Railway Budget 2024: ಬಜೆಟ್‌ನಲ್ಲಿ ರೈಲ್ವೆಗೆ ದಾಖಲೆಯ 2.62 ಲಕ್ಷ ಕೋಟಿ ಮೀಸಲು, ಹಿಂದಿನ ಅವಧಿಗಿಂತ 10 ಸಾವಿರ ಕೋಟಿ ರೂ. ಅಧಿಕ
Jul 24, 2024 02:13 PM IST
ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ.
- ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೂ ( Indian Railways) ದಾಖಲೆಯ ಮೊತ್ತವನ್ನು ನೀಡಲಾಗಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಮಾಡಲಾಗಿದೆ.
ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2024-25 ಸಾಲಿನ ಆಯವ್ಯಯದಲ್ಲಿ ರೈಲ್ವೆಗೆ ದಾಖಲೆಯ ಮೊತ್ತವನ್ನು( Railway Budget) ಹಂಚಿಕೆ ಮಾಡಲಾಗಿದೆ. ಅದೂ ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ದೊರೆತ ಮೊತ್ತದ ಪ್ರಮಾಣ 2.62 ಲಕ್ಷ ಕೋಟಿ ರೂ. ಇದು ಹಿಂದಿನ ಎಲ್ಲಾ ಅವಧಿಯ ಅತ್ಯಧಿಕ ಹಾಗೂ ದಾಖಲೆಯ ಮೊತ್ತ ಎಂದು ರೈಲ್ವೆ ಇಲಾಖೆ( Indian Railway) ಹೇಳಿಕೆ ಬಿಡುಗಡೆ ಮಾಡಿದೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 10 ಸಾವಿರ ಕೋಟಿ ರೂ. ಮೊತ್ತವನ್ನು ಏರಿಕೆ ಮಾಡಲಾಗಿದೆ. ಇದರಿಂದ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಯೋಜನೆಗಳನ್ನು ರೂಪಿಸಲು ಹಾಗೂ ಮುಂದಿನ ಪೀಳಿಗೆಗೂ ಸುರಕ್ಷಿತ ರೈಲ್ವೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಲಾಗಿದೆ. ಈ ಕುರಿತು ಕೇಂದ್ರ ರೈಲ್ವೆ, ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಮಂಗಳವಾರ ಸಂಜೆಯೇ ಹೇಳಿಕೆ ಬಿಡುಗಡೆ ಮಾಡಿದ್ದು, ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಆಯವ್ಯಯದ ವಿವರ, ರೈಲ್ವೆ ಯೋಜನೆಗಳನ್ನು ಬಿಡುಗಡೆ ಮಾಡುವರು.
2013-14ನೇ ಸಾಲಿನವರೆಗೂ ಇದ್ದ ರೈಲ್ವೆ ಆಯವ್ಯಯದ ಪ್ರಮಾಣ 28,174 ಕೋಟಿ ರೂ. ಹತ್ತು ವರ್ಷದಲ್ಲಿಯೇ ಇದು ಗಣನೀಯ ಏರಿಕೆ ಕಂಡಿದೆ. 2023-24ರಲ್ಲಿ 2,40,200 ಕೋಟಿ ರೂ.ಗಳಿತ್ತು. ಮೂರು ತಿಂಗಳ ಹಿಂದೆ ಮಂಡಿಸಿದ ಬಹೆಟ್‌ನಲ್ಲಿ2,52,200 ಕೋಟಿ ರೂ.ಗೆ ಏರಿಕೆ ಮಾಡಲಾಗಿತ್ತು. ಕಳೆದ ವರ್ಷ ರೈಲ್ವೆ ಆದಾಯದ ಪ್ರಮಾಣವೇ 2,56,093 ಕೋಟಿ ರೂ.ಗಳಷ್ಟಿತ್ತು. ಈ ಬಾರಿ ರೈಲ್ವೆಗೆ 2,62,200 ಕೋಟಿ ರೂ.ಗಳ ಅಂದಾಜು ಮೊತ್ತವನ್ನು ಮೀಸಲಿಡಲಾಗಿದೆ. ಇದರಲ್ಲಿ ಒಂದು ಲಕ್ಷ ಕೋಟಿ ರೂ. ಮೊತ್ತವನ್ನು ರೈಲ್ವೆ ಸುರಕ್ಷತೆಗೆ ಮೀಸಲಾಡುತ್ತದೆ. ಇದರಲ್ಲಿ ಸಿಗ್ನಲ್ ವ್ಯವಸ್ಥೆ, ಮಾರ್ಗಗಳ ಸುಧಾರಣೆ, ಕವಚ್ ಯೋಜನೆ, ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆಗಳು ಸೇರಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ರೂ. 2,62,200 ಕೋಟಿ ದಾಖಲೆ ಹಂಚಿಕೆ ಮಾಡಿದ್ದಾರೆ. ಇದಕ್ಕಾಗಿ ಇಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುವೆ. ರೈಲ್ವೆಯಲ್ಲಿ ಸುರಕ್ಷತಾ ಸಂಬಂಧಿತ ಚಟುವಟಿಕೆಗಳಿಗಾಗಿ ಗಮನಾರ್ಹ ನಿಧಿಯನ್ನು ಮೀಸಲಿಡಲಾಗಿದೆ. ಈ ಸರ್ಕಾರದ ಮೂರನೇ ಅವಧಿಯಲ್ಲಿ, ರೈಲ್ವೆಯು ಉತ್ತೇಜನವನ್ನು ಪಡೆಯುವುದನ್ನು ಮುಂದುವರಿದಿರುವುದು ರೈಲ್ವೆಗೆ ನೀಡಿರುವ ಮೊತ್ತದಿಂದಲೇ ತಿಳಿಯಲಿದೆ. ನಮ್ಮ ಸರ್ಕಾರ ಪ್ರಯಾಣಿಕ ಸ್ನೇಹಿ ರೈಲ್ವೆ ಯೋಜನೆಗಳನ್ನು ರೂಪಿಸಲು ಬದ್ದವಾಗಿದೆ ಎನ್ನುವುದು ಸಚಿವರು ನೀಡಿದ ಸ್ಪಷ್ಟನೆ.
ಮೂಲಸೌಕರ್ಯದಲ್ಲಿ ರೈಲ್ವೆ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ಕಳೆದ 10 ವರ್ಷಗಳಲ್ಲಿ, ರೈಲ್ವೆ 31,180 ಟ್ರ್ಯಾಕ್ ಕಿ. ಮೀ. ಗಳನ್ನು ಹೊಸದಾಗಿ ರೂಪಿಸಿದೆ. 2014ರವರೆಗೆ ಕೇವಲ 21,413 ಮಾರ್ಗ ಕಿ. ಮೀ. ಗಳಿಗೆ ಹೋಲಿಸಿದರೆ 41,655 ಮಾರ್ಗ ಕಿ. ಮೀ. ಗಳನ್ನು ವಿದ್ಯುದ್ದೀಕರಿಸಿದೆ. ರೈಲ್ವೆಯನ್ನು ವಿಶ್ವದರ್ಜೆಯನ್ನಾಗಿ ಮಾಡಲು ಸರ್ಕಾರ ವಿಶೇಷ ಒತ್ತು ನೀಡಿದೆ. ವಂದೇ ಭಾರತ್ ಸಹಿತ ಎಲ್ಲಾ ಮಾದರಿಯ ಹೊಸ ರೈಲುಗಳನ್ನು ಇನ್ನಷ್ಟು ಜನಮುಖಿಯಾಗಿಸುವ ನಿಟ್ಟಿನಲ್ಲಿಯೂ ಬಜೆಟ್‌ನಲ್ಲಿ ನೀಡಿರುವ ಹೆಚ್ಚಿನ ಅನುದಾನ ನೆರವಾಗಲಿದೆ ಎನ್ನುವುದು ಅಶ್ವಿನಿ ವೈಷ್ಣವ್ ಅವರು ನೀಡಿರುವ ವಿವರಣೆ.
ಮೂಲಸೌಕರ್ಯ ಅಭಿವೃದ್ಧಿಗೆ ರೈಲ್ವೆ ಹೊಸ ವಿಧಾನವನ್ನು ಅಳವಡಿಸಿಕೊಂಡಿದೆ. ಮೂರು ಆರ್ಥಿಕ ವರ್ಷದಲ್ಲಿ ರೈಲ್ವೆ ಕಾರಿಡಾರ್ಗಳು-ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್ಗಳು (192 ಯೋಜನೆಗಳು); ಬಹು-ಮಾದರಿ ಸಂಪರ್ಕವನ್ನು ಸಕ್ರಿಯಗೊಳಿಸಲು ಪಿಎಂ ಗತಿ ಶಕ್ತಿ ಮಿಷನ್ ಅಡಿಯಲ್ಲಿ ಬಂದರು ಸಂಪರ್ಕ ಕಾರಿಡಾರ್ಗಳು (42 ಯೋಜನೆಗಳು) ಮತ್ತು ಹೆಚ್ಚಿನ ಸಂಚಾರ ಸಾಂದ್ರತೆಯ ಕಾರಿಡಾರ್ಗಳನ್ನು (200 ಯೋಜನೆಗಳು) ಗುರುತಿಸಲಾಗಿದೆ. ಸಾಮರ್ಥ್ಯ ವರ್ಧನೆ, ಹೆಚ್ಚಿನ ಸಾಂದ್ರತೆಯ ಜಾಲಗಳ ದಟ್ಟಣೆಯನ್ನು ಕಡಿಮೆ ಮಾಡುವುದು, ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಕಡಿತವನ್ನು ಸಾಧಿಸುವುದು, ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವುದು ಮತ್ತು ಅವರ ಸುರಕ್ಷತೆ ಸರ್ಕಾರದ ಆದ್ಯತೆಯ ಕ್ಷೇತ್ರಗಳಾಗಿವೆ ಎನ್ನುತ್ತಾರೆ ಸಚಿವರು.
ಇಂದಿನ ಆರ್ಥಿಕತೆಯು ಕಲ್ಯಾಣದ ಸಂಯೋಜನೆಯಾಗಿದೆ, ಹಣಕಾಸಿನ ವಿವೇಕ, ಬಂಡವಾಳ ಹೂಡಿಕೆ ಮತ್ತು ಉತ್ಪಾದನೆಯಲ್ಲಿ ಹೂಡಿಕೆಗೆ ಒತ್ತು ಕೊಡಲಾಗಿದೆ. ಹಣಕಾಸು ಸಚಿವರು ಮಂಡಿಸಿರುವ ಬಜೆಟ್ ಕಳೆದ ಹತ್ತು ವರ್ಷಗಳಲ್ಲಿ ಈ ಸರ್ಕಾರದ ಮುಖ್ಯ ಆಧಾರವಾಗಿರುವ ಅಂತರ್ಗತ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಗಳ ಮುಂದುವರಿಕೆಯಾಗಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದರು.