ಶಬರಿಮಲೆ ಮಂಡಲಪೂಜೆ ವರ್ಚುವಲ್ ಕ್ಯೂ ಕೋಟಾಕ್ಕೆ ಮಿತಿ ಹೇರಿದ ತಿರುವಾಂಕೂರು ದೇವಸ್ವಂ ಬೋರ್ಡ್, ಮಕರ ಜ್ಯೋತಿ ಉತ್ಸವಕ್ಕೂ ಭಕ್ತರ ಸಂಖ್ಯೆಗೆ ಮಿತಿ
Dec 22, 2024 09:33 AM IST
ಶಬರಿಮಲೆ ಮಂಡಲಪೂಜೆ ವರ್ಚುವಲ್ ಕ್ಯೂ ಕೋಟಾಕ್ಕೆ ಮಿತಿ ಹೇರಿದ ತಿರುವಾಂಕೂರು ದೇವಸ್ವಂ ಬೋರ್ಡ್, ಮಕರ ಜ್ಯೋತಿ ಉತ್ಸವಕ್ಕೂ ಭಕ್ತರ ಸಂಖ್ಯೆಗೆ ಮಿತಿ ಹೇರುವುದಾಗಿ ತಿಳಿಸಿದೆ. (ಸಾಂಕೇತಿಕ ಚಿತ್ರ)
Sabarimala: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಂಡಲ ಪೂಜೆ ಉತ್ಸವಕ್ಕೆ ಸಿದ್ಧತೆ ನಡೆದಿದ್ದು, ಮಕರ ಜ್ಯೋತಿ ಉತ್ಸವಕ್ಕೂ ಆಡಳಿತ ಮಂಡಳಿ ಸಜ್ಜಾಗಿದೆ. ತನ್ನಿಮಿತ್ತವಾಗಿ ಶಬರಿಮಲೆ ಮಂಡಲಪೂಜೆ ವರ್ಚುವಲ್ ಕ್ಯೂ ಕೋಟಾಕ್ಕೆ ಮಿತಿ ಹೇರಿದ ತಿರುವಾಂಕೂರು ದೇವಸ್ವಂ ಬೋರ್ಡ್, ಮಕರ ಜ್ಯೋತಿ ಉತ್ಸವಕ್ಕೂ ಭಕ್ತರ ಸಂಖ್ಯೆಗೆ ಮಿತಿ ಹೇರುವುದಾಗಿ ಹೇಳಿದೆ. ಈ ಕುರಿತ 4 ಅಂಶಗಳು.
Sabarimala: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ಮಂಡಲ ಪೂಜಾ ಉತ್ಸವಕ್ಕೆ ಸಿದ್ಧತೆ ನಡೆದಿದೆ. ಮಂಡಲ ಪೂಜೆ ನವೆಂಬರ್ 15 ರಂದು ಶುರುವಾಗಿದ್ದು ಡಿಸೆಂಬರ್ 26 ರಂದು ಸಂಪನ್ನವಾಗಲಿದೆ. ಅದಾಗಿ ಡಿಸೆಂಬರ್ 30ರಂದು ಮಕರ ಜ್ಯೋತಿ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ಸನ್ನಿದಾನದ ಬಾಗಿಲು ತೆರೆಯಲಿದೆ. 2025ರ ಜನವರಿ 14ರಂದು ಮಕರ ಜ್ಯೋತಿ ಉತ್ಸವ ನಡೆಯಲಿದೆ. ಹೀಗಾಗಿ ಮಂಡಲ ಪೂಜೆ ಸಂದರ್ಭದ ಜನ ದಟ್ಟಣೆ ನಿರ್ವಹಿಸುವುದಕ್ಕಾಗಿ ಡಿಸೆಂಬರ್ 25 ಮತ್ತು 26 ರಂದು, ಮಕರ ಜ್ಯೋತಿ ಉತ್ಸವದ ಭಕ್ತ ದಟ್ಟಣೆ ನಿರ್ವಹಿಸುವುದಕ್ಕಾಗಿ 2025ರ ಜನವರಿ 12 ರಿಂದ 15ರ ತನಕ ದೈನಂದಿನ ವರ್ಚುವಲ್ ಕ್ಯೂ ಕಾಯ್ದಿರಿಸುವಿಕೆ ಮೇಲೆ ಮಿತಿ ಹೇರಲು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಧರಿಸಿದೆ.
ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಡಿಸೆಂಬರ್ 25, 26 ರಂದು ಮಂಡಲ ಪೂಜಾ ಉತ್ಸವ; ಸರದಿ ಕಾಯ್ದಿರಿಸುವಿಕೆ ಕುರಿತ 4 ಅಂಶಗಳು
ಶಬರಿಮಲೆಯಲ್ಲಿ ವಾರ್ಷಿಕ ಮಂಡಲ ಪೂಜೆ ಉತ್ಸವದ ಜನಸಂದಣಿ ನಿರ್ವಹಣಾ ಉಪಕ್ರಮಗಳ ಭಾಗವಾಗಿ ಡಿಸೆಂಬರ್ 25 ಮತ್ತು 26 ರಂದು ಇಲ್ಲಿನ ಅಯ್ಯಪ್ಪ ದೇವಸ್ಥಾನದಲ್ಲಿ ವರ್ಚುವಲ್ ಮತ್ತು ಸ್ಪಾಟ್ ಬುಕಿಂಗ್ ಅನ್ನು ನಿರ್ಬಂಧಿಸಲು ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಶನಿವಾರ ನಿರ್ಧರಿಸಿದೆ.
1) ಡಿಸೆಂಬರ್ 25 ಮತ್ತು 26 ರಂದು ಕ್ರಮವಾಗಿ 50,000 ಮತ್ತು 60,000 ಯಾತ್ರಿಕರ ಸಂಖ್ಯೆಯನ್ನು ಮಿತಿಗೊಳಿಸಲಾಗುತ್ತಿದೆ. ಈ ಎರಡೂ ದಿನಗಳಲ್ಲಿ ಸ್ಪಾಟ್ ಬುಕಿಂಗ್ ಅನ್ನು ತಲಾ 5,000 ಕ್ಕೆ ಸೀಮಿತಗೊಳಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಸ್ಪಷ್ಟಪಡಿಸಿದೆ.
2) ಡಿಸೆಂಬರ್ 26 ರಂದು ಅಯ್ಯಪ್ಪ ದೇವರ ಪವಿತ್ರ ತಂಗ ಅಂಗಿ (ರಾಜ ಪೋಷಾಕು, ಚಿನ್ನಾಭರಣ) ತೊಡಿಸಿ ಮಂಡಲ ಪೂಜೆ ಸಂಪನ್ನಗೊಂಡ ಬಳಿಕ ದೇವರ ಸನ್ನಿದಾನದ ಬಾಗಿಲು ಮುಚ್ಚಲಿದೆ. ಈ ಸಮಯದಲ್ಲಿ ಸನ್ನಿದಾನದಲ್ಲಿ 60,000 ಅಯ್ಯಪ್ಪ ಭಕ್ತರು ಮಾತ್ರವೇ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಲು ಅವಕಾಶ ಇರಲಿದೆ. ಉತ್ಸವದ ದಿನದ ಜನದಟ್ಟಣೆ ನಿರ್ವಹಿಸುವುದಕ್ಕಾಗಿ ಈ ಮಿತಿ ಹೇರಲಾಗಿದೆ ಎಂದು ಟಿಡಿಬಿ ಹೇಳಿದೆ.
ಶಬರಿಮಲೆಯಲ್ಲಿ ದಿನಕ್ಕೆ 80,000 ಭಕ್ತರಿಂದ ಅಯ್ಯಪ್ಪ ದರ್ಶನ
3) ಪ್ರಸಕ್ತ ವರ್ಷದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಮಂಡಲಪೂಜಾ ಉತ್ಸವದ ಅವಧಿಯಲ್ಲಿ ನಿತ್ಯವೂ 80,000ದಷ್ಟು ಭಕ್ತರು ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಎಂದು ಟಿಡಿಬಿ ಹೇಳಿದೆ.
4) ಪ್ರಸ್ತುತ, ವರ್ಚುವಲ್ ಕ್ಯೂ ಬುಕಿಂಗ್‌ಗಳ ಮಿತಿಯನ್ನು ದಿನಕ್ಕೆ 70,000 ಯಾತ್ರಿಗಳಿಗೆ ನಿಗದಿಪಡಿಸಲಾಗಿದೆ. ಹೆಚ್ಚುವರಿಯಾಗಿ, ಸ್ಪಾಟ್ ಬುಕಿಂಗ್ ವ್ಯವಸ್ಥೆಯ ಮೂಲಕ 10,000 ಭಕ್ತರಿಗೆ ದರ್ಶನಕ್ಕಾಗಿ ಸ್ಲಾಟ್‌ಗಳನ್ನು ಕಾಯ್ದಿರಿಸಲು ಅನುಮತಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಮನೋರಮಾ ನ್ಯೂಸ್ ವರದಿ ಪ್ರಕಾರ, ಡಿಸೆಂಬರ್ 30 ರಂದು ಮಕರವಿಳಕ್ಕು ಉತ್ಸವಕ್ಕಾಗಿ ದೇವಾಲಯವು ಮತ್ತೆ ತೆರೆಯಲಿದೆ. ಈ ಅವಧಿಯಲ್ಲಿ ಜನಸಂದಣಿಯನ್ನು ನಿರ್ವಹಿಸಲು, ದೇವಸ್ವಂ ಬೋರ್ಡ್ ಜನವರಿ 12 ರಿಂದ 14, 2025 ರವರೆಗೆ ಹೆಚ್ಚುವರಿ ನಿರ್ಬಂಧಗಳನ್ನು ಹೇರುವುದಾಗಿ ಹೇಳಿದೆ. ಜನವರಿ 12 ರಂದು ಗರಿಷ್ಠ 60,000 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಜನವರಿ 13 ಮತ್ತು 14 ರಂದು ಕ್ರಮವಾಗಿ 50,000 ಮತ್ತು 40,000 ಯಾತ್ರಿಗಳಿಗೆ ಮಾತ್ರವೇ ಅಯ್ಯಪ್ಪ ಸನ್ನಿದಾನದಲ್ಲಿ ಇರಲು ಅನುಮತಿ ನೀಡಲಾಗುತ್ತದೆ. ಜನವರಿ 14 ರಂದು ನಡೆಯುವ ಮಕರ ಜ್ಯೋತಿಯನ್ನು ವೀಕ್ಷಿಸಲು ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಮಕರವಿಳಕ್ಕು ಉತ್ಸವದ ಹಿನ್ನೆಲೆಯಲ್ಲಿ ದೇಗುಲಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಶುಕ್ರವಾರ, 96,853 ಜನರು ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಿದ್ದು, ಇದರಲ್ಲಿ 22,203 ಜನರು ಸ್ಪಾಟ್ ಬುಕಿಂಗ್ ಸೌಲಭ್ಯವನ್ನು ಬಳಸಿದ್ದರೆ, 70,000 ಜನರು ವರ್ಚುವಲ್ ಸರದಿಯಲ್ಲಿ ದರ್ಶನಕ್ಕಾಗಿ ಕಾಯ್ದಿರಿಸಿದ್ದರು ಎಂದು ವರದಿ ಹೇಳಿದೆ.