ಫಿದಾಯೀನ್ ದಾಳಿ ಸಂಚು, ಕರ್ನಾಟಕದ 8 ಶಂಕಿತ ಎಲ್‌ಇಟಿ ಉಗ್ರರ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಕೆ
Jan 13, 2024 07:23 AM IST
ಎನ್‌ಐಎ (ಸಾಂಕೇತಿಕ ಚಿತ್ರ)
ಬೆಂಗಳೂರು ಸೇರಿ ರಾಜ್ಯದ ವಿವಿಧ ಕಡೆ ವಿಧ್ವಂಸಕ ಕೃತ್ಯ, ಆತ್ಮಾಹುತಿ ದಾಳಿ ಎಸಗಲು ಯೋಜನೆ ರೂಪಿಸಿದ್ದ ಪಾಕಿಸ್ತಾನ ಮೂಲದ ಲಷ್ಕರ್ ಏ ತೊಯ್ಬಾ (ಎಲ್‌ಇಟಿ) ಸಂಘಟನೆಯ ಶಂಕಿತ 8 ಉಗ್ರರ ವಿರುದ್ಧ ಎನ್‌ಐಎ ಶುಕ್ರವಾರ ದೋಷಾರೋಪ ಪಟ್ಟಿಯನ್ನು ದೆಹಲಿ ಕೋರ್ಟ್‌ಗೆ ಸಲ್ಲಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲೇ ಕುಳಿತು ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಪ್ರಕರಣ ಇದು.
ನವದೆಹಲಿ: ಕರ್ನಾಟಕ ರಾಜಧಾನಿ ಬೆಂಗಳೂರು (Bengaluru) ಸೇರಿ ರಾಜ್ಯದ ವಿವಿಧ ಕಡೆ ವಿಧ್ವಂಸಕ ಕೃತ್ಯ, ಆತ್ಮಾಹುತಿ (ಫಿದಾಯೀನ್) ದಾಳಿ ಎಸಗಲು ಯೋಜನೆ ರೂಪಿಸಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಏ-ತೊಯ್ಬಾ (ಎಲ್‌ಇಟಿ) ದ 8 ಶಂಕಿತ ಉಗ್ರರ ವಿರುದ್ಧ ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (ಎನ್‌ಐಎ Natioanl Investigation Agency) ಶುಕ್ರವಾರ ದೋಷಾರೋಪ ಪಟ್ಟಿ (Charge Sheet) ಯನ್ನು ದೆಹಲಿ ಕೋರ್ಟ್ (Delhi Court) ಗೆ ಸಲ್ಲಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡೇ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ ಪ್ರಕರಣ ಇದಾಗಿದೆ. ಎಂಟು ಆರೋಪಿಗಳ ಪೈಕಿ 6 ಜನರನ್ನು ಬಂಧಿಸಲಾಗಿದೆ. ಇಬ್ಬರು ತಲೆಮರೆಸಿಕೊಂಡಿದ್ದಾರೆ. ಉಗ್ರವಾದಕ್ಕೆ ಪಿತೂರಿ, ಆತ್ಮಾಹುತಿ ದಾಳಿ ನಡೆಸಲು ಯೋಜನೆ ರೂಪಿಸಿದರು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಆರೋಪ ಹೊರಿಸಿದೆ.
ಈ ಪ್ರಕರಣದ ಪ್ರಮುಖ ಸೂತ್ರಧಾರಿ ಕೇರಳದ ಕಣ್ಣೂರು ಮೂಲದ ನಸೀರ್ ಆಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ತಲೆಮರೆಸಿಕೊಂಡಿರುವ ಉಗ್ರರನ್ನು ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಎಂದು ಉಲ್ಲೇಖಿಸಿರುವ ಎನ್‌ಐಎ, ಅವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದೆ.
ಈ ಆರೋಪಿಗಳು ಯುವಕರ ಬ್ರೇನ್‌ವಾಶ್ ಮಾಡಿ ಉಗ್ರ ಸಂಘಟನೆಗಳಿಗೆ ಸೇರಿಸುತ್ತಿದ್ದರು. ಅಕ್ರಮವಾಗಿ ಉಗ್ರ ಸಂಘಟನೆಗಳಿಗೆ ಹಣ ರವಾನೆ ಮಾಡುತ್ತಿದ್ದರು ಎಂಬುದು ದೃಢಪಟ್ಟಿತ್ತು. ಇದಕ್ಕೆ ಸಂಬಂಧಿಸಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರೆಸಿರುವುದಾಗಿ ಎನ್‌ಐಎ ವಕ್ತಾರರು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಸೈಯದ್ ಸುಹೇಲ್ ಖಾನ್, ಮೊಹಮ್ಮದ್ ಉಮರ್, ಝಹೀದ್ ತಬ್ರೇಜ್, ಸೈಯದ್ ಮುದಾಸಿರ್ ಮತ್ತು ಫೈಸಲ್ ರಬ್ಬಾನಿ ಎಂಬುವವರನ್ನು ಎನ್‌ಐಎ ತಂಡ ಕಳೆದ ವರ್ಷ ಜುಲೈ 19 ರಂದು ಬೆಂಗಳೂರಲ್ಲಿ ಬಂಧಿಸಿದೆ. ಇವರ ಹೆಸರುಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದು, ಇವರೆಲ್ಲರ ವಿರುದ್ಧ ಐಪಿಸಿ, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ, ಸ್ಫೋಟಕಗಳ ಸಾಗಣೆಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಂಕಿತ ಲಷ್ಕರ್ ಉಗ್ರರು ಬೆಂಗಳೂರಿನಲ್ಲಿ ರೂಪಿಸಿದ ಸಂಚೇನು
ಬೆಂಗಳೂರಿನಲ್ಲಿ ಸ್ಫೋಟ ಕೃತ್ಯ ನಡೆಸಲು ಸಂಚು ರೂಪಿಸಲಾಗುತ್ತಿದೆ ಎಂಬ ಸುಳಿವು ಸಿಕ್ಕ ಕಾರಣ 2023ರ ಜು.18ರಂದು ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಜು.19ರಂದು ದಾಳಿ ನಡೆಸಿದ ಪೊಲೀಸರು ಐವರು ಶಂಕಿತ ಲಷ್ಕರ್ ಉಗ್ರರನ್ನು ಬಂಧಿಸಿದ್ದರು.
ಶಂಕಿತರ ಬಂಧನದ ವೇಳೆ ಅವರಿಂದ 7 ನಾಡ ಪಿಸ್ತೂಲುಗಳು, 45 ಜೀವಂತ ಗುಂಡುಗಳು, ವಾಕಿಟಾಕಿಗಳು, ಡ್ಯಾಗರ್‌ಗಳು ಮತ್ತು 12 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣವು ರಾಷ್ಟ್ರೀಯ ಭದ್ರತೆಯ ವಿಚಾರಕ್ಕೆ ಸಂಬಂಧಿಸಿದ ಕಾರಣ 2023ರ ಅಕ್ಟೋಬರ್‌ನಲ್ಲಿ ಇದರ ತನಿಖೆಯ ಹೊಣೆಗಾರಿಕೆ ಎನ್‌ಐಎ ಹೆಗಲೇರಿತ್ತು.
ಬಂಧಿತ ಶಂಕಿತ ಉಗ್ರರು ಈ ಹಿಂದೆ 2017ರಲ್ಲಿ ಬೇರೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆಗ ಆತ್ಮಾಹುತಿ (ಫಿದಾಯೀನ್) ದಾಳಿ ನಡೆಸುವುದಕ್ಕೆ ಸಂಚು ರೂಪಿಸಿದ್ದರು. 8 ಆರೋಪಿಗಳ 7 ಆರೋಪಿಗಳು ಜೈಲಿನಿಂದ ಬಿಡುಗಡೆಯಾದರು. ಇನ್ನೊಂದು ಕೇಸ್‌ನಲ್ಲಿ ನಸೀರ್‌ನ ಜೈಲು ಶಿಕ್ಷೆ ಮುಂದುವರಿದರೆ, ಇನ್ನಿಬ್ಬರು ಪರಾರಿಯಾಗಿದ್ದರು. ಕಳೆದ ವರ್ಷ ಜುಲೈ 18 ರಂದು 5 ಆರೋಪಿಗಳು ಮತ್ತೆ ಸೆರೆ ಸಿಕ್ಕಿದ್ದರು.