ಸ್ಟೀಮ್ ಇಂಜಿನ್‌ನಿಂದ ವಂದೇ ಭಾರತ್‌ವರೆಗೆ; ಸಾಕಾರದತ್ತ ಬುಲೆಟ್ ಟ್ರೈನ್ ಕನಸು, 171 ವರ್ಷಗಳಲ್ಲಿ ಭಾರತೀಯ ರೈಲ್ವೇ ರೂಪಾಂತರ ಹಾದಿ ಹೀಗಿತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸ್ಟೀಮ್ ಇಂಜಿನ್‌ನಿಂದ ವಂದೇ ಭಾರತ್‌ವರೆಗೆ; ಸಾಕಾರದತ್ತ ಬುಲೆಟ್ ಟ್ರೈನ್ ಕನಸು, 171 ವರ್ಷಗಳಲ್ಲಿ ಭಾರತೀಯ ರೈಲ್ವೇ ರೂಪಾಂತರ ಹಾದಿ ಹೀಗಿತ್ತು

ಸ್ಟೀಮ್ ಇಂಜಿನ್‌ನಿಂದ ವಂದೇ ಭಾರತ್‌ವರೆಗೆ; ಸಾಕಾರದತ್ತ ಬುಲೆಟ್ ಟ್ರೈನ್ ಕನಸು, 171 ವರ್ಷಗಳಲ್ಲಿ ಭಾರತೀಯ ರೈಲ್ವೇ ರೂಪಾಂತರ ಹಾದಿ ಹೀಗಿತ್ತು

ಬರೋಬ್ಬರಿ 171 ವರ್ಷಗಳ ಇತಿಹಾಸದೊಂದಿಗೆ, ಭಾರತೀಯ ರೈಲ್ವೇ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿದೆ. ದೇಶದಲ್ಲಿ 1.2 ಲಕ್ಷ ಕಿಲೋಮೀಟರ್‌ಗಳಷ್ಟು ರೈಲು ನೆಟ್ವರ್ಕ್‌ ವಿಸ್ತರಿಸಿದೆ. ಸುದೀರ್ಘ ಇತಿಹಾಸವಿರುವ ಭಾರತೀಯ ರೈಲ್ವೆಯ ವಿಕಸನ ಹೇಗಿತ್ತು ನೋಡೋಣ.

ಸ್ಟೀಮ್ ಇಂಜಿನ್‌ನಿಂದ ವಂದೇ ಭಾರತ್‌ವರೆಗೆ; 171 ವರ್ಷಗಳಲ್ಲಿ ಭಾರತೀಯ ರೈಲ್ವೇ ವಿಕಸನ ಹೀಗಿತ್ತು
ಸ್ಟೀಮ್ ಇಂಜಿನ್‌ನಿಂದ ವಂದೇ ಭಾರತ್‌ವರೆಗೆ; 171 ವರ್ಷಗಳಲ್ಲಿ ಭಾರತೀಯ ರೈಲ್ವೇ ವಿಕಸನ ಹೀಗಿತ್ತು

ಭಾರತೀಯ ರೈಲ್ವೆ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಒಂದು ಕಾಲದಲ್ಲಿ ಸ್ಟೀಮ್ ಇಂಜಿನ್‌ಗಳೊಂದಿಗೆ ಓಡಾಡುತ್ತಿದ್ದ ಉಗಿಬಂಡಿ, ಇದೀಗ ಅತ್ಯಾಧುನಿಕ ಸ್ಪರ್ಷ ಪಡೆದು ರೈಲುಬಂಡಿಯಾಗಿ ಓಡಾಡುತ್ತಿದೆ. ಎಕ್ಸ್‌ಪ್ರೆಸ್‌, ವಂದೇ ಭಾರತ್‌ ಜೊತೆಗೆ ಬುಲೆಟ್‌ ಟ್ರೈನ್‌ ಓಡಾಟದ ಕನಸು ಸಾಕಾರಗೊಳ್ಳುತ್ತಿದೆ. 1853ರಲ್ಲಿ ಮುಂಬೈನಿಂದ ಥಾಣೆಗೆ ಭಾರತದಲ್ಲಿ ಮೊದಲ ರೈಲು ಓಡಿತ್ತು. ಸ್ಟೀಮ್ ಇಂಜಿನ್‌ಗಳೊಂದಿಗೆ ಭಾರತೀಯ ರೈಲ್ವೆಯ ಪ್ರಯಾಣ ಆರಂಭವಾಯಿತು. ಅದಾಗಿ ಇಂದಿಗೆ ನೂರಾರು ವರ್ಷಗಳು ಕಳೆದಿವೆ. ಸಾಕಷ್ಟು ರೂಪಾಂತರಗಳಾಗಿ ವಂದೇ ಭಾರತ್‌ ರೈಲಿನವರೆಗೆ ಸುಧಾರಣೆಯಾಗಿದೆ. ಕೆಲವೇ ವರ್ಷಗಳಲ್ಲಿ ಬುಲೆಟ್ ರೈಲುಗಳು ಓಡಾಡುವ ಕಾಲವೂ ಸನ್ನಿಹಿತವಾಗಿದ್ದು, ಭರದ ಸಿದ್ಧತೆ ನಡೆಯತ್ತಿದೆ.

ಭಾರತೀಯ ರೈಲ್ವೆ ಎಂದಾಗ ಮೊದಲು ನೆನಪಾಗುವುದೇ ಸ್ಟೀಮ್ ಇಂಜಿನ್. ಈ ಇಂಜಿನ್‌ಗಳು ದಟ್ಟ ಹೊಗೆಯಿಂದ ಆವೃತವಾಗಿವೆ. ಉಗಿ ಬಿಡುತ್ತಾ, ಚುಕುಬುಕು ಸದ್ದು ಮಾಡುತ್ತಾ, ತೀಕ್ಷ್ಣವಾದ ಶಿಳ್ಳೆಗಳೊಂದಿಗೆ ನಿಧಾನವಾಗಿ ಓಡಾಡುವ ರೈಲಿನ ದೃಶ್ಯಗಳು ಭಾರತೀಯರಿಗೆ ಈಗ ಮಧುರ ನೆನಪು. ಬರೋಬ್ಬರಿ 171 ವರ್ಷಗಳ ಇತಿಹಾಸದೊಂದಿಗೆ, ಭಾರತೀಯ ರೈಲ್ವೇ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿದೆ. ಭಾರತದ ಉದ್ದಗಲಕ್ಕೂ ರೈಲು ಸಂಪರ್ಕವಿದೆ. ಒಟ್ಟು 1.2 ಲಕ್ಷ ಕಿಲೋಮೀಟರ್‌ಗಳಷ್ಟು ರೈಲು ನೆಟ್ವರ್ಕ್‌ ವಿಸ್ತರಿಸಿದೆ. ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ನಿತ್ಯದ ಪ್ರಯಾಣಕ್ಕಾಗಿ ರೈಲನ್ನು ಅವಲಂಬಿಸಿದ್ದಾರೆ.

ಭಾರತದಲ್ಲಿ ಮೊದಲ ಪ್ರಯಾಣಿಕ ರೈಲು 1853ರಲ್ಲಿ ಮುಂಬೈನಿಂದ ಥಾಣೆಗೆ ಓಡಿತು. ಇದು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ನಿರ್ಮಿಸಲಾದ ಸ್ಟೀಮ್ ಇಂಜಿನ್‌ ರೈಲು. ಸುಲ್ತಾನ್, ಸಾಹಿಬ್ ಮತ್ತು ಸಿಂಧ್ ಎಂಬ ಮೂರು ಇಂಜಿನ್‌ಗಳ ನೆರವಿಂದೆ ಮುಂದೆ ಸಾಗಿದ ಈ ರೈಲು 33.8 ಕಿಮೀ ಕ್ರಮಿಸಲು ಸುಮಾರು ಒಂದು ಗಂಟೆ ತೆಗೆದುಕೊಂಡಿತು.

ಭಾರತೀಯ ರೈಲ್ವೆಯಲ್ಲಿ ಮೈಲಿಗಲ್ಲು

1895ರ ವೇಳೆಗೆ ಭಾರತವು ತನ್ನ ಮೊದಲ ಉಗಿ ಲೋಕೋಮೋಟಿವ್ ಅನ್ನು ಉತ್ಪಾದಿಸಿತು. ಭಾರತೀಯ ರೈಲ್ವೆಯ ಪ್ರಯಾಣದಲ್ಲಿ ಇದು ಒಂದು ಮೈಲಿಗಲ್ಲನ್ನು ಸಾಧಿಸಿತು. ನಾರ್ತ್ ವೆಸ್ಟರ್ನ್ ರೈಲ್ವೆಯ ಅಜ್ಮೀರ್‌ಲ್ಲಿ ಮೀಟರ್-ಗೇಜ್ ಲೊಕೊಮೊಟಿವ್ F-734 ಅನ್ನು ತಯಾರಿಸಿತು. ಈ ಎಂಜಿನ್ ಹಲವಾರು ದಶಕಗಳ ಕಾಲ ಭಾರತೀಯ ರೈಲ್ವೆಯ ಚಿತ್ರಣವನ್ನೇ ಬದಲಿಸಿತು. 1958ರವರೆಗೂ 63 ವರ್ಷಗಳ ಕಾಲ ಪ್ರಯಾಣಿಕರ ಸೇವೆಯಲ್ಲಿತ್ತು. ಇದನ್ನು ಈಗ ನವದೆಹಲಿಯ ರಾಷ್ಟ್ರೀಯ ರೈಲು ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.

ರೈಲ್ ಮ್ಯೂಸಿಯಂ

ಭಾರತದ ರಾಜಧಾನಿ ದೆಹಲಿಯಲ್ಲಿರುವ ನ್ಯಾಷನಲ್ ರೈಲ್ ಮ್ಯೂಸಿಯಂನಲ್ಲಿ, ಹಲವಾರು ಸ್ಟೀಮ್ ಎಂಜಿನ್‌ಗಳನ್ನು ಕಾಣಬಹುದು. ಈಗಲೂ ಪ್ರವಾಸಿಗರು ಇಲ್ಲಿ ಭಾರತದ ರೈಲ್ವೆಯ ಇತಿಹಾಸವನ್ನು ಕಣ್ತುಂಬಿಕೊಳ್ಳುತ್ತಾರೆ. ಅತ್ತ ವಾಣಿಜ್ಯ ನಗರಿ ಮುಂಬೈನಲ್ಲಿಯೂ ಸ್ಟೀಮ್ ಇಂಜಿನ್‌ಗಳನ್ನು ಕಾಣಬಹುದು. ಚರ್ಚ್‌ಗೇಟ್, ಮುಂಬೈ ಸೆಂಟ್ರಲ್ ರೈಲು ನಿಲ್ದಾಣ, ಕುರ್ಲಾದ ಲೋಕಮಾನ್ಯ ತಿಲಕ್ ಟರ್ಮಿನಸ್‌ನಲ್ಲಿ ಉಗಿ ಎಂಜಿನ್‌ ಇವೆ. ಇದು ಭಾರತದಲ್ಲಿ ರೈಲು ಪ್ರಯಾಣದ ಶ್ರೀಮಂತ ಇತಿಹಾಸವನ್ನು ಸಾರಿ ಹೇಳುತ್ತದೆ.

ಭಾರತೀಯ ರೈಲ್ವೇಯ ವಿಕಾಸ

1832ರಲ್ಲಿ, ಭಾರತದ ಮೊದಲ ರೈಲು ಮಾರ್ಗದ ಕಲ್ಪನೆಯನ್ನು ಮದ್ರಾಸಿನಲ್ಲಿ (ಈಗಿನ ಚೆನ್ನೈ) ಪ್ರಸ್ತಾಪಿಸಲಾಯಿತು. 1837ರ ವೇಳೆಗೆ, ರೆಡ್ ಹಿಲ್ಸ್ ಮತ್ತು ಚಿಂತಾದ್ರಿಪೇಟ್ ನಡುವೆ ಟ್ರ್ಯಾಕ್‌ ನಿರ್ಮಾಣಕ್ಕೆ ಇಂಗ್ಲೆಂಡಿನ ರೋಟರಿ ಸ್ಟೀಮ್ ಇಂಜಿನ್ ಗ್ರಾನೈಟ್ ಸಾಗಿಸುವ ಮೂಲಕ ಜೀವ ತುಂಬಿತು. 1845ರಲ್ಲಿ ಮದ್ರಾಸ್ ರೈಲ್ವೆ ಮತ್ತು ನಂತರ 1849ರಲ್ಲಿ ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ ರಚನೆಯೊಂದಿಗೆ ಪ್ರಯಾಣ ಮುಂದುವರೆಯಿತು.

19ನೇ ಶತಮಾನದ ಬಹುಪಾಲು, ಉಗಿ ಇಂಜಿನ್‌ ಭಾರತೀಯ ರೈಲ್ವೇಗೆ ಶಕ್ತಿ ತುಂಬಿತು. 20ನೇ ಶತಮಾನದ ಆರಂಭದಲ್ಲಿ ಬಾಂಬೆಯಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ರೈಲು ಬಂದಿತು. ವಿದ್ಯುದ್ದೀಕರಿಸಿದ ಮಾರ್ಗಗಳ ಆರಂಭದೊಂದಿಗೆ ಭಾರತೀಯ ರೈಲ್ವೆಗೆ ಹೊಸ ಯುಗದ ಆರಂಭವಾಯ್ತು.

1925ರಲ್ಲಿ ಭಾರತದ ಮೊದಲ ರೈಲ್ವೇ ಬಜೆಟ್ ಬಜೆಟ್ ಮಂಡನೆಯಾಯ್ತು. ಅಲ್ಲದೆ ಭಾರತೀಯ ರೈಲ್ವೇಗಳ ವಿದ್ಯುದೀಕರಣವನ್ನು ಗುರುತಿಸಿತು. ಇದು ರೈಲ್ವೆಯ ವಿಸ್ತರಣೆಯ ಕಡೆಗೆ ಒಂದು ಕಾರ್ಯತಂತ್ರದ ಹೆಜ್ಜೆಯಾಗಿತ್ತು. 1944ರಲ್ಲಿ ಬ್ರಿಟಿಷ್ ಅಧಿಕಾರಿಗಳು ಅದರ ನಿರ್ವಹಣೆಯನ್ನು ವಹಿಸಿಕೊಳ್ಳುವವರೆಗೂ ಭಾರತೀಯ ರೈಲ್ವೇಯನ್ನು ಏಕೀಕರಿಸಲಾಗಿಲ್ಲ.

1944ರ ವೇಳೆಗೆ, ಸುಮಾರು 42 ರೈಲ್ವೇ ಕಂಪನಿಗಳು ಭಾರತದಾದ್ಯಂತ 55,000 ಕಿಮೀ ಟ್ರ್ಯಾಕ್ ಹಾಕಿದವು. ನಿಧಾನವಾಗಿ ಅದನ್ನು ಏಕೀಕೃತ ಜಾಲವಾಗಿ ವಿಲೀನಗೊಳಿಸಿ ಭಾರತೀಯ ರೈಲ್ವೇಯನ್ನು ರೂಪಿಸಲಾಯಿತು.

ಪಶ್ಚಿಮ ಬಂಗಾಳದ ಚಿತ್ತರಂಜನ್‌ನಲ್ಲಿರುವ ಚಿತ್ತರಂಜನ್ ಲೋಕೋಮೋಟಿವ್ ವರ್ಕ್ಸ್‌ನಲ್ಲಿ (CLW) ಮೊದಲ ಲೊಕೊಮೊಟಿವ್ ಉತ್ಪಾದನಾ ಘಟಕವನ್ನು 1950ರ ನವೆಂಬರ್ 1ರಂದು ಲೋಕಾರ್ಪಣೆ ಮಾಡಲಾಯ್ತು. ಭಾರತದ ಮೊದಲ ಸ್ವದೇಶಿ ಉಗಿಬಂಡಿಯು ಪ್ರಯಾಣಕ್ಕೆ ಸಜ್ಜಾಯಿತು.

1951ರಲ್ಲಿ, ಭಾರತೀಯ ರೈಲ್ವೇಯು ಹೊಸ ಮಾರ್ಗವನ್ನು ಆರಂಭಿಸಲು ಮುಂದಾಯ್ತು. ದೊಡ್ಡ ದೇಶದಲ್ಲಿ ನಿರ್ವಹಣೆಯನ್ನು ಸುಧಾರಿಸಲು ಪ್ರಾದೇಶಿಕ ವಲಯಗಳಾಗಿ ಮರುಸಂಘಟನೆಯಾಯಿತು. ಗಣಕೀಕೃತ ಟಿಕೆಟಿಂಗ್, ಶತಾಬ್ದಿ ಎಕ್ಸ್‌ಪ್ರೆಸ್‌ನಂತಹ ವೇಗದ ರೈಲುಗಳು ಬಂದವು. ಹವಾನಿಯಂತ್ರಿತ ಕೋಚ್‌ಗಳು ಈಗ ಓಡಾಡುತ್ತಿವೆ.

ವಂದೇ ಭಾರತ-ಬುಲೆಟ್‌ ರೈಲು

2019ರ ಫೆಬ್ರವರಿ 15ರಂದು ಭಾರತದ ಮೊದಲ ಸ್ಥಳೀಯವಾಗಿ ನಿರ್ಮಿಸಲಾದ ಅರೆ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಾಟ ಆರಂಭಿಸಿತು. ವಂದೇ ಭಾರತ್ ಸ್ಲೀಪರ್, ವಂದೇ ಭಾರತ್ ಚೇರ್‌ಕಾರ್ ಮತ್ತು ವಂದೇ ಭಾರತ್ ಮೆಟ್ರೋ ಎಂಬ ಮೂರು ವಿಭಿನ್ನ ಮಾದರಿಗಳನ್ನು ನೀಡುವ ವಂದೇ ಭಾರತ್ ರೈಲುಗಳನ್ನು ದೇಶದ ಮೂಲೆ ಮೂಲೆಗೆ ವಿಸ್ತರಿಸುವುದಾಗಿ ಪ್ರಧಾನಿ ಮೋದಿ ವಾಗ್ದಾನ ಮಾಡಿದ್ದಾರೆ. ವಂದೇ ಭಾರತ್ ಆರಂಭವಾದಾಗಿನಿಂದ, ಈ ರೈಲುಗಳು ಭಾರತೀಯ ರೈಲ್ವೆಯಲ್ಲಿ ಆಧುನೀಕರಣ ಮತ್ತು ದಕ್ಷತೆಯ ಸಂಕೇತವಾಗಿದೆ.

ಮುಂದೆ ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್ ಓಡಾಟಕ್ಕೆ ಮಾರ್ಗ ನಿರ್ಮಾಣವಾಗುತ್ತಿದೆ. ಜಪಾನ್‌ ಸಹಯೋಗದೊಂದಿಗೆ ಬುಲೆಟ್ ಟ್ರೈನ್ ಯೋಜನೆ ಚುರುಕಾಗಿದ್ದು, 2026ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಇದು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.