ಹಿಮಾಚಲ ಪ್ರದೇಶ ಮೇಘಸ್ಫೋಟ; ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ವಿಪರೀತ ಮಳೆಗೆ ತತ್ತರಿಸಿದ ಜನ, 3 ಸಾವು, ಅನೇಕರು ನಾಪತ್ತೆ- 5 ಮುಖ್ಯಅಂಶಗಳು
Aug 01, 2024 03:02 PM IST
ಹಿಮಾಚಲ ಪ್ರದೇಶ ಮೇಘಸ್ಫೋಟ; ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ವಿಪರೀತ ಮಳೆಗೆ ಜನ ತತ್ತರಿಸಿದರು. ದುರಂತದಲ್ಲಿ ಕನಿಷ್ಠ 3 ಸಾವು ಸಂಭವಿಸಿದ್ದು, 50 ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.ಕುಲು ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ಉಕ್ಕಿ ಹರಿಯುತ್ತಿರುವ ಬಿಯಾಸ್ ನದಿಯ ಒಂದು ನೋಟ.
ಹಿಮಾಚಲ ಪ್ರದೇಶ ಮೇಘಸ್ಫೋಟ; ದಕ್ಷಿಣ ಭಾರತದ ಕೇರಳದ ವಯನಾಡು ಭೂಕುಸಿತದ ಕರಿಛಾಯೆ ಮರೆಯಾಗುವ ಮೊದಲೇ ಉತ್ತರ ಭಾರತದ ಹಿಮಾಚಲ ಪ್ರದೇಶ ಮೇಘಸ್ಫೋಟ ಹಲವರ ಸಾವಿಗೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಶಿಮ್ಲಾ, ಕುಲು, ಮಂಡಿ ಜಿಲ್ಲೆಗಳಲ್ಲಿ ವಿಪರೀತ ಮಳೆಗೆ ಜನ ತತ್ತರಿಸಿದ್ದಾರೆ. ಕನಿಷ್ಠ 3 ಸಾವು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ.
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದ್ದು, ಮಳೆಯಿಂದಾಗಿ ಹಲವು ಮನೆಗಳು, ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿಹೋದ ಘಟನೆಗಳು ವರದಿಯಾಗಿವೆ. ಈ ದುರಂತದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ (ಆಗಸ್ಟ್ 1) ತಿಳಿಸಿದ್ದಾರೆ.
ಕೇರಳದ ವಯನಾಡು ಭೂಕುಸಿತದ ಬೆನ್ನಿಗೆ ಹಿಮಾಚಲ ಪ್ರದೇಶದ ಮೇಘಸ್ಫೋಟದ ಸುದ್ದಿ ಗಮನಸೆಳೆದಿದೆ. ಹಿಮಾಚಲ ಪ್ರದೇಶದ ಶಿಮ್ಲಾ, ಮಂಡಿ, ಕುಲು ಜಿಲ್ಲೆಯ ಕೆಲವೆಡೆ ನಿನ್ನೆ ತಡರಾತ್ರಿ ಈ ದುರಂತ ಸಂಭವಿಸಿದೆ. ಕುಲು ಜಿಲ್ಲೆಯಲ್ಲಿ ಮೇಘಸ್ಫೋಟದ ಪರಿಣಾಮ ಉಂಟಾದ ಪ್ರವಾಹಕ್ಕೆ ಕಾಲು ಸೇತುವೆ ಮತ್ತು ಮದ್ಯದಂಗಡಿ ಸೇರಿ ಮೂರು ತಾತ್ಕಾಲಿಕ ಶೆಡ್‌ಗಳು ಕೊಚ್ಚಿಹೋಗಿರುವುದಾಗಿ ಪ್ರಾಥಮಿಕ ವರದಿಗಳು ಹೇಳಿವೆ. ಸದ್ಯ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ಪೊಲೀಸರು ಮತ್ತು ಗೃಹರಕ್ಷಕರ ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು ಅವರು ಮೇಘಸ್ಫೋಟ ದುರಂತ ಸಂಭವಿಸಿದ ಕೂಡಲೇ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಕೇಂದ್ರ ಗೃಹ ಸಚಿವ, ಪ್ರಧಾನಿಯವರೊಂದಿಗೂ ಮಾತುಕತೆ ನಡೆಸಿದರು. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ತಂಡವನ್ನು (ಎನ್‌ಡಿಆರ್‌ಎಫ್) ರವಾನಿಸುವಂತೆ ಕೇಳಿಕೊಂಡಿದ್ದರು.
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; ಇದುವರೆಗಿನ 5 ಮುಖ್ಯ ವಿದ್ಯಮಾನಗಳು
1) ಮೇಘ ಸ್ಫೋಟ ಎಲ್ಲೆಲ್ಲಿ: ಶಿಮ್ಲಾ ಜಿಲ್ಲೆಯ ರಾಂಪುರದ ಸಮೇಜ್ ಖುದ್, ಮಂಡಿ ಜಿಲ್ಲೆಯ ಪಧರ್ ಉಪವಿಭಾಗದ ಥಾಲ್ಟುಖೋಡ್, ಕುಲು ಜಿಲ್ಲೆಯ ತೋಶ್ ನಲ್ಲಾಹ್ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಮೇಘಸ್ಫೋಟ ಸಂಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
2) ಎಷ್ಟು ಗಂಟೆಗೆ ಮೇಘಸ್ಫೋಟ ಸಂಭವಿಸಿತು: ಹಿಮಾಚಲ ಪ್ರದೇಶ ಮೇಘಸ್ಪೋಟ ದುರಂತವು ನಸುಕಿನ 4.40ಕ್ಕೆಸಂಭವಿಸಿದೆ. ಸದ್ಯದ ಮಾಹಿತಿ ಪ್ರಕಾರ 50ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. 2 ಮೃತದೇಹ ಪತ್ತೆಯಾಗಿದೆ ಎಂದು ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಕು ಹೇಳಿದ್ದಾರೆ. ಹಿಮಾಚಲ ಪ್ರದೇಶ ಭಾಗದಲ್ಲಿ ಮುಂದಿನ 48 ಗಂಟೆ ಕಾಲ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ.
3) ಶಿಮ್ಲಾದಲ್ಲಿ 2 ಸಾವು, ಕನಿಷ್ಠ 28 ಜನ ಕಣ್ಮರೆ: ಶಿಮ್ಲಾ ಜಿಲ್ಲೆಯ ರಾಂಪುರ ಉಪವಿಭಾಗದಲ್ಲಿರುವ ಸಮೇಜ್ ಖುದ್ (ನಲ್ಲಾ)ನಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 28 ಮಂದಿ ನಾಪತ್ತೆಯಾಗಿದ್ದಾರೆ. ಇಬ್ಬರನ್ನು ರಕ್ಷಿಸಲಾಗಿದೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಕುಮಾರ್ ಗಾಂಧಿ ತಿಳಿಸಿದ್ದಾರೆ. ರಸ್ತೆಗಳು ಕೊಚ್ಚಿ ಹೋಗಿರುವ ಕಾರಣ ರಕ್ಷಣಾ ಕಾರ್ಯಾಚರಣೆಗೆ ಸವಾಲು ಎದುರಾಗಿದೆ ಎಂದು ಶಿಮ್ಲಾ ಉಪ ಆಯುಕ್ತ (ಡಿಸಿ) ಅನುಪಮ್ ಕಶ್ಯಪ್ ಹೇಳಿದ್ದಾರೆ.
4) ಮಂಡಿಯಲ್ಲಿ ಒಂದು ಸಾವು, 9 ಜನ ನಾಪತ್ತೆ: ಬುಧವಾರ ರಾತ್ರಿ ಮಂಡಿ ಜಿಲ್ಲೆಯ ಪಾಧಾರ್ ಉಪವಿಭಾಗದ ತೇರಾಂಗ್ ಬಳಿಯ ರಾಜ್‌ಬಾನ್ ಗ್ರಾಮದಲ್ಲಿ ಮತ್ತೊಂದು ಮೇಘಸ್ಫೋಟ ಸಂಭವಿಸಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ.
5) ಕುಲು ಜಿಲ್ಲೆಯಲ್ಲಿ 7 ಜನ ನಾಪತ್ತೆ: ಕುಲು ಜಿಲ್ಲೆಯ ನಿರ್ಮಂದ್ ಬ್ಲಾಕ್‌ನ ಭಾಗಿಪುಲ್ ಪ್ರದೇಶದಲ್ಲಿ ಏಳು ಜನರು ನಾಪತ್ತೆಯಾಗಿದ್ದಾರೆ. ಸುಮಾರು ಎಂಟು ಒಂಬತ್ತು ಮನೆಗಳು ಕೊಚ್ಚಿಹೋಗಿವೆ. ನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆಗಾಗಿ ಸಿಐಎಸ್‌ಎಫ್ ಮತ್ತು ವಿಶೇಷ ಗೃಹರಕ್ಷಕ ದಳವನ್ನು ನಿಯೋಜಿಸಲಾಗಿದೆ ಎಂದು ಕಮಿಷನರ್ ಕುಲು, ತೋರುಲ್ ಎಸ್ ರವೀಶ್ ಪಿಟಿಐಗೆ ತಿಳಿಸಿದರು.
ಹಿಮಾಚಲ ಪ್ರದೇಶ ಮೇಘಸ್ಫೋಟ; ಸೋಷಿಯಲ್ ಮೀಡಿಯಾದಲ್ಲಿ ಭಯಾನಕ ದೃಶ್ಯಗಳ ವೈರಲ್ ವಿಡಿಯೋ
ಮೇಘಸ್ಫೋಟ ಪೀಡಿತ ಪ್ರದೇಶಗಳಿಂದ ಭಯಾನಕ ದೃಶ್ಯಗಳನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಪೋಸ್ಟ್ಗಳು ರಾಜ್ಯದ ವಿನಾಶಕಾರಿ ಪರಿಸ್ಥಿತಿ ಮತ್ತು ಜನರು ಪ್ರಸ್ತುತ ಎದುರಿಸುತ್ತಿರುವ ಹೋರಾಟಗಳನ್ನು ಎತ್ತಿ ತೋರಿಸುತ್ತವೆ. ಅಂತಹ ಕೆಲವು ವಿಡಿಯೋಗಳು ಇಲ್ಲಿವೆ.
ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ ಭಾರಿ ಮಳೆ, ಗುಡುಗು ಮತ್ತು ಮಿಂಚಿನ ಬಗ್ಗೆ ಸ್ಥಳೀಯ ಹವಾಮಾನ ಕಚೇರಿ ಕಿತ್ತಳೆ ಎಚ್ಚರಿಕೆ ನೀಡಿದೆ. ಆಗಸ್ಟ್ 2 ಮತ್ತು 3 ರಂದು ಪ್ರತ್ಯೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ವ್ಯಾಪಕ ಮಳೆಯೊಂದಿಗೆ ಮಾನ್ಸೂನ್ ಚಟುವಟಿಕೆ ವೇಗಗೊಳ್ಳುವ ನಿರೀಕ್ಷೆಯಿದೆ.
ಬುಧವಾರ ಮತ್ತು ಗುರುವಾರ ಉನಾ, ಬಿಲಾಸ್ಪುರ, ಹಮೀರ್ಪುರ, ಕಾಂಗ್ರಾ, ಮಂಡಿ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕುಲು, ಸೋಲನ್, ಸಿರ್ಮೌರ್, ಶಿಮ್ಲಾ ಮತ್ತು ಕಿನ್ನೌರ್ ಜಿಲ್ಲೆಗಳ ದುರ್ಬಲ ಪ್ರದೇಶಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದ ಸಾಧ್ಯತೆ ಮತ್ತು ಬಲವಾದ ಗಾಳಿ ಮತ್ತು ತಗ್ಗು ಪ್ರದೇಶಗಳಲ್ಲಿ ಜಲಾವೃತದಿಂದಾಗಿ ತೋಟಗಳು ಮತ್ತು ನಿಂತಿರುವ ಬೆಳೆಗಳು, ದುರ್ಬಲ ರಚನೆಗಳು ಮತ್ತು ಕಚ್ಚಾ ಮನೆಗಳಿಗೆ ಹಾನಿಯಾಗುವ ಸಾಧ್ಯತೆಯ ಮುನ್ನೆಚ್ಚರಿಕೆಯನ್ನು ಇಲಾಖೆ ನೀಡಿದೆ.