ಕೇಂದ್ರ ಬಜೆಟ್ 2024; ಈ ವರ್ಷದಿಂದ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆ: ತೆರಿಗೆ ಪಾವತಿದಾರರು ಗಮನಿಸಲೇಬೇಕಾದ 10 ಅಂಶಗಳಿವು
Jul 23, 2024 04:37 PM IST
ಕೇಂದ್ರ ಬಜೆಟ್ 2024 ಮಂಡನೆಯಾಗಿದ್ದು, ಇದರಲ್ಲಿ ಘೋಷಣೆಯಾದ ಪ್ರಕಾರ, ಈ ವರ್ಷದಿಂದ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆಗಳಾಗಲಿವೆ. ಇದರಲ್ಲಿ, ತೆರಿಗೆ ಪಾವತಿದಾರರು ಗಮನಿಸಲೇಬೇಕಾದ 10 ಅಂಶಗಳಿವು.
ಕೇಂದ್ರ ಬಜೆಟ್ 2024; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಿದ್ದು, ತೆರಿಗೆಗೆ ಸಂಬಂಧಿಸಿ ಹಲವು ಮಹತ್ವದ ವಿಚಾರಗಳನ್ನು ಪ್ರಕಟಿಸಿದರು. ಹೀಗಾಗಿ, ಈ ವರ್ಷದಿಂದ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆ ಆಗಲಿದೆ. ಆದ್ದರಿಂದ ತೆರಿಗೆ ಪಾವತಿದಾರರು ಗಮನಿಸಲೇಬೇಕಾದ 10 ಅಂಶಗಳ ವಿವರ ಇಲ್ಲಿದೆ.
ನವದೆಹಲಿ: ಹೊಸ ತೆರಿಗೆ ವ್ಯವಸ್ಥೆಗೆ ಸೇರ್ಪಡೆಯಾದವರಿಗೆ ಪ್ರಾಮುಖ್ಯತೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಗಮನಸೆಳೆಯುವಂತಹ ವಿನಾಯಿತಿ, ಪರಿಹಾರ ಕ್ರಮವನ್ನು ಘೋಷಿಸಿದ್ದಾರೆ. ಲೋಕಸಭೆಯಲ್ಲಿ ಇಂದು (ಜುಲೈ 23) ಕೇಂದ್ರ ಬಜೆಟ್ 2024 25 ಅನ್ನು ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಆದಾಯ ತೆರಿಗೆಗೆ ಸಂಬಂಧಿಸಿ ಹಲವು ಬದಲಾವಣೆಗಳನ್ನು ಪ್ರಕಟಿಸಿದ್ದಾರೆ.
ಆದಾಯ ತೆರಿಗೆಗೆ ಸಂಬಂಧಿಸಿದ ಬದಲಾವಣೆಗಳು, ಪರಿಷ್ಕರಣೆಗಳು ದೇಶ ಇಡೀ ಜನಜೀವನದ ಮೇಲೆ ಪರಿಣಾಮ ಬೀರುವಂಥದ್ದು. ಈ ದಿನ ಮಂಡನೆಯಾಗಿರುವ ಕೇಂದ್ರ ಬಜೆಟ್ ಕೂಡಲೇ ಅನ್ವಯವಾಗಲಿದೆ. ಹೀಗಾಗಿ ಈ ವರ್ಷದಿಂದ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆಗಳಾಗಲಿವೆ. ತೆರಿಗೆ ಪಾವತಿದಾರರು ಗಮನಿಸಲೇಬೇಕಾದ 10 ಅಂಶಗಳಿವು.
ಕೇಂದ್ರ ಬಜೆಟ್ 2024; ತೆರಿಗೆಗೆ ಸಂಬಂಧಿಸಿದ 10 ಅಂಶಗಳು
1) ಮೂಲದಿಂದ ತೆರಿಗೆ ಕಡಿತ (ಟಿಡಿಎಸ್) ಡೀಫಾಲ್ಟ್‌ಗಳಿಗೆ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಇದಕ್ಕೆ ಸಂಬಂಧಿಸಿದ ಅಪರಾಧಗಳ ಸಂಯೋಜನೆಯನ್ನು ಸರಳಗೊಳಿಸುತ್ತದೆ. ಅಷ್ಟೇ ಅಲ್ಲ ಅದನ್ನು ತರ್ಕಬದ್ಧಗೊಳಿಸುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
2) ಮುಂದಿನ 6 ತಿಂಗಳ ಅವಧಿಯಲ್ಲಿ ಕಸ್ಟಮ್ಸ್ ಸುಂಕ ರಚನೆಯ ಸಮಗ್ರ ಪರಿಶೀಲನೆ ನಡೆಯಲಿದೆ. ಇ-ಕಾಮರ್ಸ್‌ನಲ್ಲಿ ಟಿಡಿಎಸ್ ದರವನ್ನು ಶೇಕಡ 0.1 ಕ್ಕೆ ಇಳಿಸಲಾಗುವುದು. ದತ್ತಿ ಸಂಸ್ಥೆಗಳಿಗೆ ಸಂಬಂಧಿಸಿದ ಎರಡು ತೆರಿಗೆ ವಿನಾಯಿತಿ ನಿಯಮಗಳು ಇನ್ನು ಒಂದೇ ಆಗಿರಲಿದೆ. ತೆರಿಗೆ ಪಾವತಿ ದಿನಾಂಕಕ್ಕೆ ಅನ್ವಯವಾಗುವಂತೆ ಟಿಡಿಎಸ್ ವಿಳಂಬವನ್ನು ಅಪರಾಧ ಎಂದು ಪರಿಗಣಿಸದಿರಲು ತೀರ್ಮಾನಿಸಲಾಗಿದೆ.
3) ಮೂರನೇ ಎರಡರಷ್ಟು ವ್ಯಕ್ತಿಗಳು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
4) ಹೊಸ ಆಡಳಿತವನ್ನು ಆಯ್ಕೆ ಮಾಡಿದವರಿಗೆ ಆದಾಯ ತೆರಿಗೆ ಪ್ರಮಾಣಿತ ಕಡಿತವನ್ನು ಸರ್ಕಾರ ಹೆಚ್ಚಿಸಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದರು. "ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರಿಗೆ, ಸಂಬಳದ ಉದ್ಯೋಗಿಗಳ ಪ್ರಮಾಣಿತ ಕಡಿತ (ಸ್ಟಾಂಡರ್ಡ್ ಡಿಡಕ್ಷನ್)ವನ್ನು 50,000 ರೂಪಾಯಿಯಿಂದ 75,000 ರೂಪಾಯಿಗೆ ಹೆಚ್ಚಿಸಲಾಗುವುದು" ಎಂದು ಅವರು ಹೇಳಿದರು.
5) ಹೊಸ ಆಡಳಿತವನ್ನು ಆಯ್ಕೆ ಮಾಡಿದವರಿಗೆ ಅನ್ವಯವಾಗುವಂತೆ, ತೆರಿಗೆ ಸ್ಲ್ಯಾಬ್‌ಗಳು ಪರಿಷ್ಕರಿಸಲ್ಪಟ್ಟಿವೆ. 3 ಲಕ್ಷ ರೂಪಾಯಿ - ತೆರಿಗೆ ಇಲ್ಲ. 7 ಲಕ್ಷ ರೂಪಾಯ 5%. 7 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ 10%. 10 ಲಕ್ಷ ರೂಪಾಯಿಯಿಂದ 12 ಲಕ್ಷ ರೂಪಾಯಿ 15 %. 12 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ 20 %/ 15 ಲಕ್ಷ ರೂಪಾಯಿ ಮೇಲ್ಪಟ್ಟು 30%.
6) ಹೊಸ ತೆರಿಗೆ ಪದ್ಧತಿಯಲ್ಲಿ ಸಂಬಳ ಪಡೆಯುವ ನೌಕರರು ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳಿಂದ ವಾರ್ಷಿಕವಾಗಿ 17,500 ರೂಪಾಯಿ ತೆರಿಗೆಯಲ್ಲಿ ಉಳಿಸುತ್ತಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
7) ಪಿಂಚಣಿದಾರರ ಕುಟುಂಬ ಪಿಂಚಣಿ ಮೇಲಿನ ಕಡಿತವನ್ನು 15,000 ರೂಪಾಯಿಯಿಂದ 25,000 ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಒಟ್ಟಾರೆಯಾಗಿ, 4 ಕೋಟಿ ವೇತನದಾರರು ಮತ್ತು ಪಿಂಚಣಿದಾರರು ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
8) ಎನ್‌ಪಿಎಸ್‌ಗೆ ಉದ್ಯೋಗದಾತರ ಕೊಡುಗೆಯ ಕಡಿತದ ಮಿತಿಯನ್ನು ಶೇಕಡಾ 10 ರಿಂದ 14 ಕ್ಕೆ ಏರಿಸಿದೆ. 2ರಷ್ಟು ಸಮೀಕರಣ ಲೆವಿಯನ್ನೂ ಹಿಂಪಡೆದಿದೆ.
9) ತೆರಿಗೆ ಮೇಲ್ಮನವಿ ಸಲ್ಲಿಸುವುದಕ್ಕೆ ಇರುವ ವಿತ್ತೀಯ ಮಿತಿಯನ್ನು ಐಟಿಎಟಿಗೆ 60 ಲಕ್ಷ ರೂಪಾಯಿ, ಹೈಕೋರ್ಟ್‌ಗಳಿಗೆ 2 ಕೋಟಿ ರೂಪಾಯಿ ಮತ್ತು ಸುಪ್ರೀಂ ಕೋರ್ಟ್‌ಗೆ 5 ಕೋಟಿ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
10) ಏಂಜೆಲ್ ತೆರಿಗೆಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ವಿತ್ತ ಸಚಿವರು ಬಜೆಟ್ ಭಾಷಣದಲ್ಲಿ ಘೋಷಿಸಿದರು. ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 40 ರಿಂದ 35 ಕ್ಕೆ ಇಳಿಸಲಾಗುವುದು ಎಂದು ಅವರು ಹೇಳಿದರು.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ತಾಜಾ ವಿದ್ಯಮಾನ ಮತ್ತು ಬಜೆಟ್ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)