ಹರಿಯಾಣ ಚುನಾವಣೆ ಫಲಿತಾಂಶದ ನಂತರವಾದರೂ ಕಾಂಗ್ರೆಸ್ ಭಾರತದ ಪ್ರಗತಿ ಬಗ್ಗೆ ಯೋಚಿಸಲಿ: ಪ್ರಧಾನಿ ಮೋದಿ ಟೀಕಾ ಪ್ರಹಾರ
Oct 08, 2024 09:42 PM IST
ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದರು.
- ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆ ಬಳಿಕ ದೆಹಲಿ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರಮೋದಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ದೆಹಲಿ: ಹರಿಯಾಣದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರವನ್ನು ಬಿಜೆಪಿಗೆ ನೀಡುವ ಮೂಲಕ ಮತದಾರರು ಪಕ್ಷದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹರಿಯಾಣದ ಚುನಾವಣಾ ಇತಿಹಾಸದಲ್ಲಿಯೇ ಹ್ಯಾಟ್ರಿಕ್ ಅಧಿಕಾರ ಪಡೆದ ಮೊದಲ ಪಕ್ಷವೂ ಹೌದು. ಇದಕ್ಕಾಗಿ ಹರಿಯಾಣದ ಮತದಾರರಿಗೆ ಧನ್ಯವಾದ ತಿಳಿಸುವೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಚುನಾವಣೆಯಿಂದ ಪಾಠವನ್ನೇ ಕಲಿಯುತ್ತಿಲ್ಲ. ಇನ್ನೂ ಭಾರತದ ಪ್ರಗತಿಯ ಬಗ್ಗೆ ಯೋಚಿಸದೇ ಬರೀ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕಿ ಹಿಂದಿನ ತಪ್ಪುಗಳನ್ನೇ ಮಾಡುತ್ತಿದೆ. ಈ ಚುನಾವಣೆಯಿಂದಾದರೂ ಕಾಂಗ್ರೆಸ್ ದೇಶದ ಅಭಿವೃದ್ದಿ ಕಡೆಗೆ ಗಮನ ನೀಡಲಿ ಎಂದು ನಯವಾಗಿಯೇ ಚಾಟಿ ಬೀಸಿದ್ದಾರೆ.
ಹರಿಯಾಣ ಹಾಗೂ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಫಲಿತಾಂಶದ ನಂತರ ಮಂಗಳವಾರ ಸಂಜೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. 35 ನಿಮಿಷದ ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅನ್ನು ಟೀಕಿಸದೇ ಹೆಚ್ಚು ಸಮಯವನ್ನು ಮೀಸಲಿಟ್ಟರು.
ಹಿಂದೆಲ್ಲಾ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಇರುತ್ತಿತ್ತು. ಬರು ಬರುತ್ತ ಕಾಂಗ್ರೆಸ್ ಎಲ್ಲಾ ರಾಜ್ಯಗಳಲ್ಲೂ ಅಧಿಕಾರವನ್ನು ಕಳೆದುಕೊಂಡಿತು. ಈಗ ಭಾರತದ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಬಿಜೆಪಿ ಅಧಿಕಾರ ಹಿಡಿಯುತ್ತಾ ಬರುತ್ತಿದೆ. ಅಂತಹ ರಾಜ್ಯಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಈಗ ಹರಿಯಾಣದಲ್ಲಿ ಇಂತಹ ಸನ್ನಿವೇಶ ನಿರ್ಮಾಣವಾಗಿದೆ. ಆರು ದಶಕದ ಹರಿಯಾಣ ಇತಿಹಾಸದಲ್ಲಿ ಹ್ಯಾಟ್ರಿಕ್ ಅಧಿಕಾರ ಸ್ಥಾಪಿಸಿದ ಕೀರ್ತಿ ಬಿಜೆಪಿಗೆ ಸಲ್ಲಲಿದೆ ಎಂದು ಮೋದಿ ಹೇಳಿದರು.
ಹರಿಯಾಣ 1966 ರಲ್ಲಿ ರಚನೆಯಾಯಿತು. ಹರಿಯಾಣದಲ್ಲಿ 13 ಚುನಾವಣೆಗಳು ನಡೆದಿವೆ, ಇದುವರೆಗೆ ಮತ್ತು 10 ಚುನಾವಣೆಯಲ್ಲಿ ಜನರು ಸರ್ಕಾರವನ್ನು ಬದಲಾಯಿಸಿದ್ದಾರೆ.ಐದು ವರ್ಷಗಳ ನಂತರ ಮತ್ತು ಕಳೆದ ಮೂರು ಚುನಾವಣೆಗಳಲ್ಲಿ ಅದು ಆಗಲಿಲ್ಲ, ಇದು ಮೊದಲ ಬಾರಿಗೆ 2 ಬಾರಿ ಗೆದ್ದು ಮೂರನೇ ಬಾರಿಗೆ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹರಿಯಾಣದ ಜನರು ನಮ್ಮನ್ನು ಗೆಲ್ಲಿಸಿದ್ದು ಮಾತ್ರವಲ್ಲದೆ ನಮಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಮತ್ತು ಹೆಚ್ಚಿನ ಮತ ಹಂಚಿಕೆಯನ್ನು ಅವರು ಪೂರ್ಣ ಹೃದಯದಿಂದ ನಮಗೆ ಮತ ಹಾಕಿದರು ಎಂದು ಅವರು ಹೇಳಿದರು.
ಕಾಂಗ್ರೆಸ್ ಹಿಂದುಳಿದವರು, ದಲಿತರು, ಬಡವರನ್ನು ತನ್ನ ಮತ ಬ್ಯಾಂಕ್ ಮಾಡಿಕೊಂಡಿದೆ. ಹರಿಯಾಣದಲ್ಲೂ ಈ ಮತದಾರರಿಗೆ ಅವಮಾನ ಮಾಡುವಂತ ಸನ್ನಿವೇಶ ಸೃಷ್ಟಿಸಿದೆ. ಸಮಾಜಗಳ ನಡುವೆ ಕಂದಕ ಸೃಷ್ಟಿಸಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಉದ್ದೇಶ ಎನ್ನುವುದು ಮತದಾರರಿಗೂ ಗೊತ್ತಾಗಿದೆ. ಪ್ರಗತಿಗಿಂತ ಸಮುದಾಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಇದ್ದಾರೆ. ಹರಿಯಾಣದ ರೈತ ಸಮುದಾಯವರು ಕಾಂಗ್ರೆಸ್‌ನ ಇಂತಹ ನೀತಿ ಅರ್ಥ ಮಾಡಿಕೊಂಡು ಪಾಠ ಕಲಿಸಿದ್ದಾರೆ ಎಂದು ಮೋದಿ ಟೀಕಿಸಿದರು.
ಇದು ಭಾರಿ ಆಡಳಿತ ವಿರೋಧಿ, ರೈತರು ಮತ್ತು ಜಾಟ್‌ಗಳ ನಡುವಿನ ಕೋಪ ಮತ್ತು ಅಗ್ನಿವೀರ್ ಯೋಜನೆಯ ಬಗ್ಗೆ ಅಸಮಾಧಾನದ ಮುಖಾಂತರ ಸೋಲುತ್ತದೆ ಎಂದು ಹಲವರು ನಿರೀಕ್ಷಿಸಿದ್ದರು. ಕಾಂಗ್ರೆಸ್ ನಮ್ಮ ಸೇನೆಯ ಬಗ್ಗೆಯೂ ಅವಮಾನದ ರೀತಿ ಮಾತನಾಡಿದರು. ಯುವ ಜನರ ಪರವಾಗಿ ಸರಿಯಾದ ಕಾರ್ಯಕ್ರಮ ನಡೆಸಿದರು. ಇದಕ್ಕೆ ಯುವ ಜನತೆಯೂ ತಕ್ಕ ಪಾಠವನ್ನು ಹರಿಯಾಣದಲ್ಲಿ ಕಲಿಸಿದರು. ಕಾಂಗ್ರೆಸ್‌ಗೆ ಈಗಲಾದರೂ ಬುದ್ದಿ ಬರಬೇಕು. ಸಮುದಾಯವನ್ನು ಒಡೆದು, ದಲಿತರು, ಹಿಂದುಳಿದವರು, ಬಡವರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಬಿಡಬೇಕು ಎಂದು ಹೇಳಿದರು.
ಹರಿಯಾಣದ ದೇಶ ಭಕ್ತ ಮತದಾರ ಕಾಂಗ್ರೆಸ್‌ನ ಎಲ್ಲಾ ಕುತಂತ್ರಗಳನ್ನು ಅರ್ಥ ಮಾಡಿಕೊಂಡು ಮತದ ಹಕ್ಕನ್ನು ಚಲಾಯಿಸಿದ್ದಾರೆ. ಕಾಂಗ್ರೆಸ್‌ನ ದೇಶ ವಿರೋಧಿ ನೀತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಸ್ವತಂತ್ರ ಪಕ್ಷವಾಗಿ ಉಳಿದಿಲ್ಲ. ಪರಾವಲಂಬಿ ಪಕ್ಷ ಎನ್ನುವುದನ್ನು ಸಾಬೀತುಪಡಿಸಿದೆ. ಕಾಂಗ್ರೆಸ್‌ನಿಂದ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಹೊಡೆತ ಬೀಳುತ್ತಿದೆ. ಮತದಾರರು ಪಾಠ ಕಲಿಸುತ್ತಿದ್ದಾರೆ ಎಂದು ಮೋದಿ ಕಟಕಿಯಾಡಿದರು.
ಹರಿಯಾಣದ ಪ್ರಗತಿಗೆ ಬಿಜೆಪಿ ಕೆಲಸ ಮಾಡಿದೆ. ಇನ್ನಷ್ಟು ಕೆಲಸ ಮಾಡಲಿದೆ. ಉದ್ಯೋಗ ಸಹಿತ ಹಲವಾರು ಯೋಜನೆಗಳನ್ನು ಚುನಾವಣೆ ವೇಳೆ ನೀಡಿದ ಭರವಸೆಯಂತೆ ಜಾರಿಗೊಳಿಸಲಿದೆ. ಮಹಿಳೆಯರ ಸಬಲೀಕರಣಕ್ಕೂ ಕೆಲಸ ಮಾಡಲಿದೆ ಎಂದು ಹೇಳಿದರು.
ನಾವು ಹತ್ತು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ್ದೇವೆ. ಹರಿಯಾಣದಲ್ಲೂ ಹತ್ತು ವರ್ಷ ಮುಗಿಸಿದ್ದೇವೆ. ಎರಡೂ ಕಡೆಯೂ ಮೂರನೇ ಬಾರಿ ಆಡಳಿತ ಮುಂದುವೆರಸಿದ್ದೇವೆ. ಎಲ್ಲೂ ಭ್ರಷ್ಟಾಚಾರದ ಕಳಂಕ ನಮ್ಮ ಮೇಲಿಲ್ಲ. ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನೀಡಿರುವ ಹೆಮ್ಮೆಯಿದೆ ಎಂದು ಪ್ರಧಾನಿ ನುಡಿದರು.