರು ರಸ್ತೆ ತಡೆ ಪ್ರತಿಭಟನೆ ನಡೆಸಿದ ಕಾರಣ ಸಾಲುಗಟ್ಟಿ ನಿಂತ ವಾಹನಗಳು (PTI)

ನವದೆಹಲಿ: ಪ್ರಸ್ತಾವಿತ ಭಾರತೀಯ ನ್ಯಾಯ ಸಂಹಿತಾದಲ್ಲಿರುವ ಹಿಟ್ ಆಂಡ್ ರನ್‌ ಕಾನೂನು (ಗುದ್ದೋಡು ಕಾನೂನು) ತಿದ್ದುಪಡಿ ಮಾಡಿ, ಹಳೆಯ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿದ್ದ 3 ದಿನಗಳ ಮುಷ್ಕರವನ್ನು ಮಂಗಳವಾರ ಸಂಜೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ ಹಿಂಪಡೆದಿದೆ.

ಹೊಸ ವರ್ಷದ ಮೊದಲ ದಿನವೇ ಟ್ರಕ್ ಮತ್ತು ಇತರೆ ವಾಹನಗಳ ಚಾಲಕರು ಮೂರು ದಿನಗಳ ಮುಷ್ಕರ ಘೋಷಿಸಿದ್ದರು. ಎರಡನೇ ದಿನವಾದ ನಿನ್ನೆ ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್‌ನ ಪ್ರತಿನಿಧಿಗಳು ಗೃಹ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಜತೆಗೆ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳು ಮಾತುಕತೆ ನಡೆಸಿದ್ದರು. ಕಠಿಣ ಕಾನೂನು ಜಾರಿಗೊಳಿಸುವ ಮೊದಲು ಸಂಬಂಧಪಟ್ಟ ಪಾಲುದಾರರ ಜತೆಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಾಗುವುದು ಎಂದು ಭಲ್ಲಾ ಭರವಸೆ ನೀಡಿದರು. ಈ ಯಶಸಸ್ವಿ ಸಭೆಯ ಬಳಿಕ, ಕೇಂದ್ರ ಸರ್ಕಾರ ಮತ್ತು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಎಲ್ಲಾ ಚಾಲಕರು ಮುಷ್ಕರ ಕೈಬಿಟ್ಟು ಕೆಲಸ ಮುಂದುವರಿಸುವಂತೆ ಮನವಿ ಮಾಡಿವೆ.

ಭಾರತೀಯ ನ್ಯಾಯ ಸಂಹಿತೆಯ ಹೊಸ ಕಾನೂನು ಮತ್ತು ನಿಬಂಧನೆಗಳು ಇನ್ನೂ ಜಾರಿಗೆ ಬಂದಿಲ್ಲ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (2) ರ ಬಗ್ಗೆ ಸಂಬಂಧಿಸಿದ ಯಾವುದೇ ಅಹವಾಲನ್ನು ಮುಕ್ತವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರವು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಪ್ರತಿನಿಧಿಗಳಿಗೆ ಭರವಸೆ ನೀಡಿದೆ. ಹೀಗಾಗಿ ಮುಷ್ಕರವನ್ನು ನಿನ್ನೆ (ಜ.2) ಸಂಜೆಯೇ ಹಿಂಪಡೆಯಲಾಗಿದೆ ಎಂದು ಸಂಘಟನೆ ಮೂಲಗಳು ತಿಳಿಸಿವೆ.

ಈ ನಡುವೆ, ಎರಡು ದಿನಗಳ ಮುಷ್ಕರದ ಕಾರಣ ದೇಶದ ನಾನಾ ಭಾಗಗಳಲ್ಲಿ ತರಕಾರಿ ಮಾರುಕಟ್ಟೆಯ ನಿತ್ಯದ ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರಿತು. ಇಂಧನ ಪೂರೈಕೆಯಲ್ಲಿ ವ್ಯತ್ಯಾಸವಾಗುವುದೆಂಬ ಭೀತಿಯ ಕಾರಣ ಪೆಟ್ರೋಲ್ ಪಂಪ್‌ಗಳಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿತ್ತು.

ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶ ಸೇರಿ ಕನಿಷ್ಠ ಎಂಟು ರಾಜ್ಯಗಳಲ್ಲಿ ಇಂಧನ ಖರೀದಿಗೆ ಜನ ಮುಗಿಬಿದ್ದ ಘಟನೆಗಳು ವರದಿಯಾಗಿವೆ. ಈ ಎಂಟು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್‌ ಮಾರಾಟವನ್ನು ವ್ಯಕ್ತಿಗೆ ಇಷ್ಟು ಎಂಬ ಲೆಕ್ಕಾಚಾರದಲ್ಲಿ ಮಿತಿಯನ್ನೂ ಹೇರಲಾಗಿತ್ತು ಎಂದು ವರದಿಯಾಗಿವೆ.

ಇದಲ್ಲದೆ, ಮುಂಬೈ-ಅಹಮದಾಬಾದ್, ಮುಂಬೈ-ಬೆಂಗಳೂರು, ಭೋಪಾಲ್-ಗ್ವಾಲಿಯರ್, ದೆಹಲಿ-ಕರ್ನಾಲ್ ಮತ್ತು ಸತ್ನಾ-ಭೋಪಾಲ್ ಲಿಂಕ್‌ಗಳನ್ನು ಒಳಗೊಂಡಂತೆ ಪ್ರಮುಖ ಹೆದ್ದಾರಿಗಳಲ್ಲಿ ಪ್ರತಿಭಟನೆಗಳು ನಡೆದಿರುವ ವರದಿಯೂ ಇದೆ.

ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಮುಷ್ಕರಕ್ಕೆ ಕರೆ ನೀಡಿದ್ದು ಬಿಟ್ಟರೆ ಬೇರಾವ ಸಂಘಟನೆಗಳೂ ಮುಷ್ಕರಕ್ಕೆ ಕರೆ ನೀಡಿರಲಿಲ್ಲ. ಕರ್ನಾಟಕದಲ್ಲಿ ಇಂದು (ಜ.3) ಪ್ರತಿಭಟನೆ ನಡೆಸಲು ಚಿಂತನೆ ನಡೆದಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ