logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donkey Milk: ಗುಜರಾತ್‌ ಕತ್ತೆ ಹಾಲಿಗೆ ಕರ್ನಾಟಕ, ಕೇರಳದಲ್ಲಿ ಭಾರೀ ಬೇಡಿಕೆ, 42 ಕತ್ತೆಗಳಿಂದ ಲಕ್ಷ ಲಕ್ಷ ಆದಾಯ

Donkey Milk: ಗುಜರಾತ್‌ ಕತ್ತೆ ಹಾಲಿಗೆ ಕರ್ನಾಟಕ, ಕೇರಳದಲ್ಲಿ ಭಾರೀ ಬೇಡಿಕೆ, 42 ಕತ್ತೆಗಳಿಂದ ಲಕ್ಷ ಲಕ್ಷ ಆದಾಯ

Umesha Bhatta P H HT Kannada

Apr 21, 2024 08:46 PM IST

ಕತ್ತೆ ಹಾಲಿನ ವಹಿವಾಟಿನಲ್ಲಿ ಗೆದ್ದ ಧೀರೇನ್‌ ಸೋಲಂಕಿ.

    • ಹಸು, ಎಮ್ಮೆ ಹಾಲು ಕುಡಿದಿದ್ದೀರಿ, ಕತ್ತೆ ಹಾಲಿನ ಬಗ್ಗೆ ಕೇಳಿದ್ದೀರಿ, ಆದರೆ ಕತ್ತೆ ಹಾಲಿನ ವಹಿವಾಟು ಗುಜರಾತ್‌ನಲ್ಲಿ ಆರಂಭಿಸಿ ಕರ್ನಾಟಕ, ಕೇರಳದ ಮಾರುಕಟ್ಟೆ ಮೂಲಕ ಗೆದ್ದ ವ್ಯಕ್ತಿಯೊಬ್ಬರ ಸಾಧನೆಯಿದು.
ಕತ್ತೆ ಹಾಲಿನ ವಹಿವಾಟಿನಲ್ಲಿ ಗೆದ್ದ  ಧೀರೇನ್‌ ಸೋಲಂಕಿ.
ಕತ್ತೆ ಹಾಲಿನ ವಹಿವಾಟಿನಲ್ಲಿ ಗೆದ್ದ ಧೀರೇನ್‌ ಸೋಲಂಕಿ. (ndtv)

ಅಹಮದಾಬಾದ್‌: ಇವರ ಹೆಸರು ಧೀರೇನ್‌ ಸೋಲಂಕಿ. ಸಣ್ಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಭದ್ರತೆ ಇರಲಿಲ್ಲ. ಕೆಲಸ ಹೋದರೆ ಮುಂದೆ ಹೇಗೆ, ಕುಟುಂಬ ನಿರ್ವಹಣೆ ಹೇಗೆ ಎನ್ನುವ ಚಿಂತೆ ಕಾಡಿತು. ಏನಾದರೂ ಹೊಸತನ್ನು ಮಾಡಬೇಕು ಎಂದು ಯೋಚಿಸಿದರು ಸೋಲಂಕಿ. ಅವರಿಗೆ ಹೊಳೆದದ್ದು ಕತ್ತೆ ಹಾಲಿನ ವ್ಯಾಪಾರ. ಹೈನುಗಾರಿಕೆ ಎಲ್ಲರೂ ಮಾಡುತ್ತಾರೆ. ಆದರೆ ಕತ್ತೆಯನ್ನು ಸಾಕಿ ಹೈನುಗಾರಿಕೆ ಮಾಡುವವರು ಕಡಿಮೆ. ಸೋಲಂಕಿ ಸೋಲಾದರೂ ನೋಡೋಣ ಎಂದು ಕೆಲವೇ ಕತ್ತೆಗಳಲ್ಲಿ ಹೈನುಗಾರಿಕೆ ಶುರು ಮಾಡಿ ಕೆಲವೇ ವರ್ಷದಲ್ಲಿ ಗೆದ್ದರು. ಅವರು ಕತ್ತೆ ಹಾಲು ಉತ್ಪಾದನೆ ಮಾತ್ರವಲ್ಲದೇ ಮಾರುಕಟ್ಟೆಗೂ ನೀಡಿದ ಒತ್ತು ಕೈ ಹಿಡಿದಿದೆ.

ಟ್ರೆಂಡಿಂಗ್​ ಸುದ್ದಿ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಕ್ಷೇತ್ರಗಳನ್ನು ಗೆಲ್ಲುತ್ತೆ; ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನುಡಿದ ಭವಿಷ್ಯವಿದು

Gold Rate Today: ಬುಧವಾರ ಇಳಿಕೆಯಾಯ್ತು ಆಭರಣ ದರ; 10ಗ್ರಾಂ ಚಿನ್ನಕ್ಕೆ 600 ರೂ, 1ಕೆಜಿ ಬೆಳ್ಳಿಗೆ 6000 ರೂ ಇಳಿಕೆ

ಹೆಲಿಕಾಪ್ಟರ್ ಅಪಘಾತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ; ಕಾಪ್ಟರ್ ಅಪಘಾತಕ್ಕೆ ಸಂಬಂಧಿಸಿದ 10 ಅಪ್ಡೇಟ್ಸ್‌

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ಗುಜರಾತ್‌ನ ಪಠಾಣ್‌ ಜಿಲ್ಲೆಯ ಹಳ್ಳಿಯೊಂದರಲ್ಲಿ ಇದ್ದ ತಮ್ಮ ಅಲ್ಪಸ್ಪಲ್ಪ ಭೂಮಿಯಲ್ಲಿ ಕೆಲ ವರ್ಷಗಳ ಹಿಂದೆ ಸೋಲಂಕಿ ಅವರು ಕತ್ತೆ ಹಾಲಿನ ವ್ಯಾಪಾರ ಶುರು ಮಾಡಿದೆ. ಸುಮಾರು 22 ಲಕ್ಷ ರೂ.ಗಳನ್ನು ವ್ಯಯಿಸಿ ಉದ್ಯಮ ಶುರು ಮಾಡಿದರು. 20 ಕತ್ತೆಗಳನ್ನು ಖರೀದಿಸಿದರು.

ಮೊದಲ ಐದು ತಿಂಗಳು ಕತ್ತೆ ಹಾಲು ಹೇಗೆ ಮಾರಾಟ ಮಾಡಬೇಕು ಎನ್ನುವುದನ್ನು ತಿಳಿಯದೇ ನಷ್ಟ ಅನುಭವಿಸಿದರು. ಆದರೆ ದೃತಿಗೆಡಲಿಲ್ಲ. ಕತ್ತೆ ಹಾಲಿಗೆ ಎಲ್ಲಿ ಬೇಡಿಕೆ ಎನ್ನುವುದನ್ನು ತಿಳಿದುಕೊಂಡರು. ವಿಶೇಷವಾಗಿ ಕರ್ನಾಟಕ, ಕೇರಳದ ಜನ ಕತ್ತೆ ಹಾಲನ್ನು ಬಳಸುತ್ತಾರೆ ಎನ್ನುವುದನ್ನು ಅರಿತು ಅಲ್ಲಿಗೆ ವ್ಯವಸ್ಥಿತವಾಗಿ ಹಾಲು ಕಳುಹಿಸಲು ಯೋಜಿಸಿದರು. ಅಲ್ಲದೇ ಕೆಲವು ಕಾಂತಿವರ್ಧಕ ಕಂಪೆನಿಗಳು ಕತ್ತೆ ಹಾಲು ಬಳಕೆ ಮಾಡುತ್ತವೆ ಎನ್ನುವುದನ್ನು ತಿಳಿದುಕೊಂಡರು. ಮೂರು ತಿಂಗಳಿನಲ್ಲೇ ತಮ್ಮ ಹೊಸ ಮಾರ್ಗ ಕೈ ಹಿಡಿಯಿತು. ವರ್ಷದೊಳಗೆ ಸೋಲಂಕಿ ಅವರ ಕತ್ತೆಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಬಂದಿತು.

ಕತ್ತೆ ಹಾಲನ್ನು ಬಾಟೆಲ್‌ ಹಾಗೂ ಸ್ಯಾಚೆಟ್‌ ರೂಪದಲ್ಲಿ ಕಳುಹಿಸುವುದನ್ನು ಆರಂಭಿಸಿದರು. ಕತ್ತೆ ಹಾಲಿನ ಪೌಡರ್‌ಗೂ ಬೇಡಿಕೆ ಎನ್ನುವುದನ್ನು ಅರಿತು ಅದರ ಘಟಕವನ್ನು ಆರಂಭಿಸಿದರು. ಹಾಲನ್ನು ಫ್ರೀಜರ್‌ನಲ್ಲಿ ಸಂಗ್ರಹಿಸುವ ವ್ಯವಸ್ಥೆಯನ್ನು ಮಾಡಿಕೊಂಡರು. ಬರೀ ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 5,000 ರಿಂದ 7,000 ರೂ.ವರೆಗೂ ದರ ಇದೆ. ಅದೇ ರೀತಿ ಕತ್ತೆ ಹಾಲಿನ ಪುಡಿ ಬೆಲೆ ಕೆಜಿಗೆ ಒಂದು ಲಕ್ಷ ರೂ. ಎಂದರೆ ನೀವು ನಂಬಲೇಬೇಕು. ಆರೋಗ್ಯದ ಕಾರಣಕ್ಕೆ ಕೆಲವರು ಕತ್ತೆ ಹಾಲನ್ನು ಬಳಕೆ ಮಾಡುತ್ತಾರೆ. ವ್ಯವಸ್ಥಿತವಾಗಿ ತಲುಪಿದರೆ ಖಂಡಿತಾ ಬೆಲೆ ಸಿಗುತ್ತದೆ ಎನ್ನುವುದನ್ನು ಸೋಲಂಕಿ ಅವರ ಪ್ರಯತ್ನವೇ ಸಾಕ್ಷಿ.

ಸದ್ಯ ಸೋಲಂಕಿ ಅವರ ಬಳಿಕ ಕತ್ತೆಗಳ ಸಂಖ್ಯೆ 42ಕ್ಕೆ ಏರಿದೆ. ಅವರ ಹೂಡಿಕೆ ಪ್ರಮಾಣವೂ 38 ಲಕ್ಷ ರೂ.ಗೆ ಏರಿಕೆಯಾಗಿದೆ. ಆದಾಯ ಮಾತ್ರ ನಾಲ್ಕೈದು ಪಟ್ಟು ಹೆಚ್ಚಿದೆ. ತಿಂಗಳಿಂದ 2-3 ಲಕ್ಷ ರೂ. ಆದಾಯ ಸೋಲಂಕಿ ಅವರಿಗೆ ಬರುತ್ತಿದೆ. ಇನ್ನೂ ಬೇಡಿಕೆ ಹೆಚ್ಚಿದ್ದು, ಹಂತ ಹಂತವಾಗಿ ವಿಸ್ತರಿಸುವ ಯೋಜನೆಯನ್ನು ಅವರು ಹೊಂದಿದ್ದಾರೆ. ಈವರೆಗೂ ಸರ್ಕಾರದ ಯಾವುದೇ ನೆರವು ಪಡೆಯದೇ ಸ್ವಂತ ಹಣ ಹಾಕಿ ಯಶಸ್ವಿಯಾಗಿರುವ ಸೋಲಂಕಿ ಅಗತ್ಯ ಬಿದ್ದರೆ ನೆರವು ಪಡೆಯುವ ಯೋಚನೆಯಲ್ಲಿದ್ದಾರೆ.

ಕತ್ತೆ ಹಾಲಿಗೆ ತನ್ನದೇ ಆದ ಮಹತ್ವವಿದೆ. ಅದು ಈಗಿನ ಕಾಲದಲ್ಲಿ ಮಾತ್ರವಲ್ಲ. ಶತಮಾನಗಳಿಂದಲೂ ಬಳಕೆಯಲ್ಲಿದೆ. ಆದರೆ ಬಳಕೆ ಮಾಡುವವರ ಪ್ರಮಾಣ ಕಡಿಮೆ. ಏಕೆಂದರೆ ಹಾಲಿನ ದುಬಾರಿ ದರ. ಈಜಿಪ್ತ್‌, ಗ್ರೀಕ್‌ ಜನರು ಇದನ್ನು ಬಳಕೆ ಮಾಡುತ್ತಿದ್ದನ್ನು ಇತಿಹಾಸ ಹೇಳುತ್ತದೆ. ಯಕೃತ್ತಿನ ರಕ್ಷಣೆ, ಹಲವಾರು ಸಾಂಕ್ರಾಮಿಕ ರೋಗಗಳಿಗೆ ಕತ್ತೆಯ ಹಾಲಿನಲ್ಲಿ ಮದ್ದಿದೆ ಎನ್ನುವುದೂ ಪ್ರಮುಖ ಕಾರಣ. ಕತ್ತೆ ಹಾಲಿನಲ್ಲಿರುವ ಹಲವಾರು ಔಷಧೀಯ ಅಂಶಗಳ ಕಾರಣಕ್ಕೆ ಇದಕ್ಕೆ ಬೇಡಿಕೆ ಅಧಿಕ. ರೋಗ ನಿರೋಧಕಶಕ್ತಿ ವೃದ್ದಿಸುವ ಜತೆಗೆ ಮಧುಮೇಹ ನಿಯಂತ್ರಣದಂತಹ ಶಕ್ತಿಯೂ ಕತ್ತೆಯ ಹಾಲಿನಲ್ಲಿದೆ. ಹೆಚ್ಚು ಕಾಲ ಬಾಳಿಕೆಯಲ್ಲೂ ಕತ್ತೆ ಇಡಬಹುದು ಎನ್ನುವುದು ಇನ್ನೊಂದು ಕಾರಣ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ

( To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ