ಜೊಮ್ಯಾಟೋದಲ್ಲಿ ಉದ್ಯೋಗ ಬೇಕೆ, 20 ಲಕ್ಷ ನೀವೇ ಪಾವತಿಸಿ ಕೆಲಸ ಮಾಡಿ, 2ನೇ ವರ್ಷದಿಂದ ಭರ್ಜರಿ ವೇತನ ಪಡೆಯಿರಿ:ಹೀಗೊಂದು ಆಫರ್
Zomato Employment: ಉದ್ಯೋಗಕ್ಕೆ ಆಹ್ವಾನ ನೀಡುವುದು ಒಂದು ಕಲೆಯೇ. ಜೊಮೆಟೋ ಕಂಪೆನಿಯ ಸಿಇಒ ದೀಪಿಂದರ್ ಗೋಯಲ್ ತಮ್ಮಕಂಪೆನಿ ಪ್ರಮುಖ ಹುದ್ದೆಗೆ ನೀಡಿರುವ ಭಿನ್ನ ಆಫರ್ ಹೀಗಿದೆ.
ಮುಂಬೈ: ಭಾರತದ ಪ್ರಮುಖ ನಗರ, ಪಟ್ಟಣ ಮಾತ್ರವಲ್ಲದೇ ಗ್ರಾಮಾಂತರ ಭಾಗದಲ್ಲೂ ತಲುಪಿ ಬಯಸಿದಾಗ ಬಿಸಿಬಿಸಿ ಆಹಾರ ಒದಗಿಸುವ ಹೊಸ ತಲೆಮಾರಿನ ಕಂಪೆನಿ ಜೊಮ್ಯಾಟೋದ ಪ್ರಮುಖ ಹುದ್ದೆಯಲ್ಲಿ ಕೆಲಸ ಮಾಡಲು ಒಂದು ಅವಕಾಶವಿದೆ. ಇದೊಂದು ರೀತಿಯ ಉದ್ಯೋಗದಾತ ನೀಡಿದ ವಿಭಿನ್ನ ಆಫರ್ ಕೂಡ. ನೀವು ನನ್ನ ತಂಡದ ಸಿಬ್ಬಂದಿ ಮುಖಸ್ಥರಾಗಿ ಕೆಲಸ ಮಾಡಲು ಬಯಸುತ್ತೀರಾ. ಹಾಗಾದರೆ ನನ್ನೊಂದಿಗೆ ಬನ್ನಿ. ನಿಮಗೆ ಮೊದಲ ವರ್ಷದ ವೇತನ ಇರುವುದಿಲ್ಲ.ಬದಲಿಗೆ ನೀವೇ 20 ಲಕ್ಷ ರೂ.ಗಳನ್ನು ನನಗೆ ನೀಡಬೇಕು. ಅದನ್ನು ಯಾವುದಾದರೂ ಸಂಸ್ಥೆಗೆ ದಾನವಾಗಿ ನೀಡುತ್ತೇನೆ. ಎರಡನೇ ವರ್ಷದಿಂದ ನಿಮಗೆ ವೇತನ ಇರಲಿದೆ. ಅದು ಕನಿಷ್ಠ 50 ಲಕ್ಷ ರೂ. ಇರಲಿದೆ. ಅದಕ್ಕಿಂತ ಹೆಚ್ಚು ಇರಬಹುದು, ಇಂತಹದೊಂದು ಆಫರ್ ನೀಡಿದವರು ಜೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್.
ಷರತ್ತುಗಳೇನು
ಹಸಿವಿನಲ್ಲಿರುವ ಯಾವುದೇ ವ್ಯಕ್ತಿ ನನ್ನೊಂದಿಗೆ ಬರಬಹುದು, ಅವರಿಗೆ ಸಾಕಷ್ಟು ತಿಳುವಳಿಕೆ ಇರಬೇಕು. ಮುಖ್ಯವಾಗಿ ಸಹಾನುಭೂತಿ ಉಳ್ಳ ವ್ಯಕ್ತಿ ಆಗಿರಬೇಕು. ಬಹಳಷ್ಟು ಅನುಭವ ಇಲ್ಲದೇ ದ್ದರೂ ನಡೆಯುತ್ತದೆ.
ಡೌನ್ ಟು ಅರ್ಥ್ ಮನುಷ್ಯನಾಗಿರಬೇಕು. ಯಾವುದೇ ಹೊಣೆಗಾರಿಕೆ ಇರಬಾರದು. ಎಂತಹ ಸನ್ನಿವೇಶದಲ್ಲೂ ಸರಿಯಾದುದನ್ನೂ ಮಾಡುವ, ಸರಿಯಾದ ನಿರ್ಧಾರ ತೆಗೆದುಕೊಳ್ಳುವವರು ಆಗಬೇಕು. ಎ ದರ್ಜೆಯ ಮಾಹಿತಿ ಸಂವಹನ ವ್ಯಕ್ತಿಯಾಗಿರುವುದು ಕಡ್ಡಾಯ. ಈ ಎಲ್ಲಾ ಮಾನದಂಡಗಳ ಜತೆಯಲ್ಲಿ ಕಲಿಯುವ ಮನೋಭಾವ ಇದ್ದವರು ಆಗಬೇಕು.
ಜೊಮ್ಯಾಟೋವನ್ನು ಸಮರ್ಥ ಕಟ್ಟುವ ಜತೆಗೆ ಮುನ್ನಡೆಸುವ ಮನಸ್ಥಿತಿ ಇರಬೇಕು. ಅದರಲ್ಲೂ ಜೊಮ್ಯಾಟೋದ ಎಲ್ಲಾ ತಂಡಗಳನ್ನು ಮುನ್ನೆಡಸಬೇಕು.
ಕಲಿಕೆಯ ದೊಡ್ಡ ಅವಕಾಶ
ನೀವು ಯಾವುದೇ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಕಲಿಯದ್ದನ್ನು ನಮ್ಮಲ್ಲಿ ಕಲಿಸುತ್ತೇವೆ. ನನ್ನೊಂದಿಗೆ ಹಾಗೂ ನನ್ನ ಸ್ಮಾರ್ಟ್ ಆಗಿ ಕೆಲಸ ಮಾಡುವ ಟೆಕ್ ಸ್ಯಾವಿ ತಂಡದೊಂದಿಗೆ ಕೆಲಸ ಮಾಡುವುದೇ ನಿಜವಾದ ಅನುಭವ.
ಇದು ಕಲಿಕೆಯ ಹಾದಿ ಎಂದುಕೊಳ್ಳಿ. ಈ ಕಲಿಕೆ ನಿಮ್ಮ ಜೀವನದ ಕ್ರಮವನ್ನೇ ಬದಲಿಸಬಹುದು. ಏಕೆಂದರೆ ಇಲ್ಲಿ ಕಲಿಯುವುದು ನಿಮ್ಮ ಯೋಚನಾ ಕ್ರಮದಲ್ಲೂ ಬದಲಾವಣೆ ತರಲೂ ಬಹುದು. ನೀವು ಮೆಚ್ಚಿಸಲು ಬಯಸುವವರು ಖಂಡಿತವಾಗಿಯೂ ಇಷ್ಟಪಡುವ ಕೆಲಸ ಇದಾಗಲಿದೆ ಎನ್ನುವ ವಿಶ್ವಾಸ ನನಗಂತೂ ಇದೆ. ಇದನ್ನು ಒಂದು ರೀತಿ ಫಾಸ್ಟ್ ಟ್ರಾಕ್ ಕಲಿಕೆ ಹಂತ ಎಂದುಕೊಂಡು ಬನ್ನಿ. ಇದು ನಿಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಖಂಡಿತವಾಗಿಯೂ ದೊಡ್ಡ ಬದಲಾವಣೆಯನ್ನು ತರಬಹುದು. ನಮಗೆ ಈ ಹುದ್ದೆಯಲ್ಲಿ ಕಲಿಯುವವರು, ತಿಳಿದುಕೊಳ್ಳುವವರು ಬೇಕೇ ಹೊರತು ಬರೀ ಬಯೋಡೆಟಾ ಸೃಷ್ಟಿಸುವವರು ಆಗಬಾರದು.
ನಿಮ್ಮ ಬಗ್ಗೆ ಬರೆದು ಕಳುಹಿಸಿ
ನೀವು ಈ ವೃತ್ತಿಗಾಗಿ ಯಾವುದೇ ಸಿವಿ ಕಳುಹಿಸುವ ಅಗತ್ಯವಿಲ್ಲ. ಬದಲಿಗೆ ಎರಡು ನೂರು ಪದದಲ್ಲಿ ನಿಮ್ಮ ಬಗ್ಗೆ, ನಿಮ್ಮ ಯೋಚನೆ ಕನಸುಗಳ ಬಗ್ಗೆ ಹಂಚಿಕೊಂಡರೆ ಸಾಕು. ಇದೇ ನಿಮ್ಮ ಪ್ರೊಫೈಲ್. d@zomato.com ಗೆ ಇದನ್ನು ಕಳುಹಿಸಿದರೆ ಸಾಕು.