ಅತ್ಯಾಚಾರ ಎಸಗಲು ಯತ್ನಿಸಿದ ಕಾಮುಕನ ಕಪಿಮುಷ್ಠಿಯಿಂದ 6 ವರ್ಷದ ಬಾಲಕಿಯನ್ನು ರಕ್ಷಿಸಿದ ಕೋತಿಗಳು; ಮಾರುತಿ ಮಹಿಮೆ…
Sep 23, 2024 03:33 PM IST
ಅತ್ಯಾಚಾರ ಎಸಗಲು ಯತ್ನಿಸಿದ ಕಾಮುಕನ ಕಪಿಮುಷ್ಠಿಯಿಂದ 6 ವರ್ಷದ ಬಾಲಕಿಯನ್ನು ರಕ್ಷಿಸಿದ ಕೋತಿಗಳು
Uttar Pradesh Crime News: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನ ಕಪಿಮುಷ್ಠಿಯಿಂದ ಮಂಗಗಳ ಗುಂಪು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನ ಸಿಂಘವಾಲಿ ಅಹಿರ್ ಪೊಲೀಸ್ ಠಾಣೆಯ ಡೋಲಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶ: ಮಂಗಗಳ ಗುಂಪು 6 ವರ್ಷದ ಬಾಲಕಿಯನ್ನು ಕಾಮುಕ ವ್ಯಕ್ತಿಯ ಹಿಡಿತದಿಂದ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನ ಸಿಂಘವಾಲಿ ಅಹಿರ್ ಪೊಲೀಸ್ ಠಾಣೆಯ ಡೋಲಾ ಗ್ರಾಮದಲ್ಲಿ ಸೆಪ್ಟೆಂಬರ್ 21ರ ಶನಿವಾರ ನಡೆದಿದೆ. ಅತ್ಯಾಚಾರ ಎಸಗಲು ಯತ್ನಿಸಿದ್ದ ವ್ಯಕ್ತಿಯಿಂದ ಮುಗ್ದ ಬಾಲಕಿಯನ್ನು ಕೋತಿಗಳ ಗುಂಪು ರಕ್ಷಿಸಿದೆ ಎಂದು ಕುಟಂಬ ಸದಸ್ಯರೇ ಮಾಹಿತಿ ನೀಡಿದ್ದಾರೆ. ಆರೋಪಿ, ಮಗುವನ್ನು ನಗರದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ನಂತರ ಈ ಘಟನೆ ನಡೆದಿದೆ.
ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬಾಲಕಿಯೊಂದಿಗೆ ಆರೋಪಿ ಮಸೀದಿ ಬೀದಿಯಲ್ಲಿರುವ ಮಸೀದಿಯ ಬಾಗಿಲಿಗೆ ಬಂದಿದ್ದು, ಅಲ್ಲಿಂದ ನಿರ್ಜನ ಸ್ಥಳಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿದ್ದಾನೆ. ವರದಿಗಳ ಪ್ರಕಾರ, ಬಾಲಕಿಯ ವಯಸ್ಸು 6 ವರ್ಷ. ಯುಕೆಜಿ ಓದುತ್ತಿದ್ದಾಳೆ. ಯುಕೆಜಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ತನ್ನ ಕುಟುಂಬಕ್ಕೆ ಘಟನೆ ವಿವರಿಸಿ, ಕೋತಿಗಳು ತನ್ನನ್ನು ಹೇಗೆ ರಕ್ಷಿಸಿದವು ಎಂದು ಮಾಹಿತಿ ನೀಡಿದ್ದಾಳೆ. ಸಿಸಿಟಿವಿ ದೃಶ್ಯಾವಳಿಯನ್ನಾಧರಿಸಿ ಆರೋಪಿ ಬಂಧನಕ್ಕೆ ಪೊಲೀಸರು ಬೆನ್ನತ್ತಿದ್ದಾರೆ.
ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅವಳು ತಮ್ಮ ಮನೆಯ ಹೊರಗೆ ಆಟವಾಡುತ್ತಿದ್ದಳು. ಅವಳನ್ನು ಅಲ್ಲಿಂದ ಕರೆದೊಯ್ದು, ಅವಳನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಮಂಗಗಳ ಗುಂಪು ದಾಳಿ ನಡೆಸಿವೆ. ಆ ಮೂಲಕ ಆ ವ್ಯಕ್ತಿ ಕಾಲ್ಕಿತ್ತಿದ್ದಾನೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆ ವ್ಯಕ್ತಿ ನನ್ನ ಮಗಳೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದಿದ್ದಾರೆ.
ಆತನನ್ನು ಇನ್ನೂ ಗುರುತಿಸಲಾಗಿಲ್ಲ. ಕೊಲ್ಲುವುದಾಗಿ ಆರೋಪಿ ನನ್ನ ಮಗುವಿಗೆ ಬೆದರಿಕೆ ಹಾಕಿದ್ದನಂತೆ. ಕೋತಿಗಳು ಮಧ್ಯಪ್ರವೇಶಿಸದಿದ್ದರೆ ನನ್ನ ಮಗಳು ಈ ಹೊತ್ತಿಗೆ ಸಾಯುತ್ತಿದ್ದಳು ಎಂದು ಬಾಲಕಿಯ ತಂದೆ ಹೇಳಿದ್ದಾರೆ. ಕಣ್ಣಲ್ಲಿ ನೀರು ತುಂಬಿಕೊಂಡ ತಂಡ ಮಂಗಗಳನ್ನು ಬಜರಂಗಿ ಎಂದು ಕೈಮುಗಿದರು. ಘಟನೆಯ ನಂತರ, ಸಂತ್ರಸ್ತೆಯ ಪೋಷಕರು ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂತ್ರಸ್ತೆಯ ಕುಟುಂಬದವರು ಆತ ಪ್ರವೇಶಿಸಿದ ಮನೆಯನ್ನು ಮಸೀದಿ ಎಂದು ತಿಳಿಸಿದ್ದಾರೆ.
ಯಾವೆಲ್ಲಾ ಪ್ರಕರಣಗಳು ದಾಖಲು
ಪೊಲೀಸರು ಆರೋಪಿ ವಿರುದ್ಧ ಬಿಎನ್ಎಸ್ ಸೆಕ್ಷನ್ 74 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 76 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವನ್ನು ಬಳಸುವುದು) ಮತ್ತು ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದಾರೆ.
ಅದೇ ದಿನ ಮತ್ತೊಂದು ಅತ್ಯಾಚಾರ
ಏತನ್ಮಧ್ಯೆ, ಸೆಪ್ಟೆಂಬರ್ ಶನಿವಾರ ನಡೆದ ಮತ್ತೊಂದು ಘಟನೆಯಲ್ಲಿ ಉತ್ತರ ಪ್ರದೇಶದ ಬಲ್ಲಿಯಾದ ಸದರ್ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಏಳು ವರ್ಷದ ಬಾಲಕಿಯ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ್ದಾರೆ. ಒಬ್ಬನಿಗೆ 8 ವರ್ಷ ಮತ್ತು ಮತ್ತೊಬ್ಬನಿಗೆ 7 ವರ್ಷ. ನೆರೆಹೊರೆಯಲ್ಲಿ ವಾಸಿಸುವ ಇಬ್ಬರು ಹುಡುಗರು ಬಾಲಕಿಯನ್ನು ಆಟವಾಡುವ ನೆಪದಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ರಕ್ತಸ್ರಾವದಿಂದ ಮನೆಗೆ ಹಿಂದಿರುಗಿ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಆಕೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಮಹಿಳಾ ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ತಿಳಿಸಿದ್ದಾರೆ. ಕುಟುಂಬದ ದೂರಿನ ಮೇರೆಗೆ, ಇಬ್ಬರು ಆರೋಪಿ ಅಪ್ರಾಪ್ತ ವಯಸ್ಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ನಂತರ ಸರ್ಕಾರಿ ಮಕ್ಕಳ ಆಶ್ರಯಕ್ಕೆ ಕಳುಹಿಸಲಾಯಿತು.