Union Budget 2024 : ಕೇಂದ್ರ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಿದ್ದತೆ, ಜುಲೈ 23ರಂದು ಹೊಸ ಸರ್ಕಾರದ ಆಯವ್ಯಯ
Jul 08, 2024 08:10 PM IST
ಕಳೆದ ಮಾರ್ಚ್ ನಲ್ಲಿ ಚುನಾವಣೆಗೂ ಮುನ್ನ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದರು.
Nirmala Sitharaman ಕೇಂದ್ರ ಸರ್ಕಾರದ ಪೂರ್ಣ ಪ್ರಮಾಣದ 2024ರ ಬಜೆಟ್ ಜುಲೈ 23ರಂದು ಮಂಡನೆಯಾಗಲಿದ್ದು, ಇದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
ದೆಹಲಿ: ಲೋಕಸಭೆ ಚುನಾವಣೆ ಇದ್ದ ಕಾರಣದಿಂದ ಕೇಂದ್ರ ಸರ್ಕಾರದ 2024 ಬಜೆಟ್ ಅನ್ನು ಮಾರ್ಚ್‌ನಲ್ಲಿ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೇಂದ್ರದಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. ಆಗಲೇ ಅಧಿಕಾರ ಸ್ವೀಕಾರವೂ ಆಗಿ ಸಂಪುಟ ತನ್ನ ಕೆಲಸ ಆರಂಭಿಸಿದೆ. ಇದರ ಭಾಗವಾಗಿಯೇ ಜುಲೈ 23ರಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಲಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದೆರಡು ದಿನದಲ್ಲಿ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಬಹುದು.
ಚುನಾವಣೆ ವರ್ಷದಲ್ಲಿ ಲೇಖಾನುದಾನಕ್ಕೆ ಅನುಮತಿ ಪಡೆಯುವುದು ಮೊದಲಿನಿಂದಲೂ ಬಂದಿರುವ ಸಂಪ್ರದಾಯ. ಅದರಂತೆ ರಾಜ್ಯ ಸರ್ಕಾರಗಳು ಮಾತ್ರವಲ್ಲದೇ ಕೇಂದ್ರ ಸರ್ಕಾರವೂ ಚುನಾವಣಾ ವರ್ಷಗಳಲ್ಲಿ ಲೇಖಾನುದಾನಕ್ಕೆ ಒಪ್ಪಿಗೆ ಪಡೆಯುತ್ತಾ ಬಂದಿದೆ. ಈ ಬಾರಿಯೂ ಏಪ್ರಿಲ್ ಮೇ ತಿಂಗಳಲ್ಲಿ ಚುನಾವಣೆ ಇದ್ದುದರಿಂದ ಬಿಜೆಪಿ ಸರ್ಕಾರವು ಬಜೆಟ್ ಅನ್ನು ಲೇಖಾನುದಾನಕ್ಕೆ ಸೀಮಿತಗೊಳಿಸಿ ಬಜೆಟ್ ಮಂಡಿಸಿತ್ತು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾವುದೇ ತೆರಿಗೆ ಹೊರೆ ಇಲ್ಲದೇ ಬಜೆಟ್ ಪ್ರಕ್ರಿಯೆ ಮುಗಿಸಿದ್ದರು. ಈ ವರ್ಷದಜುಲೈ ಅಂತ್ಯದವರೆಗೂ ಈ ಲೇಖಾನುದಕ್ಕೆ ಅನುಮತಿ ಸಿಕ್ಕಿದೆ. ವೇತನ ಸಹಿತ ನಾನಾ ಕಾರಣಗಳಿಗೆ ಈ ಲೇಖಾನುದಾನ ಜಾರಿಯಲ್ಲಿರಲಿದೆ. ಇದರ ನಡುವೆ ಈ ಆರ್ಥಿಕ ವರ್ಷದ ಇತರೆ ಯೋಜನೆಗಳಿಗೆ ಅನುಮತಿ ಪಡೆಯಲೇಬೇಕು. ಇದರಿಂದ ಬಜೆಟ್ ಮಂಡನೆ ಆಗಬೇಕು. ಚುನಾವಣೆ ಮುಗಿದು ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬಂದಿರುವ ಜತೆಗೆ ನಿರ್ಮಲಾ ಸೀತಾರಾಮನ್ ಅವರೇ ಹಣಕಾಸು ಖಾತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಅವರೇ ಈಗ ಬಜೆಟ್ ಮಂಡಿಸುತ್ತಿರುವುದು ವಿಶೇಷ. ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೂ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪೂರ್ವ ಸಭೆಗಳನ್ನು ನಡೆಸಿದ್ದಾರೆ. ವಿವಿಧ ವಲಯಗಳ ತಜ್ಞರು, ಅಧಿಕಾರಿಗಳ ಸಭೆಯನ್ನು ನಡೆಸಿ ಅಭಿಪ್ರಾಯ ಆಲಿಸಿದ್ಧಾರೆ. ಇಲಾಖಾವಾರು ಬೇಡಿಕೆ ಆಧರಿಸಿ ಬಜೆಟ್‌ಗೆ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಬಹುತೇಕ ಜುಲೈ 23ರಂದು ಬಜೆಟ್ ಮಂಡನೆಯಾಗಲಿದೆ. ಇದಕ್ಕಾಗಿ ಬಜೆಟ್ ಅಧಿವೇಶನವೂ ಜುಲೈ 22ರಿಂದ ನಡೆಯಲಿದೆ. ಬಜೆಟ್ ಮಂಡನೆ ನಂತರ ಈ ಕುರಿತು ಎರಡೂ ಸದನಗಳಲ್ಲಿ ಚರ್ಚೆ ನಡೆದು ಪ್ರತಿ ಪಕ್ಷ ನಾಯಕರು, ವಿವಿಧ ಪಕ್ಷದ ನಾಯಕರು ಹಾಗೂ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡುವರು. ಕೊನೆಗೆ ಬಜೆಟ್‌ಗೆ ಅಂಗೀಕಾರ ಪಡೆಯಲಾಗುತ್ತದೆ.
ಏಳನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿರುವುದು ವಿಶೇಷ. ಈ ಬಾರಿಯ ಬಜೆಟ್ ನಲ್ಲಿ ತೆರಿಗೆ ಹೊರೆ ಇರಲಿದೆಯೇ, ಯಾವ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಉದ್ಯಮ ವಲಯ, ಉತ್ಪಾದನಾ ವಲಯಕ್ಕೆ ನಿರ್ಮಲಾ ಏನೇನು ನೀಡಬಹುದು. ಆದಾಯ ತೆರಿಗೆ ಪದ್ದತಿಯಲ್ಲಿ ಬದಲಾವಣೆ ಆಗಬಹುದೇ, ಹೊಸದಾಗಿ ಯಾವುದಾದರೂ ತೆರಿಗೆ ವಿಧಿಸಬಹುದೇ ಎನ್ನುವ ಚರ್ಚೆಗಳು ನಡೆದಿವೆ.
ಇದು ಪೂರ್ಣ ಪ್ರಮಾಣದ 2024ನೇ ಸಾಲಿನ ಬಜೆಟ್ ಆಗಿರುವುರಿಂದ ನಿರೀಕ್ಷೆಗಳು ಹೆಚ್ಚಿವೆ. ಆರ್ಥಿಕ ಪ್ರಗತಿಯ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಣದ ವಿಚಾರವಾಗಿ. ಏರುತ್ತಿರುವ ಬೆಲೆಗಳಿಗೆ ಕಡಿವಾಣ ಹಾಕಲು ನಿರ್ಮಲಾ ಲೆಕ್ಕಾಚಾರ ಹೇಗಿರಬಹುದು ಎನ್ನುವ ಕುತೂಹಲವಂತೂ ಉದ್ಯಮ ವಲಯದಲ್ಲಿ ಇದೆ.