ಸಂಸತ್ತಿನ ಮುಂಗಾರು ಅಧಿವೇಶನ ಇಂದು ಶುರು; ನೀಟ್-ಯುಜಿ, ಕನ್ವರ್ ಯಾತ್ರಾ ವಿವಾದದ ವಿಚಾರ ಪ್ರಸ್ತಾಪ ನಿರೀಕ್ಷೆ, ಗಮನಸೆಳೆದ 10 ಅಂಶ
Jul 22, 2024 10:19 AM IST
ಸಂಸತ್ತಿನ ಮುಂಗಾರು ಅಧಿವೇಶನ ಇಂದು ಶುರು; ನೀಟ್-ಯುಜಿ, ಕನ್ವರ್ ಯಾತ್ರಾ ವಿವಾದದ ವಿಚಾರ ಪ್ರಸ್ತಾಪ ನಿರೀಕ್ಷೆ, ಗಮನಸೆಳೆದ 10 ಅಂಶಗಳ ವರದಿ. ಅಧಿವೇಶನದ ಮುನ್ನಾದಿನ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮತ್ತು ಕೇಂದ್ರ ಸಚಿವ ರಾಜನಾಥ್ ಸಿಂಗ್ ಉಭಯ ಕುಶಲೋಪರಿ.
ಸಂಸತ್ತಿನ ಮುಂಗಾರು ಅಧಿವೇಶನ ಇಂದು ಶುರುವಾಗುತ್ತಿದ್ದು, ಆಗಸ್ಟ್ 12ರ ತನಕ ನಡೆಯಲಿದೆ. ನೀಟ್-ಯುಜಿ, ಕನ್ವರ್ ಯಾತ್ರಾ ವಿವಾದದ ವಿಚಾರ ಪ್ರಸ್ತಾಪವಾಗುವ ನಿರೀಕ್ಷೆಇದೆ. ಕೇಂದ್ರ ಬಜೆಟ್ 2024-25 ಮಂಡನೆಯಾಗುವ ಈ ಅಧಿವೇಶನಕ್ಕೆ ಸಂಬಂಧಿಸಿ ಗಮನಸೆಳೆದ 10 ಅಂಶಗಳು ಹೀಗಿವೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸತ್ತಿನ ಮೊದಲ ಮುಂಗಾರು ಅಧಿವೇಶನ ಇಂದು (ಜುಲೈ 22) ಶುರುವಾಗುತ್ತಿದೆ. ಇದು ಕೇಂದ್ರ ಬಜೆಟ್ 2024- 25 (Union Budget 2024 25) ಮಂಡನೆಯಾಗುವ ಅಧಿವೇಶನವೂ ಆಗಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಆರ್ಥಿಕ ಸಮೀಕ್ಷೆ 2023 24 (Economic Survey 2023 24) ಮಂಡನೆಯಾಗಲಿದೆ. ಮುಂಗಾರು ಅಧಿವೇಶನ ಆಗಸ್ಟ್ 12 ರಂದು ಕೊನೆಗೊಳ್ಳಲಿದೆ.
ನೀಟ್ ಪೇಪರ್ ಸೋರಿಕೆ ಪ್ರಕರಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕನ್ವರ್ ಯಾತ್ರಾ ಮಾರ್ಗದಲ್ಲಿರುವ ತಿನಿಸುಗಳ ಮಾಲೀಕರ ಹೆಸರು ಮತ್ತು ರೈಲ್ವೇ ಸುರಕ್ಷತೆಯನ್ನು ಪ್ರದರ್ಶಿಸುವಂತೆ ನಿರ್ದೇಶನ ನೀಡಿರುವುದರ ವಿರುದ್ಧದ ಗಲಾಟೆಯಿಂದ ಹಿಡಿದು ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇಂಡಿಯಾ ಬ್ಲಾಕ್ ಪಕ್ಷಗಳು ಸಜ್ಜಾಗಿವೆ. '
ಸಂಸತ್ತಿನ ಮುಂಗಾರು ಅಧಿವೇಶನ ಇಂದು ಶುರು; ಗಮನಸೆಳೆದ 10 ಅಂಶ
1) ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 12 ರವರೆಗೆ ನಡೆಯಲಿದ್ದು, ಒಟ್ಟು 19 ಕಲಾಪಗಳನ್ನು ಹೊಂದಿರಲಿದೆ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು 90 ವರ್ಷಗಳಷ್ಟು ಹಳೆಯದಾದ ಏರ್‌ಕ್ರಾಫ್ಟ್ ಕಾಯ್ದೆಯನ್ನು ಬದಲಿಸುವುದು ಸೇರಿದಂತೆ ಆರು ಮಸೂದೆಗಳನ್ನು ಮಂಡಿಸುವ ನಿರೀಕ್ಷೆಯಿದೆ. ಇದಲ್ಲದೆ, ಕೇಂದ್ರದ ಆಡಳಿತದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಬಜೆಟ್‌ಗೆ ಸಂಸತ್ತಿನ ಅನುಮೋದನೆಯನ್ನು ಪಡೆಯಲಿದೆ.
2) ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಂಸತ್ತಿನಲ್ಲಿ ರಾಜಕೀಯ ಪಕ್ಷಗಳ ಸದನ ನಾಯಕರ ಸಭೆಯನ್ನು ಕರೆದಿದ್ದು, ಅಧಿವೇಶನದ ಸಮಯದಲ್ಲಿ ಅವರು ಪ್ರಸ್ತಾಪಿಸಲು ಬಯಸುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.
3) ಕನ್ವರ್ ಯಾತ್ರಾ ಮಾರ್ಗದಲ್ಲಿರುವ ತಿನಿಸುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಮಾಲೀಕರ ಹೆಸರನ್ನು ಪ್ರದರ್ಶಿಸುವಂತೆ ನಿರ್ದೇಶನ ನೀಡುವ ಸರ್ಕಾರದ ಆದೇಶಗಳ ಕುರಿತು ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದರಿಂದ ಚರ್ಚೆಗೆ ಕಾವು ಏರುವ ಸಾಧ್ಯತೆ ಇದೆ.
4) ಸಂಸತ್ತಿನ ಅಧಿವೇಶನದ ಮುನ್ನಾದಿನ ಭಾನುವಾರ (ಜುಲೈ 21) ನಡೆದ ಸರ್ವಪಕ್ಷಗಳ ಸಭೆಯಲ್ಲಿ, ಕಾಂಗ್ರೆಸ್, ಡಿಎಂಕೆ, ಎಸ್‌ಪಿ ಮತ್ತು ಎಎಪಿ ಸೇರಿ ಹಲವು ವಿರೋಧ ಪಕ್ಷಗಳು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶವನ್ನು ಟೀಕಿಸಿವೆ. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಸ್ಪಷ್ಟಪಡಿಸಿವೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಸರಕಾರ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
5) ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳವು ಪ್ರಬಲ ಪ್ರತಿಪಕ್ಷದ ಪಾತ್ರವನ್ನು ವಹಿಸುತ್ತದೆ. ಸಂಸತ್ತಿನಲ್ಲಿ ರಾಜ್ಯದ ಹಿತಾಸಕ್ತಿ ವಿಷಯಗಳನ್ನು ಆಕ್ರಮಣಕಾರಿಯಾಗಿ ಪ್ರಸ್ತಾಪಿಸುವುದಾಗಿ ಘೋಷಿಸಿದೆ. ಬಿಜೆಡಿ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಪಟ್ನಾಯಕ್ ಅವರು ಒಡಿಶಾಗೆ ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯನ್ನು ಕೈಗೆತ್ತಿಕೊಳ್ಳುವಂತೆ ತಮ್ಮ ಪಕ್ಷದ ಸಂಸದರನ್ನು ಕೇಳಿಕೊಂಡಿದ್ದಾರೆ.
6) ಸರ್ಕಾರವು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ, 1970 ಮತ್ತು ಬ್ಯಾಂಕಿಂಗ್ ಕಂಪನಿಗಳ (ಅಂಡರ್‌ಟೇಕಿಂಗ್‌ಗಳ ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1980 ಮುಂತಾದ ಕಾನೂನುಗಳಿಗೆ ತಿದ್ದುಪಡಿಗಳನ್ನು ತರುವ ಸಾಧ್ಯತೆಯಿದೆ. ಬಜೆಟ್ ಅಧಿವೇಶನದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸರ್ಕಾರದ ಷೇರುಗಳು ಶೇಕಡ 51 ಕ್ಕಿಂತ ಕಡಿಮೆಯಾಗಬಹುದು.
7) ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ತನ್ನ ಪಾಲನ್ನು ಶೇಕಡಾ 51 ಕ್ಕಿಂತ ಕಡಿಮೆಗೊಳಿಸುವ ಸರ್ಕಾರದ ಯಾವುದೇ ಕ್ರಮವನ್ನು ಪ್ರತಿಪಕ್ಷಗಳು ವಿರೋಧಿಸುತ್ತವೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
8) ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣೆ (ತಿದ್ದುಪಡಿ) ಮಸೂದೆಯನ್ನು ಪರಿಚಯ, ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಿದೆ. ಪ್ರಸ್ತಾವಿತ ಶಾಸನವು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳ ಪಾತ್ರಗಳಲ್ಲಿ ಹೆಚ್ಚು ಸ್ಪಷ್ಟತೆ ಮತ್ತು ಒಮ್ಮುಖವನ್ನು ತರುವ ಗುರಿಯನ್ನು ಹೊಂದಿದೆ ಎಂದು ಗುರುವಾರ ಬಿಡುಗಡೆಯಾದ ಲೋಕಸಭೆಯ ಬುಲೆಟಿನ್ ತಿಳಿಸಿದೆ.
9) ಭಾರತೀಯ ವಾಯುಯಾನ ವಿಧೇಯಕ 2024 ಸಂಸತ್ತಿನಲ್ಲಿ ಈ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ನಾಗರಿಕ ವಿಮಾನಯಾನ ವಲಯದಲ್ಲಿ ಸುಲಭವಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಡುವ ನಿಬಂಧನೆಗಳನ್ನು ಒದಗಿಸಲು 1934 ರ ಏರ್‌ಕ್ರಾಫ್ಟ್ ಆಕ್ಟ್ ಜಾಗವನ್ನು ತುಂಬಲಿದೆ.
10) ಅಧಿವೇಶನದಲ್ಲಿ ಪರಿಚಯ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾದ ಇತರ ಮಸೂದೆಗಳೆಂದರೆ, ಸ್ವಾತಂತ್ರ್ಯ ಪೂರ್ವದ ಕಾನೂನನ್ನು ಬದಲಿಸಲು ಬಾಯ್ಲರ್ ಬಿಲ್, ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ಮತ್ತು ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆಗಳಾಗಿವೆ.
ನಾಳೆ ಕೇಂದ್ರ ಬಜೆಟ್ 2024- 25 ಮಂಡನೆ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಬೆಳಗ್ಗೆ 11 ಗಂಟೆ ಲೋಕಸಭೆಯಲ್ಲಿ 2024-25ರ ಕೇಂದ್ರ ಬಜೆಟ್ (Union Budget for 2024-25) ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವರಾಗಿ ಮಂಡಿಸುತ್ತಿರುವ ಏಳನೇ ಬಜೆಟ್ ಇದಾಗಿದೆ. ಸತತವಾಗಿ ಮಂಡಿಸುತ್ತಿರುವ ಏಳನೇ ಬಜೆಟ್ ಕೂಡ ಹೌದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)