ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆೆ; ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿಯಲ್ಲಿ ಹಾಲಿ ಸಂಸದರ ಬದಲು ಕನಿಷ್ಠ 25 ಹೊಸಬರು; ಗಮನಸೆಳೆದ 9 ಅಂಶಗಳು

ಲೋಕಸಭಾ ಚುನಾವಣೆೆ; ಬಿಜೆಪಿ ಅಭ್ಯರ್ಥಿಗಳ 2 ನೇ ಪಟ್ಟಿಯಲ್ಲಿ ಹಾಲಿ ಸಂಸದರ ಬದಲು ಕನಿಷ್ಠ 25 ಹೊಸಬರು; ಗಮನಸೆಳೆದ 9 ಅಂಶಗಳು

Umesh Kumar S HT Kannada

Mar 14, 2024 08:40 AM IST

ಸಂಸತ್ ಭವನ (ಎಡ ಚಿತ್ರ); ಬಿಜೆಪಿ ಧ್ವಜಗಳು (ಬಲ ಚಿತ್ರ): ಸಾಂಕೇತಿಕ ಚಿತ್ರಗಳು

  • ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ.  ಈ 2 ನೇ ಪಟ್ಟಿಯಲ್ಲಿ ಹಾಲಿ ಸಂಸದರ ಬದಲು ಕನಿಷ್ಠ 25 ಹೊಸಬರಿಗೆ ಬಿಜೆಪಿ ಅವಕಾಶ ನೀಡಿದೆ. ಯಾವ ರಾಜ್ಯದಲ್ಲಿ ಯಾರಿಗೆ ಅವಕಾಶ ಸಿಕ್ಕಿದೆ. ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಹೊಸಬರು ಮತ್ತು ಗಮನಸೆಳೆದ 9 ಅಂಶಗಳು ಹೀಗಿವೆ.

ಸಂಸತ್ ಭವನ (ಎಡ ಚಿತ್ರ); ಬಿಜೆಪಿ ಧ್ವಜಗಳು (ಬಲ ಚಿತ್ರ): ಸಾಂಕೇತಿಕ ಚಿತ್ರಗಳು
ಸಂಸತ್ ಭವನ (ಎಡ ಚಿತ್ರ); ಬಿಜೆಪಿ ಧ್ವಜಗಳು (ಬಲ ಚಿತ್ರ): ಸಾಂಕೇತಿಕ ಚಿತ್ರಗಳು

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಬುಧವಾರ ಬಿಡುಗಡೆ ಮಾಡಿದ್ದು, ಕನಿಷ್ಠ 25 ಹಾಲಿ ಸಂಸದರ ಬದಲಿಗೆ ಹೊಸಬರನ್ನು ಕಣಕ್ಕಿಳಿಸಿದೆ. ಇದಕ್ಕೂ ಮೊದಲು ಬಿಡುಗಡೆ ಮಾಡಿದ್ದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಹೊಸಬರ ಹೆಸರನ್ನು ಬಿಜೆಪಿ ಸೇರಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಸಿಬಿಎಸ್‌ಇ ಫಲಿತಾಂಶ 2024; ಮುಂದಿನವಾರವೇ 10, 12 ನೇ ತರಗತಿ ಫಲಿತಾಂಶ ನಿರೀಕ್ಷೆ, ರಿಸಲ್ಟ್ ನೋಡುವುದು ಹೀಗೆ

Gold Rate Today: ಎರಡು ದಿನಗಳ ಇಳಿಕೆಯ ಬಳಿಕ ಮತ್ತೆ ಏರಿಕೆ ಕಂಡ ಚಿನ್ನದ ದರ; ಶನಿವಾರವೂ ಬೆಳ್ಳಿ ದರ ಹೆಚ್ಚಳ

ಹವಾಮಾನ ಬದಲಾವಣೆ ಎಫೆಕ್ಟ್; ತನ್ನ ಎಲ್ಲಾ ಹಿಮನದಿಗಳನ್ನು ಕಳೆದುಕೊಂಡ ಮೊದಲ ದೇಶ ವೆನೆಜುವೆಲಾ; ಏನಿದು ಬೆಳವಣಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು; ಚುನಾವಣಾ ಪ್ರಚಾರಕ್ಕೆ ಮಾತ್ರ ಸೀಮಿತ

ಎರಡನೇ ಪಟ್ಟಿಯಲ್ಲಿ ಕೇಂದ್ರಾಡಳಿತ ಪ್ರದೇಶವೂ ಸೇರಿ 11 ರಾಜ್ಯಗಳ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಪ್ರಕಟಿಸಿದೆ. ಈ ಪೈಕಿ ದೆಹಲಿ, ಗುಜರಾತ್‌, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಉತ್ತರಾಖಂಡ, ತ್ರಿಪುರಾಗಳಲ್ಲಿ ಕೆಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲು ಹೊಸಬರನ್ನು ಕಣಕ್ಕೆ ಇಳಿಸಲಾಗಿದೆ.

ಇದರೊಂದಿಗೆ ಬಿಜೆಪಿ ಪ್ರಕಟಿಸಿರುವ 267 ಅಭ್ಯರ್ಥಿಗಳ ಪಟ್ಟಿಯಲ್ಲಿ 58 ಹೊಸಬರ ಹೆಸರನ್ನು ಸೇರಿಸಲಾಗಿದೆ. ಇದರಲ್ಲಿ ಅಚ್ಚರಿಯ ಆಯ್ಕೆಯಾಗಿ, ದೆಹಲಿಯ ಮಾಜಿ ಮೇಯರ್ ಹರ್ಷ್‌ ಮಲ್ಹೋತ್ರಾ, ಮೈಸೂರಿನ ರಾಜ ಯದುವೀರ್ ಒಡೆಯರ್, ಕೊಪ್ಪಳದ ಡಾ.ಬಸವರಾಜ್ ಕ್ಯಾವಟರ್‌ ಹೆಸರು ಕೂಡ ಕಾಣಿಸಿಕೊಂಡಿದೆ.

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿಯಲ್ಲಿ ಹೊಸಬರು; ಗಮನಸೆಳೆದ 9 ಅಂಶಗಳು

1) ದೆಹಲಿಯಲ್ಲಿ ಎರಡು ಮಹತ್ವದ ಬದಲಾವಣೆ: ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಗೌತಮ್ ಗಂಭೀರ್‌ ಅವರ ಬದಲು ಹರ್ಷ್‌ ಮಲ್ಹೋತ್ರಾ ಅವರನ್ನು ಕಣಕ್ಕೆ ಇಳಿಸಿದೆ. ಹರ್ಷ್ ಮಲ್ಹೋತ್ರಾ ಪೂರ್ವದೆಹಲಿಯ ಮಾಜಿ ಮೇಯರ್. ಗೌತಮ್ ಗಂಭೀರ್ ಇತ್ತೀಚೆಗಷ್ಟೆ ರಾಜಕೀಯ ನಿವೃತ್ತಿ ಘೋ‍ಷಿಸಿದ್ದರು. ಇನ್ನೊಂದೆಡೆ, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಾಯುವ್ಯ ದೆಹಲಿ ಕ್ಷೇತ್ರದಲ್ಲಿ ಯೋಗೇಂದ್ರ ಚಂದೋಲಿಯಾ ಅವರನ್ನು ಕಣಕ್ಕೆ ಇಳಿಸಿದೆ. ಹಾಲಿ ಸಂಸದ ಹನ್ಸ್‌ ರಾಜ್‌ ಹನ್ಸ್‌ಗೆ ಈ ಬಾರಿ ಟಿಕೆಟ್ ಕೈತಪ್ಪಿದೆ.

2) ಗುಜರಾತ್‌ನಲ್ಲಿ 5 ಹೊಸಬರು: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್‌ನಲ್ಲಿ 5 ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಇಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಸಬರ್‌ಕಾಂತಾ ಕ್ಷೇತ್ರದ ಎರಡು ಸಲದ ಸಂಸದ ದಿಪ್ಸಿನ್ಹ ಮಾಗ್ನ್‌ಸಿನ್ಹ ರಾಥೋಡ್‌ ಬದಲಿಗೆ ಭಿಕಾಜಿ ದುಧಾಜಿ ಠಾಕೋರ್‌ಗೆ ಟಿಕೆಟ್ ನೀಡಲಾಗಿದೆ. ಭಾವನಗರದಲ್ಲಿ ಎರಡು ಬಾರಿ ಸಂಸದ ಭಾರತಿಬೆನ್‌ ಧೀರೂಭಾಯ್ ಶಿಯಾಲ್ ಬದಲಿಗೆ ನಿಮುಬೆನ್ ಬಾಮ್‌ಭನಿಯಾ ಅವರನ್ನು ಕಣಕ್ಕೆ ಇಳಿಸಲಾಗಿದೆ.

ಇದೇ ರೀತಿ ಛೋಟಾ ಉದಯಪುರ್‌ನಲ್ಲಿ ಗೀತಾಬೆನ್‌ ವಜೇಸಿಂಗ್‌ಭಾಯ್‌ ರಾತ್ವಾ ಅವರ ಬದಲು ಜಶುಭಾಯ್‌ ಭಿಲುಭಾಯ್ ರಾತ್ವಾ ಅವರಿಗೆ ಟಿಕೆಟ್ ನೀಡಲಾಗಿದೆ. ಸೂರತ್‌ನಿಂದ ಮೂರು ಬಾರಿ ಸಂಸದ, ಕೇಂದ್ರ ಸಚಿವ ದರ್ಶನ ವಿಕ್ರಮ್ ಜರ್ದೋಶ್ ಬದಲು ಮುಕೇಶ್ ಭಾಯ್ ಚಂದ್ರಕಾಂತ್ ದಲಾಲ್‌ ಅವರನ್ನು ಕಣಕ್ಕೆ ಇಳಿಸಲಾಗಿದೆ.

3) ಹರಿಯಾಣದಲ್ಲಿ ಎರಡು ಬದಲಾವಣೆ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹರಿಯಾಣದ ಸಿರ್ಸಾ ಕ್ಷೇತ್ರದಿಂದ ಅಶೋಕ್ ತನ್ವರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಹಾಲಿ ಸಂಸದೆ ಸುನೀತಾ ದುಗ್ಗಲ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಮಾಜಿ ಕಾಂಗ್ರೆಸ್ ನಾಯಕ ತನ್ವರ್ ಇತ್ತೀಚೆಗೆ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದರು. ಕರ್ನಾಲ್ ಲೋಕಸಭಾ ಕ್ಷೇತ್ರದಿಂದ ಹರಿಯಾಣದ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅಚ್ಚರಿಯ ಆಯ್ಕೆಯಾಗಿ ಕಣಕ್ಕೆ ಇಳಿದಿದ್ದಾರೆ. ಹಾಲಿ ಸಂಸದ ಸಂಜಯ್ ಭಾಟಿಯಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಮನೋಹರಲಾಲ್‌ ಖಟ್ಟರ್ ಇತ್ತೀಚೆಗಷ್ಟೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

4) ಕರ್ನಾಟಕದಲ್ಲಿ 5 ಹೊಸ ಮುಖಗಳು: ಬಿಜೆಪಿ ತನ್ನ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಇದರಲ್ಲಿ 5 ಹೊಸ ಮುಖಗಳಿವೆ. ಎರಡು ಬಾರಿ ಸಂಸದರಾಗಿದ್ದ ಸಂಗಣ್ಣ ಅಮರಪ್ಪ ಕರಡಿ ಅವರ ಬದಲು ಕೊಪ್ಪಳ ಕ್ಷೇತ್ರದಿಂದ ಬಸವರಾಜ ಕ್ಯಾವಟೋರ್ ಅವರನ್ನು ಪಕ್ಷ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕರ್ನಾಟಕದ ಬಳ್ಳಾರಿಯಿಂದ ಬಿಜೆಪಿ ತನ್ನ ಹಾಲಿ ಸಂಸದ ವೈ.ದೇವೇಂದ್ರಪ್ಪ ಬದಲಿಗೆ ಬಿ.ಶ್ರೀರಾಮುಲು ಅವರನ್ನು ಕಣಕ್ಕಿಳಿಸಿದೆ. ಹಾವೇರಿ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಾಗಿದ್ದು, ಮೂರು ಬಾರಿ ಸಂಸದರಾಗಿದ್ದ ಶಿವಕುಮಾರ ಚನ್ನಬಸಪ್ಪ ಉದಾಸಿ ಅವರನ್ನು ಕೈಬಿಡಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ನಳಿನ್ ಕುಮಾರ್ ಕಟೀಲ್ ಅವರು ಎರಡು ಬಾರಿ ಸಂಸದರು. ಪಕ್ಷದ ನಿಕಟಪೂರ್ವ ರಾಜ್ಯ ಅಧ್ಯಕ್ಷರು.

ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ. ಅದೇ ರೀತಿ, ಆರು ಬಾರಿ ಸಂಸದರಾಗಿದ್ದ ಶ್ರೀನಿವಾಸ ಪ್ರಸಾದ್ ಅವರ ಬದಲಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಎಸ್.ಬಾಲರಾಜ್ ಅವರನ್ನು ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ.

5) ಮಧ್ಯಪ್ರದೇಶದಲ್ಲಿ ಇಬ್ಬರು ಹೊಸಬರು; ಕಳೆದ ಮೂರು ಅವಧಿಗೆ ಧಾರ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಛತ್ತರ್ ಸಿಂಗ್ ದರ್ಬಾರ್ ಬದಲಿಗೆ ಸಾವಿತ್ರಿ ಠಾಕೂರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಇನ್ನೊಂದೆಡೆ ಬಾಲಾಘಾಟ್‌ ಕ್ಷೇತ್ರದಲ್ಲಿ ಹಾಲಿ ಸಂಸದ ದಾಲ್‌ ಸಿಂಗ್ ಬಿಸೆನ್ ಬದಲಿಗೆ ಭಾರತಿ ಪರ್ಧಿ ಅವರನ್ನು ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ.

6) ಮಹಾರಾಷ್ಟ್ರದಲ್ಲೂ 5 ಹೊಸಬರು ಕಣಕ್ಕೆ; ಮಹಾರಾಷ್ಟ್ರದಲ್ಲಿ 5 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೊಸಬರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಜಲ್ಗಾಂವ್‌ ಕ್ಷೇತ್ರದಲ್ಲಿ ಹಾಲಿ ಸಂಸದ ಉನ್ಮೇಶ್‌ ಭೈಯ್ಯಾ ಸಾಹೇಬ್ ಪಾಟೀಲ್ ಅವರಿಗೆ ಟಿಕೆಟ್ ನಿರಾಕರಿಸಿದೆ. ಅವರ ಬದಲು ಸ್ಮಿತಾ ವಾಘ್ ಅವರನ್ನು ಕಣಕ್ಕೆ ಇಳಿಸಿದೆ. ಮುಂಬೈ ಉತ್ತರದಿಂದ ಎರಡು ಬಾರಿ ಸಂಸದರಾಗಿದ್ದ ಗೋಪಾಲ್ ಚಿನ್ನಯ್ಯ ಶೆಟ್ಟಿ ಅವರನ್ನು ಕೈಬಿಟ್ಟು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ.

ಅಕೋಲಾ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸಂಜಯ್ ಶಾಮ್ರಾವ್ ಧೋತ್ರೆ ಅವರಿಗೆ ಈ ಬಾರಿ ಟಿಕೆಟ್ ತಪ್ಪಿಹೋಗಿದೆ. ಅವರ ಬದಲಿಗೆ ಅನೂಪ್ ಧೋರ್ಟೆ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಇನ್ನು, ಮುಂಬೈ ಈಶಾನ್ಯದಿಂದ ಹಾಲಿ ಸಂಸದ ಮನೋಜ್ ಕಿಶೋರ್ ಭಾಯ್ ಕೋಟಕ್‌ಗೆ ಟಿಕೆಟ್ ಸಿಕ್ಕಿಲ್ಲ. ಅವರ ಬದಲು ಮಿಹಿರ್ ಕೊಟೆಚಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಬೀಡ್ ಲೋಕಸಭಾ ಕ್ಷೇತ್ರವನ್ನು ಕಳೆದ ಎರಡು ಅವಧಿಗೆ ಪ್ರತಿನಿಧಿಸಿದ್ದ ಡಾ. ಪ್ರೀತಮ್ ಗೋಪಿನಾಥ್ ರಾವ್ ಮುಂಡೆಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ. ಅವರ ಸಹೋದರಿ ಪಂಕಜಾ ಮುಂಡೆ ಈ ಸಲ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡರು.

7) ತೆಲಂಗಾಣದಲ್ಲಿ ಒಂದು ಬದಲಾವಣೆ; ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಅದಿಲಾಬಾದ್ ಕ್ಷೇತ್ರದಿಂದ ಗೋಡಂ ನಾಗೇಶ್ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿದೆ. ಇದೇ ವೇಳೆ ಹಾಲಿ ಸಂಸದ ಸೋಯಂ ಬಾಬು ರಾವ್ ಅವಕಾಶ ವಂಚಿತರಾಗಿದ್ದಾರೆ.

8) ಉತ್ತರಾಖಂಡದಲ್ಲಿ ಇಬ್ಬರು ಹೊಸಬರು; ಉತ್ತರಾಖಂಡದ ಗರ್ವಾಲ್ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ, ಮಾಜಿ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್‌ಗೆ ಟಿಕೆಟ್ ಸಿಕ್ಕಿಲ್ಲ. ಇಲ್ಲಿಂದ ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಬಲೂನಿ ಪಕ್ಷದ ಮುಖ್ಯವಕ್ತಾರ.

ಇದೇ ರೀತಿ ಹರಿದ್ವಾರದಿಂದ ಎರಡು ಬಾರಿ ಸಂಸದರಾದ, ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರಿಗೆ ಈ ಬಾರಿ ಟಿಕೆಟ್ ಇಲ್ಲ. ಅವರ ಬದಲು ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್‌ಗೆ ಬಿಜೆಪಿ ಟಿಕೆಟ್ ನೀಡಿದೆ.

9) ತ್ರಿಪುರಾದಲ್ಲಿ ಒಂದು ಬದಲಾವಣೆ; ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ರೆಬತಿ ತ್ರಿಪುರಾ ಅವರ ಬದಲು ಮಹಾರಾಣಿ ಕೃತಿ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್‌ 2 ರಂದು ಪ್ರಕಟವಾಗಿತ್ತು. ಅದರಲ್ಲಿ 195 ಅಭ್ಯರ್ಥಿಗಳ ಹೆಸರುಗಳಿದ್ದವು. ಈ ಅಭ್ಯರ್ಥಿಗಳ ಪೈಕಿ 33 ಹೊಸಬರಿದ್ದರು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ