logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಡೆಂಘೆ ರೋಗಿಗೆ ಪ್ಲೇಟ್‌ಲೆಟ್‌ ಬದಲು ಮೂಸಂಬಿ ಜ್ಯೂಸ್‌ ಟ್ರಾನ್ಸ್‌ಫ್ಯೂಸ್‌ ಮಾಡಿದ್ರು ! ಪ್ರಾಣ ಹೋಯಿತು, ವಿಡಿಯೋ ವೈರಲ್‌ ಆಯ್ತು

Viral Video: ಡೆಂಘೆ ರೋಗಿಗೆ ಪ್ಲೇಟ್‌ಲೆಟ್‌ ಬದಲು ಮೂಸಂಬಿ ಜ್ಯೂಸ್‌ ಟ್ರಾನ್ಸ್‌ಫ್ಯೂಸ್‌ ಮಾಡಿದ್ರು ! ಪ್ರಾಣ ಹೋಯಿತು, ವಿಡಿಯೋ ವೈರಲ್‌ ಆಯ್ತು

HT Kannada Desk HT Kannada

Oct 21, 2022 11:50 AM IST

google News

ಡೆಂಘೆ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ಇನ್‌ಫ್ಯೂಸ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ.

    • Viral Video: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆಸ್ಪತ್ರೆಯೊಂದಕ್ಕೆ ಅಧಿಕಾರಿಗಳು ಬೀಗ ಜಡಿದರು. ಯಾಕೆ ಅಂತೀರಾ? ಡೆಂಘೆ ರೋಗಿಗೆ ಪ್ಲೇಟ್‌ಲೆಟ್‌ ಬದಲು ಮೂಸಂಬಿ ಜ್ಯೂಸ್‌ ಟ್ರಾನ್ಸ್‌ಫ್ಯೂಸ್‌ ಮಾಡಿದ್ದೇ ಕಾರಣವಂತೆ! ಇದರಲ್ಲಿ ರೋಗಿಯ ಪ್ರಾಣ ಹೋಗಿದೆ. ಪ್ಲೇಟ್‌ಲೆಟ್‌ ಬ್ಯಾಗ್‌ನಲ್ಲಿದ್ದ ಮೂಸಂಬಿ ಜ್ಯೂಸ್‌ ವಿಡಿಯೋ ವೈರಲ್‌ ಆಗಿದೆ. 
ಡೆಂಘೆ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ಇನ್‌ಫ್ಯೂಸ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ.
ಡೆಂಘೆ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ಇನ್‌ಫ್ಯೂಸ್‌ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ.

ಆಸ್ಪತ್ರೆ ಎಂದರೆ ಜನ ಮಾರು ದೂರ ಸರಿಯುವುದು ಸಹಜ. ಅದಕ್ಕೆ ಇಂಬು ನೀಡುವಂತಹ ಅನೇಕ ಅನುಭವಗಳು ಜನರಿಗೆ ಆಗಿರುವುದು ಕೂಡ ಕಾರಣ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ವರದಿಯಾಗಿದೆ. ಆದರೆ ಸತ್ಯಾಸತ್ಯ ಇನ್ನೂ ಬಹಿರಂಗವಾಗಿಲ್ಲ.

ಡೆಂಘೆ ರೋಗಕ್ಕೆ ಚಿಕಿತ್ಸೆ ಪಡೆಯಲು ಪ್ರಯಾಗ್‌ ರಾಜ್‌ನ ಖಾಸಗಿ ಆಸ್ಪತ್ರೆಗೆ ಆ ವ್ಯಕ್ತಿ ದಾಖಲಾಗಿದ್ದರು. ಆಸ್ಪತ್ರೆ ವೈದ್ಯರು ಡೆಂಘೆ ರೋಗಿಗೆ ರಕ್ತದ ಪ್ಲೇಟ್‌ಲೆಟ್‌ ಕೊಡುವ ಮೂಸಂಬಿ ಜ್ಯೂಸ್‌ ಟ್ರಾನ್ಸ್‌ಫ್ಯೂಸ್‌ ಮಾಡಿದ್ದಾರೆ. ಪರಿಣಾಮ ರೋಗಿಯ ಪ್ರಾಣ ಹೋಗಿದೆ. ಈ ಕುರಿತು ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ರೋಗಿಯ ಹೆಸರು ಪ್ರದೀಪ್‌ ಪಾಂಡೆ. ಅವರ ಕುಟುಂಬದವರು ನೀಡಿದ ದೂರಿನ ಪ್ರಕಾರ, ಪ್ರದೀಪ್‌ಗೆ ರಕ್ತದ ಪ್ಲೇಟ್‌ಲೆಟ್‌ ಬ್ಯಾಗ್‌ನಲ್ಲಿ ತುಂಬಿದ್ದ ಮೂಸಂಬಿ ಜ್ಯೂಸ್‌ ಮತ್ತು ಕೆಮಿಕಲ್‌ ಟ್ರಾನ್ಸ್‌ಫ್ಯೂಸ್‌ ಮಾಡಲಾಗಿತ್ತು. ಅದರಿಂದಾಗಿಯೇ ಆತನ ಆರೋಗ್ಯ ಸಂಪೂರ್ಣ ಹದಗೆಟ್ಟಿತು. ಕೂಡಲೇ ಆತನನ್ನು ಬೇರೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ವರ್ಗಾಯಿಸಲಾಗಿದೆ. ಆದರೂ ಪ್ರಾಣ ಉಳಿಸಲಾಗಿಲ್ಲ.

ಈ ನಡುವೆ, ಇದೇ ಆಸ್ಪತ್ರೆಗೆ ಸಂಬಂಧಿಸಿದ ವಿಡಿಯೋ ಒಂದು ವೈರಲ್‌ ಆಗಿದೆ ಎಂದು ವರದಿಯಾಗಿತ್ತು. ಆ ವಿಡಿಯೋಕ್ಕಾಗಿ ಟ್ವಿಟರ್‌ನಲ್ಲಿ ಹುಡುಕಾಡಿದಾಗ ನಿನ್ನೆ ಪೋಸ್ಟ್‌ ಆಗಿರುವ ವಿಡಿಯೋ ಒಂದು ಸಿಕ್ಕಿದೆ. ಈ ವಿಡಿಯೋದ ಸಾಚಾತನ ಪರೀಕ್ಷಿಸಲು ಹಿಂದುಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಸಾಧ್ಯವಾಗಿಲ್ಲ.

ವೈರಲ್‌ ವಿಡಿಯೋದಲ್ಲಿರುವುದು ಇಷ್ಟು - ವ್ಯಕ್ತಿಯೊಬ್ಬರು ರಕ್ತದ ಪ್ಲೇಟ್‌ಲೆಟ್‌ ಬ್ಯಾಗ್‌ ಅನ್ನು ಹಿಡಿದು ತೋರಿಸುತ್ತ, ಅದರಲ್ಲಿ ಮೂಸಂಬಿ ಜ್ಯೂಸ್‌ ಇರುವುದನ್ನು ತೋರಿಸಿ ವಿವರಿಸುತ್ತಿದ್ದಾರೆ. ಈ ಕುರಿತು ಆಸ್ಪತ್ರೆಗೆ ಅಧಿಕಾರಿಗಳನ್ನು ಸಂಪರ್ಕಿಸಿ ಉತ್ತರ, ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಅವರು ಮಾತಿಗೆ ಸಿಕ್ಕಿಲ್ಲ ಎಂಬ ವಿವರಣೆ ಇದೆ.

ಆ ವಿಡಿಯೋ ಹೀಗಿದೆ ನೋಡಿ -

ಸರ್ಕಾರದಿಂದ ಕ್ಷಿಪ್ರ ಕ್ರಮ

ಆಪಾದಿತ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾಡಳಿತವು ಆಸ್ಪತ್ರೆಗೆ ಬೀಗ ಜಡಿದಿದೆ.

"ಡೆಂಘೆ ರೋಗಿಗೆ ಪ್ಲೇಟ್‌ಲೆಟ್‌ಗಳ ಬದಲಿಗೆ ಮೂಸಂಬಿ ರಸವನ್ನು ಆಸ್ಪತ್ರೆಯಲ್ಲಿ ಟ್ರಾನ್ಸ್‌ಫ್ಯೂಸ್‌ ಮಾಡಿದ ವೈರಲ್ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು, ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಮತ್ತು ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಪಾಠಕ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಎಫ್‌ಐಆರ್‌ ದಾಖಲಾಗಿಲ್ಲ

ದೂರು ದಾಖಲಾಗಿದೆಯಾದರೂ, ಸೂಕ್ಷ್ಮ ಪ್ರಕರಣವಾದ ಕಾರಣ ಎಫ್‌ಐಆರ್‌ ದಾಖಲಾಗಿಲ್ಲ. ಪರಾಮರ್ಶೆ ನಡೆಸಿ ಎಫ್‌ಐಆರ್‌ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಪ್ಲೇಟ್‌ಲೆಟ್‌ ಬ್ಯಾಗ್‌ ಈ ರೀತಿ ಪಾರದರ್ಶಕವಿರುವುದೇ?

ಪ್ರಯಾಗ್‌ರಾಜ್‌ನ ಚೀಫ್‌ ಮೆಡಿಕಲ್‌ ಆಫೀಸರ್‌ ಡಾ.ನಾನಕ್‌ ಶರಣ್‌ ಹೇಳುವ ಪ್ರಕಾರ, ರಕ್ತದ ಪ್ಲೇಟ್‌ಲೆಟ್‌ ಬ್ಯಾಗ್‌ ಈ ರೀತಿ ಪಾರದರ್ಶಕವಲ್ಲ. ಬರಿಗಣ್ಣಿನಿಂದ ಅದರೊಳಗಿನದ್ದನ್ನು ಕಾಣಲಾಗದು. ಯಾವುದಕ್ಕೂ ಫಾರೆನ್ಸಿಕ್‌ ವರದಿ ಬಂದ ಬಳಿಕ ವಿಚಾರ ಸ್ಪಷ್ಟವಾಗಲಿದೆ. ವಿಸ್ತೃತ ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಪಿಟಿಐಗೆ ಹೇಳಿಕೆ ನೀಡಿರುವ ಆ ಖಾಸಗಿ ಆಸ್ಪತ್ರೆಯ ಮಾಲೀಕ ಸೌರಭ್‌ ಮಿಶ್ರಾ, ಪ್ಲೇಟ್‌ಲೆಟ್‌ ಬ್ಯಾಗ್‌ ಆಸ್ಪತ್ರೆಯಲ್ಲಿ ಉತ್ಪಾದಿಸುವುದಿಲ್ಲ. ಅವುಗಳನ್ನು ಹೊರಗಿಂದ ತರಿಸಲಾಗುತ್ತದೆ. ರೋಗಿಯ ಸಂಬಂಧಿಕರೇ ಐದು ಯೂನಿಟ್‌ ಪ್ಲೇಟ್‌ಲೆಟ್‌ ತಂದುಕೊಟ್ಟಿದ್ದರು. ಅದರಲ್ಲಿ ಮೂರನ್ನು ಟ್ರಾನ್ಸ್‌ಫ್ಯೂಸ್‌ ಮಾಡಿದಾಗ ರಿಯಾಕ್ಷನ್‌ ಆಗಿತ್ತು ಎಂದು ಹೇಳಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ