ಮಹಾರಾಷ್ಟ್ರದಲ್ಲಿ ಯಾರ ಸರ್ಕಾರ ಬರಬಹುದು, ಮಹಾಯುತಿ ಅಥವಾ ಮಹಾ ವಿಕಾಸ ಅಘಾಡಿ?; ನಾಳೆಯೇ ಮತದಾನ, ಎಕ್ಸಿಟ್ ಪೋಲ್ ಫಲಿತಾಂಶ
Nov 19, 2024 11:29 AM IST
ಮಹಾರಾಷ್ಟ್ರ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಮತ್ತು ಫಲಿತಾಂಶ ಯಾವಾಗ ಎಂಬುದರ ವಿವರ. (ಸಾಂಕೇತಿಕ ಚಿತ್ರ)
ಮಹಾರಾಷ್ಟ್ರ ಚುನಾವಣೆ ಎಕ್ಸಿಟ್ ಪೋಲ್ ಯಾವಾಗ ಎಂಬ ಕುತೂಹಲ ಸಹಜ. ಮಹಾರಾಷ್ಟ್ರ ಚುನಾವಣೆಯ ಮತದಾನ ಬುಧವಾರ (ನವೆಂಬರ್ 20) ನಡೆಯಲಿದ್ದು, ಸಂಜೆ 6.30ಕ್ಕೆ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಲಿದೆ. ಮತದಾನೋತ್ತರ ಸಮೀಕ್ಷೆ ಫಲಿತಾಂಶವನ್ನು ಎಲ್ಲಿ ನೋಡಬೇಕು ಎಂಬುದರ ವಿವರ ಇಲ್ಲಿದೆ.
ಮುಂಬಯಿ: ಮಹಾರಾಷ್ಟ್ರದ ಈಗಿನ ಸರ್ಕಾರದ ಅವಧಿ ನವೆಂಬರ್ 26ಕ್ಕೆ ಮುಗಿಯಲಿದೆ. ಹೊಸ ಸರ್ಕಾರ ರಚನೆಗಾಗಿ ಈಗ ಚುನಾವಣೆ ನಡೆಯುತ್ತಿದ್ದು, ನಾಳೆಯೇ (ನವೆಂಬರ್ 20) ಮತದಾನವಿದೆ. ಸಂಜೆ 6.30ರ ಬಳಿಕ ಮತದಾನೋತ್ತರ ಸಮೀಕ್ಷೆ ಅಥವಾ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.2 88 ಸ್ಥಾನಗಳ ಪೈಕಿ, 234 ಸಾಮಾನ್ಯ ವರ್ಗಕ್ಕೆ ಬರುತ್ತವೆ. 29 ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮತ್ತು 25 ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾಗಿದೆ. 4,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ. "ನಾವು 288 ಸ್ಥಾನಗಳಿಗೆ 7,078 ಮಾನ್ಯ ನಾಮನಿರ್ದೇಶನ ನಮೂನೆಗಳನ್ನು ಸ್ವೀಕರಿಸಿದ್ದೇವೆ. ಈ ಪೈಕಿ 2,938 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ, 4,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ" ಎಂದು ರಾಜ್ಯ ಮುಖ್ಯ ಚುನಾವಣಾ ಕಚೇರಿಯ ಅಧಿಕಾರಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಮಹಾರಾಷ್ಟ್ರ ಚುನಾವಣೆ ಪ್ರಮುಖ ದಿನಾಂಕಗಳು
ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನಾಳೆ (ನವೆಂಬರ್ 20) ಮತದಾನ ನಡೆಯಲಿದೆ. ಮಹಾರಾಷ್ಟ್ರ ಚುನಾವಣೆ ಪ್ರಮುಖ ದಿನಾಂಕಗಳ ವಿವರ ಹೀಗಿದೆ. ಮಹಾರಾಷ್ಟ್ರ ಚುನಾವಣೆ ಅಧಿಸೂಚನೆ ಅಕ್ಟೋಬರ್ 22ಕ್ಕೆ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 29 ಕೊನೇದಿನವಾಗಿತ್ತು. ನಾಮಪತ್ರ ಪರಿಶೀಲನೆ ಅಕ್ಟೋಬರ್ 30ರಂದು ನಡೆದಿದ್ದು, ನಾಮಪತ್ರ ಹಿಂಪಡೆಯಲು ನವೆಂಬರ್ 4ರ ತನಕ ಕಾಲಾವಕಾಶ ನೀಡಲಾಗಿತ್ತು. ನವೆಂಬರ್ 20ರಂದು ಮತದಾನ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಮತದಾನದ ಅರ್ಹತೆ ಹೊಂದಿರುವ 9.7 ಕೋಟಿಗೂ ಹೆಚ್ಚು ನಾಗರಿಕರಲ್ಲಿ ಒಟ್ಟು 47,392 ಶತಾಯುಷಿಗಳಿದ್ದಾರೆ. 18-19 ವರ್ಷದೊಳಗಿನ 22,22,704 ಮತದಾರರಿದ್ದರೆ, 100 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು (109 ಹಿರಿಯರು) 47,392 ರಷ್ಟಿರುವ ಶತಾಯುಷಿಗಳ ಸಂಖ್ಯೆ. ರಾಜ್ಯವು 9,70,25,119 ನೋಂದಾಯಿತ ಮತದಾರರನ್ನು ಹೊಂದಿದೆ - 5,00,22,739 ಪುರುಷರು, 4,69,96,279 ಮಹಿಳೆಯರು ಮತ್ತು 6,101 ತೃತೀಯಲಿಂಗಿಗಳು. ಇದೇ ಮೊದಲ ಬಾರಿಗೆ, ಭಾರತದ ಚುನಾವಣಾ ಆಯೋಗವು ಬಿಎಂಸಿ ಮುನ್ಸಿಪಲ್ ಕಮಿಷನರ್ ಅವರನ್ನು ನಗರದ ಎರಡೂ ಜಿಲ್ಲೆಗಳಿಗೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ನೇಮಿಸಿದೆ.
ಮಹಾರಾಷ್ಟ್ರ ಚುನಾವಣಾ ಕಣದಲ್ಲಿರುವ ಪ್ರಮುಖ ಪಕ್ಷಗಳಿವು
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ನಡುವೆ ತೀವ್ರ ಹಣಾಹಣಿ ಏರ್ಪಡುವ ನಿರೀಕ್ಷೆಯಿದೆ. ಮಹಾಯುತಿ ಮೈತ್ರಿಯಲ್ಲಿ, ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ (148) ಸ್ಪರ್ಧಿಸುತ್ತಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ 80 ಸ್ಥಾನಗಳಿಗೆ ಸ್ಪರ್ಧಿಸಿದ್ದರೆ, ಅವರ ಉಪನಾಯಕ ಅಜಿತ್ ಪವಾರ್ ಅವರ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ 53 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಅದೇ ರೀತಿ, ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರೆಸ್ 103 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) 89 ಸ್ಥಾನ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ (ಎಸ್‌ಪಿ) 87ರಲ್ಲಿ ಹಾಗೂ ಉಳಿದ ಆರು ಸ್ಥಾನಗಳನ್ನು ಇತರ ಮಿತ್ರಪಕ್ಷಗಳು ಸ್ಪರ್ಧಿಸುತ್ತಿವೆ.
ಚುನಾವಣಾ ದಿನಾಂಕ ಮತ್ತು ಸಮಯ ಯಾವಾಗ?: ರಾಜ್ಯದ ಎಲ್ಲ 288 ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮತದಾನವು ಬೆಳಿಗ್ಗೆ 7 ರಿಂದ ಪ್ರಾರಂಭವಾಗಲಿದ್ದು, ಸಂಜೆ 6 ರವರೆಗೆ ನಡೆಯಲಿದೆ. ಮತದಾನದ ದಿನದಂದು ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳಲ್ಲಿ ಮದ್ಯ ಮಾರಾಟ ಇರಲ್ಲ. ಮತ ಎಣಿಕೆ ನವೆಂಬರ್ 23 ರಂದು ನಡೆಯಲಿದೆ.
ಮತದಾನೋತ್ತರ ಸಮೀಕ್ಷೆ ಫಲಿತಾಂಶ ಯಾವಾಗ?: ನವೆಂಬರ್ 20 ರಂದು ಅಂದರೆ ನಾಳೆ ಮತದಾನ ಪೂರ್ಣಗೊಂಡ ನಂತರ ಎಕ್ಸಿಟ್ ಪೋಲ್ ಮುನ್ನೋಟಗಳನ್ನು ಮಾಧ್ಯಮ ಸಂಸ್ಥೆಗಳು ಪ್ರಕಟಿಸಲಿವೆ. ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಮತದಾನದ ದಿನ ಸಂಜೆ 6.30 ರ ನಂತರ ಎಕ್ಸಿಟ್ ಪೋಲ್ ಮುನ್ನೋಟಗಳನ್ನು ಪ್ರಸಾರ ಮಾಡಬಹುದು.