ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು; ಬಿಬಿಎಂಪಿ ವಿರುದ್ಧ ಆಕ್ರೋಶ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು; ಬಿಬಿಎಂಪಿ ವಿರುದ್ಧ ಆಕ್ರೋಶ

ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು; ಬಿಬಿಎಂಪಿ ವಿರುದ್ಧ ಆಕ್ರೋಶ

ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್‌ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆ ಬಳಿಕ ಬಿಬಿಎಂಪಿ ವಿರುದ್ಧ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು (ಸಾಂದರ್ಭಿಕ ಚಿತ್ರ)
ಬೆಂಗಳೂರಿನಲ್ಲಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಸಾವು (ಸಾಂದರ್ಭಿಕ ಚಿತ್ರ)

ಬಿಬಿಎಂಪಿ ಆಟದ ಮೈದಾನದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ. ಮೈದಾನ ಪ್ರವೇಶಿಸುವ ಸಲುವಾಗಿ ಗೇಟ್‌ ಓಪನ್‌ ಮಾಡಲು ಬಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ಭಾರವಾದ ಕಬ್ಬಿಣದ ಗೇಟ್ ಆತನ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ. ಮಲ್ಲೇಶ್ವರಂನ ರಾಜಾಶಂಕರ್ ಪ್ಲೇಗ್ರೌಂಡ್‌ನಲ್ಲಿ ಘಟನೆ ನಡೆದಿದ್ದು, ತಲೆಗೆ ತೀವ್ರ ಪೆಟ್ಟಾಗಿದ ಕಾರಣ ತೀವ್ರ ರಕ್ತಸ್ರಾವದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆಪ್ಟೆಂಬರ್‌ 23ರ ಭಾನುವಾರ ಸಂಜೆ 4 ಗಂಟೆ ವೇಳೆ ಘಟನೆ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಬಿಆರ್ ಜಗದೀಶ್ ತಿಳಿಸಿದ್ದಾರೆ. ವಿಜಯಕುಮಾರ್ ಮತ್ತು ಪ್ರಿಯಾ ದಂಪತಿಯ ಪುತ್ರನಾದ ನಿರಂಜನ್, 5ನೇ ತರಗತಿ ಓದುತ್ತಿದ್ದ. ಸಂಜೆ ತನ್ನ ಬೈಸಿಕಲ್‌ನಲ್ಲಿ ರಾಜಶಂಕರ ಆಟದ ಮೈದಾನಕ್ಕೆ ಬಂದಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಟದ ಮೈದಾನವನ್ನು ಪ್ರವೇಶಿಸಲು ಗೇಟ್ ತೆರೆಯಲು ಪ್ರಯತ್ನಿಸುತ್ತಿದ್ದಾಗ ಗೇಟ್ ಇದ್ದಕ್ಕಿದ್ದಂತೆ ಬಿದ್ದಿದೆ. ತಲೆಗೆ ಮಾರಣಾಂತಿಕ ಗಾಯಗಳಾಗಿ ಸಾವು ಸಂಭವಿಸಿದೆ.

ಪ್ರತ್ಯಕ್ಷದರ್ಶಿಯಾದ ವಿರೂಪಾಕ್ಷಪ್ಪ ಮಾತನಾಡಿ, 'ನಿರಂಜನ್ ಸೈಕಲ್‌ನಲ್ಲಿ ಬಂದಾಗ ನಾವು ಕ್ರಿಕೆಟ್ ಆಡುತ್ತಿದ್ದೆವು. ಅವನು ಗೇಟ್ ಮುಟ್ಟಿದಾಗ ಅದು ಇದ್ದಕ್ಕಿದ್ದಂತೆ ಅವನ ಮೇಲೆ ಬಿದ್ದಿದೆ. ನಾವು ಗೇಟ್ ಎತ್ತಲು ಧಾವಿಸಿದೆವು. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದೆವು ಎಂದು ಹೇಳಿದ್ದಾರೆ. ಆದರೆ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ.

ಆಟದ ಮೈದಾನ ಗೇಟ್ ಕಳಪೆ ಸ್ಥಿತಿಯಲ್ಲಿತ್ತು ಎಂದು ಈ ಪ್ರದೇಶದ ನಿವಾಸಿಗಳು ಆರೋಪಿಸಿದ್ದಾರೆ. ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಬೇಜವಾಬ್ದಾರಿ, ನಿರ್ವಹಣೆ ಕೊರತೆಯನ್ನು ಪ್ರಶ್ನಿಸಿದ್ದಾರೆ. ಬಿಬಿಎಂಯ ನಿರ್ಲಕ್ಷ್ಯದಿಂದ ಪ್ರಾಣ ಹೋಗಿದೆ ಎಂಬ ಆರೋಪ ಕೇಳಿ ಬಂದಿದೆ.

ಘಟನೆ ಸಂಬಂಧ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಎನ್ ವೆಂಕಟೇಶ್ ಮಾತನಾಡಿ, '2 ವರ್ಷಗಳ ಹಿಂದೆ ಗೇಟ್ ನಿರ್ಮಿಸಲಾಗಿದ್ದು, 2022ರಲ್ಲಿ ರಾಜಶೇಖರ ಉದ್ಯಾನದ ನಿರ್ವಹಣೆಯನ್ನು ಅವರಿಗೆ ಹಸ್ತಾಂತರಿಸಿದ್ದೇವೆ. ಘಟನೆ ನಡೆದಾಗ ಯಾವುದೇ ವಾಚ್‌ಮ್ಯಾನ್ ಇರಲಿಲ್ಲ. ಉದ್ಯಾನವನ್ನು ನಿರ್ವಹಿಸುವ ಬಿಬಿಎಂಪಿ ಅಧಿಕಾರಿಗಳು ಕೂಡಾ ಇರಲಿಲ್ಲ" ಎಂದು ಹೇಳಿದ್ದಾರೆ.

ಪ್ರಕರಣ ದಾಖಲು

ಘಟನೆಯ ನಂತರ ಮಲ್ಲೇಶ್ವರಂ ಪೊಲೀಸರು ಆಟದ ಮೈದಾನಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿದ್ದಾರೆ. ಘಟನೆ ಸಂಬಂದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬಿಎನ್ಎಸ್ ಸೆಕ್ಷನ್ 106 (1) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

ಮೃತರ ಪೋಷಕರನ್ನು ಭೇಟಿ ಮಾಡಲು ಕೆಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ದಿನೇಶ್ ಗುಂಡೂರಾವ್, "ಘಟನೆಯಿಂದ ನನಗೆ ತೀವ್ರ ನೋವಾಗಿದೆ. ಈ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುತ್ತೇವೆ. ಗೇಟ್‌ಗೆ ಹಾನಿಯಾದ ಬಗ್ಗೆ ಯಾರೂ ದೂರು ನೀಡಿಲ್ಲ. ಇಲ್ಲಿಯವರೆಗೆ ನಾವು ಅದನ್ನು ಗಮನಿಸಿರಲಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಪಡೆಯುತ್ತೇವೆ. ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ ಇದು ನಮ್ಮ ಗಮನಕ್ಕೆ ಬಂದಿಲ್ಲ" ಎಂದು ಹೇಳಿದ್ದಾರೆ.

Whats_app_banner