logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Opposition Protest: 'ಪ್ರಜಾಪ್ರಭುತ್ವ ರಕ್ಷಣೆ'ಗಾಗಿ ರಾಷ್ಟ್ರಪತಿ ಭವನದತ್ತ ಹೆಜ್ಜೆ ಹಾಕಿದ ವಿಪಕ್ಷ ನಾಯಕರು ಪೊಲೀಸ್‌ ವಶಕ್ಕೆ!

Opposition Protest: 'ಪ್ರಜಾಪ್ರಭುತ್ವ ರಕ್ಷಣೆ'ಗಾಗಿ ರಾಷ್ಟ್ರಪತಿ ಭವನದತ್ತ ಹೆಜ್ಜೆ ಹಾಕಿದ ವಿಪಕ್ಷ ನಾಯಕರು ಪೊಲೀಸ್‌ ವಶಕ್ಕೆ!

HT Kannada Desk HT Kannada

Mar 24, 2023 02:55 PM IST

google News

ಪ್ರತಿಭಟನಾನಿರತ ವಿಪಕ್ಷ ನಾಯಕರು

  • ಉದ್ಯಮಿ ಗೌತಮ್‌ ಅದಾನಿ ಹಗರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚನೆಗೆ ಒತ್ತಾಯಿಸಿ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು (ಮಾ.24-ಶುಕ್ರವಾರ) ವಿಜಯ್ ಚೌಕ್‌ನಿಂದ ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಿವೆ. ಆದರೆ ಪ್ರತಿಭಟನಾ ಮೆರವಣಿಗೆಯನ್ನು ವಿಜಯ್‌ ಚೌಕ್‌ನಲ್ಲಿ ತಡೆದು ನಿಲ್ಲಿಸಿದ ಪೊಲೀಸರು, ವಿಪಕ್ಷ ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತಿಭಟನಾನಿರತ ವಿಪಕ್ಷ ನಾಯಕರು
ಪ್ರತಿಭಟನಾನಿರತ ವಿಪಕ್ಷ ನಾಯಕರು (PTI)

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಹಗರಣದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ರಚನೆಗೆ ಒತ್ತಾಯಿಸಿ, ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು (ಮಾ.24-ಶುಕ್ರವಾರ) ವಿಜಯ್ ಚೌಕ್‌ನಿಂದ ರಾಷ್ಟ್ರಪತಿ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಿವೆ. ಆದರೆ ಪ್ರತಿಭಟನಾ ಮೆರವಣಿಗೆಯನ್ನು ವಿಜಯ್‌ ಚೌಕ್‌ನಲ್ಲಿ ತಡೆದು ನಿಲ್ಲಿಸಿದ ಪೊಲೀಸರು, ವಿಪಕ್ಷ ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಭಾರೀ ಭದ್ರತಾ ನಿಯೋಜನೆಯ ನಡುವೆ ವಿಪಕ್ಷ ನಾಯಕರು ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದ್ದು, "ಪ್ರಜಾಪ್ರಭುತ್ವ ಅಪಾಯದಲ್ಲಿದೆ" ಎಂಬ ಬ್ಯಾನರ್‌ ಪ್ರದರ್ಶಿಸಿದರು. ಆದರೆ ಪ್ರತಿಭಟನೆಗೆ ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ಪ್ರಮುಖ ವಿಪಕ್ಷ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲದೇ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ವಿಪಕ್ಷ ನಾಯಕರ ನಿಯೋಗಕ್ಕೆ ಭೇಟಿಯ ಸಮಯಾವಕಾಶ ನಿಗದಿಪಡಿಸಿರಲಿಲ್ಲ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದತ್ತ ಹೆಜ್ಜೆ ಹಾಕುತ್ತಿದ್ದ ಪ್ರತಿಪಕ್ಷ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದರಿಂದಾಗಿ ಪ್ರತಿಭಟನಾ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದೆ.

ಈ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆಡಳಿತಾರೂಢ ಬಿಜೆಪಿ ಸದನದಲ್ಲಿ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಬಿಡುತ್ತಿಲ್ಲ. ಇದರರ್ಥ ಅವರು ಲೂಟಿ ಮಾಡುವುದನ್ನು ಮುಂದುವರಿಸುತ್ತಾರೆ. ರಾಹುಲ್ ಗಾಂಧಿ ಅವರು ಸ್ಪೀಕರ್‌ಗೆ ಪತ್ರ ಬರೆದು ಮಾತನಾಡಲು ಅನುಮತಿ ಪಡೆದುಕೊಂಡಿದ್ದರೂ, ಬಿಜೆಪಿ ಸದಸ್ಯರು ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದೇ ರೀತಿ ಮುಂದುವರಿದರೆ ದೇಶದಲ್ಲಿ ಸರ್ವಾಧಿಕಾರ ಸ್ಥಾಪನೆಯಾಗುವುದು ಖಚಿತ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಅದಾನಿ ಹಗರಣದ ತನಿಖೆಗೆ ಜೆಪಿಸಿ ರಚನೆಯ ನಮ್ಮ ಪಟ್ಟು ಸಡಿಲವಾಗಲು ಸಾಧ್ಯವೇ ಇಲ್ಲ. ಪ್ರಧಾನಿ ಮೋದಿ ಮತ್ತವರ ಉದ್ಯಮ ಸ್ನೇಹಿತರು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದು, ಈ ಲೂಟಿಯ ವಿರುದ್ಧ ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಮಲ್ಲಿಖಾರ್ಜುನ ಖರ್ಗೆ ಇದೇ ವೇಳೆ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಇದೇ ಕಾರಣಕ್ಕೆ ನಾವು ಪ್ರತಿ ಬಾರಿ ವಿಜಯ್‌ ಚೌಕ್‌ನಲ್ಲಿ ಪ್ರತಿಭಟನಾ ಮೆರವಣಿಹಗೆ ಹಮ್ಮಿಕೊಂಡಾಗಲೂ ಪೊಲೀಸ್‌ ಬಲದ ಮೂಲಕ ಅದನ್ನು ಹತ್ತಿಕ್ಕಲಾಗುತ್ತಿದೆ. ಪ್ರಧಾನಿ ಮೋದಿ ಅವರಿಗೆ ವಿಪಕ್ಷಗಳ ಒಂದು ಸಣ್ಣ ಪ್ರತಿಭಟನೆಯನ್ನೂ ಸಹಿಸುವ ಸಾಮರ್ಥ್ಯ ಇಲ್ಲವಾಗಿದೆ ಎಂದು ಇದೇ ವೇಳೆ ಹಲವು ವಿಪಕ್ಷ ನಾಯಕರು ಕಿಡಿಕಾರಿದರು.

ಕೇವಲ ನವದೆಹಲಿ ಮಾತ್ರವಲ್ಲದೇ ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರದೇಶ ಕಾಂಗ್ರೆಸ್‌ ಸಮಿತಿಗಳ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಅದಾನಿ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶದಿಂದ ರಾಹುಲ್‌ ಗಾಂಧಿ ಅವರನ್ನು ಜೈಲಿಗೆ ತಳ್ಳುವ ಹುನ್ನಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದೆ.

ಪ್ರಧಾನಿ ಮೋದಿ ಅವರ ಉಪನಾಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ, ಮಾನನಷ್ಟ ಮೊಕದ್ದಮೆಯಲ್ಲು ರಾಹುಲ್‌ ಗಾಂಧಿ ಅವರಿಗೆ ಸೂರತ್‌ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಇದರಿಂದಾಗಿ ರಾಹುಲ್‌ ಗಾಂಧಿ ತಮ್ಮ ಸಂಸತ್‌ ಸದಸ್ಯತ್ವವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ರಾಹುಲ್‌ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌, ಈ ಕುರಿತು ತನ್ನ ಮುಂದಿನ ನಡೆ ನಿರ್ಧರಿಸಲು ಇಂದು ಸಂಜೆ ತುರ್ತು ಸಭೆ ಕರೆದಿದೆ. ಒಟ್ಟಿನಲ್ಲಿ ರಾಹುಲ್‌ ಗಾಂಧಿ ಸುತ್ತ ನಡೆಯುತ್ತಿರುವು ಬೆಳವಣಿಗೆಗಳು, ಕಾಂಗ್ರೆಸ್‌ನ್ನು ಹೈರಾಣಾಗಿಸಿದೆ ಎಂದು ಹೇಳಬಹುದು.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ