ನಾಳೆಯೇ ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಜನಾದೇಶ ಯಾರ ಪರ, ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ
Nov 22, 2024 02:50 PM IST
ನಾಳೆಯೇ ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಜನಾದೇಶ ಯಾರ ಪರ, ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ ಎಂಬುದು ಸದ್ಯದ ಕುತೂಹಲ. ಥಾಣೆಯ ಮತಗಟ್ಟೆಯೊಂದರಲ್ಲಿ ಬುಧವಾರ (ನವೆಂಬರ್ 20) ಮತ ಚಲಾಯಿಸಲು ಸರದಿ ನಿಂತಿದ್ದ ಮಹಿಳೆಯರು. ಸಾಂಕೇತಿಕವಾಗಿ ಈ ಚಿತ್ರವನ್ನು ಇಲ್ಲಿ ಬಳಸಲಾಗಿದೆ.
Maharashtra Election Result: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ನಾಳೆಯೇ ಪ್ರಕಟವಾಗಲಿದೆ. ಎಕ್ಸಿಟ್ ಪೋಲ್ ಫಲಿತಾಂಶ ಮತ್ತು ಜನಾದೇಶ ಯಾರ ಪರ ಇದೆ ಎಂಬುದು ನಾಳೆ (ನವೆಂಬರ್ 23) ನಿಚ್ಚಳವಾಗಲಿದೆ.ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ ಎಂಬುದು ಸದ್ಯದ ಕುತೂಹಲ.
Maharashtra Election Result: ಮಹಾರಾಷ್ಟ್ರ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಮಹಾರಾಷ್ಟ್ರ 4 ಎಕ್ಸಿಟ್‌ಪೋಲ್‌ಗಳು ಬಿಜೆಪಿ ನೇತೃತ್ವದ ಮಹಾಯುತಿ ಆಡಳಿತ ಮುಂದುವರಿಕೆಯನ್ನು ಸೂಚಿಸಿದ್ದು, ಎರಡು ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ ಜತೆಗೆ ಸಮಬಲದ ಸ್ಪರ್ಧೆಯನ್ನು ಸೂಚಿಸಿವೆ. ನವೆಂಬರ್ 20ರಂದು ಮಹಾರಾಷ್ಟ್ರದ 288 ಕ್ಷೇತ್ರಗಳ ಮತದಾನ ನಡೆದಿದ್ದು, ನಾಳೆಯೇ (ನವೆಂಬರ್ 23) ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ. ಎಕ್ಸಿಟ್ ಪೋಲ್ ಫಲಿತಾಂಶದ ಬಳಿಕ ಚುನಾವಣೆಯ ನಿಖರ ಫಲಿತಾಂಶ ಪ್ರಕಟವಾಗಲಿದ್ದು, ಜನಾದೇಶ ಯಾರ ಪರ ಇರಬಹುದೆಂಬ ಕುತೂಹಲ ಕೆರಳಿದೆ. ಮಹಾಯುತಿ ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದೇ, ಮಹಾ ವಿಕಾಸ ಅಘಾಡಿಗೆ ಕೊಡುವುದೇ ಎಂಬ ಕುತೂಹಲ ಹೆಚ್ಚಾಗಿದೆ. ಬಿಜೆಪಿ ನೇತೃತ್ವದ ಮಹಾ ಯುತಿಯಲ್ಲಿ ಬಿಜೆಪಿ ಹೊರತಾಗಿ ಶಿವ ಸೇನಾ (ಏಕನಾಥ ಶಿಂಧೆ), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್) ಪ್ರಮುಖ ಪಕ್ಷಗಳು. ಇದಲ್ಲದೆ ಇನ್ನು ಕೆಲವು ಸಣ್ಣ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳೂ ಇದ್ದಾರೆ. ಇನ್ನು ವಿಪಕ್ಷ ಸ್ಥಾನದಲ್ಲಿರುವ ಮಹಾ ವಿಕಾಸ್ ಅಘಾಡಿಯಲ್ಲಿ ಕಾಂಗ್ರಸ್ ಹೊರತಾಗಿ, ಶಿವ ಸೇನಾ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್) ಗಳಿವೆ.
ಮಹಾರಾಷ್ಟ್ರ ಚುನಾವಣೆ 2024: ನಾಳೆ ಫಲಿತಾಂಶ, ನಿರೀಕ್ಷೆ ಹೆಚ್ಚಿಸಿದ ಮತದಾನ ಪ್ರಮಾಣ ಹೆಚ್ಚಳ
ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಒಂದೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಮಹಾರಾಷ್ಟ್ರದ 288 ಸ್ಥಾನಗಳ ಪೈಕಿ ಬಿಜೆಪಿ 149 ಸ್ಥಾನಗಳಲ್ಲಿ, ಶಿವ ಸೇನಾ 81ರಲ್ಲಿ ಎನ್‌ಸಿಪಿ 59ರಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ಪಕ್ಷ 101, ಶಿವ ಸೇನಾ (ಯುಬಿಟಿ) 95, ಎನ್‌ಸಿಪಿ (ಎಸ್‌ಪಿ) 86 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ವೇಳೆ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) 237 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದಂತೆ ಪಕ್ಷೇತರ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಒಟ್ಟು 4136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2086 ಸ್ವತಂತ್ರ ಅಭ್ಯರ್ಥಿಗಳು. 9.7 ಕೋಟಿ ಅರ್ಹ ಮತದಾರರು ಇದ್ದು, ಈ ಪೈಕಿ 6101 ತೃತೀಯ ಲಿಂಗಿಗಳು, 6.41 ಲಕ್ಷ ಅಂಗವೈಕಲ್ಯ ಇರುವ ಮತದಾರರು ಇದ್ದಾರೆ. 1,00,186 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು 6 ಲಕ್ಷ ಸರ್ಕಾರಿ ಉದ್ಯೋಗಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಶೇಕಡ 66.05 ಮತದಾನವಾಗಿದ್ದು, ಇದು 2019ಕ್ಕೆ ಹೋಲಿಸಿದರೆ ಶೇಕಡ 4.5ರಷ್ಟು ಹೆಚ್ಚು. ಮತದಾನ ಪ್ರಮಾಣ ಹೆಚ್ಚಾಗಿರುವುದು ಆಡಳಿತಾರೂಢ ಮಹಾಯುತಿ ಮತ್ತು ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಮಹಾ ವಿಕಾಸ್ ಅಘಾಡಿ) ನಾಯಕರಲ್ಲಿ ಗೆಲುವಿಗೆ ಸಂಬಂಧಿಸಿದ ಆಶಾವಾದವನ್ನು ಹೆಚ್ಚಿಸಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ನಡೆಯಲಿದ್ದು, ಅಂಚೆ ಮತ ಎಣಿಕೆ ಬಳಿಕ ಇವಿಎಂಗಳ ಮತ ಎಣಿಕೆ ಶುರುವಾಗುತ್ತದೆ. ಸಂಜೆ ಮಧ್ಯಾಹ್ನದ ವೇಳೆ ಯಾರು ಅಧಿಕಾರಕ್ಕೆ ಏರಲಿದ್ದಾರೆ ಎಂಬುದು ದೃಢವಾಗಲಿದೆ.
ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಆಡಳಿತಾರೂಢ ಮಹಾಯುತಿಗೆ ಮುನ್ನಡೆ
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳ ಪೈಕಿ ಬಹುತೇಕ ಬಿಜೆಪಿ, ಶಿವಸೇನೆ (ಶಿಂಧೆ) ಮತ್ತು ಎನ್‌ಸಿಪಿ (ಅಜಿತ್ ಪವಾರ್) ಒಳಗೊಂಡ ಆಡಳಿತಾರೂಢ ಮಹಾಯುತಿಗೆ ಮುನ್ನಡೆ ತೋರಿಸಿದರೆ ಎರಡರಲ್ಲಿ ಮಾತ್ರ ವಿಪಕ್ಷ ಶಿವಸೇನೆ (ಯುಬಿಟಿ), ಕಾಂಗ್ರೆಸ್, ಎನ್‌ಸಿಪಿ (ಶರದ್ ಪವಾರ್) ಗಳ ಮಹಾ ವಿಕಾಸ್ ಅಘಾಡಿ ಜತೆಗೆ ಸಮಬಲದ ಸ್ಪರ್ಧೆಯನ್ನು ತೋರಿಸಿವೆ. ಮತದಾನ ಮುಗಿದ ಅರ್ಧ ಗಂಟೆ ಬಳಿಕ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿವೆ. ಇವು ಅಭಿಪ್ರಾಯಗಳನ್ನು ಆಧರಿಸಿದ್ದು, ನಿಖರ ಎಂದು ಹೇಳಲಾಗದು. ಮತ ಚಲಾಯಿಸಿ ಬಂದ ಮತದಾರರು ಹೇಳಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಯಾರು ಅಧಿಕಾರಕ್ಕೆ ಬರಬಹುದು ಎಂಬುದನ್ನು ಅಂದಾಜಿಸುವ ಕ್ರಮ ಎಕ್ಸಿಟ್ ಪೋಲ್‌ನಲ್ಲಿ ಅನುಸರಿಸಲಾಗುತ್ತದೆ. ಯಾವುದಕ್ಕೂ ನಾಳೆಯೇ ಫಲಿತಾಂಶ ಪ್ರಕಟವಾಗುವ ಕಾರಣ ಎಕ್ಸಿಟ್ ಪೋಲ್‌ಗಳ ನೈಜತೆಯೂ ದೃಢೀಕರಿಸಲ್ಪಡಲಿದೆ.