ಸಾಲಮನ್ನಾ, 25 ಲಕ್ಷ ಉದ್ಯೋಗ ಸೃಷ್ಟಿ, 15 ಲಕ್ಷ ರೂ ಬಡ್ಡಿ ರಹಿತ ಸಾಲ; ಎಂವಿಎ, ಮಹಾಯುತಿ ಮೈತ್ರಿ ಕೂಟಗಳಿಂದ ಕೊಡುಗೆಗಳ ಮಹಾಪೂರ
Nov 14, 2024 01:35 PM IST
ಸಾಲಮನ್ನಾ, 25 ಲಕ್ಷ ಉದ್ಯೋಗ ಸೃಷ್ಟಿ, 15 ಲಕ್ಷ ರೂ ಬಡ್ಡಿ ರಹಿತ ಸಾಲ; ಎಂವಿಎ, ಮಹಾಯುತಿ ಮೈತ್ರಿ ಕೂಟಗಳಿಂದ ಕೊಡುಗೆಗಳ ಮಹಾಪೂರ
ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಭರವಸೆಗಳ ಮಹಾಪೂರ ನೀಡಿವೆ. ಮತಾಂತರ ವಿರೋಧಿ ಕಾನೂನು, ನಗದು ನೆರವು, ಉದ್ಯೋಗ ಸೃಷ್ಟಿ ಮತ್ತು ಕೃಷಿ ಬೆಂಬಲ ಸೇರಿದಂತೆ ಭರವಸೆ ನೀಡಲಾಗಿದೆ.
Mahayuti vs MVA Manifesto: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಕುರಿತು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಒಟ್ಟು 288 ಕ್ಷೇತ್ರಗಳಿಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನ 23ರ ಶನಿವಾರ ಮತ ಎಣಿಕೆ ನಡೆಯಲಿದೆ. ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಎರಡು ಮೈತ್ರಿ ಕೂಟಗಳು ಸೇರಿದಂತೆ ವಿವಿಧ ಪಕ್ಷಗಳು ಕೊಡುಗೆಗಳ ಭರವಸೆಗಳ ಮಹಾಪೂರ ನೀಡಿವೆ. ಮಹಾಯುತಿ ಮತ್ತು ಎಂವಿಎ ಮೈತ್ರಿಕೂಟಗಳು ರೈತರ ಸಾಲಮನ್ನಾ, ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ, ಮಹಿಳೆಯರಿಗೆ ತಿಂಗಳಿಗೆ 2100, 25 ಲಕ್ಷ ಉದ್ಯೋಗ ಸೃಷ್ಟಿ, 25 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ ಸೇರಿದಂತೆ ಹಲವು ಭರವಸೆ ನೀಡಿವೆ. 2 ಮೈತ್ರಿಕೂಟಗಳ ಪ್ರಣಾಳಿಕೆಗಳಲ್ಲಿ ಏನಿದೆ? ಇಲ್ಲಿದೆ ವಿವರ.
ಆಡಳಿತಾರೂಢ ಮಹಾಯುತಿ ಮೈತ್ರಿಕೂಟ: ಬಿಜೆಪಿ, ಏಕನಾಥ್ ಶಿಂಧೆ (ಬಣ) ಅವರ ಶಿವಸೇನೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ನೇತೃತ್ವದ ಬಣ ಒಳಗೊಂಡಿದೆ. ಮಹಾಯುತಿಯೊಳಗೆ ಬಿಜೆಪಿ 148 ಸ್ಥಾನಗಳಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ನಂತರ ಶಿಂಧೆಯ ಶಿವಸೇನೆ 85 ಸ್ಥಾನ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ 55 ಸ್ಥಾನಗಳೊಂದಿಗೆ ಸ್ಪರ್ಧಿಸುತ್ತಿದೆ.
ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ): ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ), ಶರದ್ ಪವಾರ್ ಅವರ ಎನ್‌ಸಿಪಿ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ), ಮತ್ತು ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾವನ್ನು ಒಳಗೊಂಡಿದೆ. 102 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಶಿವಸೇನೆ (UBT) 94, ಶರದ್ ಪವಾರ್ ಅವರ ಎನ್‌ಸಿಪಿ (SP) 85 ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದೆ. ಉಳಿದಂತೆ ತನ್ನ ಮಿತ್ರಪಕ್ಷಗಳು ಸ್ಪರ್ಧೆ ನಡೆಸುತ್ತಿವೆ.
ಪ್ರಮುಖ ಮೈತ್ರಿಕೂಟಗಳ ಜೊತೆಗೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS), ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (BSP) ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (VBA) ನಂತಹ ಇತರ ಪಕ್ಷಗಳು ಕೆಲವು ಕ್ಷೇತ್ರಗಳಲ್ಲಿ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಎಂಎನ್‌ಎಸ್ 135 ಸ್ಥಾನಗಳಲ್ಲಿ ಬಿಎಸ್‌ಪಿ ಎಲ್ಲಾ 288 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಮತ್ತು ವಿಬಿಎ 110 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಗಮನಾರ್ಹ ಪಕ್ಷಗಳಲ್ಲಿ ಮಹಾದೇವ್ ಜಂಕರ್ ನೇತೃತ್ವದ ರಾಷ್ಟ್ರೀಯ ಸಮಾಜ ಪಕ್ಷ (RSP), ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಕ್ಷ ಮತ್ತು ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AYMIM) ಸೇರಿವೆ. ಆರ್‌ಎಸ್‌ಪಿ 151, ಆಜಾದ್‌ರ ಪಕ್ಷ 40, ಎಐಎಂಐಎಂ 16 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. 288 ವಿಧಾನಸಭಾ ಕ್ಷೇತ್ರಗಳ ಪೈಕಿ 75 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿಗೆ ಸಿದ್ಧವಾಗಿವೆ. ಈ ನೇರ ಫೈಟ್ನಲ್ಲಿ ಹೆಚ್ಚಿನವು ವಿದರ್ಭದಲ್ಲಿ 47 ಸ್ಥಾನಗಳಲ್ಲಿ ಘರ್ಷಣೆಯಾಗುತ್ತವೆ.
ಮಯಾಯುತಿ ಕೊಟ್ಟಿರುವ ಭರವಸೆಗಳು
- ಸರ್ಕಾರಕ್ಕೆ ಅಧಿಕಾರಕ್ಕೆ ಬಂದರೆ ವರ್ಷದಲ್ಲಿ 25 ಲಕ್ಷ ಉದ್ಯೋಗ ಸೃಷ್ಟಿ
- ಭಾರತದಲ್ಲಿ ಮೊದಲ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (Artificial intelligence) ವಿಶ್ವವಿದ್ಯಾಲಯ ಸ್ಥಾಪನೆ
- ವೃದ್ಧಾಪ್ಯ ವೇತನ 1,500 ರೂಪಾಯಿಗಳಿಂದ 2,100 ರೂಪಾಯಿಗಳಿಗೆ ಹೆಚ್ಚಳ
- ಎಸ್ಸಿ, ಎಸ್ಟಿ, ಒಬಿಸಿ ವರ್ಗದ ರೈತರಿಗೆ 15 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ
- 'ಲಕ್‌ಪತಿ ದೀದಿ' ಯೋಜನೆಯ ಅಡಿಯಲ್ಲಿ 50 ಲಕ್ಷ ಮಹಿಳೆಯರ ಸಬಲೀಕರಣ
- ಸೋಯಾಬಿನ್ ಬೆಳೆಗೆ ನೀಡಲಾಗುತ್ತಿರುವ ಬೆಂಬಲ ಬೆಲೆ 6 ಸಾವಿರ ರೂಪಾಯಿಗೆ ಹೆಚ್ಚಳ
- ಬಲವಂತದ ಮತಾಂತರ ನಿಷೇಧಿಸಲು ಕಠಿಣ ಕಾನೂನು ರಚನೆ ಮಾಡಲಾಗುತ್ತದೆ.
- ಗೃಹ ಬಳಕೆ ವಿದ್ಯುತ್ ಗ್ರಾಹಕರಿಗೆ ಶುಲ್ಕದಲ್ಲಿ ಶೇಕಡಾ 30ರಷ್ಟು ವಿನಾಯಿತಿ
- ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 15 ಸಾವಿರ ರೂಪಾಯಿಗೆ ಏರಿಕೆ
- ಮಹಾರಾಷ್ಟ್ರ 45 ಸಾವಿರ ಹಳ್ಳಿ/ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ
- ಶೇತ್ಕರಿ ಸಮ್ಮಾನ್ ಯೋಜನೆಯಡಿ ರೈತರಿಗೆ ಮಾಸಿಕ 15 ಸಾವಿರ ರೂಪಾಯಿ ನೆರವು, ರೈತರ ಕೃಷಿ ಸಾಲ ಮನ್ನಾ
- ಲಕ್ಷ ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂಪಾಯಿ ಆರ್ಥಿಕ ನೆರವು
- ಆಹಾರ ಭದ್ರತೆ ಕಾಯಿದೆ ಅಡಿ ಬಡ ಕುಟುಂಬಗಳಿಗೆ ಉಚಿತ ಪಡಿತರ ವಿತರಣೆ
ಮಹಾ ವಿಕಾಸ್ ಅಘಾಡಿ ನೀಡಿರುವ ಭರವಸೆಗಳು
- ಮಹಿಳೆಯರಿಗೆ ಮಾಸಿಕ 3 ಸಾವಿರ ರೂಪಾಯಿ ನೆರವು ನೀಡಲಾಗುವುದು
- ಮಹಿಳೆಯರಿಗೆ ಉಚಿತ ಪ್ರಯಾಣ (ಕರ್ನಾಟಕದ ರೀತಿ)
- ರಾಜ್ಯದ ಜನರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅರಿಯಲು ಜಾತಿಜನಗಣತಿ
- ಎಲ್ಲರಿಗೂ ಸಮಾನ ಮೀಸಲು ಕಲ್ಪಿಸಲು ಶೇಕಡಾ 50 ಮೀಸಲು ಮಿತಿ ತೆರವು
- ವರ್ಷಕ್ಕೆ 6 ಸಿಲಿಂಡರ್ 500 ರೂಪಾಯಿಗಳಿಗೆ ವಿತರಣೆ
- ಗರ್ಭಕಂಠ ಕ್ಯಾನ್ಸರ್ ತಡೆಗೆ 9-16 ವಯೋಮಾನದ ಯುವತಿಯರಿಗೆ ಉಚಿತ ಲಸಿಕೆ
- ರಾಜ್ಯದ ನಾಗರಿಕರಿಗೆ 25 ಲಕ್ಷ ರೂಪಾಯಿವರೆಗೆ ಆರೋಗ್ಯ ವಿಮೆ
- ರೈತರ 3 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ, ಸಕಾಲದಲ್ಲಿ ಸಾಲ ಪಾವತಿಸಿದ ರೈತರಿಗೆ 50 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ.
- ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರತ್ಯೇಕ ಮಹಿಳಾ ಕೈಗಾರಿಕಾ ವಲಯ ಸ್ಥಾಪಿಸಲಾಗುವುದು
- ಸರ್ಕಾರಿ ಇಲಾಖೆಯಲ್ಲಿ ಖಾಲಿ ಇರುವ 25 ಸಾವಿರ ಹುದ್ದೆಗಳ ಭರ್ತಿ ಮಾಡಲಾಗುತ್ತದೆ, ಗುತ್ತಿಗೆ ನೌಕರರ ಕಾಯಂ ಮಾಡಲಾಗುವುದು
- 300 ಯುನಿಟ್ ಒಳಗೆ ವಿದ್ಯುತ್ ಬಳಸಿದ ಕುಟುಂಬಗಳಿಗೆ 100 ಯುನಿಟ್ ಉಚಿತ ವಿದ್ಯುತ್ ನೀಡಲಾಗುವುದು
- ಟೊಮೆಟೊ, ಈರುಳ್ಳಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡಲಾಗುವುದು