74th Republic Day today: ಕರ್ತವ್ಯಪಥದಲ್ಲಿಂದು ಮಿಲಿಟರಿ ಶಕ್ತಿ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯತೆಯ ದರ್ಶನ | 10 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  74th Republic Day Today: ಕರ್ತವ್ಯಪಥದಲ್ಲಿಂದು ಮಿಲಿಟರಿ ಶಕ್ತಿ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯತೆಯ ದರ್ಶನ | 10 ಅಂಶಗಳು

74th Republic Day today: ಕರ್ತವ್ಯಪಥದಲ್ಲಿಂದು ಮಿಲಿಟರಿ ಶಕ್ತಿ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯತೆಯ ದರ್ಶನ | 10 ಅಂಶಗಳು

Republic Day: ಗಣರಾಜ್ಯೋತ್ಸವ ದಿನದ ಪಥಸಂಚಲನವು ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಇದರಲ್ಲಿ ದೇಶದ ಮಿಲಿಟರಿ ಸಾಮರ್ಥ್ಯದ ಪ್ರದರ್ಶನ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುವ ಕಾರ್ಯಕ್ರಮಗಳು ಇರಲಿವೆ.

74th Republic Day today: ಕರ್ತವ್ಯಪಥದಲ್ಲಿಂದು ಮಿಲಿಟರಿ ಶಕ್ತಿ ಪ್ರದರ್ಶನ
74th Republic Day today: ಕರ್ತವ್ಯಪಥದಲ್ಲಿಂದು ಮಿಲಿಟರಿ ಶಕ್ತಿ ಪ್ರದರ್ಶನ

ನವದೆಹಲಿ: ದೇಶದ ಕಣ್ಣು ಇಂದು ದೆಹಲಿಯ ಕರ್ತವ್ಯಪಥದತ್ತ ಇರಲಿದೆ. ಅಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ನೇತೃತ್ವದಲ್ಲಿ ದೇಶದ 74ನೇ ಗಣರಾಜ್ಯೋತ್ಸವಕ್ಕೆ ಚಾಲನೆ ದೊರಕಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿಯಾಗಿ ಇದು ಮೊದಲ ಗಣರಾಜ್ಯೋತ್ಸವ. ಈಜಿಪ್ಟ್‌ನ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಅವರು ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಬಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್‌ ಚಂದ್ರ ಬೋಸ್‌ ಜನ್ಮದಿನ ಪರಾಕ್ರಮ ದಿವಸ್‌ ಪ್ರಯುಕ್ತ ಒಂದು ವಾರ ಸಂಭ್ರಮ ಇರಲಿದೆ. ಪರಾಕ್ರಮ ದಿವಸದ ಪ್ರಯುಕ್ತ ಒಂದು ವಿಶೇಷ ಸ್ತಬ್ಧಚಿತ್ರವು ಇಂದು ಪ್ರದರ್ಶನಗೊಳ್ಳಲಿದೆ. ಗಣರಾಜ್ಯೋತ್ಸವದ ಭದ್ರತೆಗಾಗಿ ದೆಹಲಿ ಪೊಲೀಸರು ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ದೆಹಲಿ ಪೊಲೀಸರ ಪ್ರಕಾರ ಈ ಬಾರಿಯ ಪಥಸಂಚಲನದ ಕಾರ್ಯಕ್ರಮದಲ್ಲಿ ಸುಮಾರು 65 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ.

ಗಣರಾಜ್ಯೋತ್ಸವ ಕಾರ್ಯಕ್ರಮದ ಕುರಿತು 10 ಅಂಶಗಳು

1. ಗಣರಾಜ್ಯೋತ್ಸವ ದಿನದ ಪಥಸಂಚಲನವು ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಇದರಲ್ಲಿ ದೇಶದ ಮಿಲಿಟರಿ ಸಾಮರ್ಥ್ಯದ ಪ್ರದರ್ಶನ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುವ ಕಾರ್ಯಕ್ರಮಗಳು ಇರಲಿವೆ. ಈ ಬಾರಿ ಭಾರತದ ನಾರಿ ಶಕ್ತಿ ಮತ್ತು ನ್ಯೂ ಇಂಡಿಯಾ ಪರಿಕಲ್ಪನೆಗಳಿಗೆ ಪೂರಕವಾಗಿ ಕರ್ತವ್ಯಪಥದ ರಿಪಬ್ಲಿಕ್‌ ಡೇ ಕಾರ್ಯಕ್ರಮಗಳು ನಡೆಯಲಿವೆ.

2. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ಬಳಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ದೇಶಕ್ಕಾಗಿ ಮಡಿದ ವೀರಯೋಧರಿಗೆ ರಾಷ್ಟ್ರೀಯ ಯುದ್ಧಸ್ಮಾರಕದಲ್ಲಿ ಪ್ರಧಾನಿಯವರು ನಮನ ಸಲ್ಲಿಸಲಿದ್ದಾರೆ. ಬಳಿಕ ಮೋದಿ ಮತ್ತು ಇತರೆ ಪ್ರಮುಖರು ಕರ್ತವ್ಯಪಥದ ವೇದಿಕೆಗೆ ಆಗಮಿಸುತ್ತಾರೆ.

3. ಪ್ರತಿವರ್ಷದಂತೆ, ಬಳಿಕ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ಬಳಿಕ ರಾಷ್ಟ್ರಗೀತೆ ಮೊಳಗಲಿದೆ. ಈ ಸಂದರ್ಭದಲ್ಲಿ 21 ಗನ್‌ ಸಲ್ಯೂಟ್‌ ಮೂಲಕ ಗೌರವ ಸಲ್ಲಿಸಲಾಗುತ್ತದೆ.

4. ಈ ಬಾರಿಯ ಗನ್‌ ಸಲ್ಯೂಟ್‌ನಲ್ಲಿ ಪುರಾತನ 25 ಪೌಂಡರ್‌ ಗನ್‌ ಬದಲು 105 ಎಂಎಂ ಇಂಡಿಯನ್‌ ಫೀಲ್ಡ್‌ ಗನ್‌ಗಳನ್ನು ಬಳಸಲಾಗುತ್ತದೆ. ನಾಲ್ಕು Mi-17 1V/V5 ಹೆಲಿಕಾಪ್ಟರ್‌ಗಳಿಂದ ಪುಷ್ಪ ಸಿಂಚನವಾಗಲಿದೆ.

5. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೆಲ್ಯೂಟ್‌ ನೀಡಿ ಪಥಸಂಚಲನ ಆರಂಭಗೊಳ್ಳಲಿದೆ. ಪರೇಡ್‌ ಕಮಾಂಡರ್‌ ಲೆಫ್ಟಿನೆಂಟ್‌ ಜನರಲ್‌ ಧೀರಜ್‌ ಸೇಥ್‌, ಮೇಜರ್‌ ಜನರಲ್‌ ಭವನೀಶ್‌ ಕುಮಾರ್‌, ಚೀಫ್‌ ಆಫ್‌ ಸ್ಟಾಫ್‌, ದೆಹಲಿ ಎಚ್‌ಕ್ಯೂ ಅವರ ನೇತೃತ್ವದಲ್ಲಿ ಪರೇಡ್‌ ನಡೆಯಲಿದೆ.

6. ಕರ್ತವ್ಯಪಥದಲ್ಲಿ ಇದೇ ಮೊದಲ ಬಾರಿಗೆ ಈಜಿಪ್ಟ್‌ ಸಶಸ್ತ್ರಪಡೆಯ ಸೈನಿಕರು ಬ್ಯಾಂಡ್‌ ವಾದ್ಯಗಳೊಂದಿಗೆ ಪಥಸಂಚಲನ ನಡೆಸಲಿದ್ದಾರೆ. ಇದರ ನೇತೃತ್ವವನ್ನು ಕರ್ನಲ್‌ ಮಹಮ್ಮದ್‌ ಅಬ್ದಲ್ಲಾ ಫತಾ ಈಲ್‌ ಕರಸವಿ ವಹಿಸಲಿದ್ದಾರೆ. ಈ ತುಕಡಿಯಲ್ಲಿ 144 ಸೈನಿಕರು ಇರಲಿದ್ದಾರೆ.

7. ಕ್ಯಾಪ್ಟನ್‌ ರೈಜದಾ ಶೌರ್ಯ ಬಾಲಿ ನೇತೃತ್ವದಲ್ಲಿ 61 ಕವಲ್ರಿ ಪಥಸಂಚಲನ ನಡೆಯಲಿದೆ. ಜಗತ್ತಿನಲ್ಲಿ ಸದ್ಯ ಸೇವೆಯಲ್ಲಿರುವ ಒಂದೇ ಒಂದು ಅಶ್ವಪಡೆ ಇದಾಗಿದೆ.

8. ಈ ಬಾರಿ 17 ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ 17 ಸ್ತಬ್ಧಚಿತ್ರಗಳು, ವಿವಿಧ ಇಲಾಖೆಗಳು/ಸಚಿವಾಲಯಗಳ 6 ಟ್ಯಾಬ್ಲೋಗಳು ಸೇರಿದಂತೆ ಒಟ್ಟು 23 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿದೆ. ಈ ಸ್ತಬ್ಧಚಿತ್ರಗಳು ಭಾರತದ ಶ್ರೀಮಂತ ಸಾಮಸ್ಕೃತಿಕ ಪರಂಪರೆ, ಆರ್ಥಿಕ ಪರಗತಿ, ದೇಶದ ಭದ್ರತೆಯ ವಿಚಾರಗಳನ್ನು ಪ್ರತಿಬಿಂಬಿಸಲಿವೆ. ಕರ್ನಾಟಕದ ನಾರಿಶಕ್ತಿ ಸ್ತಬ್ಧಚಿತ್ರವು ಪ್ರದರ್ಶನಗೊಳ್ಳಲಿದೆ.

9. ರಾಷ್ಟ್ರರಾಜಧಾನಿಯ ವಿವಿಧ ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಿದೆ. ಪೊಲೀಸರು ಪ್ರತಿಯೊಂದು ವಾಹನಗಳನ್ನೂ ಎಚ್ಚರಿಕೆಯಿಂದ ಪರಿಶೀಲಿಸಲಿದ್ದಾರೆ. ಅಲ್ಲಲ್ಲಿ ದೊಡ್ಡ ಬ್ಯಾರಿಕೇಡ್‌ಗಳು, ಚೆಕ್‌ಪಾಯಿಂಟ್‌ಗಳನ್ನು ಹಾಕಲಾಗಿದೆ. ಉಗ್ರರ ದಾಳಿ ಭೀತಿ ಇರುವುದರಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ.

10. ವಿಜಯ ಚೌಕದಿಂದ ಇಂಡಿಯಾ ಗೇಟ್‌ವರೆಗೆ ನಿನ್ನೆ ಸಂಜೆಯಿಂದಲೇ ಯಾವುದೇ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ನಿನ್ನೆ ಬೆಳಗ್ಗೆಯಿಂದಲೇ ಕರ್ತವ್ಯಪಥ, ರಫಿ ಮಾರ್ಗ್‌, ಮಾನ್‌ ಸಿಂಗ್‌ ರೋಡ್‌ಗೆ ಯಾವುದೇ ವಾಹನಗಳನ್ನು ಪ್ರವೇಶಿಸಲು ಅವಕಾಶ ನೀಡಿರಲಿಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.