US on BBC Documentary: ನಾವು ಪತ್ರಿಕಾ ಸ್ವಾತಂತ್ರ್ಯ ಗೌರವಿಸುತ್ತೇವೆ: ಬಿಬಿಸಿ ಡಾಕ್ಯುಮೆಂಟರಿ ಕುರಿತು ಉಲ್ಟಾ ಹೊಡೆದ ಅಮೆರಿಕ!
Jan 26, 2023 03:33 PM IST
ನೆಡ್ ಪ್ರೈಸ್ (ಸಂಗ್ರಹ ಚಿತ್ರ)
- ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದ ಅಮೆರಿಕ, ಇದೀಗ ಇದನ್ನು ಪತ್ರಿಕಾ ಸ್ವಾತಂತ್ರ್ಯದ ವಿಷಯ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದೆ. ಭಾರತವೂ ಸೇರಿದಂತೆ ವಿಶ್ವದ ಪ್ರಬಾಪ್ರಭುತ್ವವಾದಿ ದೇಶಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಪಾದಿಸಲು ಇದು ಸಕಾಲ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
ವಾಷಿಂಗ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದಿದ್ದ ಅಮೆರಿಕ, ಇದೀಗ ಇದನ್ನು ಪತ್ರಿಕಾ ಸ್ವಾತಂತ್ರ್ಯದ ವಿಷಯ ಎಂದು ಹೇಳುವ ಮೂಲಕ ಉಲ್ಟಾ ಹೊಡೆದಿದೆ.
ಬಿಬಿಸಿ ಸಾಕ್ಷ್ಯಚಿತ್ರ ಪತ್ರಿಕಾ ಸ್ವಾತಂತ್ರ್ಯದ ವಿಷಯವಾಗಿದೆ. ಭಾರತವೂ ಸೇರಿದಂತೆ ವಿಶ್ವದ ಪ್ರಬಾಪ್ರಭುತ್ವವಾದಿ ದೇಶಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಪಾದಿಸಲು ಇದು ಸಕಾಲ ಎಂದು ಅಮೆರಿಕ ಅಭಿಪ್ರಾಯಪಟ್ಟಿದೆ.
ಈ ಕುರಿತು ಮಾತನಾಡಿರುವ ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್, ಅಮೆರಿಕವು ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಪ್ರಜಾಪ್ರಭುತ್ವದ ತತ್ವಗಳನ್ನು ಎತ್ತಿ ಹಿಡಿಯುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಇದೇ ನೆಡ್ ಪ್ರೈಸ್ ಕೆಲವು ದಿನಗಳ ಹಿಂದೆ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು.
ನಾವು ಪ್ರಪಂಚದಾದ್ಯಂತ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇವೆ. ಇದರಿಂದ ಪ್ರಜಾಪ್ರಭುತ್ವ ತತ್ವಗಳು ಬಲವರ್ಧನೆ ಆಗುತ್ತವೆ ಎಂಬುದು ನಮ್ಮ ನಂಬಿಕೆಯಾಗಿದೆ. ಈ ಎಲ್ಲ ಅಂಶಗಳನ್ನು ಅಮೆರಿಕದ ಇತರೆ ಸ್ನೇಹಪರ ರಾಷ್ಟ್ರಗಳೂ ಪರಿಗಣಿಸುತ್ತವೆ ಎಂದು ನಾವು ನಂಬುತ್ತೇವೆ ಎಂದು ನೆಡ್ ಪ್ರೈಸ್ ಹೇಳಿದ್ದಾರೆ. ಈ ಮೂಲಕ ಭಾರತದಲ್ಲಿ ಈ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವುದನ್ನು ನೆಡ್ ಪ್ರೈಸ್ ಪರೋಕ್ಷವಾಗಿ ವಿರೋಧಿಸಿದ್ದಾರೆ.
ಯಾವುದೇ ವಿಷಯದ ಮೇಲೆ ಭಿನ್ನ ಭಿನ್ನ ಅಭಿಪ್ರಾಯಗಳು ಮೂಡುವುದು ಸಹಜ. ಆದರೆ ಈ ಕಾರಣಕ್ಕೆ ನಾವು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಸರಿಯಾದ ನಡೆಯಲ್ಲ. ಅಂತಿಮವಾಗಿ ಸತ್ಯ ಜನರ ಸಾರ್ವತ್ರಿಕ ಮನ್ನಣೆಯನ್ನು ಪಡೆಯುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಿಕಾ ಸ್ವಾತಂತ್ರ್ಯ ಅತ್ಯಂತ ಅವಶ್ಯ ಎಂದು ನೆಡ್ ಪ್ರೈಸ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ ಈ ಮೊದಲು ಬಿಬಿಸಿ ಸಾಕ್ಷ್ಯಚಿತ್ರದ ಮಾಹಿತಿ ಇಲ್ಲ ಎಂದಿದ್ದ ಅಮೆರಿಕ, ಇದೀಗ ಈ ವಿಚಾರವಾಗಿ ಪತ್ರಿಕಾ ಸ್ವಾತಂತ್ರ್ಯದ ಕುರಿತು ಮಾತನಾಡುತ್ತಿರುವುದು ಜಾಗತಿಕವಾಗಿ ಗಮನ ಸೆಳೆದಿದೆ. ಬ್ರಿಟನ್ ಈ ವಚಾರವಾಗಿ ಸ್ಪಷ್ಟತೆಯನ್ನು ಹೊಂದಿದ್ದು, ಅಮೆರಿಕ ಮಾತ್ರ ಅತ್ತಿತ್ತ ಸುಳಿದಾಡುತ್ತಿರುವುದು ಕಂಡುಬಂದಿದೆ.
ಬಿಬಿಸಿಯ 'ಇಂಡಿಯಾ: ದಿ ಮೋದಿ ಕ್ವಶ್ಚನ್?' ಸಾಕ್ಷ್ಯಚಿತ್ರ ಈಗಾಗಲೇ ಭಾರತದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ಸಾಕ್ಷ್ಯಚಿತ್ರದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದರ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ನಿಷೇಧ ಹೇರಿದೆ. ಆದರೆ ಕೇರಳದಲ್ಲಿ ವಿವಿಧ ಎಡ ಸಂಘಟನೆಗಳು ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ, ಈ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುವುದಾಗಿ ಹೇಳುತ್ತಿವೆ.
ಒಟ್ಟಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಕುರಿತು ಅಮೆರಿಕ ಭಿನ್ನ ನಿಲುವು ತಳೆದಿದ್ದು, ಈ ಕುರಿತು ಭಾರತ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇಂದಿನ ಪ್ರಮುಖ ಸುದ್ದಿಗಳು
74th Republic Day today: ಕರ್ತವ್ಯಪಥದಲ್ಲಿಂದು ಮಿಲಿಟರಿ ಶಕ್ತಿ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯತೆಯ ದರ್ಶನ | 10 ಅಂಶಗಳು
Republic Day: ಗಣರಾಜ್ಯೋತ್ಸವ ದಿನದ ಪಥಸಂಚಲನವು ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಇದರಲ್ಲಿ ದೇಶದ ಮಿಲಿಟರಿ ಸಾಮರ್ಥ್ಯದ ಪ್ರದರ್ಶನ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುವ ಕಾರ್ಯಕ್ರಮಗಳು ಇರಲಿವೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
SM Krishna: ಮನಸ್ಸು ತುಂಬಿ ಬಂದಿದೆ: ಪದ್ಮವಿಭೂಷಣ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಎಸ್‌ಎಂ ಕೃಷ್ಣ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್‌ಎಂ ಕೃಷ್ಣ ಅವರಿಗೆ ಈ ಬಾರಿಯ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್‌ಎಂ ಕೃಷ್ಣ, ಈ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುವುದಾಗಿ ಹೇಳಿದ್ದಾರೆ. ನನ್ನ ಸೇವೆಯನ್ನು ಗುರುತಿಸಿದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೂ ಧನ್ಯವಾದ ಅರ್ಪಿಸುವುದಾಗಿ ಎಸ್‌ಎಂ ಕೃಷ್ಣ ಹೇಳಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ