logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Breaking News: ಲೋಕಸಭೆಯ ಸ್ಪೀಕರ್‌ ಆಗಿ ಓಂಬಿರ್ಲಾ ಪುನರಾಯ್ಕೆ, ಎನ್‌ಡಿಎ ಪಡೆದ ಮತಗಳೆಷ್ಟು

Breaking News: ಲೋಕಸಭೆಯ ಸ್ಪೀಕರ್‌ ಆಗಿ ಓಂಬಿರ್ಲಾ ಪುನರಾಯ್ಕೆ, ಎನ್‌ಡಿಎ ಪಡೆದ ಮತಗಳೆಷ್ಟು

Umesha Bhatta P H HT Kannada

Jun 26, 2024 12:34 PM IST

google News

ಲೋಕಸಭೆ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿ ಜತೆಗಿದ್ದರು.

    • Lok Sabha Speaker ಭಾರತದ ಲೋಕಸಭೆ ಸ್ಪೀಕರ್‌ ಬಿಜೆಪಿಯ ಓಂ ಬಿರ್ಲಾ( OM Birla) ಅವರು ಚುನಾಯಿತರಾದರು.
ಲೋಕಸಭೆ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿ ಜತೆಗಿದ್ದರು.
ಲೋಕಸಭೆ ಸ್ಪೀಕರ್‌ ಆಗಿ ಆಯ್ಕೆಯಾದ ಓಂ ಬಿರ್ಲಾ ಅವರನ್ನು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅಭಿನಂದಿಸಿದರು. ಪ್ರಧಾನಿ ನರೇಂದ್ರ ಮೋದಿ ಜತೆಗಿದ್ದರು.

ದೆಹಲಿ: ನಿರೀಕ್ಷೆಯಂತೆಯೇ ಭಾರತದ ಲೋಕಸಭೆಯ ಸ್ಪೀಕರ್‌ ಆಗಿ ಎನ್‌ಡಿಎ ಅಭ್ಯರ್ಥಿ ಹಾಗೂ ಬಿಜೆಪಿ ನಾಯಕ ಓಂ ಬಿರ್ಲಾ ಪುನರಾಯ್ಕೆಯಾದರು. ಬುಧವಾರ ದೇಶದ ಇತಿಹಾಸದಲ್ಲಿಯೇ ಸ್ಪೀಕರ್‌ ಹುದ್ದೆಗೆ ನಡೆದ ಮತದಾನದಲ್ಲಿ ಓಂಬಿರ್ಲಾ ಅವರು ಚುನಾಯಿತರಾದರು. ಇಂಡಿಯಾ ಬ್ಲಾಕ್‌ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್‌ ನ ಹಿರಿಯ ಸಂಸದ ಕೆ ಸುರೇಶ್‌ ಅನುಭವಿಸಿದರು. ಹಂಗಾಮಿ ಸಭಾಪತಿ ಭರ್ತೃಹರಿ ಮಹತಾಬ್‌ ಅವರು ಚುನಾವಣೆ ಪ್ರಕ್ರಿಯೆಗಳನ್ನು ನಡೆಸಿ ಹೊಸ ಸ್ಪೀಕರ್‌ ಆಯ್ಕೆ ಮಾಡಿದರು. ಆನಂತರ ಹೊಸ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಓಂ ಬಿರ್ಲಾ ಪರವಾಗಿ ಎನ್‌ ಡಿಎ ಬಲದ 297 ಮತಗಳು ಬಂದವು. ಸುರೇಶ್‌ ಅವರು 232 ಮತಗಳನ್ನು ಮಾತ್ರ ಪಡೆಯಲು ಶಕ್ತರಾದರು.

ಮೂರನೇ ಬಾರಿಗೆ ಸಂಸದರಾಗಿರುವ ರಾಜಸ್ತಾನದ ಕೋಟಾ ಕ್ಷೇತ್ರದ ಪ್ರತಿನಿಧಿ ಓಂ ಬಿರ್ಲಾ ಅವರು ಕಳೆದ ಐದು ವರ್ಷ ಲೋಕಸಭೆ ಸ್ಪೀಕರ್‌ ಆಗಿದ್ದರು. ಈ ಬಾರಿಯೂ ಅವರನ್ನೇ ಮುಂದುವರೆಸಲು ಎನ್‌ಡಿಎ ತೀರ್ಮಾನಿಸಿತ್ತು. ಅದರಂತೆಯೇ ಅವರು ಪುನರಾಯ್ಕೆಯಾದರು. ಕಾಂಗ್ರೆಸ್‌ ನಾಯಕರಾಗಿದ್ದ ಬಲರಾಂ ಜಾಖಡ್‌ ನಂತರ ಲೋಕಸಭೆ ಸ್ಪೀಕರ್‌ ಹುದ್ದೆಯನ್ನು ಎರಡನೇ ಬಾರಿ ಅಲಂಕರಿಸುತ್ತಿದ್ದಾರೆ ಓಂ ಬಿರ್ಲಾ.

ಮೊದಲಿನಿಂದಲೂ ಲೋಕಸಭೆ ಸ್ಪೀಕರ್‌ ಹುದ್ದೆ ಅವಿರೋಧ ಆಯ್ಕೆ ಸಂಪ್ರದಾಯವಿದೆ. ಮೊದಲಬಾರಿಗೆ ಈ ಸಂಪ್ರದಾಯ ಮುರಿಯಲಾಯಿತು. ಚುನಾವಣೆ ನಡೆದು ಅಭ್ಯರ್ಥಿಗಳಾಗಿದ್ದ ಓಂ ಬಿರ್ಲಾ ಹಾಗೂ ಸುರೇಶ್‌ ಅವರಿಗೆ ಧ್ವನಿ ಮತದ ಮೂಲಕ ಮತ ಹಾಕಲಾಯಿತು. ಈ ವೇಳೆ ಓಂ ಬಿರ್ಲಾ ಅವರೇ ಬಹುಮತದಿಂದ ಗೆದ್ದರು. ಕೇರಳದಿಂದ ಎಂಟು ಬಾರಿ ಸಂಸದರಾಗಿರುವ ಸುರೇಶ್‌ ಅವರಿಗೆ ಸೋಲಾಯಿತು.

ಲೋಕಸಭೆಯ ಸಭಾ ನಾಯಕರು ಆಗಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಡಿಯಾ ಬ್ಲಾಕ್‌ ನಾಯಕರು, ಪ್ರತಿ ಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿ ಅವರು ನೂತನ ಸ್ಪೀಕರ್‌ ಅವರನ್ನು ಸಭಾ ಪೀಠದತ್ತ ಕರೆ ತಂದರು. ಹಂಗಾಮಿ ಸ್ಪೀಕರ್‌ ಆಗಿದ್ದ ಭರ್ತೃಹರಿ ಮಹತಾಬ್‌ ಅವರು ಓಂ ಬಿರ್ಲಾ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಈ ವೇಳೆ ನರೇಂದ್ರ ಮೋದಿ, ರಾಹುಲ್‌ ಗಾಂಧಿ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜೇಜು ಮತ್ತಿತರರು ಓಂ ಬಿರ್ಲಾ ಅವರನ್ನು ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಸದಸ್ಯರು, ನೂತನ ಸ್ಪೀಕರ್‌ ಆಗಿರುವ ಓಂ ಬಿರ್ಲಾ ಅವರು ತಾರತಮ್ಯಕ್ಕೆ ಅವಕಾಶ ನೀಡಬಾರದು. ಸಂವಿಧಾನವನ್ನು ಎಂತಹ ಸನ್ನಿವೇಶದಲ್ಲೂ ಬೆಂಬಲಿಸಬೇಕು. ಇಡೀ ಸದನವನ್ನು ಹಿಂದಿನಂತೆಯೇ ಗೌರವಯುತವಾಗಿ ನಡೆಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಲೋಕಸಭೆಯ ಉಪಾಧ್ಯಕ್ಷ ಸ್ಥಾನವನ್ನು ಇಂಡಿಯಾ ಕೂಟಕ್ಕೆ ಬಿಟ್ಟುಕೊಡಬೇಕು ಎಂದು ಕಾಂಗ್ರೆಸ್‌ ಸಹಿತ ಪ್ರತಿಪಕ್ಷಗಳು ಕೋರಿದ್ದವು. ಇದನ್ನು ಒಪ್ಪಿದರೆ ಸ್ಪೀಕರ್‌ ಹುದ್ದೆಗೆ ಬೆಂಬಲಿಸುವುದಾಗಿ ಹೇಳಿದ್ದವು. ಆದರೆ ಬಿಜೆಪಿ ಇದಕ್ಕೆ ಒಪ್ಪಿರಲಿಲ್ಲ. ಈ ಕಾರಣದಿಂದಲೇ ಎರಡೂ ಕಡೆಯಿಂದಲೂ ಅಭ್ಯರ್ಥಿ ಕಣಕ್ಕಿಳಿಸಲಾಗಿತ್ತು.

ಈಗ ಉಪಾಧ್ಯಕ್ಷ ಸ್ಥಾನವನ್ನೂ ಎನ್‌ಡಿಎ ಉಳಿಸಿಕೊಳ್ಳಲಿದೆ. ಎನ್‌ಡಿಎ ಮಿತ್ರ ಪಕ್ಷದ ಅಭ್ಯರ್ಥಿಯೊಬ್ಬರು ಈ ಸ್ಥಾನ ಅಲಂಕರಿಸಲಿದ್ದಾರೆ. ಈ ಸ್ಥಾನಕ್ಕೆ ಚುನಾವಣೆ ನಡೆಯುವುದೇ ಎನ್ನುವ ಕುತೂಹಲವೂ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ