NIA Raids: ಮಾನವ ಕಳ್ಳಸಾಗಣೆ ಪ್ರಕರಣ ಸಂಬಂಧ ಕರ್ನಾಟಕ ಸೇರಿ 10 ರಾಜ್ಯಗಳ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ಶೋಧ
Nov 08, 2023 02:48 PM IST
ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಮಾನವ ಕಳ್ಳಸಾಗಣೆ ಸಂಬಂಧ ಎನ್‌ಐಎ ಅಧಿಕಾರಿಗಳ ತಂಡ ಬುಧವಾರ ಶೋಧ ನಡೆಸಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನ ಎನ್‌ಐಎ ತಂಡ ಇತ್ತೀಚೆಗೆ ಮಾನವ ಕಳ್ಳಸಾಗಣೆ ಸಂಬಂಧ ಶಂಕಿತನನ್ನು ಬಂಧಿಸಿದ ಬಳಿಕ, ಎನ್ಐಎ ಅಧಿಕಾರಿಗಳ ತಂಡ ಇಂದು (ನ.8) ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಶೋಧ ನಡೆಸಿದೆ. ಇದರ ವಿವರ ಇಲ್ಲಿದೆ.
ನವದೆಹಲಿ: ಕರ್ನಾಟಕವೂ ಸೇರಿ 10 ರಾಜ್ಯಗಳ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (ಎನ್‌ಐಎ) (National Investigation Agency (NIA)) ಅಧಿಕಾರಿಗಳ ತಂಡ ಬುಧವಾರ ಮಾನವ ಕಳ್ಳಸಾಗಣೆ ಸಂಬಂಧ ಶೋಧ ನಡೆಸಿದೆ.
ತ್ರಿಪುರಾ, ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಹರಿಯಾಣ, ಪುದುಚೆರಿ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ ಮುಂತಾದ ರಾಜ್ಯಗಳಲ್ಲಿ ಎನ್‌ಐಎ ತಂಡ ಶೋಧ ನಡೆಸಿರುವುದು ಎಂದು ಎಎನ್‌ಐ ವರದಿ ಮಾಡಿದೆ.
ಅಂತರಾಷ್ಟ್ರೀಯ ಸಂಪರ್ಕ ಹೊಂದಿರುವ ಮಾನವ ಕಳ್ಳಸಾಗಣೆದಾರರ ದಂಧೆಯನ್ನು ಪತ್ತೆಹಚ್ಚಲು ಈ 10 ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು ನಾಲ್ಕು ಡಜನ್‌ಗೂ ಹೆಚ್ಚು ಸ್ಥಳಗಳನ್ನು ಶೋಧಿಸುತ್ತಿದ್ದಾರೆ ಎಂದು ಎನ್‌ಐಎ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಯ ವೇಳೆ, ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಂ ಜಾಫರ್ ಆಲಂ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿದೆ. ಜಮ್ಮುವಿನ ಬತಿಂಡಿ ಪ್ರದೇಶದಲ್ಲಿ ನಸುಕಿನ 2 ಗಂಟೆ ಸುಮಾರಿಗೆ ಕಾರ್ಯಾಚರಣೆಯು ನಡೆಯಿತು. ಇನ್ನೊಬ್ಬ ಶಂಕಿತ ಪ್ರಸ್ತುತ ಅಧಿಕಾರಿಗಳಿಂದ ತಪ್ಪಿಸಿಕೊಂಡಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಒಬ್ಬನನ್ನು ಬಂಧಿಸಿತ್ತು ಬೆಂಗಳೂರು ಎನ್‌ಐಎ ತಂಡ
ಈ ತಿಂಗಳ ಆರಂಭದಲ್ಲಿ, ಬೆಂಗಳೂರು ಎನ್‌ಐಎ ತಂಡವು ಶ್ರೀಲಂಕಾಕ್ಕೆ ಸಂಬಂಧಿಸಿದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಪರಾರಿಯಾದ ಶಂಕಿತನನ್ನು ಬಂಧಿಸಿತ್ತು. ಶಂಕಿತ ವ್ಯಕ್ತಿ, ಇಮ್ರಾನ್ ಖಾನ್, ಬೆಂಗಳೂರು ಮತ್ತು ಮಂಗಳೂರಿನ ವಿವಿಧ ಪ್ರದೇಶಗಳಿಗೆ ಶ್ರೀಲಂಕಾ ಪ್ರಜೆಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಸಹ-ಆರೋಪಿಗಳ ಗುಂಪಿನ ಭಾಗವಾಗಿದ್ದ ಎಂದು ವರದಿ ಹೇಳಿದೆ.
ಇದು ಅಂತಾರಾಷ್ಟ್ರೀಯ ಪ್ರಕರಣವಾದ ಕಾರಣ ಇದರ ತನಿಖೆಯ ಹೊಣೆಗಾರಿಕೆಯನ್ನು ಸ್ಥಳೀಯ ಪೊಲೀಸರಿಂದ ರಾಷ್ಟ್ರೀಯ ತನಿಖಾ ಏಜೆನ್ಸಿ ಎನ್‌ಐಎ ವಹಿಸಿಕೊಂಡಿತು.
2021ರ ಅಕ್ಟೋಬರ್ ತಿಂಗಳಲ್ಲಿ, ಈ ಪ್ರಕರಣದ ಆರೋಪಿಗಳಾಗಿದ್ದ ದಿನಕರನ್, ಅಯ್ಯ, ಕಾಸಿ ವಿಶ್ವನಾಥನ್, ರಸೂಲ್, ಸತಮ್ ಉಷೇನ್ ಮತ್ತು ಅಬ್ದುಲ್ ಮುಹೀತು ಎಂಬ ಐದು ಭಾರತೀಯರ ವಿರುದ್ಧ ಆರಂಭಿಕ ಚಾರ್ಜ್ ಶೀಟ್ ಅನ್ನು ಎನ್ಐಎ ಸಲ್ಲಿಸಿತು. ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ, ಎನ್ಐಎ ಒಟ್ಟು 13 ಶಂಕಿತರನ್ನು ಪ್ರಕರಣದಲ್ಲಿ ಬಂಧಿಸಿದೆ.
ಅಂತೆಯೇ, ಮೋಸದ ಭರವಸೆಗಳೊಂದಿಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ಪ್ರಲೋಭಿಸಲು ಕಳ್ಳಸಾಗಣೆದಾರರು ಬಳಸುವ ಮೋಸಗೊಳಿಸುವ ತಂತ್ರಗಳನ್ನು ಒಳಗೊಂಡಿರುವ ಹೆಚ್ಚುವರಿ ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ಎನ್‌ಐಎ ಸಕ್ರಿಯವಾಗಿ ತನಿಖೆ ನಡೆಸುತ್ತಿದೆ. ಈ ಭರವಸೆಗಳು ಸಾಮಾನ್ಯವಾಗಿ ಕೆನಡಾಕ್ಕೆ ನಿಜವಾದ ವಲಸೆ ದಾಖಲೆಗಳನ್ನು ಪಡೆಯುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ. ಜೊತೆಗೆ ಉದ್ಯೋಗ ಮತ್ತು ಇತರ ಉದ್ದೇಶಗಳಿಗಾಗಿ ಅವಕಾಶಗಳನ್ನು ಒಳಗೊಂಡಿರುತ್ತದೆ ಎಂದು ಎನ್‌ಐಎ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.