ಚುನಾವಣಾ 'ಕುಸ್ತಿ'ಯಲ್ಲಿ ಎನ್‌ಡಿಎ ಅಭ್ಯರ್ಥಿ ವಿರುದ್ಧವೇ ಗೆದ್ದ ವಿನೇಶ್ ಫೋಗಟ್; ದಾಖಲೆ ಬರೆದ ಮಾಜಿ ಕುಸ್ತಿಪಟು
Vinesh Phogat: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕುಸ್ತಿಪಟು ವಿನೇಶ್ ಫೋಗಟ್ ಅವರು ಮಂಗಳವಾರ (ಅಕ್ಟೋಬರ್ 8) ಜೂಲಾನಾ ಕ್ಷೇತ್ರದಲ್ಲಿ ಜಯ ಗಳಿಸಿ ದಾಖಲೆ ಬರೆದಿದ್ದಾರೆ.
ಹರಿಯಾಣ: ಬಿಜೆಪಿ ಸೆಡ್ಡು ಹೊಡೆದು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ಮಾಜಿ ಒಲಿಂಪಿಯನ್ ಕುಸ್ತಿಪಟು ಹಾಗೂ ರಾಜಕಾರಣಿಯಾಗಿ ಮಾರ್ಪಟ್ಟಿರುವ ವಿನೇಶ್ ಫೋಗಟ್ ಅವರು ಮಂಗಳವಾರ (ಅಕ್ಟೋಬರ್ 8) ಜುಲಾನಾ ವಿಧಾನಸಭಾ ಕ್ಷೇತ್ರದಿಂದ 6015ಕ್ಕೂ ಮತಗಳ ಅಂತರದಿಂದ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅಚ್ಚರಿ ಏನೆಂದರೆ ಜುಲಾನಾ ಕ್ಷೇತ್ರದಲ್ಲಿ 19 ವರ್ಷಗಳ ನಂತರ ಕಾಂಗ್ರೆಸ್ ಜಯದ ನಗೆ ಬೀರುವಲ್ಲಿ ಯಶಸ್ಸು ಕಂಡಿದೆ. 2008ರಲ್ಲಿ ಕೊನೆಯದಾಗಿ ಕಾಂಗ್ರೆಸ್ ಗೆದ್ದಿತ್ತು. ಇದರೊಂದಿಗೆ ಫೋಗಟ್ ಅವರ ಗೆಲುವು ಐತಿಹಾಸಿಕವಾಗಿದೆ.
ಫೋಗಟ್ ಅವರು ತಮ್ಮ ಚೊಚ್ಚಲ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಿಸ್ಪರ್ಧಿ ಯೋಗೇಶ್ ಕುಮಾರ್ ಅವರನ್ನು 6,015 ಮತಗಳ ಅಂತರದಿಂದ ಸೋಲಿಸಿದ್ದಾರೆ. ಜಿಂದ್ ಜಿಲ್ಲೆಯ ಹೈ-ಪ್ರೊಫೈಲ್ ಕ್ಷೇತ್ರದಲ್ಲಿ ಇಂಡಿಯನ್ ನ್ಯಾಷನಲ್ ಲೋಕದಳ (INLD) ಅಭ್ಯರ್ಥಿ ಸುರೇಂದರ್ ಲಾಥರ್ ಮೂರನೇ ಸ್ಥಾನ ಪಡೆದಿದ್ದಾರೆ. ಎಣಿಕೆ ಆರಂಭವಾದಾಗ ಆರಂಭದಲ್ಲಿ ಮುನ್ನಡೆ ಸಾಧಿಸಿದ ಫೋಗಟ್, ಪ್ರಕ್ರಿಯೆ ಮುಂದುವರಿದಂತೆ ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದರು. ಆದಾಗ್ಯೂ, ಅವರು ತಮ್ಮ ಮುನ್ನಡೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲದೆ, ಅದನ್ನೇ ಕೊನೆಯವರೆಗೂ ಕಾಯ್ದುಕೊಂಡು ಆರಾಮದಾಯಕ ಗೆಲುವು ಸಾಧಿಸಿದ್ದಾರೆ.
ಹಿಂದೆ ಗೆದ್ದಿದ್ದು ಎನ್‌ಡಿಎ ಅಭ್ಯರ್ಥಿ
2019ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಭಾಗವಾಗಿದ್ದ ಜನನಾಯಕ್ ಜನತಾ ಪಾರ್ಟಿಯ (ಜೆಜೆಪಿ) ಅಮರಜೀತ್ ಧಂಡಾ ಅವರು ಇಲ್ಲಿ ಗೆದ್ದಿದ್ದರು. 2014 ಮತ್ತು 2009ರಲ್ಲಿ ಸ್ಥಾನವನ್ನು ಇಂಡಿಯನ್ ನ್ಯಾಷನಲ್ ಲೋಕ ದಳ (INLD) ಅಭ್ಯರ್ಥಿ ಪರ್ಮಿಂದರ್ ಸಿಂಗ್ ಧುಲ್ ಜಯದ ನಗೆ ಬೀರಿದ್ದರು. ಹರಿಯಾಣದಲ್ಲಿ ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಚುನಾವಣೆಯಲ್ಲಿ ಶೇಕಡಾ 67.90ರಷ್ಟು ಮತದಾನವಾಗಿದೆ. ಜುಲಾನಾ ಕ್ಷೇತ್ರದಲ್ಲಿ 74.66 ಮತದಾನ ನಡೆದಿತ್ತು. ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸಿದ್ದ ವಿನೇಶ್ ಈಗ, ಅದೇ ಪಕ್ಷದವರ ವಿರುದ್ಧ ಗೆಲುವು ಸಾಧಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಿಜೆಪಿ ಸಂಸದ ಮತ್ತು ಮಾಜಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ 30 ವರ್ಷ ವಯಸ್ಸಿನ ಮೂರು ಬಾರಿ ಒಲಿಂಪಿಯನ್ ಫೋಗಟ್ ಅವರು ಸೆಪ್ಟೆಂಬರ್ 6ರಂದು ಕಾಂಗ್ರೆಸ್‌ಗೆ ಸೇರಿದ್ದರು. ಅಧಿಕ ತೂಕದ ಕಾರಣ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅವರನ್ನು ಅನರ್ಹಗೊಳಿಸಲಾಯಿತು. ಮಹಿಳೆಯರ 50 ಕೆ.ಜಿ ಕುಸ್ತಿ ಸ್ಪರ್ಧೆಯಲ್ಲಿ ಐತಿಹಾಸಿಕ ಫೈನಲ್ ಆಗಿತ್ತು. ಆದರೆ, ಪದಕ ಗೆಲ್ಲಲು ವಿಫಲರಾದರು. ಈ ಗೆಲುವಿನ ಕುರಿತು ಮಾತನಾಡಿದ ಅವರು, ಇದು ಹೋರಾಟಕ್ಕೆ ಸಿಕ್ಕ ಗೆಲುವು. ಇದೇ ಸತ್ಯ. ಈ ದೇಶ ನನಗೆ ನೀಡಿದ ಪ್ರೀತಿ ಮತ್ತು ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದಿದ್ದಾರೆ.
ಬ್ರಿಜ್ಭೂಷಣ್ ವಿರುದ್ಧ ಹೋರಾಟ
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಖ್ಯಾತನಾಮ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ದೆಹಲಿಯ ಜಂತರ್ಮಂತರ್ನಲ್ಲಿ ಬ್ರಿಜ್ಭೂಷಣ್ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದರು. ಈ ಹೋರಾಟದಲ್ಲಿ ವಿನೇಶ್ ಫೋಗಟ್ ಅವರು ಕೂಡ ಪಾಲ್ಗೊಂಡಿದ್ದರು. ಬೀದಿಯಲ್ಲಿ ಹೋರಾಟ ನಡೆಸಿದ್ದರು. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ದೇಶಕ್ಕಾಗಿ ಪ್ರಶಸ್ತಿ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರೀಡಾಪಟುಗಳು ಬೀದಿಯಲ್ಲಿ ಹೋರಾಡುತ್ತಿದ್ದರೂ ಕೇಂದ್ರ ಸರ್ಕಾರ ಅವರ ಮನವಿ ಆಲಿಸುವಲ್ಲಿ ವಿಫಲವಾಗಿತ್ತು.