ಮೈ ನಡುಕ ಹುಟ್ಟಿಸಿದೆ ದೆಹಲಿಯ ಚಳಿ, 4.5 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದ ತಾಪಮಾನ, ಗಾಳಿ ಗುಣಮಟ್ಟವೂ ಕುಸಿತ
Dec 16, 2024 12:12 PM IST
ಮೈ ನಡುಕ ಹುಟ್ಟಿಸಿರುವ ದೆಹಲಿಯ ಚಳಿಯ ಕಾರಣ, ಅಲ್ಲಿ ತಾಪಮಾನವು 4.5 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದಿದೆ. ಗಾಳಿ ಗುಣಮಟ್ಟವೂ ಕುಸಿತವಾಗಿದೆ ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ.
Delhi Weather: ಭಾರತದ ರಾಜಧಾನಿ ದೆಹಲಿಯಲ್ಲಿ ಶೀತ ಗಾಳಿ ಹೆಚ್ಚಾಗಿದ್ದು, ದೆಹಲಿಯ ಚಳಿ ದೆಹಲಿಗರಲ್ಲಿ ಮೈ ನಡುಕ ಹುಟ್ಟಿಸಿದೆ. ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಶಿಯಸ್‌ಗೆ ಇಳಿಕೆಯಾಗಿದ್ದು, ಗಾಳಿಯ ಗುಣಮಟ್ಟವೂ ಕುಸಿದಿದೆ ಎಂದು ಹವಾಮಾನ ಇಲಾಖೆ ವರದಿ ವಿವರಿಸಿದೆ.
Delhi Weather: ಭಾರತದ ಬಹುತೇಕ ಭಾಗಗಳಲ್ಲಿ ಈಗ ಚಳಿ ಅನುಭವ ಹೆಚ್ಚಾಗತೊಡಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುಳಿರ್ಗಾಳಿ ವಿಪರೀತವಾಗಿದ್ದು, ಸೋಮವಾರ ತಾಪಮಾನ 4.5 ಡಿಗ್ರಿ ಸೆಲ್ಶಿಯಸ್‌ಗೆ ಕುಸಿದಿದೆ. ಕುಳಿರ್ಗಾಳಿ, ಶೀತ ಗಾಳಿ ಪರಿಸ್ಥಿತಿ ಅನೇಕರ ಕಳವಳಕ್ಕೆ ಕಾರಣವಾಗಿದೆ. ಭಾರತದ ಉತ್ತರ, ವಾಯವ್ಯ ಮತ್ತು ಮಧ್ಯ ಭಾಗಗಳಲ್ಲಿ ವಿಪರೀತ ಚಳಿ ಇದ್ದು, ಭಾರತೀಯ ಹವಾಮಾನ ಇಲಾಖೆಯು ಡಿಸೆಂಬರ್ 16 ಮತ್ತು 17 ರಂದು ಭಾರತದ ಹಲವು ಭಾಗಗಳಲ್ಲಿ ಶೀತ ಗಾಳಿ ಮತ್ತು ದಟ್ಟ ಮಂಜು ಮುಸುಕಿದ ವಾತಾವರಣ ನಿರೀಕ್ಷಿಸಬಹುದು ಎಂದು ಮುನ್ಸೂಚನೆ ನೀಡಿದೆ. ಅನೇಕ ರಾಜ್ಯಗಳಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿರುವುದರಿಂದ ಹವಾಮಾನ ಪರಿಸ್ಥಿತಿಗಳ ಮೇಲೆ ನಿಗಾ ಇರಿಸಿಕೊಂಡು ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ನಾಗರಿಕರಿಗೆ ಸೂಚಿಸಲಾಗಿದೆ.
ದೆಹಲಿಯಲ್ಲಿ ಶೀತ ಗಾಳಿ ಹೆಚ್ಚಳ, 5 ಡಿಗ್ರಿಗಿಂತ ಕೆಳಕ್ಕೆ ಕುಸಿದ ತಾಪಮಾನ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀತ ಗಾಳಿ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ತಾಪಮಾನ ಕುಸಿದಿದೆ. ರಾಜಧಾನಿಯ ಸಫ್ದರ್ ಜಂಗ್‌ನಲ್ಲಿ ಸಾಮಾನ್ಯಕ್ಕಿಂತ 4 ಡಿಗ್ರಿ ಕಡಿಮೆ ತಾಪಮಾನ ದಾಖಲಾಗಿದೆ. ಕನಿಷ್ಠ ತಾಪಮಾನ 4.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದ್ದು, ಮೈ ನಡುಕದ ಚಳಿಗೆ ಕಾರಣವಾಗಿದೆ. ಇನ್ನು, ದೆಹಲಿಯಲ್ಲಿ ಡಿಸೆಂಬರ್ 1 ಮತ್ತು ಡಿಸೆಂಬರ್ 15 ರ ನಡುವಿನ ಸರಾಸರಿ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 238 ಆಗಿತ್ತು. ಇದು ಡಿಸೆಂಬರ್‌ನಲ್ಲಿ ಅತ್ಯಂತ ಕಡಿಮೆಯಾಗಿದೆ. ಒಂಬತ್ತು ವರ್ಷಗಳಲ್ಲಿ ಎಕ್ಯೂಐ 300 ಕ್ಕಿಂತ ಕೆಳಗೆ ಇಳಿದಿರುವುದು ಇದೇ ಮೊದಲು. ಕಳೆದ ಒಂಬತ್ತು ವರ್ಷಗಳಲ್ಲಿ, ಡಿಸೆಂಬರ್‌ನ ಮೊದಲಾರ್ಧದಲ್ಲಿ ಸರಾಸರಿ ಎಕ್ಯೂಐ 300 ಕ್ಕಿಂತ ಹೆಚ್ಚಿದೆ. ಗಾಳಿಯ ವೇಗದಲ್ಲಿನ ಕುಸಿತವು ಈ ಕ್ಷೀಣತೆಗೆ ಕಾರಣವಾಗಿದೆ. ಮಂಗಳವಾರವೂ ಸಹ ಗಾಳಿಯ ವೇಗವು ಗಂಟೆಗೆ 5 ಕಿಮೀಗಿಂತ ಕಡಿಮೆಯಾಗಿರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಭಾರತದಲ್ಲಿ ಎಲ್ಲೆಲ್ಲಿ ಶೀತ ಗಾಳಿ ಪರಿಸ್ಥಿತಿ
ಭಾರತದಲ್ಲಿ ದೆಹಲಿ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಶೀತ ಗಾಳಿ, ವಿಪರೀತ ಚಳಿ ಪರಿಸ್ಥಿತಿ ಮಂಗಳವಾರವೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ತಿಳಿಸಿದೆ. ಹರಿಯಾಣ-ಚಂಡೀಗಢ-ದೆಹಲಿ, ಜಮ್ಮು ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ, ವಿದರ್ಭ, ಒಡಿಶಾ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ಸೌರಾಷ್ಟ್ರ ಮತ್ತು ಕಛ್‌ನ ಪ್ರತ್ಯೇಕ ಸ್ಥಳಗಳಲ್ಲಿ ಮತ್ತು ತೆಲಂಗಾಣದಲ್ಲಿ ಶೀತ ಗಾಳಿ ಪರಿಸ್ಥಿತಿ ಹೆಚ್ಚಾಗಿದೆ. ಇದಲ್ಲದೆ ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಭಾಗಗಳಿಗೆ ಶೀತ ಗಾಳಿ ಇರಬಹುದು ಎಂದು ಹೇಳಲಾಗಿದೆ.
ಡಿಸೆಂಬರ್ 17 (ಮಂಗಳವಾರ), ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಶೀತ ಗಾಳಿ ಅಲೆಯಿಂದ ತೀವ್ರ ಶೀತ ಗಾಳಿ ಅಲೆಗಳ ಸ್ಥಿತಿ ಉಂಟಾಗಬಹುದು. ಇದಲ್ಲದೆ, ಹರಿಯಾಣ-ಚಂಡೀಗಢ-ದೆಹಲಿ, ಜಮ್ಮು ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಪಶ್ಚಿಮ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಪ್ರತ್ಯೇಕ ಪಾಕೆಟ್‌ಗಳಲ್ಲಿ ಶೀತ ಗಾಳಿ ಪರಿಸ್ಥಿತಿಗಳು ಹೆಚ್ಚಾಗಿವೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ವಿವರಿಸಿದೆ.
ರಾತ್ರಿ/ಮುಂಜಾನೆ ಹೊತ್ತು ದೆಹಲಿ, ಹರಿಯಾಣ-ಚಂಡೀಗಢ, ಉತ್ತರ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಪಂಜಾಬ್‌ನ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಆವರಿಸುವ ಸಾಧ್ಯತೆಯಿದೆ. ಡಿಸೆಂಬರ್ 17 ರಂದು, ರಾತ್ರಿ/ಬೆಳಿಗ್ಗೆ ದೆಹಲಿ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ-ಚಂಡೀಗಢದ ವಿವಿಧೆಡೆ ದಟ್ಟವಾದ ಮಂಜು ಮುಸುಕಿದ ವಾತಾವರಣ ಕಾಣಬಹುದು. ದಟ್ಟ ಮಂಜಿನ ನಡುವೆ ಗೋಚರ 50-200 ಮೀಟರ್ ಅಂತರದಲ್ಲಿರುತ್ತದೆ. ಮಧ್ಯಮ ಪ್ರಮಾಣದಲ್ಲಿ ಮಂಜು ಆವರಿಸಿದ್ದರೆ ದೃಷ್ಟಿ ಗೋಚರವು 200 ರಿಂದ 500 ಮೀಟರ್ ದೂರ ತನಕ ಇರಲಿದೆ ಎಂದು ಹವಾಮಾನ ವರದಿ ಹೇಳಿದೆ.