ರಾತ್ರೋರಾತ್ರಿ ಖುಲಾಯಿಸಿತು ನೋಡಿ ಆದಿವಾಸಿ ಕುಟುಂಬದ ಅದೃಷ್ಟ; ಒಂದು ತುಂಡು ವಜ್ರ ಕೋಟ್ಯಧಿಪತಿಗಳನ್ನಾಗಿ ಮಾಡಿತು- ವೈರಲ್ ವಿಡಿಯೋ
Jul 26, 2024 09:50 AM IST
ರಾತ್ರೋರಾತ್ರಿ ಖುಲಾಯಿಸಿತು ನೋಡಿ ಆದಿವಾಸಿ ಕುಟುಂಬದ ಅದೃಷ್ಟ; ಒಂದು ತುಂಡು ವಜ್ರ ಕೋಟ್ಯಧಿಪತಿಗಳನ್ನಾಗಿ ಮಾಡಿತು. ರಾಜು ಗೊಂಡ್ ತನಗೆ ಸಿಕ್ಕ ವಜ್ರವನ್ನು ಜಿಲ್ಲಾ ವಜ್ರ ಖಜಾನೆಯಲ್ಲಿ ಜಮೆ ಮಾಡಲು ಬಂದ ಸಂದರ್ಭ (ಬಲಚಿತ್ರ)
ಯಾರ ಹಣೆಬರೆಹ ಹೇಗೋ, ರಾತ್ರಿ ಬೆಳಗಾಗುವುದರೊಳಗೆ ಬಡವ ಶ್ರೀಮಂತನಾಗಬೇಕು ಎಂದರೆ ಸಾಧ್ಯವೇ. ಭಗವಂತ ಕಣ್ಣುಬಿಟ್ಟರೆ ಏನು ಬೇಕಾದರೂ ಆಗಬಹುದು ಎಂಬುದು ಆಡುಮಾತು. ಇದನ್ನು ನಿಜವೆನ್ನಿಸುವಂತೆ ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಖುಲಾಯಿಸಿತು ನೋಡಿ ಆದಿವಾಸಿ ಕುಟುಂಬದ ಅದೃಷ್ಟ. ಒಂದು ತುಂಡು ವಜ್ರ ಕೋಟ್ಯಧಿಪತಿಗಳನ್ನಾಗಿ ಮಾಡಿತು. ಇಲ್ಲಿದೆ ಅದರ ವಿವರ.
ಭೋಪಾಲ: ರಾತ್ರೋರಾತ್ರಿ ಅದೃಷ್ಟ ಖುಲಾಯಿಸುವುದು ಅಂತಾರಲ್ಲ ಅದು ಹೀಗೆ. ಮಧ್ಯಪ್ರದೇಶದಲ್ಲಿ ರಾತ್ರೋರಾತ್ರಿ ಖುಲಾಯಿಸಿತು ನೋಡಿ ಆದಿವಾಸಿ ಕುಟುಂಬದ ಅದೃಷ್ಟ. ಆದರೆ ಅಲ್ಲಿ ದಣಿವರಿಯದ ಕಠಿಣ ಪರಿಶ್ರಮವಿತ್ತು. ಸಾಲದಲ್ಲಿ ಮುಳುಗಿದ್ದ ಬಡ ಕುಟುಂಬದ ಕಡೆಗೆ ಲಕ್ಷ್ಮೀದೇವಿ ಕಿರುನಗೆ ಸೂಸಿದ್ದು, ಅವರ ಜಮೀನಿನಲ್ಲಿ ಸಿಕ್ಕ ವಜ್ರದ ತುಂಡು ಒಂದೇ ದಿನದಲ್ಲಿ ಅವರನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ!
ಮಧ್ಯಪ್ರದೇಶದ ಪನ್ನಾ ವಜ್ರಕ್ಕೆ ಹೆಸರುವಾಸಿ. ಅಲ್ಲೇ ಸಮೀಪದ ಕಲ್ಯಾಣಪುರದ ಜಮೀನಿನಲ್ಲಿ ಒಂದು ತುಂಡು ವಜ್ರ ಸಿಕ್ಕಿದ್ದು, ಅದು 19.22 ಕ್ಯಾರಟ್ ರತ್ನದ ಗುಣಮಟ್ಟ ಹೊಂದಿರುವುದು ಖಾತ್ರಿಯಾಗಿದೆ. ಸ್ಥಳೀಯರು ಇದರ ಮೌಲ್ಯ ಒಂದೂಕಾಲು ಕೋಟಿ ಎಂದು ಹೇಳುತ್ತಿದ್ದು, ವಿವಿಧ ಮಾಧ್ಯಮಗಳಲ್ಲಿ 80 ಲಕ್ಷ ರೂಪಾಯಿ ಮೌಲ್ಯದ ವಜ್ರ ಎಂದು ವರದಿಯಾಗುತ್ತಿದೆ.
ಆದಿವಾಸಿ ಕುಟುಂಬದಿಂದ 10 ವರ್ಷ ವಜ್ರದ ಗಣಿಗಾರಿಕೆ; ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ ಈ ವಜ್ರ
ಪನ್ನಾ ಸಮೀಪದ ಕಲ್ಯಾಣಪುರ ವ್ಯಾಪ್ತಿಯ ಅಹಿರ್‌ಗಾಂವ್ ನಿವಾಸಿ ಚುನವಾದಾ ಗೊಂಡ್ ಎಂಬುವವರು ಈ ವರ್ಷದ ಮೇ ತಿಂಗಳಲ್ಲಿ ವಜ್ರದ ಗಣಿ ಗುತ್ತಿಗೆ ಪಡೆದಿದ್ದಾರೆ. ಕೃಷ್ಣಾ-ಕಲ್ಯಾಣಪುರದಲ್ಲಿ ಅವರಿಗೆ ಗಣಿ ಗುತ್ತಿಗೆ ಜಮೀನು ಸಿಕ್ಕಿದೆ. ಮಂಗಳವಾರ ಮಗ ರಾಜು ಚೌಲ್ ಗೊಂಡ್ (ರಾಜು ಗೊಂಡ್) ಅಲ್ಲಿನ ಮಣ್ಣು ತೊಳೆಯುತ್ತಿದ್ದಾಗ ಈ ಅಮೂಲ್ಯ ವಜ್ರ ಸಿಕ್ಕಿತು. ಇದಕ್ಕೂ ಮುನ್ನ ಇಡೀ ಕುಟುಂಬ 10 ವರ್ಷಗಳಿಂದ ವಜ್ರಕ್ಕಾಗಿ ಹುಡುಕಾಟ ನಡೆಸಿತ್ತು. ಕೊನೆಗೂ ಕಳೆದವಾರ ಒಂದು ತುಂಡು ವಜ್ರ ಸಿಕ್ಕಿತ್ತು.
ಆ ಆದಿವಾಸಿ ಕುಟುಂಬ ಆ ವಜ್ರವನ್ನು ಬುಧವಾರ (ಜುಲೈ 24) ಜಿಲ್ಲಾ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದೆ. ವಜ್ರದ ಅಂದಾಜು ಮೌಲ್ಯ 1.25 ಕೋಟಿ ರೂ. ಈಗ ಈ ವಜ್ರವನ್ನು ಮುಂದಿನ ಮುಂಬರುವ ಹರಾಜಿನಲ್ಲಿ ಇಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮ ಥಾರ್‌ಎಕ್ಸ್‌ಪ್ರೆಸ್ ನ್ಯೂಸ್ ವರದಿ ಮಾಡಿದೆ.
ಆದಿವಾಸಿ ಕುಟುಂಬಕ್ಕೆ ವಜ್ರದ ಗಣಿಗಾರಿಕೆಗೆ ಸಿಕ್ಕ ಪ್ರದೇಶ 8×8 ಮೀಟರ್
ಚುನವಾದಾ ಗೊಂಡ್ ಅವರಿಗೆ ಸಿಕ್ಕ ಗಣಿಗಾರಿಕೆ ಜಮೀನು ಎಕರೆಗಟ್ಟಲೆ ಇದೆ ಎಂದು ತಿಳಿದುಕೊಳ್ಳಬೇಡಿ. ಕೃಷ್ಣ ಕಲ್ಯಾಣಪುರದ ಪಟ್ಟಿ ಪ್ರದೇಶದಲ್ಲಿ ವಜ್ರದ ಗಣಿ ಅಗೆಯಲು ಅನುಮತಿ ಕೋರಿ 2024 ರ ಮೇ 20 ರಂದು ವಜ್ರದ ಕಚೇರಿಯಲ್ಲಿ ಕೇವಲ 200 ರೂಪಾಯಿ ಪಾವತಿಸಿದ್ದರು. ಇದಕ್ಕೆ ಗಣಿಗಾರಿಕೆ ಇಲಾಖೆ 8×8 ಮೀಟರ್ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಹಾಗೆ ಆ ಸಣ್ಣ ಜಾಗದಲ್ಲಿ ಅವರು ವಜ್ರಕ್ಕಾಗಿ ನೆಲ ಅಗೆಯತೊಡಗಿದ್ದರು. ಚುನವಾದಾ ಗೊಂಡ್ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಜ್ರಗಳ ಹುಡುಕಾಟದಲ್ಲಿ ಹಗಲು ರಾತ್ರಿ ಅಗೆಯುವುದನ್ನು ಮುಂದುವರೆಸಿದನು. ಎರಡು ತಿಂಗಳ ಪರಿಶ್ರಮದ ನಂತರ ಅವರ ಅದೃಷ್ಟ ಕೊನೆಗೂ ಫಲ ನೀಡಿದ್ದು, 19.22 ಕ್ಯಾರೆಟ್ ರತ್ನ ಗುಣಮಟ್ಟದ ವಜ್ರ ಸಿಕ್ಕಿದೆ.
ಚುನವಾದಾ ಅವರ ಕುಟುಂಬಕ್ಕೆ ಕಳೆದ ವರ್ಷವಷ್ಟೇ ಪ್ರಧಾನಿ ಆವಾಸ ಯೋಜನೆಯ ಮನೆ ಮಂಜೂರಾಗಿತ್ತು. ಗಣಿ ಖರೀದಿಸಲು ಕುಟುಂಬವು ಈಗಾಗಲೇ 4 ಲಕ್ಷ ರೂಪಾಯಿ ಸಾಲವನ್ನು ಮಾಡಿತ್ತು. ವಜ್ರ ಮಾರಾಟದಿಂದ ಪಡೆದ ಮೊತ್ತದಿಂದ ಮೊದಲು ಸಾಲ ಮರುಪಾವತಿ ಮಾಡುತ್ತೇವೆ. ಆ ನಂತರ ಜಮೀನು ಖರೀದಿಸಿ ಮನೆ ಕಟ್ಟುತ್ತೇವೆ. ಇದಾದ ನಂತರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುತ್ತೇವೆ ಎಂದು ರಾಜು ಹೇಳುತ್ತಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)