Trekkers Missing: ಉತ್ತರಾಖಂಡ್‌ಗೆ ಟ್ರಕ್ಕಿಂಗ್ ಹೋಗಿ ಕಾಣೆಯಾದ ಕರ್ನಾಟಕದವರ ಸಾವಿನ ಸಂಖ್ಯೆ 9ಕ್ಕೆ ಏರಿಕೆ, 13 ಮಂದಿ ರಕ್ಷಣೆ
Jun 06, 2024 01:07 AM IST
ಉತ್ತರಾ ಖಂಡದಲ್ಲಿ ರಕ್ಷಣಾ ಕಾರ್ಯ ನಿರತ ಸಿಬ್ಬಂದಿ,
- ಉತ್ತರಾಖಂಡ ರಾಜ್ಯದಲ್ಲಿ ಚಾರಣಕ್ಕೆ ತೆರಳಿದ್ದ ಕರ್ನಾಟಕದ ತಂಡದವರಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಇನ್ನುಳಿದವರನ್ನು ರಕ್ಷಣೆ ಮಾಡಲಾಗಿದೆ.
ದೆಹಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ತ್ರ ತಾಲ್‌ಗೆ ಚಾರಣಕ್ಕೆಂದು ತೆರಳಿದ್ದ ಕರ್ನಾಟಕ ತಂಡದವರು ಕಾಣೆಯಾಗಿದ್ದು,. ಇವರಲ್ಲಿ ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಐವರ ಹೆಸರು, ವಿವರ ಪತ್ತೆಯಾಗಿದ್ದು, ಉಳಿದವರ ಮಾಹಿತಿ ಕಲೆ ಹಾಕಲಾಗುತ್ತಿದೆ. ಈವರೆಗೂ 13 ಮಂದಿ ಚಾರಣಿಗರನ್ನು ರಕ್ಷಣೆ ಮಾಡಲಾಗಿದೆ. ಅವರನ್ನು ಕರ್ನಾಟಕ್ಕೆ ಕರೆತರುವ ಪ್ರಯತ್ನ ನಡೆದಿದೆ. ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ಸಂಪರ್ಕದಲ್ಲಿದ್ದು, ಚಾರಣಕ್ಕೆ ಹೋಗಿ ಸಿಲುಕಿದವರನ್ನು ರಕ್ಷಿಸಲು ಗಮನ ಹರಿಸಿದ್ದಾರೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಾಖಂಡದಲ್ಲಿಯೇ ಬೀಡು ಬಿಟ್ಟು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.
ಮೃತರನ್ನು ಸಿಂಧು ವಾಕ್ಲೇಮ್, ಆಶಾ ಸುಧಾಕರ್, ಸುಜಾತ ಮುಂಗುರವಾಡಿ, ವಿನಾಯಕ ಮುಂಗುರವಾಡಿ, ಚಿತ್ರ ಪ್ರಣೀತ ಎಂದು ಗುರುತಿಸಲಾಗಿದೆ. ಇನ್ನೂ ನಾಲ್ವರ ವಿವರ ಲಭಿಸಬೇಕಿದೆ. ಅವರ ದೇಹಗಳಿಗೂ ಹುಡುಕಾಟ ನಡೆದಿದ್ದು, ಸಂಜೆಯಾಗಿದ್ದರಿಂದ ಗುರುವಾರಕ್ಕೆ ಕಾರ್ಯಾಚರಣೆ ಪುನಾರಂಭಗೊಳ್ಳಲಿದೆ.
ಸೌಮ್ಯ ಕಣಲೆ, ಮೆಮೋರಿ ಡೆಲ್ಲಾಸ್, ಶೀನಾ ಲಕ್ಷ್ಮಿ, ಎಸ್.ಶಿವಜ್ಯೋತಿ, ಅನಿಲ್ ಜಮಟಿಗೆ, ಅರುಣಾಚಲ ಭಟ್, ಭರತ್ ಬೊಮ್ಮನಗೌಡರ್, ಮಧುಕಿರಣ್ ರೆಡ್ಡಿ, ಬಿ.ಎಸ್.ಜಯಪ್ರಕಾಶ್ ಅವರನ್ನು ರಕ್ಷಿಸಲಾಗಿದೆ. ಎ.ನವೀನ್ ಹಾಗೂ ರಿತಿಕಾ ಜಿಂದಾಲ್ ಎಂಬುವವರು ಮೊದಲೇ ಬಂದು ಅನಾಹುತ ತಪ್ಪಿಸಿಕೊಂಡಿದ್ದಾರೆ. ಎಸ್.ಸುಧಾಕರ್ ಹಾಗೂ ಎಂ.ಕೆ.ವಿನಯ್ ಹಾಗೂ ವಿವೇಕ್ ಶ್ರೀಧರ್ ಎನ್ನುವವರನ್ನು ಮತ್ತೊಂದು ಶಿಬಿರದಲ್ಲಿರಿಸಲಾಗಿದ್ದು ಎಲ್ಲರೂ ಆರೋಗ್ಯದಿಂದ ಇದ್ದಾರೆ.
ಕರ್ನಾಟಕದವರು ಹಾಗೂ ಒಬ್ಬ ಮಹಾರಾಷ್ಟ್ರದವರು ಇದ್ದ ಹಾಗೂ ನಾಲ್ವರು ಮಾರ್ಗದರ್ಶಿಗಳಿದ್ದ ತಂಡಗಳು ಕಡಿದಾದ ಸಹಸ್ತ್ರ ತಾಲ್‌ಗೆ ತೆರಳಿದ್ದರು. ವಾಪಾಸ್ ಬರುವಾಗ ಇಬ್ಬರು ಮುಂಚೆಯೇ ಬಂದಿದ್ದರು. ಉಳಿದವರು ನಿಧಾನವಾಗಿ ಬರುತ್ತಿದ್ದರು. ಈ ವೇಳೆ ಹಿಮಗಾಳಿಯಿಂದ ಸಂಕಷ್ಟಕ್ಕೆ ಸಿಲುಕಿದರು. ಅದರಲ್ಲೂ ಕೆಲವರು ಕತ್ತಲಲ್ಲಿಯೇ ಸ್ವಲ್ಪ ದೂರ ನಡೆದು ಬಂದಿದ್ದಾರೆ. ಮೊಬೈಲ್ ಸಂಪರ್ಕ ಸಿಗುವ ಕಡೆಗೆ ಬಂದು ಮಾಹಿತಿ ತಿಳಿದಿದ್ದರಿಂದ ಕೆಲವರನ್ನು ರಕ್ಷಿಸಲಾಯಿತು. ಒಂಬತ್ತು ಮಂದಿ ಮೃತಪಟ್ಟಿರುವುದು ಈಗ ಖಚಿತವಾಗಿದೆ.
ಸಿಎಂ ಸೂಚನೆ
ಉತ್ತರಾಖಂಡದ ಶಾಸ್ತ್ರತಾಳ್ ಗೆ ಚಾರಣಕ್ಕೆಂದು ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿರುವವರ ಮೃತದೇಹಗಳನ್ನು ಕುಟುಂಬದವರಿಗೆ ತಲುಪಿಸುವ ಮತ್ತು ರಕ್ಷಿಸಲ್ಪಟ್ಟಿರುವ ಉಳಿದ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೆಹ್ರಾಡೋನ್ ನಲ್ಲಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮಾತನಾಡಿದರು.
ಮೃತರ ಸಂಖ್ಯೆ 9 ಕ್ಕೆ ಏರಿದ ಸಂಗತಿ ತಿಳಿದು ಬಹಳ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲಾ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಚಿವ ಕೃಷ್ಣಬೈರೇಗೌಡರಿಗೆ ನೀಡಿದ್ದಾರೆ.
ರಕ್ಷಿಸಲ್ಪಟ್ಟು ಸುರಕ್ಷಿತ ನೆಲೆಗೆ ಕರೆತರಲಾಗಿರುವ ಚಾರಣಿಗರ ಜೊತೆಗೂ ಮಾತನಾಡಿದ ಮುಖ್ಯಮಂತ್ರಿಗಳು, ಬಾಕಿ ಉಳಿದಿರುವ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಕಾಪಾಡಿ ಕರೆತರುವ ಬಗ್ಗೆ ಸರ್ಕಾರಗಳ ಮಟ್ಟದಲ್ಲಿ ಸಕಲ ಪ್ರಯತ್ನಗಳೂ ನಡೆಯುತ್ತಿವೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆ ಮೂಲಕ ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ಕೃಷ್ಣಬೈರೇಗೌಡರ ಮಾಹಿತಿ
ಈ ಕುರಿತು ಕಂದಾಯ ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದ್ದಾರೆ.ಕರ್ನಾಟಕದ 20 ಜನ ಚಾರಣಿಗರು ಹಾಗೂ ಓರ್ವ ಗೈಡ್ ರನ್ನೊಳಗೊಂಡ ಚಾರಣಿಗರ ತಂಡವೊಂದು ಉತ್ತರಾಖಂಡದ ಎತ್ತರದ ಸಹಸ್ತ್ರ ತಾಲ್‌ನ ಮಯಳಿ ಎಂಬ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಾರಣ ಆರಂಭಿಸಿದ್ದಾರೆ. ಚಾರಣದ ಗಮ್ಯಸ್ಥಾನವನ್ನು ತಲುಪಿದ ತಂಡ ಮತ್ತೆ ಶಿಬಿರಕ್ಕೆ ಹಿಂತಿರುಗಲು ಯತ್ನಿಸಿದೆ. ಆದರೆ, ಹಿಂತಿರುಗುವ ಮಾರ್ಗದ ಮಾಧ್ಯೆ ನಿನ್ನೆ ಮಧ್ಯಾಹ್ನ 2 ಗಂಟೆಗೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಎಲ್ಲಾ ಚಾರಣಿಗರು ಅದೇ ಸ್ಥಳದಲ್ಲಿ ಅಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಚಾರಣಿಗರು ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿದೆ ಎಂಬ ಮಾಹಿತಿ ನಿನ್ನೆ ರಾತ್ರಿ ನಮಗೆ ತಿಳಿದುಬಂದಿತ್ತು. ಈ ವಿಚಾರ ತಿಳಿದ ಕೂಡಲೇ ಜಿಲ್ಲಾಡಳಿತದ ಮುಖಾಂತರ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯನ್ನು ಸಂಪರ್ಕಿಸಲಾಯಿತು. ಇವರ ಸಹಾಯದಿಂದ ಕರ್ನಾಟಕದ ಚಾರಣಿಗರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳ ಸಹಾಯದಿಂದ ನಿನ್ನೆ ಸಂಜೆಯಿಂದಲೇ ತುರ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಅಲ್ಲದೆ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಾರಣಿಗರ ರಕ್ಷಣೆಗಾಗಿ ಬೆಳಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ, ಜೊತೆಗೆ ವಿಪತ್ತು ನಿರ್ವಹಣಾ ಪಡೆ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಿ ಹಲವರನ್ನು ರಕ್ಷಿಸಿದೆ. ಕೆಲ ಮೃತ ದೇಹಗಳನ್ನು ಪತ್ತೆ ಮಾಡಿ ಶಿಬಿರಗಳಿಗೆ ತರಲಾಗಿದೆ.
ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಕೆಲವು ಚಾರಣಿಗರನ್ನು ಈವರೆಗೆ ರಕ್ಷಿಸಲಾಗಿದ್ದು, ಅವರನ್ನು ಡೆಹ್ರಾಡೂನ್‌ನ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಚಾರಣಿಗರ ಪೈಕಿ ಒಬ್ಬರೊಂದಿಗೆ ಸ್ವತಃ ನಾನು ಮಾತನಾಡಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯ ಬಗ್ಗೆ ನಿಖರ ಮಾಹಿತಿ ಕಲೆಹಾಕಲಾಗಿದೆ. ಉಳಿದವರನ್ನೂ ರಕ್ಷಿಸುವ ಕಾರ್ಯ ಪ್ರಗತಿಯಲ್ಲಿದ್ದು, ಚಾರಣಿಗರನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಈಗಾಗಲೇ ಪ್ರಾರಂಭಿಸಿದೆ. ಈ ಕಾರ್ಯಾಚರಣೆಗೆ ಸಹಕಾರ ಒದಗಿಸುವ ಸಲುವಾಗಿ ಸ್ವತಃ ನಾನು ಸಹ ಬುಧವಾರ ಡೆಹ್ರಾಡೂನ್ ತಲುಪಿದ್ದೇನೆ ಎಂದು ವಿವರಿಸಿದ್ದಾರೆ.
ದುರಾದೃಷ್ಟವಶಾತ್ ಕೆಲವು ಚಾರಣಿಗರು ಮೃತಪಟ್ಟಿರುವ ವರದಿಯೂ ಲಭ್ಯವಾಗಿದ್ದು, ಅದನ್ನು ನಾವು ಸ್ಥಳೀಯ ಅಧಿಕಾರಿಗಳು ಮತ್ತು ಖಾಸಗಿ ಏಜೆನ್ಸಿಗಳೊಂದಿಗೆ ಮರುದೃಢೀಕರಿಸಲು ಪ್ರಯತ್ನಿಸುತ್ತಿದ್ದೇವೆ. ಮೃತ ಚಾರಣಿಗರ ಮೃತದೇಹಗಳನ್ನು ಹೊರತೆಗೆಯಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ನಮಗೆ ಸೂಚನೆ ನೀಡಿದ್ದಾರೆ. ನಾವು ಉತ್ತರಾಖಂಡ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಈ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಿದ್ದೇವೆ ಎಂದು ಹೇಳಿದ್ದಾರೆ.