logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಯೋ Vs ಏರ್‌ಟೆಲ್: ಅನಿಯಮಿತ ಕರೆ, ಇಂಟರ್ನೆಟ್ ಜೊತೆಗೆ ಒಟಿಟಿ ಚಂದಾದಾರಿಕೆ; ಬೆಸ್ಟ್ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಯಾವುದು?

ಜಿಯೋ vs ಏರ್‌ಟೆಲ್: ಅನಿಯಮಿತ ಕರೆ, ಇಂಟರ್ನೆಟ್ ಜೊತೆಗೆ ಒಟಿಟಿ ಚಂದಾದಾರಿಕೆ; ಬೆಸ್ಟ್ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಯಾವುದು?

Jayaraj HT Kannada

Jun 18, 2024 12:25 PM IST

google News

ಜಿಯೋ vs ಏರ್‌ಟೆಲ್: ಅನಿಯಮಿತ ಕರೆ, ಇಂಟರ್ನೆಟ್ ಜೊತೆಗೆ ಒಟಿಟಿ ಚಂದಾದಾರಿಕೆ

    • Jio vs Airtel: ಜಿಯೋ ಮತ್ತು ಏರ್‌ಟೆಲ್‌ ಸಂಸ್ಥೆಗಳು ಬಳಕೆದಾರರ ಅಗತ್ಯಗಳಿಗೆ ಅನುಗುಣವಾಗಿ ವಾರ್ಷಿಕ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ. ಇವುಗಳಲ್ಲಿ ಕಾಲ್‌, ಮೆಸೇಜ್‌ ಜೊತೆಗೆ ಅನ್‌ಲಿಮಿಟೆಡ್ ಇಂಟರ್ನೆಟ್ ಹಾಗೂ ವ್ಯಾಪಕವಾದ ಒಟಿಟಿ ಚಂದಾದಾರಿಕೆ ಅವಕಾಶಗಳೂ ಇವೆ.
ಜಿಯೋ vs ಏರ್‌ಟೆಲ್: ಅನಿಯಮಿತ ಕರೆ, ಇಂಟರ್ನೆಟ್ ಜೊತೆಗೆ ಒಟಿಟಿ ಚಂದಾದಾರಿಕೆ
ಜಿಯೋ vs ಏರ್‌ಟೆಲ್: ಅನಿಯಮಿತ ಕರೆ, ಇಂಟರ್ನೆಟ್ ಜೊತೆಗೆ ಒಟಿಟಿ ಚಂದಾದಾರಿಕೆ

ಭಾರತದ ಪ್ರಮುಖ ಮೊಬೈಲ್ ಆಪರೇಟರ್‌ಗಳಲ್ಲಿ ಜಿಯೋ ಮತ್ತು ಏರ್‌ಟೆಲ್‌ಗೆ ಅಗ್ರಪಟ್ಟ. ವಿವಿಧ ಆಫರ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುವ ಪ್ರಯತ್ನವನ್ನು ಈ ಎರಡು ದೈತ್ಯ ಕಂಪನಿಗಳು ಮಾಡುತ್ತಿರುತ್ತವೆ. ಗ್ರಾಹಕರಿಗೆ ಅವರ ಅಗತ್ಯಕ್ಕನುಗುಣವಾಗಿ ವ್ಯಾಪಕ ಶ್ರೇಣಿಯ ಮೊಬೈಲ್ ಪ್ರಿಪೇಯ್ಡ್ ಯೋಜನೆಗಳನ್ನು ಇವು ನೀಡುತ್ತವೆ. ಡೇಟಾ ಬೂಸ್ಟರ್‌ ಪ್ಲಾನ್‌ ಸೇರಿದಂತೆ, ದೀರ್ಘಾವಧಿಯ ರೀಚಾರ್ಜ್‌ ಆಯ್ಕೆಗಳು ಲಭ್ಯವಿದೆ. ವರ್ಷಕ್ಕೆ ಒಂದು ಬಾರಿ ರೀಚಾರ್ಜ್‌ ಮಾಡುವುದರಿಂದ ವರ್ಷಪೂರ್ತಿ ಪ್ರಯೋಜನ ಪಡೆಯಬಹುದು. ಈ ಎರಡೂ ಆಪರೇಟರ್‌ಗಳ ಕಡೆಯಿಂದಲೂ ವಾರ್ಷಿಕ ಪ್ಲಾನ್‌ಗಳಲ್ಲಿ ಅನಿಯಮಿತ ಇಂಟರ್ನೆಟ್, ಹಲವು ಒಟಿಟಿ ಪ್ರಯೋಜನಗಳು ಮತ್ತು ಹೆಚ್ಚುವರಿ ಪ್ರಯೋಜನಗಳು ಗ್ರಾಹಕರಿಗೆ ಸಿಗುತ್ತವೆ. ಹಾಗಿದ್ದರೆ, ಏರ್‌ಟೆಲ್‌ ಮತ್ತು ಜಿಯೋ ಕೊಡಮಾಡುವ ವಾರ್ಷಿಕ್‌ ರೀಚಾರ್ಜ್‌ ಪ್ಯಾಕ್‌ಗಳ ವೈಶಿಷ್ಟ್ಯ ತಿಳಿಯೋಣ.

ಏರ್‌ಟೆಲ್ ತನ್ನ ವಾರ್ಷಿಕ ರೀಚಾರ್ಜ್ ಪ್ರಿಪೇಯ್ಡ್ ಯೋಜನೆಗಳಲ್ಲಿ 3 ಯೋಜನೆಗಳನ್ನು ನೀಡುತ್ತದೆ.

  • ಪ್ಲಾನ್ 1, 3359 ರೂಪಾಯಿ ರೀಚಾರ್ಜ್

ಈ ಪ್ಲಾನ್ ಹೆಚ್ಚು ಡೇಟಾ ಆಯ್ಕೆಯಾಗಿದ್ದು, ದಿನಕ್ಕೆ 2.5 GB ಡೇಟಾವನ್ನು ಒದಗಿಸುತ್ತದೆ. ಅಂದರೆ ವರ್ಷಕ್ಕೆ 912.5 GB ಡಾಟಾ ನಿಮ್ಮದಾಗುತ್ತದೆ. ಭಾರತದಲ್ಲಿನ ಯಾವುದೇ ನೆಟ್‌ವರ್ಕ್‌ಗೆ ಕರೆಗಳು (ಸ್ಥಳೀಯ, STD ಮತ್ತು ರೋಮಿಂಗ್) ಅನಿಯಮಿತವಾಗಿರುತ್ತವೆ. ಇದೇ ವೇಳೆ ದಿನಕ್ಕೆ 100 ಎಸ್‌ಎಂಎಸ್‌ ಉಚಿತವಾಗಿದೆ. ಡೇಟಾ ಹೊರತಾಗಿ, ಈ ಯೋಜನೆಯಲ್ಲಿ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್‌ ಅಪ್ಲಿಕೇಶನ್‌ಗೆ ಒಂದು ವರ್ಷದ ಉಚಿತ ಚಂದಾದಾರಿಕೆ ಕೂಡಾ ನಿಮ್ಮದಾಗುತ್ತದೆ. ಹೆಚ್ಚುವರಿಯಾಗಿ, ಯೋಜನೆಯಲ್ಲಿ ಮೂರು ತಿಂಗಳವರೆಗೆ ಅಪೊಲೊ 24|7 ಸರ್ಕಲ್‌, ವಿಂಕ್‌ ಮ್ಯೂಸಿಕ್‌ ಚಂದಾದಾರಿಕೆ ಕೂಡಾ ಸಿಗುತ್ತದೆ.

  • ಪ್ಲಾನ್ 2, 2999 ರೂಪಾಯಿ ರೀಚಾರ್ಜ್

ಈ ಯೋಜನೆಯಲ್ಲಿ ದಿನಕ್ಕೆ 2 GB ಡೇಟಾ (ವರ್ಷಕ್ಕೆ ಒಟ್ಟು 730 GB) ಸಿಗುತ್ತದೆ. ಮೊದಲ ಯೋಜನೆಯಂತೆಯೇ, ಇಲ್ಲೂ ಭಾರತದ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಉಚಿತವಾಗಿದೆ. ಇದರೊಂದಿಗೆ ಮೂರು ತಿಂಗಳ ಅಪೊಲೊ 24|7 ಸರ್ಕಲ್ ಸದಸ್ಯತ್ವ ಸಿಗುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು ಉಚಿತ ಹೆಲೋಟ್ಯೂನ್‌ ಪಡೆಯಲು ವಿಂಕ್‌ ಮ್ಯೂಸಿಕ್ ಚಂದಾದಾರಿಕೆ ಪಡೆಯಬಹುದು.

  • ಪ್ಲಾನ್ 3, 1799 ರೂಪಾಯಿ ರೀಚಾರ್ಜ್

ಈ ಯೋಜನೆಯಲ್ಲಿ ಏರ್‌ಟೆಲ್ ಇಡೀ ವರ್ಷಕ್ಕೆ 24 GB ಡೇಟಾ ಮಾತ್ರ ನೀಡುತ್ತದೆ. ಅಂದರೆ ದಿನಕ್ಕೆ ಸರಿಸುಮಾರು 66.7 MB ಮಾತ್ರ. ಇದರಲ್ಲಿ ಇತರ ಯೋಜನೆಗಳಂತೆ, ಕರೆಗಳು ಅನಿಯಮಿತವಾಗಿರುತ್ತವೆ. ಆದರೆ, ವರ್ಷಕ್ಕೆ 3600 ಎಸ್‌ಎಂಎಸ್‌ ಉಚಿತವಾಗಿದೆ. ದೈನಂದಿನ ಡೇಟಾ ಕಡಿಮೆಯಾದರೂ. ಹೆಚ್ಚಿನ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಪೊಲೊ 24|7 ಸರ್ಕಲ್‌ಗೆ ಮೂರು ತಿಂಗಳ ಉಚಿತ ಪ್ರವೇಶ, ಉಚಿತ ಹೆಲೋಟ್ಯೂನ್‌ಗೆ ವಿಂಕ್‌ ಮ್ಯೂಸಿಕ್‌ ಸಬ್‌ಸ್ಕ್ರಿಪ್ಷನ್‌ ಸಿಗುತ್ತದೆ.

ಜಿಯೋ ಸಂಸ್ಥೆಯು ಬಳಕೆದಾರರ ವಿವಿಧ ಅಗತ್ಯಗಳಿಗೆ ಅನುಗುಣವಾಗಿ 3 ವಾರ್ಷಿಕ ಯೋಜನೆಗಳನ್ನು ನೀಡುತ್ತದೆ.

  • ಪ್ಲಾನ್ 1 - 2999 ರೂಪಾಯಿ

ಭಾರಿ ಪ್ರಮಾಣದ ಡೇಟಾ ಬೇಕು ಎನ್ನುವ ಬಳಕೆದಾರರಿಗೆ ಈ ಯೋಜನೆ ಸೂಕ್ತ. ವರ್ಷಕ್ಕೆ ಒಟ್ಟು 912.5 GB ಡೇಟಾವನ್ನು ಪಡೆಯಬಹುದು. ಅಂದರೆ ಒಂದು ದಿನಕ್ಕೆ 2.5 GB ಹೈಸ್ಪೀಡ್‌ ಇಂಟರ್ನೆಟ್‌ ಪಡೆಯಬಹುದು. ಇದರೊಂದಿಗೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಉಚಿತವಾಗಿದೆ. ಅಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ಗೆ ಪೂರಕ ಚಂದಾದಾರಿಕೆ ಕೂಡಾ ಸಿಗುತ್ತದೆ. ಈ ಯೋಜನೆಯಲ್ಲಿ, ದೈನಂದಿನ ಹೆಚ್ಚಿನ ವೇಗದ ಡೇಟಾ ಬಳಸಿದ ನಂತರ, ಇಂಟರ್ನೆಟ್ ವೇಗವು 64 Kbpsಗೆ ಕುಗ್ಗುತ್ತದೆ. ಹೆಚ್ಚುವರಿಯಾಗಿ, ಅರ್ಹ ಚಂದಾದಾರರು ಮಾತ್ರವೇ ಈ ಯೋಜನೆಯೊಂದಿಗೆ ಅನಿಯಮಿತ 5G ಡೇಟಾ ಸೇವೆಯನ್ನು ಆನಂದಿಸಬಹುದು.

  • ಪ್ಲಾನ್ 2, 3333 ರೂ

ಈ ರೀಚಾರ್ಜ್‌ ಪ್ಲಾನ್‌ನಲ್ಲಿಯೂ, ಮೊದಲ ಪ್ಯಾಕ್‌ನಂತೆ 912.5 ಜಿಬಿ ಡಾಟಾ ಸಿಗುತ್ತದೆ. ಅಂದರೆ ಪ್ರತಿದಿನ 2.5 GB ದೈನಂದಿನ ಹೈಸ್ಪೀಡ್ ಡೇಟಾ ನಿಮ್ಮದಾಗುತದೆ. ಇದೇ ವೇಳೆ ಅನಿಯಮಿತ ಕರೆ, ದಿನಕ್ಕೆ 100 SMS ಉಚಿತ. ಈ ಪ್ಯಾಕ್‌ನಲ್ಲಿ ನೀವು ಫ್ಯಾನ್‌ಕೋಡ್‌ಗೆ ಚಂದಾದಾರಿಕೆ ಪಡೆಯಬಹುದು. ಇದೇ ವೇಳೆ ಮೇಲಿನ ಪ್ಯಾಕ್‌ನಂತೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ ಕೂಡಾ ಸಿಗುತ್ತದೆ.

  • ಪ್ಲಾನ್ 3, 3227 ರೂ ರೀಚಾರ್ಜ್

ಇದರಲ್ಲಿ ದೈನಂದಿನ ಹೈಸ್ಪೀಡ್‌ ಡಾಟಾ ಮಿತಿ 2 GB ಮಾತ್ರ. ಅಂದರೆ ವರ್ಷಕ್ಕೆ ಒಟ್ಟು 730 GB ಡೇಟಾ ಸಿಗುತ್ತದೆ. ಇದರೊಂದಿಗೆ ಅನಿಯಮಿತ ಕರೆಗಳು ಮತ್ತು 100 ಸಂದೇಶ ಉಚಿತವಾಗಿದೆ. ಈ ಯೋಜನೆಯ ಪ್ರಮುಖ ಪ್ರಯೋಜನವೆಂದರೆ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಗೆ 1 ವರ್ಷದ ಚಂದಾದಾರಿಕೆ. ಇದರಲ್ಲಿ ಬೇಕಾದ ಚಲನಚಿತ್ರಗಳನ್ನು ವೀಕ್ಷಿಸಬಹುದು. ಹೆಚ್ಚುವರಿಯಾಗಿ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ ಚಂದಾದಾರಿಕೆಗಳನ್ನು ಪಡೆಯುತ್ತೀರಿ.‌

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ