ಕೇಂದ್ರ ಬಜೆಟ್ 2024 25; ಸಂಸತ್ ಅಧಿವೇಶನ ಇಂದು ಶುರು, ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ಮಂಡನೆ ಸಮಯ ಮತ್ತು ಇತರೆ ವಿವರ
ಕೇಂದ್ರ ಬಜೆಟ್ 2024 25; ಕೇಂದ್ರ ಸರ್ಕಾರ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿದ್ದು, ಸಂಸತ್ ಅಧಿವೇಶನ ಇಂದು ಶುರುವಾಗುತ್ತಿದೆ. ಬಜೆಟ್ ಮಂಡನೆಗೆ ಮೊದಲು ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಆರ್ಥಿಕ ಸಮೀಕ್ಷೆ ಮತ್ತು ಬಜೆಟ್ ಮಂಡನೆ ಸಮಯ ಮತ್ತು ಇತರೆ ವಿವರ ಇಲ್ಲಿದೆ.
ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಸಂಸತ್ತಿನಲ್ಲಿ ಇಂದಿನಿಂದ ಕೇಂದ್ರ ಬಜೆಟ್ ಅಧಿವೇಶನ ಶುರುವಾಗುತ್ತಿದೆ. ಈ ಅಧಿವೇಶನದಲ್ಲಿ 2024-25ರ ಸಂಪೂರ್ಣ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಕೇಂದ್ರ ಸರ್ಕಾರ ಇಂದು (ಜುಲೈ 22) ಆರ್ಥಿಕ ಸಮೀಕ್ಷೆ ಮಂಡಿಸಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಈ ಬಜೆಟ್ ಪೂರ್ವ ದಾಖಲೆಯನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. 2023-24ರ ಆರ್ಥಿಕ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಮತ್ತು ರಾಜ್ಯಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಮಂಡಿಸಲು ಸಿದ್ಧತೆ ನಡೆದಿದೆ. ಈ ನಡುವೆ, ಮಧ್ಯಾಹ್ನ 02.30ಕ್ಕೆ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ ನಡೆಯಲಿದೆ.
ಆರ್ಥಿಕ ಸಮೀಕ್ಷೆ 2023-24; ಭಾರತದ ಅರ್ಥವ್ಯವಸ್ಥೆಯ ಒಳನೋಟ, ಭವಿಷ್ಯದ ಮುನ್ನೋಟ
ಭಾರತದ ಆರ್ಥಿಕ ಸಮೀಕ್ಷೆ 2023-24 ದೇಶದ ಅರ್ಥ ವ್ಯವಸ್ಥೆಯ ಒಳನೋಟ ಒದಗಿಸುವಂತಹ ಮತ್ತು ಭವಿಷ್ಯದ ಮುನ್ನೋಟ ನೀಡುವಂತಹ ದಾಖಲೆಯಾಗಿದೆ. ಇದನ್ನು ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾಗುತ್ತದೆ. ಆರ್ಥಿಕ ಸಮೀಕ್ಷೆಯು 2023-24 (ಏಪ್ರಿಲ್- ಮಾರ್ಚ್) ಆರ್ಥಿಕತೆಯ ಸ್ಥಿತಿ ಮತ್ತು ವಿವಿಧ ಸೂಚಕಗಳ ಒಳನೋಟಗಳನ್ನು ನೀಡುತ್ತದೆ. ಮಂಗಳವಾರ (ಜುಲೈ 23) ಮಂಡನೆಯಾಗಲಿರುವ 2024-25ರ ಬಜೆಟ್‌ನ ಧ್ವನಿ ಮತ್ತು ವಿನ್ಯಾಸದ ಬಗ್ಗೆ ಸ್ವಲ್ಪ ಕಲ್ಪನೆಯನ್ನು ಒದಗಿಸುವ ಸಾಧ್ಯತೆ ಇದೆ.
ಈ ಆರ್ಥಿಕ ಸಮೀಕ್ಷೆಯು ವಿಶೇಷವಾಗಿ ವಲಯವಾರು ಅಧ್ಯಾಯಗಳನ್ನು ಹೊಂದಿದ್ದು, ಹೊಸ ಅಗತ್ಯ-ಆಧಾರಿತ ಅಧ್ಯಾಯಗಳನ್ನು ಕೂಡ ಒಳಗೊಂಡಿರುತ್ತದೆ. ಹೀಗಾಗಿ ಈ ದಾಖಲೆಯು ಗಮನ ಸೆಳೆಯುತ್ತದೆ. ವಿತ್ತ ಸಚಿವರ ಪ್ರಮುಖ ಘೋಷಣೆಗಳು ಮತ್ತು ಒಟ್ಟಾರೆ ಆರ್ಥಿಕತೆಯ ಬಗ್ಗೆ ಸರ್ಕಾರದ ಮುಂದಕ್ಕೆ ನೋಡುವ ಮಾರ್ಗದರ್ಶನದ ವಿಚಾರಗಳು ಇದರಲ್ಲಿರುತ್ತವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ದಾಖಲೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಐದು ಪೂರ್ಣ ಬಜೆಟ್ ಮಂಡಿಸಿದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮುರಿಯಲಿದ್ದಾರೆ. 1959 ಮತ್ತು 1964 ರ ನಡುವೆ ಹಣಕಾಸು ಮಂತ್ರಿಯಾಗಿ ಮೊರಾರ್ಜಿ ದೇಸಾಯಿ ಅವರು ಮಧ್ಯಂತರ ಬಜೆಟ್‌ಗಳು ಸೇರಿ 10 ಬಜೆಟ್ ಮಂಡಿಸಿದ್ದರು. ಸೀತಾರಾಮನ್ ಅವರು ನಾಳೆ ಮಾಡಲಿರುವ ಬಜೆಟ್ ಭಾಷಣವು ಅವರ ಏಳನೆಯ ಬಜೆಟ್ ಭಾಷಣ. ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ತಲಾ ಐದು ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ದಾಖಲೆಗಳನ್ನು ಮುರಿದಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು 2020 ರಲ್ಲಿ 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣ ಮಾಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ ಅವರು ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಧ್ಯಂತರ ಬಜೆಟ್ ಅನ್ನು 56 ನಿಮಿಷಗಳಲ್ಲಿ ಮಂಡಿಸಿದ್ದರು. ಇದು ಕನಿಷ್ಠ ಸಮಯದ ಬಜೆಟ್ ಭಾಷಣವಾಗಿತ್ತು.
ನಿರ್ಮಲಾ ಅವರು 2019 ರಲ್ಲಿ, ಸಾಂಪ್ರದಾಯಿಕ ಬಜೆಟ್ ಬ್ರೀಫ್‌ಕೇಸ್ ಬಿಟ್ಟು ಟ್ಯಾಬ್ಲೆಟ್ ಭಾಷಣ (ಡಿಜಿಟಲ್ ಬಜೆಟ್ ಪ್ರತಿ) ಮತ್ತು ಇತರ ದಾಖಲೆಗಳನ್ನು ಸಾಗಿಸಲು ರಾಷ್ಟ್ರೀಯ ಲಾಂಛನ ಇರುವ ‘ಬಹಿ-ಖಾತಾ’ವನ್ನು ಲೋಕಸಭೆಗೆ ತರುವ ಮೂಲಕ ಹೊಸ ಸಂಪ್ರದಾಯ ಶುರುಮಾಡಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ವಿಭಾಗ