Pawan Kalyan: ಪವನ್ ಕಲ್ಯಾಣ್ ಜನಸೇನಾಗೆ ಕೈಕೊಟ್ಟ ಬಿಜೆಪಿ; ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಇಲ್ಲ
Dec 15, 2023 05:35 PM IST
ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಬಿಜೆಪಿ ಬಿಗ್ ಶಾಕ್ ನೀಡಿದೆ.
ಲೋಕಸಭೆ ಚುನಾವಣೆಗೂ ಮುನ್ನವೇ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಬಿಜೆಪಿ ಬಿಗ್ ಶಾಕ್ ನೀಡಿದೆ. ತೆಲಂಗಾಣದಲ್ಲಿ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಹೈದರಾಬಾದ್: ಲೋಕಸಭೆ ಚುನಾವಣೆಗೆ (Lok Sabha Election 2024) ಇನ್ನ ಮೂರ್ನಾಲ್ಕು ತಿಂಗಳು ಮಾತ್ರ ಬಾಕಿ ಇದ್ದು, ಎನ್‌ಡಿಎ (NDA) ಹಾಗೂ ಇಂಡಿಯಾ(INDIA) ಕೂಟಗಳಲ್ಲಿ ಯಾರು ಉಳಿಯುತ್ತಾರೆ. ಯಾರು ಹೊರ ಬರುತ್ತಾರೆ ಎಂಬ ಚರ್ಚೆಗಳು ಶುರುವಾಗಿವೆ. ಇದರ ನಡುವೆಯೇ ತೆಲಂಗಾಣ ರಾಜಕೀಯದಲ್ಲಿ (Telangana Politics) ಭಾರಿ ಬೆಳವಣಿಗೆಗಳು ನಡೆಯುತ್ತಿವೆ.
ನಟ ಕಂ ರಾಜಕಾರಣಿ ಪವನ್ ಕಲ್ಯಾಣ್ (Pawan Kalyan) ಅವರ ಜನಸೇನಾ (Janasena Party) ಪಕ್ಷಕ್ಕೆ ಬಿಜೆಪಿ (BJP) ಬಿಗ್ ಶಾಕ್ ನೀಡಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ.
ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷ ಅಟ್ಟರ್ ಪ್ಲಾಪ್ ಆಗಿತ್ತು. ಅದೇ ರೀತಿ ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲೂ ಪವನ್ ಕಲ್ಯಾಣ್ ಪಾರ್ಟಿ ಮಕಾಡೆ ಮಲಗಿದೆ. ಹೀಗಾಗಿ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಆ ಪಕ್ಷಕ್ಕಿಂತ ನಮಗೆ ನಷ್ಟವಾಗಿದೆ ಎಂಬುದನ್ನು ಅರಿತುಕೊಂಡಿರುವ ಬಿಜೆಪಿ ನಾಯಕರು ಈ ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದಾರೆ.
ಎಂಪಿ ಚುನಾವಣೆಯಲ್ಲಿ ತೆಲಂಗಾಣ ಬಿಜೆಪಿ ಏಕಾಂಗಿ ಸ್ಪರ್ಧೆ
ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಏಕಾಂಗಿಯಾಗಿಯೇ ಸ್ಪರ್ಧೆ ಮಾಡಲು ಕೇಸರಿ ನಾಯಕರು ನಿರ್ಧಾರ ಕೈಗೊಂಡಿದ್ದಾರೆ. ಈ ವಿಷಯವನ್ನು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವರೂ ಆಗಿರುವ ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ಕಿಶನ್ ರೆಡ್ಡಿ, 2024ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿನ ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಆರ್‌ಎಸ್ ಜೊತೆಗೂಡಿ ಬಿಜೆಪಿ ಸ್ಪರ್ಧೆ ಮಾಡುತ್ತೆ ಎಂಬ ಮಾತುಗಳು ಕೇಳಿಬಂದಿವೆ. ಇದರ ಬಗ್ಗೆಯೂ ಸಚಿವರು ಮಾತನಾಡಿದ್ದು, ಕಾಂಗ್ರೆಸ್, ಬಿಆರ್‌ಎಸ್ ಪಕ್ಷಗಳು ಬಿಜೆಪಿ ಸಮಾನ ಎದುರಾಳಿಗಳು ಎಂದು ಭಾವಿಸುತ್ತದೆ. ಸಂಸತ್ ಪೈಪೋಟಿಯಲ್ಲಿ ಭಾರತೀಯ ಜನತಾ ಪಾರ್ಟಿ ತೆಲಂಗಾಣದಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತದೆ. ಆ ಎರಡು ಪಕ್ಷಗಳಿಗಿಂತ ಬಿಜೆಪಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ತೆಲಂಗಾಣದಲ್ಲಿ ಪವನ್ ಜೊತೆ ಸೇರಿ ಕೈಸುಟ್ಟುಕೊಂಡಿತೇ ಬಿಜೆಪಿ?
ಎನ್‌ಡಿಎ ಜೊತೆ ಕೈಜೋಡಿಸಿದ್ದಕ್ಕೆ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಜನಸೇನಾ ಪಕ್ಷಕ್ಕೆ ಬಿಜೆಪಿ 8 ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಪವನ್ ಕಲ್ಯಾಣ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವಂತ ಜನಪ್ರಿಯ ನಾಯಕರು. ಹೀಗಾಗಿ ಅವರ ನೇಮು ಫೇಮು ರಾಜಕೀಯವಾಗಿ ನಮಗೆ ಲಾಭವಾಗಬಹುದೆಂದು ಬಿಜೆಪಿ ಭಾವಿಸಿತ್ತು. ಆದರೆ ಅವರ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸೋಲು ಕಂಡಿದೆ. ಇದು ರಾಜಕೀಯವಾಗಿ ಬಿಜೆಪಿಗೆ ನಷ್ಟವೇ ಹೊರತು ಲಾಭವಿಲ್ಲ ಎಂಬುದನ್ನು ತೆಲಂಗಾಣ ವಿಧಾನಸಭೆ ಚುನಾವಣಾ ಫಲಿತಾಂಶ ನಿರೂಪಿಸಿದೆ. ಕನಿಷ್ಠ ಪ್ರಸ್ತುತ ಸಚಿವರಾಗಿರುವ ಸೀತಕ್ಕ ಅವರಿಗೆ ಇರುವ ಇಮೇಜ್ ಕೂಡ ಪವನ್‌ಗೆ ರಾಜಕೀಯವಾಗಿ ಇಲ್ಲ ಎಂದು ಬಿಜೆಪಿ ಭಾವಿಸಿದೆ.
ಜನಸೇನಾಗೆ ಒಂದು ಸಿದ್ಧಾಂತ, ವಿಧಾನ ಇಲ್ಲ, ಪಕ್ಷದ ನಾಯಕನಿಗೆ ರಾಜಕೀಯ ತಂತ್ರಗಾರಿಕೆಗಳು, ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಇಲ್ಲ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪವನ್ ಅವರೊಂದಿಗೆ ಮೈತ್ರಿ ಮಾಡಿಕೊಂಡರೆ ತೆಲಂಗಾಣದಲ್ಲಿ ಬಿಜೆಪಿಗೆ ಹಿನ್ನಡೆಯೇ ಹೆಚ್ಚು ಎಂದು ಆ ಪಕ್ಷದ ನಾಯಕರು ಹೇಳುತ್ತಿದ್ದಾರೆ.