ಉತ್ತರ ಪ್ರದೇಶ: ಆರೋಪಿ ಮನೆ ನೆಲಸಮ ಮಾಡುವ ಬುಲ್ ಡೋಜರ್ ಕಾರ್ಯಾಚರಣೆಗೆ ಸುಪ್ರೀಂ ಕೋರ್ಟ್ ಬ್ರೇಕ್
ಆರೋಪಿಗಳ ಮನೆ, ಸೊತ್ತುಗಳನ್ನು ಬುಲ್ ಡೋಜರ್ ಬಳಸಿ ನೆಲಸಮಗೊಳಿಸುವ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಅಧಿಕಾರಿಗಳು ನ್ಯಾಯಾಧೀಶರಾಗಬಾರದು, ಆರೋಪಿಗಳ ಮನೆಯನ್ನು ನೆಲಸಮಗೊಳಿಸಲು ಅವರೇ ಸ್ಥಳದಲ್ಲೇ ತೀರ್ಮಾನ ಕೈಗೊಂಡು ಕ್ರಮ ವಹಿಸಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. (ವರದಿ- ಹರೀಶ್ ಮಾಂಬಾಡಿ)
ನವದೆಹಲಿ: ಆರೋಪಿಗಳ ಮನೆ, ಸೊತ್ತುಗಳನ್ನು ಬುಲ್ ಡೋಜರ್ ಬಳಸಿ ನೆಲಸಮಗೊಳಿಸುವ ಪ್ರಕ್ರಿಯೆಗಳಿಗೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದೆ. ಅಧಿಕಾರಿಗಳು ನ್ಯಾಯಾಧೀಶರಾಗಬಾರದು, ಆರೋಪಿಗಳ ಮನೆಯನ್ನು ನೆಲಸಮಗೊಳಿಸಲು ಅವರೇ ಸ್ಥಳದಲ್ಲೇ ತೀರ್ಮಾನ ಕೈಗೊಂಡು ಕ್ರಮ ವಹಿಸಬಾರದು ಎಂದು ಬುಧವಾರ (ನವೆಂಬರ್ 13) ಸುಪ್ರೀಂ ಕೋರ್ಟ್ ತಿಳಿಸಿದೆ.
ಜಸ್ಟೀಸ್ ಬಿ.ಆರ್. ಗವಾಯಿ ಮತ್ತು ಕೆ.ಆರ್. ವಿಶ್ವನಾಥನ್ ಅವರಿದ್ದ ಪೀಠ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳು ವ್ಯಕ್ತಿಯನ್ನು ದೋಷಿ ಎಂದು ತೀರ್ಮಾನ ಮಾಡುವಂತಿಲ್ಲ. ಅದನ್ನು ಕೋರ್ಟು ಮಾಡುತ್ತದೆ. ಕೇವಲ ಆರೋಪಗಳು ಇದ್ದಾಗ ಅಧಿಕಾರಿಗಳು ಮನೆಯನ್ನು ನೆಲಸಮ ಮಾಡಿದರೆ, ಕಾನೂನಿನ ಮೂಲಭೂತ ತತ್ವದ ಉಲ್ಲಂಘನೆಯಾಗುತ್ತದೆ. ಅಧಿಕಾರಿಗಳು ನ್ಯಾಯಾಧೀಶರಲ್ಲ ಎಂದು ಹೇಳಿದೆ.
ಅಕ್ಟೋಬರ್ 1ರಂದು ಉತ್ತರ ಪ್ರದೇಶ ಸೇರಿ ಎಲ್ಲ ರಾಜ್ಯಗಳ ಬುಲ್ಡೋಜರ್ ಕ್ರಮಗಳ ಕುರಿತ ವಿಚಾರಣೆಯನ್ನು ಸುಪ್ರೀಂ ನಡೆಸಲಾಗಿತ್ತು. ಈ ಸಂದರ್ಭ ಸಾರ್ವಜನಿಕ ಸುರಕ್ಷತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಲಾಗಿತ್ತು. ನ್ಯಾಯಾಂಗದ ಅನುಮೋದನೆ ಇಲ್ಲದೆ ನೆಲಸಮ ಪ್ರಕ್ರಿಯೆ ನಡೆಸುವುದನ್ನು ನಿಷೇಧಿಸುವ ಕುರಿತು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಸರಿಯಾದ ಮಾರ್ಗಸೂಚಿಯನ್ನು ಅನುಸರಿಸದೆ, ಕಟ್ಟಡಗಳನ್ನು ನೆಲಸಮಗೊಳಿಸುವ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಕೆಲ ರಾಜ್ಯಗಳ ಆಡಳಿತ ಯಂತ್ರಗಳು ತಾವೇ ನ್ಯಾಯಾಧೀಶರಾಗುವಂತಿಲ್ಲ. ಅಂಥದ್ದೇನಾದರೂ ಮಾಡಿದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ. ಆರೋಪಿಗಳ ಮನೆ ನೆಲಸಮವನ್ನು ಕಾನೂನು ಪ್ರಕಾರ ಮಾಡದೇ ಇದ್ದರೆ, ಅವರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಸೂಚಿಸಿದೆ.
ಯಾವುದಾದರೂ ಕಾನೂನುಬಾಹಿರ ಕಟ್ಟಡವಿದ್ದಲ್ಲಿ, 15 ದಿನದ ನೋಟಿಸ್ ಅನ್ನು ಅಲ್ಲಿ ವಾಸಿಸುವವರಿಗೆ ನೀಡುವುದು ಕಡ್ಡಾಯವಾಗಿದೆ. ಆಗ ಆ ಕಟ್ಟಡದ ಮಾಲೀಕ ನೋಟಿಸ್ ಗೆ ಉತ್ತರಿಸಲು ವಿಫಲನಾದಲ್ಲಿ, ಕಟ್ಟಡವನ್ನು ನೆಲಸಮ ಮಾಡಲು ಕ್ರಮ ಕೈಗೊಳ್ಳಬಹುದು. ಈ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣವಾಗಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕಾನೂನನ್ನು ಕೈಗೆತ್ತಿಕೊಳ್ಳುವ ಸಾರ್ವಜನಿಕ ಸೇವಕರಾಗಿರುವ ಅಧಿಕಾರಿಗಳು ಬುಲ್ ಡೋಜರ್ ಓಡಿಸಿ, ಕಟ್ಟಡವನ್ನು ನೆಲಸಮವನ್ನು ಮಾಡುವ ಕೃತ್ಯ ನಡೆಸಿದಲ್ಲಿ ಹೊಣೆಗಾರರಾಗುತ್ತಾರೆ. ಬಳಿಕ ಮುಂದಿನ ಕ್ರಮಗಳಿಗೆ ಉತ್ತರದಾಯಿಯಾಗಿರುತ್ತಾರೆ ಎಂದು ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದೆ.
(ವರದಿ- ಹರೀಶ್ ಮಾಂಬಾಡಿ)