logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2024: ಪ್ರಾಕೃತಿಕ ಹಾನಿ, ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಸಿಕ್ಕಿಂಗೆ ವಿಶೇಷ ಪ್ಯಾಕೇಜ್‌, ಕರ್ನಾಟಕಕ್ಕೆ ಇಲ್ಲ

Budget 2024: ಪ್ರಾಕೃತಿಕ ಹಾನಿ, ಉತ್ತರಾಖಂಡ್‌, ಹಿಮಾಚಲ ಪ್ರದೇಶ, ಸಿಕ್ಕಿಂಗೆ ವಿಶೇಷ ಪ್ಯಾಕೇಜ್‌, ಕರ್ನಾಟಕಕ್ಕೆ ಇಲ್ಲ

Umesha Bhatta P H HT Kannada

Jul 23, 2024 12:38 PM IST

google News

ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌

  •  Calamity in Budget ಭಾರತದಲ್ಲಿ ಹಲವಾರು ರಾಜ್ಯಗಳು ಪ್ರವಾಹ, ಪ್ರಾಕೃತಿಕ ವಿಕೋಪದಿಂದ ಹಾನಿಗೆ ಒಳಗಾಗಿದ್ದು, ಹಿಮಾಚಲಪ್ರದೇಶ, ಉತ್ತರಾಖಂಡ್‌, ಸಿಕ್ಕಿಂ ರಾಜ್ಯಗಳಿಗೆ ವಿಶೇಷ ಅನುದಾನ  ಘೋಷಣೆಯನ್ನು ಕೇಂದ್ರ ಬಜೆಟ್‌ನಲ್ಲಿ ( Union budget 2024-25) ಘೋಷಿಸಲಾಗಿದೆ.

ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌
ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌

ದೆಹಲಿ: ಕೆಲ ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಭಾರೀ ಹಾನಿಗೆ ಒಳಗಾಗಿರುವ ಭಾರತದ ಮೂರು ರಾಜ್ಯಗಳಿಗೆ ವಿಶೇಷ ಅನುದಾನ ನೀಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ಧಾರೆ. ಮಂಗಳವಾರ ಮಂಡಿಸಿದ 2024-25ನೇ ಸಾಲಿನ ಆಯವ್ಯಯದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಸಿಕ್ಕಿಂ ರಾಜ್ಯಗಳು ಪ್ರಾಕೃತಿಕ ಹಾನಿಯಿಂದ ಒಳಗಾಗಿರುವ ಕಾರಣಕ್ಕೆ ವಿಶೇಷ ನೆರವು ಪಡೆಯಲಿವೆ ಎಂದು ಹೇಳಿದರು. ಆದರೆ ಮೊತ್ತದ ಸ್ವರೂಪ ಹೇಗಿರಲಿದೆ. ಯಾವ ರೀತಿಯ ಸಹಕಾರ ಎನ್ನುವುದನ್ನು ಅವರು ಉಲ್ಲೇಖಿಸಿಲ್ಲ. ಆದರೆ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ನಿಧಿಯಡಿ ವಿಶೇಷ ಅನುದಾನ ಸಿಗುವ ಸಾಧ್ಯತೆಯಿದೆ. ಆದರೆ ಪ್ರಾಕೃತಿಕ ಸಂಕಷ್ಟದಿಂದ ಸಾಕಷ್ಟು ಅನಾಹುತ ಅನುಭವಿಸಿರುವ ಕರ್ನಾಟಕದ ಹೆಸರನ್ನು ನಿರ್ಮಲಾ ಸೀತಾರಾಮನ್‌ ಉಲ್ಲೇಖಿಸಲಿಲ್ಲ. ಇದಲ್ಲದೇ ಹಲವು ರಾಜ್ಯಗಳೂ ತೊಂದರೆಗೆ ಒಳಗಾದರೂ ಮೂರು ರಾಜ್ಯದ ಪ್ರಸ್ತಾವನ್ನು ಮಾತ್ರ ಅವರು ಮಾಡಿದರು.

ಲೋಕಸಭೆಯಲ್ಲಿ ಬಜೆಟ್‌ ಮಂಡಿಸಿದ ನಿರ್ಮಲಾ ಹಲವಾರು ವಿಷಯ ಮಂಡಿಸಿದರು. ಇದರಲ್ಲಿ ಪ್ರಾಕೃತಿಕ ಹಾನಿಯ ವಿಚಾರ ಪ್ರಸ್ತಾಪಿಸಿದರು. ಭಾರತದಲ್ಲಿ ಪ್ರಾಕೃತಿಕ ಹಾನಿಯಿಂದ ತೊಂದರೆಯಾಗಿದೆ. ಅದರಲ್ಲೂ ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಸಿಕ್ಕಿಂ ರಾಜ್ಯಗಳು ಹೆಚ್ಚಿನ ಹಾನಿ ಅನುಭವಿಸಿವೆ. ಈ ರಾಜ್ಯಗಳ ಪ್ರಾಕೃತಿಕ ಹಾನಿಯಿಂದ ಆಗಿರುವ ಹಾನಿ ಸರಿಪಡಿಸಲು ಕೇಂದ್ರ ಸರ್ಕಾರವು ವಿಶೇಷ ನೆರವು ನೀಡಲಿದೆ ಎಂದು ನಿರ್ಮಲಾ ಪ್ರಕಟಿಸಿದರು.

ಬಿಹಾರವು ಆಗಾಗ್ಗೆ ಪ್ರವಾಹದಿಂದ ಬಾಧಿತವಾಗಿದೆ ಎಂದು ಒಪ್ಪಿಕೊಂಡ ಹಣಕಾಸು ಸಚಿವರು ನೇಪಾಳದಲ್ಲಿ ಪ್ರವಾಹ ನಿಯಂತ್ರಣ ರಚನೆಗಳನ್ನು ನಿರ್ಮಿಸುವ ಯೋಜನೆಗಳಲ್ಲಿ ಪ್ರಗತಿಯ ಕೊರತೆಯನ್ನು ಉಲ್ಲೇಖಿಸಿದರು. ಸರ್ಕಾರವು ಅಂದಾಜು 11,500 ಕೋಟಿ ಆರ್ಥಿಕ ಬೆಂಬಲವನ್ನು ಇದಕ್ಕಾಗಿ ನಿಗದಿಪಡಿಸುತ್ತದೆ. ವಾರ್ಷಿಕ ಪ್ರವಾಹವನ್ನು ಎದುರಿಸುತ್ತಿರುವ ಅಸ್ಸಾಂ, ಪ್ರವಾಹ ನಿರ್ವಹಣೆ ಮತ್ತು ಸಂಬಂಧಿತ ಯೋಜನೆಗಳಿಗೆ ಸಹಾಯವನ್ನು ಪಡೆಯಲಿವೆ. ವ್ಯಾಪಕ ಪ್ರವಾಹ ಹಾನಿಯನ್ನು ಅನುಭವಿಸಿರುವ ಹಿಮಾಚಲ ಪ್ರದೇಶವು ಬಹುಪಕ್ಷೀಯ ನೆರವಿನ ಮೂಲಕ ಪುನರ್ನಿರ್ಮಾಣಕ್ಕೆ ನೆರವನ್ನು ಪಡೆಯುತ್ತದೆ. ಹೆಚ್ಚುವರಿಯಾಗಿ, ಭೂಕುಸಿತ ಮತ್ತು ಮೋಡ ಸ್ಫೋಟಗಳಿಂದ ಗಮನಾರ್ಹ ಹಾನಿಯನ್ನು ಅನುಭವಿಸಿರುವ ಉತ್ತರಾಖಂಡಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದರು.

ಹಿಮಾಚಲ ಪ್ರದೇಶ ರಾಜ್ಯದವರೇ ಆದ ಕೇಂದ್ರ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ರಾಜ್ಯದ ಘೋಷಣೆ ಮಾಡಿದಾಗ ಮೇಜು ಕುಟ್ಟಿ ಸ್ವಾಗತಿಸಿದರು. ಅದೇ ರೀತಿ ಉತ್ತರಾಖಂಡ ಹಾಗೂ ಸಿಕ್ಕಿಂ ರಾಜ್ಯದ ವಿಚಾರವನ್ನು ನಿರ್ಮಲಾ ಅವರು ಹೇಳಿದಾಗ ಆಗಲೂ ಸ್ವಾಗತದ ದನಿ ಬಿಜೆಪಿ ಹಾಗೂ ಆಡಳಿತ ಪಕ್ಷದ ಕಡೆಯಿಂದ ಕೇಳಿ ಬಂದಿತು. ಆದರೆ ಇತರೆ ರಾಜ್ಯಗಳ ಸದಸ್ಯರು ತಾರತಮ್ಯ ಮಾಡಲಾಗಿದೆ ಎನ್ನುವ ಘೋಷಣೆ ಕೂಗಿದ್ದು ಕೇಳಿತು.

ವಿಶೇಷವಾಗಿ ಕರ್ನಾಟಕದಲ್ಲೂ ಭಾರೀ ಹಾನಿ ಹಿಂದಿನ ವರ್ಷದಲ್ಲಿ ಆಗಿದೆ. ರಾಜ್ಯ ಸರ್ಕಾರವೂ ಈ ನಿಟ್ಟಿನಲ್ಲಿ ಬೇಡಿಕೆಗಳನ್ನು ಸಲ್ಲಿಸಿದರೂ ಪರಿಹಾರ ನಿರೀಕ್ಷೆಯಷ್ಟು ಬಂದಿಲ್ಲ ಎನ್ನುವ ಅಭಿಪ್ರಾಯವಿದೆ. ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್‌ ಕರ್ನಾಟಕದ ರಾಜ್ಯದ ಹೆಸರು ಪ್ರಕಟಿಸುವ ನಿರೀಕ್ಷೆ ಇತ್ತು. ಅದು ಆಗಲಿಲ್ಲ. ಅಲ್ಲದೇ ದಕ್ಷಿಣ ಭಾರತದ ಯಾವುದೇ ರಾಜ್ಯವನ್ನೂ ಪ್ರಾಕೃತಿಕ ಹಾನಿ ವಿಚಾರದಲ್ಲಿ ಉಲ್ಲೇಖಿಸಲಿಲ್ಲ. ವಿರೋಧ ಪಕ್ಷಗಳ ವಲಯದಿಂದ ಇದಕ್ಕೆ ವಿರೋಧದ ದನಿ ಕೇಳಿ ಬಂದಿತು. ಬಿಜೆಪಿ ಆಡಳಿತ ಇರುವ ರಾಜ್ಯಗಳಿಗೆ ಮಾತ್ರ ಅನುದಾನ ನೀಡಲಾಗಿದೆ ಎನ್ನುವ ಅಭಿಪ್ರಾಯವೂ ಕೇಳಿ ಬಂದಿತು.

ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಕಳೆದ ವರ್ಷ ಹಾಗೂ ಹಿಂದಿನ ವರ್ಷಗಳಲ್ಲಿ ಮಳೆಯಿಂದ ಭಾರೀ ಹಾನಿಗಳಾಗಿವೆ. ಜನರಿಗೆ ತೊಂದರೆಯಾಗಿರುವ ಜತೆಗೆ ಸಾಕಷ್ಟು ಆಸ್ತಿ ಪಾಸ್ತಿಯೂ ನಾಶವಾಗಿದೆ. ರಸ್ತೆ, ಸೇತುವೆ ಸಹಿತ ಹಲವು ರೀತಿಯಲ್ಲಿ ತೊಂದರೆಯಾಗಿವೆ. ಇದಕ್ಕಾಗಿ ವಿಶೇಷ ಅನುದಾನ ನೀಡುವಂತೆ ಈ ರಾಜ್ಯಗಳಿಂದಲೂ ಬೇಡಿಕೆಯಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ