ಕೆಮ್ಮಿದರೂ ಸೀನಿದರೂ ಜ್ವರ ಬಂದ್ರೂ ರಜೆ ಇಲ್ಲ; ವರ್ಷದ ಅಂತ್ಯದ ತನಕ ಸಿಕ್ ಲೀವ್ ಕೊಡಲ್ಲ, ಕಂಪನಿಯ ಪೋಸ್ಟ್ ವೈರಲ್
Nov 21, 2024 04:29 PM IST
ಕೆಮ್ಮಿದರೂ ಸೀನಿದರೂ ಜ್ವರ ಬಂದ್ರೂ ರಜೆ ಇಲ್ಲ; ವರ್ಷದ ಅಂತ್ಯದ ತನಕ ಸಿಕ್ ಲೀವ್ ಕೊಡಲ್ಲ, ಕಂಪನಿಯ ಪೋಸ್ಟ್ ವೈರಲ್
Sick Leaves: ಕಂಪನಿಯೊಂದು ಸಿಕ್ ಲೀವ್ ಸೇರಿದಂತೆ ಯಾವುದೇ ರಜೆ ತೆಗೆದುಕೊಳ್ಳದಂತೆ ಉದ್ಯೋಗಿಗಳಿಗೆ ಸೂಚಿಸಿರುವ ಪೋಸ್ಟ್ವೊಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ವೈರಲ್ ಸುದ್ದಿ: ಕೆಮ್ಮಿದರೂ, ಸೀನಿದರೂ, ಜ್ವರ ಬಂದರೂ, ಏನೇ ಆದರೂ ರಜೆ ಇಲ್ಲ; ಈ ವರ್ಷದ ಅಂತ್ಯದ ತನಕ ಸಿಕ್ ಲೀವ್ ಕೇಳ್ಬೇಡಿ... ಹೀಗೊಂದು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೌದು, ಕಂಪನಿಯೊಂದು ಈ ನಿರ್ಧಾರ ತೆಗೆದುಕೊಂಡಿದೆ. ಕೆಲಸದ ಒತ್ತಡ ಹೆಚ್ಚಿದ ಸಂದರ್ಭದಲ್ಲಿ ಹಲವು ಕಂಪನಿಗಳು ರಜೆ ದಿನಗಳಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸುತ್ತವೆ. ಹಾಗಂತ ಅನಾರೋಗ್ಯ ಕಂಡು ಬಂದರೆ ರಜೆ ನೀಡದೇ ಇರುವುದಿಲ್ಲ. ಆದರೆ ಈ ಕಂಪನಿ ಅನಾರೋಗ್ಯ ರಜೆ ನೀಡುವುದಿಲ್ಲವಂತೆ!
ಕಂಪನಿಯ ಬಾಸ್ ಹಾಕಿರುವ ಪೋಸ್ಟ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತು ಕೆಲವು ಉದ್ಯೋಗಿಗಳು ತಮ್ಮ ಕೆಲಸದ ಸ್ಥಳದಲ್ಲಿ ಎದುರಿಸುತ್ತಿರುವ ದುಃಖದ ಪರಿಸ್ಥಿತಿ ಬಗ್ಗೆ ವಿಷಾದಿಸಿದ್ದಾರೆ. ಉದ್ಯೋಗಿಯೊಬ್ಬರು ರಜೆಯ ಕುರಿತು ಪೋಸ್ಟ್ ಅನ್ನು ರೆಡ್ಡಿಟ್ನಲ್ಲಿ ಹಾಕಿ, ಕಾರ್ಪೋರೇಟ್ ಕಂಪನಿಗಳು ಇದು ಸರಿ ಎಂದು ಭಾವಿಸುತ್ತಿರುವುದು ಏಕೆ? ಅನಾರೋಗ್ಯ ಯಾವಾಗ ಬರುತ್ತದೆ, ಬರುವುದಿಲ್ಲ ಎಂದು ಹೇಳಲು ಸಾಧ್ಯವೇ? ನಾನು ಅನಾರೋಗ್ಯಕ್ಕೆ ಒಳಗಾಗಬಾರದು ಎಂದು ದೇವರು ತಡೆಯುತ್ತಾನಾ? ಎಂದಿದ್ದಾರೆ.
ಅಂಟಿಸಿರುವ ಪತ್ರದಲ್ಲಿ ಏನು ಬರೆಯಲಾಗಿದೆ?
ನವೆಂಬರ್ 25 ರಿಂದ ಡಿಸೆಂಬರ್ 31 ರವರೆಗೆ ರಜೆಯ ದಿನಗಳಿಗೆ ಕತ್ತರಿ ಬೀಳಲಿದೆ. ಅನಾರೋಗ್ಯದ ರಜೆಗಳನ್ನು ತೆಗೆದುಕೊಳ್ಳಲು ಯಾವುದೇ ವಿನಾಯಿತಿ ಇಲ್ಲ. ಈ ಅವಧಿಯು ನಮಗೆ ಕಷ್ಟದ ದಿನಗಳು. ಕೆಲಸದ ಒತ್ತಡ ಹೆಚ್ಚಿರುತ್ತದೆ. ಧನ್ಯವಾದಗಳು ಎಂದು ನೋಟಿಸ್ನಲ್ಲಿ ಬರೆಯಲಾಗಿದೆ. ಆದರೆ ಇದು ಯಾವ ಕಂಪನಿ ಪೋಸ್ಟ್ ಎಂಬುದು ತಿಳಿದು ಬಂದಿಲ್ಲ.
‘ಸಾಯುವುದಕ್ಕೂ ಮುನ್ನ ಕಂಪನಿಗೆ ಹೇಳಬೇಕು’
ನೀವು ಸಾಯುವುದಕ್ಕೂ ಮುನ್ನ ಮೂರು ದಿನಗಳ ಮೊದಲೇ ಮ್ಯಾನೇಜ್ಮೆಂಟ್ಗೆ ತಿಳಿಸಬೇಕು ಎಂದು ರೆಡ್ಡಿಟ್ ಬಳಕೆದಾರರೊಬ್ಬರು ತಮಾಷೆ ಮಾಡಿದ್ದಾರೆ. ಉದ್ಯೋಗಿಗಳ ಕಷ್ಟ ನಾನು ಬಲ್ಲೆ. ಬೇಸಿಗೆಯಲ್ಲೂ ಬಿಡುವು ನೀಡುವುದಿಲ್ಲ. ತುಂಬಾ ಸಿಬ್ಬಂದಿ ಅತಿಯಾಗಿ ಕೆಲಸ ಮಾಡುತ್ತಾರೆ, ಆದರೆ ವೇತನ ಕಡಿಮೆ ಪಡೆಯುತ್ತಾರೆ. ಇಷ್ಟಿದ್ದರೂ ಉದ್ಯೋಗಿಯನ್ನು ಕಾಲ ಕಸದಂತೆ ನೋಡಲಾಗುತ್ತಿದೆ. ಹೀಗಾಗಿ, ಬೇಸತ್ತ ಎಷ್ಟೋ ಉದ್ಯೋಗಿಗಳು ಕೆಲಸ ತೊರೆಯುತ್ತಾರೆ, ಮತ್ತೆ ಕೆಲಸ ಮಾಡಲು ಎಂದೂ ಬಯಸುವುದಿಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇದೇ ಪೋಸ್ಟ್ಗೆ ಮತ್ತೊಬ್ಬರು ಪ್ರತಿಕ್ರಿಯಿಸಿದ್ದು, ನಾನು ಕೆಲಸ ಮಾಡುವ ಸ್ಥಳದ ಬಳಿ ಸ್ಥಳೀಯ ಕಾಫಿ ಅಂಗಡಿಯೊಂದಿದೆ. ಇಬ್ಬರು ಸಹೋದರಿಯರು ಅದನ್ನು ಮುನ್ನಡೆಸುತ್ತಾರೆ. ತುಂಬಾ ಒಳ್ಳೆಯವರು. ಆದರೆ ಅವರು ಕಾಫಿ ಅಂಗಡಿಯನ್ನು ಜನವರಿ ತಿಂಗಳು ಪೂರ್ತಿ ಮುಚ್ಚುತ್ತಾರೆ. ಅಲ್ಲದೆ, ತಮ್ಮಲ್ಲಿ ಕೆಲಸ ಮಾಡುವವರಿಗೆ ಆ ತಿಂಗಳ ಸಂಬಳವನ್ನೂ ನೀಡುತ್ತಾರೆ. ಇದು ಧನ್ಯವಾದ ಹೇಳಲು ಮತ್ತು ಪ್ರತಿಯೊಬ್ಬರೂ ರೀಚಾರ್ಜ್ ಮಾಡಲು ಅವಕಾಶ ನೀಡುವ ಒಂದು ಮಾರ್ಗವಾಗಿದೆ ಎಂದು ಬರೆದಿದ್ದಾರೆ.