Personality Test: ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ; ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ; ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ

Personality Test: ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ; ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ

Sleeping Position Personality Test: ನಾವು ಮಲಗುವ ರೀತಿ ನಮ್ಮಲ್ಲಿ ಅಡಕವಾಗಿರುವ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ಸ್ಲೀಪಿಂಗ್‌ ಪರ್ಸನಾಲಿಟಿ ಎನ್ನುವುದು ನಮ್ಮ ಸಾಮಾಜಿಕ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ನೀವು ಮಲಗುವ ಭಂಗಿ ಯಾವುದು ಎನ್ನುವುದು ಮೇಲೆ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ನಾವು ಮಲಗುವ ಶೈಲಿ ತಿಳಿಸಲಿದೆ ನಮ್ಮ ಗುಪ್ತ ವ್ಯಕ್ತಿತ್ವ; ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ
ನಾವು ಮಲಗುವ ಶೈಲಿ ತಿಳಿಸಲಿದೆ ನಮ್ಮ ಗುಪ್ತ ವ್ಯಕ್ತಿತ್ವ; ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ (Jagaranjosh)

ನಿದ್ದೆ ಮನುಷ್ಯ ಜೀವನದ ಒಂದು ಪ್ರಮುಖ ಅಂಶ. ನಾವು ನಿದ್ದೆ ಬಂದಾಗಲಷ್ಟೇ ಮಲಗುವುದಿಲ್ಲ. ದೇಹಕ್ಕೆ ಆಯಾಸ ಎನ್ನಿಸಿದಾಗ, ಮನಸ್ಸು ಭಾರವಾದಾಗೆಲ್ಲಾ ಮಲಗುತ್ತೇವೆ. ಒಬ್ಬೊಬ್ಬರಿಗೆ ಒಂದೊಂದು ರೀತಿ ಮಲಗುವ ಅಭ್ಯಾಸವಿರುತ್ತದೆ. ಒಬ್ಬರು ನೇರವಾಗಿ ಮಲಗಿದರೆ ಇನ್ನೊಬ್ಬರು ಮಗ್ಗುಲಾಗಿ ಮಲಗುತ್ತಾರೆ. ಕೆಲವರು ಹೊಟ್ಟೆ ಅಡಿ ಹಾಕಿ ಉಲ್ಟಾ ಮಲಗುತ್ತಾರೆ. ಹೀಗೆ ಅವರವರ ಅಭ್ಯಾಸ ಭಿನ್ನವಾಗಿರುವುದು ಸಹಜ. ಆದರೆ ನಾವು ಮಲಗುವ ರೀತಿ ನಮ್ಮಲ್ಲಿ ಅಡಕವಾಗಿರುವ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಈ ಸ್ಲೀಪಿಂಗ್‌ ಪರ್ಸನಾಲಿಟಿ ಎನ್ನುವುದು ನಮ್ಮ ಸಾಮಾಜಿಕ ವರ್ತನೆಯ ಮೇಲೂ ಪರಿಣಾಮ ಬೀರುತ್ತದೆ.

ಯೂರೋಪಿಯನ್‌ ಜರ್ನಲ್‌ ಆಫ್‌ ಪರ್ನನಾಲಿಟಿ ಪ್ರಕಾರ ಈ ವಾರ ನಾವು ಪಡೆಯುವ ಗುಣಮಟ್ಟದ ನಿದ್ದೆಯು ಮುಂದಿನ ಐದು ವರ್ಷಗಳ ನಂತರದ ನಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದಂತೆ. ಸ್ಲೀಪ್‌ ರಿಸರ್ಚರ್‌ ಸ್ಯಾಮ್ಯುಯೆಲ್‌ ಡಂಕೆಲ್‌ ಮಲಗುವ ಶೈಲಿ ಹಾಗೂ ವ್ಯಕ್ತಿತ್ವದ ಗುಣಲಕ್ಷಣಗಳ ನಡುವಿನ ಸಂಪರ್ಕವನ್ನು ಅನ್ವೇಷಿಸಲು ಕೆಲಸ ಮಾಡಿದ್ದಾರೆ. ʼನಾವು ಹೇಗೆ ಮಲಗುತ್ತೇವೆ, ಹಾಗೆ ನಮ್ಮ ವ್ಯಕ್ತಿತ್ವ ಇರುತ್ತದೆʼ ಎಂದು ಅವರು ತಮ್ಮ ಪುಸ್ತಕ ಸ್ಲೀಪ್‌ ಪೊಸಿಷನ್ಸ್‌ನಲ್ಲಿ ಬರೆದಿದ್ದಾರೆ.

ಸರಿ ಹಾಗಾದರೆ ಯಾವ ರೀತಿ ಮಲಗಿದರೆ ಯಾವ ರೀತಿ ವ್ಯಕ್ತಿತ್ವ ಹೊಂದಿರುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಬೆನ್ನು ನೆಲಕ್ಕೆ ತಾಕಿಸಿ ನೇರ ಮಲಗುವುದು

ಈ ರೀತಿ ಮಲಗುವ ಅಭ್ಯಾಸ ಹೊಂದಿರುವವರು ಫೋಕಸ್ಡ್‌ ಆಗಿರುತ್ತಾರೆ. ಇವರು ಮೌನವಾಗಿದ್ದರೂ, ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ. ಇವರು ಜಗಳವಾಡಲು ಇಷ್ಟಪಡುವುದಿಲ್ಲ. ಗಡಿಬಿಡಿ ಇವರಿಗೆ ಆಗಿ ಬರುವುದಿಲ್ಲ. ಈ ರೀತಿ ಮಲಗುವವರು ನೂರು ಸುಳ್ಳು ಹೇಳುವುದಕ್ಕಿಂತ ಸತ್ಯವನ್ನು ಹೆಚ್ಚು ಮಾತನಾಡಲು ಬಯಸುತ್ತಾರೆ. ಇವರು ಕ್ರಮಬದ್ಧ ಜೀವನವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮಿಂದ ಹಾಗೂ ಇತರರಿಂದ ಸಾಕಷ್ಟು ನಿರೀಕ್ಷೆ ಮಾಡುತ್ತಾರೆ. ಇವರು ಆಲೋಚನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ. ಬೆನ್ನು ನೆಲಕ್ಕೆ ತಾಕಿಸಿ ಮಲಗುವವರು ಆಶಾವಾದಿಗಳಾಗಿರುತ್ತಾರೆ. ಜೀವನದಲ್ಲಿ ಹಿಡಿದ ಗುರಿಯನ್ನು ಬಿಡಲು ಬಯಸುವುದಿಲ್ಲ. ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಹಠಮಾರಿ ಮನೋಭಾವದವರು. ಇವರು ಸುಮ್ಮನೆ ಬೇಡದ ಗಾಸಿಪ್‌ ಮಾಡಲು ಇಷ್ಟಪಡುವುದಿಲ್ಲ. ರಾಜಮನೆತನದವರಂತೆ ಜೀವನ ನಡೆಸುವ ಒಲವು ಹೊಂದಿರುತ್ತೀರಿ.

ಸೈನಿಕರ ಶೈಲಿ ಮಲಗುವವರು: ಕೆಲವರಿಗೆ ಮಲಗುವಾಗ ತೋಳುಗಳನ್ನು ನೇರ ಚಾಚಿ ಮಲಗಿದರಷ್ಟೇ ನಿದ್ದೆ ಬರುತ್ತದೆ. ಇಂತಹವರು ಉನ್ನತ ಗುಣಮಟ್ಟ ಹೊಂದಿರುತ್ತಾರೆ. ಇಂತಹವರ ಹೃದಯದಲ್ಲಿ ಸ್ಥಾನ ಗಳಿಸುವುದು ಸುಲಭವಲ್ಲ. ಇವರು ಸ್ನೇಹಪರರು, ಸಭ್ಯರು ಆಗಿರುತ್ತಾರೆ. ಆದರೆ ನಿಕಟ ವಲಯದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಇಷ್ಟಪಡುವವರಿಗೆ ಮಾತ್ರ ಜಾಗ ನೀಡುತ್ತೀರಿ.

ಸ್ಟಾರ್‌ಫಿಶ್‌ ರೀತಿ ಮಲಗುವುದು: ನಿಮ್ಮ ಕಾಲುಗಳು ಹಾಗೂ ತೋಳುಗಳನ್ನು ಸ್ಟಾರ್‌ಫಿಶ್‌ ರೀತಿ ಮಡಿಚಿ ಮಲಗುವ ಅಭ್ಯಾಸ ಇದ್ದರೆ ನೀವು ಸ್ನೇಹ ಹಾಗೂ ಸಂಬಂಧಗಳನ್ನು ಗೌರವಿಸುತ್ತೀರಿ. ನೀವು ಇತರರ ನೋವು ಹಾಗೂ ಕಥೆಗಳನ್ನು ಆಲಿಸಲು ಇಷ್ಟಪಡುತ್ತೀರಿ. ಸಹಾನುಭೂತಿ ಮನೋಭಾವ ನಿಮ್ಮಲ್ಲಿರುತ್ತದೆ .

ಅಡ್ಡಲಾಗಿ ಮಲಗುವುದು

ಅಡ್ಡಲಾಗಿ ಮಲಗುವುದು ಅಂದರೆ ಒಂದು ಮಗ್ಗುಲಿಗೆ ಮಲಗುವುದು. ಈ ರೀತಿ ಮಲಗುವವರ ವ್ಯಕ್ತಿತ್ವವು ಹೊರಗಿನಿಂದ ತೀರಾ ಜೋರಿನವರಾಗಿದ್ದು, ಮನಸ್ಸಿನೊಳಗೆ ಬಹಳ ಸೂಕ್ಷ್ಮ ಮನೋಭಾವ ಹೊಂದಿರುತ್ತಾರೆ. ಇವರು ನಾಚಿಕೆಯ ಸ್ವಭಾವದ ವ್ಯಕ್ತಿಯಾಗಿರುತ್ತಾರೆ. ಇವರು ಸಾಕಷ್ಟು ಅಂತರ್ಮುಖಿಯಾಗಿರಬಹುದು.ಬರವಣಿಗೆ, ಚಿತ್ರಕಲೆ, ನೃತ್ಯ, ಹಾಡುಗಾರಿಕೆ, ಬ್ಲಾಗಿಂಗ್ ಮುಂತಾದ ಸೃಜನಶೀಲ ಚಟುವಟಿಕೆಗಳನ್ನು ನೀವು ಆನಂದಿಸಬಹುದು. ನಿಮ್ಮ ಜೀವನದಲ್ಲಿ ಅಂದರೆ ಎಚ್ಚರವಿದ್ದಾಗ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ನೀವು ಮಗುವಿನ ರೀತಿ ಮುದುಡಿ ಮಲಗಬಹುದು. ನಿಮ್ಮ ಕುಟುಂಬದ ಸುತ್ತ ನೀವು ಹೆಚ್ಚು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತೀರಿ. ಜನಸಂದಣಿಯಲ್ಲಿ ನೀವು ಆತಂಕ ಅಥವಾ ಅತಿಯಾದ ಒತ್ತಡವನ್ನು ಅನುಭವಿಸಬಹುದು. ಸಾರ್ವಜನಿಕವಾಗಿ ಮಾತನಾಡುವಾಗ ಅಥವಾ ದೊಡ್ಡ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡುವಾಗ ನೀವು ತೊಂದರೆ ಅಥವಾ ಹೆದರಿಕೆಯನ್ನು ಅನುಭವಿಸಬಹುದು. ಸ್ಯಾಮ್ಯುಯೆಲ್‌ ಅವರ ಪ್ರಕಾರ ಈ ರೀತಿ ಮಲಗುವವರು ಆತಂಕ ಅಥವಾ ಭಾವನಾತ್ಮಕ ಉತ್ತುಂಗದಲ್ಲಿ ಇರುತ್ತಾರೆ ಎನ್ನುತ್ತಾರೆ.

ಬೋರಲು ಮಲಗುವುದು

ಬೋರಲು ಮಲಗುವುದು ಅಂದರೆ ಹೊಟ್ಟೆಯ ಮೇಲೆ ಮಲಗುವುದು ಅಥವಾ ಉಲ್ಟಾ ಮಲಗುವುದು. ಹೊಟ್ಟೆ ಮೇಲೆ ಮಲಗುವವರು ವಿನೋದ, ತಮಾಷೆಯ ಮನೋಭಾವದವರು. ಇವರು ಮುಕ್ತ ಮನಸ್ಸಿನ ವ್ಯಕ್ತಿಯಾಗಿರುತ್ತಾರೆ. ನೀವು ಇದ್ದಿದ್ದನ್ನು ಇದ್ದ ಹಾಗೆ ಹೇಳುತ್ತೀರಿ. ಕೆಲವೊಮ್ಮೆ ನೀವು ಸ್ವಭಾವ ಕಠಿಣ ಎನ್ನಿಸಬಹುದು. ಈ ರೀತಿ ಮಲಗುವವರಿಗೆ ಜೀವನದಲ್ಲಿ ತಾನು ಏನನ್ನು ಬಯಸುತ್ತೇನೆ ಎಂಬುದರ ಬಗ್ಗೆ ಸ್ವಷ್ಟ ನಿಲುವಿರುತ್ತದೆ. ಆದರೂ ಕೆಲವೊಮ್ಮೆ ನಿಮ್ಮ ಮನಸ್ಸಿನಲ್ಲಿ ಆತಂಕ, ತಲ್ಲಣ ಇರಬಹುದು. ನೀವು ಬಲವಾದ ಇಚ್ಛಾಶಕ್ತಿಯುಳ್ಳ, ಸಾಹಸಿ, ಅಪಾಯ-ತೆಗೆದುಕೊಳ್ಳುವ ಮತ್ತು ಹೆಚ್ಚು ಆಶಾವಾದಿ ವ್ಯಕ್ತಿ.

ಇನ್ನು ಋಣಾತ್ಮಕ ಅಂಶಕ್ಕೆ ಬರುವುದಾದರೆ ಈ ರೀತಿ ವ್ಯಕ್ತಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಇರುತ್ತದೆ. ಆದರೆ ಇವರು ನಕಾರಾತ್ಮಕ ಭಾವನೆಗಳನ್ನು ಮರೆ ಮಾಡಲು ಉತ್ತಮರು.

ಸ್ಕೈಡೈವರ್‌ ರೀತಿ ಮಲಗುವುದು: ನೀವು ಉಲ್ಟಾ ಮಲಗಿ ದಿಂಬಿನ ಮೇಲೆ ಅಗಲವಾಗಿ ಕೈ ಹರಡಿಕೊಂಡು ಕೈಮೇಲೆ ತಲೆ ಇಟ್ಟು ಮಲಗುವ ಅಭ್ಯಾಸ ಹೊಂದಿದ್ದರೆ ನೀವು ಸಾಮಾಜಿಕವಾಗಿ ಹೆಚ್ಚು ತೆರೆದುಕೊಳ್ಳಲು ಬಯಸುವವರು, ಯಾವಾಗಲೂ ಸಹಾಸಕ್ಕೆ ಸಿದ್ಧರಾಗಿರುತ್ತೀರಿ. ನೀವು ಹೊರ ಪ್ರಪಂಚವನ್ನು ಹೆಚ್ಚು ಇಷ್ಟಪಡುತ್ತೀರಿ. ನೀವು ಯಾರನ್ನೂ ಟೀಕಿಸಲು ಇಷ್ಟಪಡುವುದಿಲ್ಲ.

ಒಂದು ಬದಿಯಲ್ಲಿ ಮಲಗುವುದು

ಒಂದು ಬದಿಯಲ್ಲಿ ಮಲಗುವುದು ಅಂದರೆ ಎಡ ಅಥವಾ ಬಲ ಮಗ್ಗಲಲ್ಲಿ ಮಲಗುವುದು ಎಂದರ್ಥ. ಈ ರೀತಿ ಮಲಗುವವರು ಸಾಮಾಜಿಕ ವ್ಯಕ್ತಿ. ಇವರು ಗುಂಪಿನಲ್ಲಿ ಇರಲು ಹೆಚ್ಚು ಇಷ್ಟಪಡುತ್ತಾರೆ. ಇವರು ತುಂಬಾ ನಂಬಿಕಸ್ತರಾಗಿರುತ್ತಾರೆ. ಆದರೆ ಕೆಲವೊಮ್ಮೆ ನಿಮ್ಮನ್ನು ಸುಲಭವಾಗಿ ಮನವೊಲಿಸಿ ವಿಷಯ ತಿಳಿಯಬಹುದಾಗಿದೆ. ಆದರೆ ನೀವು ಎಲ್ಲವನ್ನೂ, ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೀರಿ.

ಒಂದು ಮಗ್ಗಲಲ್ಲಿ ದಿಂಬನ್ನು ತಬ್ಬಿ ಮಲಗುವವರು: ಈ ರೀತಿ ಮಲಗುವವರು ಪೊರೆಯುವ ಗುಣ ಹೊಂದಿರುತ್ತಾರೆ. ನಿಮ್ಮನ್ನು ಎಲ್ಲರೂ ಇಷ್ಟಪಡುತ್ತಾರೆ. ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರು ನೀವು ಸದಾ ಅವರ ಜೊತೆ ನೀವಿರಬೇಕು ಎಂದು ಬಯಸುತ್ತಾರೆ. ನೀವು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಕುಟುಂಬ, ಸ್ನೇಹಿತರು ಮತ್ತು ಸಂಗಾತಿಗೆ ಹೆಚ್ಚು ಆದ್ಯತೆ ನೀಡುತ್ತೀರಿ. ನಿಮ್ಮ ಜೀವನದಲ್ಲಿ ನಿಮಗೆ ಹತ್ತಿರವಿರುವ ಜನರಿಗೆ ಹೆಚ್ಚಿನ ಸಮಯವನ್ನು ನೀಡಲು ನೀವು ಬಯಸುತ್ತೀರಿ. ಕುಟುಂಬ ಮೇಲೆ ಹೆಚ್ಚು ಇಷ್ಟಪಡುವ ವ್ಯಕ್ತಿತ್ವದವರು.

Whats_app_banner