ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಕಮಲಾ ಹ್ಯಾರಿಸ್ ಸ್ಪರ್ಧೆ ಈಗ ಅಧಿಕೃತ, ಚುನಾವಣಾ ಪತ್ರಕ್ಕೆ ಸಹಿ
Nov 05, 2024 04:34 PM IST
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಕಮಲಾ ಹ್ಯಾರಿಸ್ ಸ್ಪರ್ಧೆ ಈಗ ಅಧಿಕೃತವಾಗಿದ್ದು, ಅವರು ಇಂದು ಚುನಾವಣಾ ಪತ್ರಕ್ಕೆ ಸಹಿ ಹಾಕಿದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆ ನವೆಂಬರ್ ತಿಂಗಳಲ್ಲಿ ನಡೆಯಲಿದ್ದು, ಡೆಮಾಕ್ರಟ್ಸ್ ಅಭ್ಯರ್ಥಿ ಸ್ಥಾನದಿಂದ ಅಧ್ಯಕ್ಷ ಜೋ ಬಿಡೆನ್ ಹಿಂದೆ ಸರಿದ ಬಳಿಕ, ಕಮಲಾ ಹ್ಯಾರಿಸ್ ಅಭ್ಯರ್ಥಿಯಾಗಿ ನಿಯೋಜಿತರಾದರು. ಅವರು ಇಂದು ಚುನಾವಣಾ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಕಮಲಾ ಹ್ಯಾರಿಸ್ ಸ್ಪರ್ಧೆ ಈಗ ಅಧಿಕೃತವಾಗಿದೆ.
ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆ (US Presidential Elections) ಗೆ ಸ್ಪರ್ಧಿಸುವುದಾಗಿ ಅಧಿಕೃತವಾಗಿ ಘೋಷಿಸಿದರು. ಇಂದು (ಜುಲೈ 27) ಚುನಾವಣಾ ಅರ್ಜಿಗಳಿಗೆ ಸಹಿ ಹಾಕಿದರು. ಈ ವರ್ಷ ನವೆಂಬರ್ 5 ರಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಉಮೇದುವಾರಿಕೆಯನ್ನು ದೃಢೀಕರಿಸಿದರು.
ಪ್ರಸ್ತುತ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಪ್ರತಿಯೊಂದು ಮತವನ್ನೂ ಗಳಿಸುವುದಕ್ಕೆ ಶ್ರಮಿಸುವುದಾಗಿ ಹೇಳಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ತನ್ನ ‘ಜನಶಕ್ತಿಯ ಪ್ರಚಾರ’ ಯಶಸ್ವಿಯಾಗುವ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
ಈ ವಿಷಯವನ್ನು ಅವರು ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದು, ಜನ ಬೆಂಬಲ ನಿರೀಕ್ಷಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆ 2024; ಕಮಲಾ ಹ್ಯಾರಿಸ್ ಸ್ಪರ್ಧೆ ಈಗ ಅಧಿಕೃತ
ಕಮಲಾ ಸ್ಪರ್ಧೆಗೆ ಒಬಾಮಾ ದಂಪತಿ ಅನುಮೋದನೆ
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮಾಜಿ ಯುಎಸ್ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರು ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಅನುಮೋದಿಸಿದ್ದಾರೆ. ಬರಾಕ್ ಒಬಾಮಾ ಅವರು ಮತ್ತು ಮಿಚೆಲ್ ಅವರು ತಮ್ಮ ಗೆಳೆತಿ ಕಮಲಾ ಹ್ಯಾರಿಸ್‌ಗೆ ಶುಕ್ರವಾರ, ಕರೆ ಮಾಡಿದ್ದು, "ಅವರು ಯುನೈಟೆಡ್ ಸ್ಟೇಟ್ಸ್‌ನ ಅದ್ಭುತ ಅಧ್ಯಕ್ಷರಾಗಬಲ್ಲರು. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಈ ಕುರಿತು ಬರಾಕ್ ಒಬಾಮಾ ಅವರು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಈ ಹಿಂದೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರು ಚುನಾವಣೆಯಿಂದ ಹಿಂದೆ ಸರಿದ ನಂತರ ಕಮಲಾ ಹ್ಯಾರಿಸ್ ಅವರನ್ನು ಮುಂದಿನ ಡೆಮಾಕ್ರಟಿಕ್ ಅಭ್ಯರ್ಥಿ ಎಂದು ಅನುಮೋದಿಸಿದ್ದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಪ್ರವಾಸ
ಡೊನಾಲ್ಡ್ ಟ್ರಂಪ್, ಕಮಲಾ ಹ್ಯಾರಿಸ್, ಜೋ ಬಿಡೆನ್, ಎಲ್ಲರೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದರು.
ಫಾಕ್ಸ್ ನ್ಯೂಸ್ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮಾರ್-ಎ-ಲಾಗೊದಲ್ಲಿ ಸ್ವಾಗತಿಸಿದರು. ಅವರ ಭೇಟಿಯ ಸಂದರ್ಭದಲ್ಲಿ, ಮಧ್ಯಪ್ರಾಚ್ಯದ ವಿಷಯಗಳಿಗೆ ಬಂದಾಗ ಅವರ ಸಂಭಾವ್ಯ ಎದುರಾಳಿ ಕಮಲಾ ಹ್ಯಾರಿಸ್ ಅವರು ‘ಕೆಟ್ಟವರು’. ಚುನಾವಣೆಯಲ್ಲಿ ಗೆದ್ದರೆ ಮಾತ್ರ ಮೂರನೇ ಮಹಾಯುದ್ಧವನ್ನು ತಡೆಯಬಹುದು ಎಂದು ಟ್ರಂಪ್ ಹೇಳಿದರು.
ನೆತನ್ಯಾಹು ಅವರೊಂದಿಗಿನ ಟ್ರಂಪ್ ಅವರ ಭೇಟಿಗೆ ಒಂದು ದಿನದ ಮೊದಲು, ಕಮಲಾ ಹ್ಯಾರಿಸ್ ಮತ್ತು ಜೋ ಬಿಡೆನ್ ಅವರು ಗುರುವಾರ ಇಸ್ರೇಲ್ ಪ್ರಧಾನಿಯನ್ನು ಭೇಟಿಯಾಗಿದ್ದರು. ಆದಾಗ್ಯೂ, ಆಕ್ಸಿಯೋಸ್ ಪ್ರಕಾರ, ಗಾಜಾದಲ್ಲಿ ಇಸ್ರೇಲ್‌ನ ಕ್ರಮಗಳನ್ನು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಖಂಡಿಸಿದ್ದಾರೆ. ಇದರಿಂದ ನೆತನ್ಯಾಹು ಅಸಮಾಧಾನಗೊಂಡಿದ್ದಾರೆ. ಗಾಜಾದಲ್ಲಿ "ಭೀಕರ ಮಾನವೀಯ ಪರಿಸ್ಥಿತಿ" ಯ ಹ್ಯಾರಿಸ್ ಅವರ ಉಲ್ಲೇಖವು ನೆತನ್ಯಾಹುವನ್ನು ಕೆರಳಿಸಿತು ಎಂದು ಅಧಿಕಾರಿಯೊಬ್ಬರು ಆಕ್ಸಿಯೋಸ್‌ಗೆ ತಿಳಿಸಿದರು.
ಎರಡನೇ ಅಧ್ಯಕ್ಷೀಯ ಚರ್ಚೆ ಸೆಪ್ಟೆಂಬರ್ 10ಕ್ಕೆ; ಜೋ ಬಿಡೆನ್ ಮತ್ತು ಟ್ರಂಪ್ ತಂಡಗಳು ತಮ್ಮ 2 ಚರ್ಚೆಗಳ ಷರತ್ತುಗಳನ್ನು ಒಪ್ಪಿಕೊಂಡಾಗ, ಎರಡನೆಯದನ್ನು ಸೆಪ್ಟೆಂಬರ್ 10 ರಂದು ಎಬಿಸಿ ನ್ಯೂಸ್ ಆಯೋಜಿಸಲು ನಿಗದಿಪಡಿಸಲಾಗಿದೆ. ಈಗ ಬಿಡೆನ್ ಹಿಂದೆ ಸರಿದ ನಂತರ, ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಫಾಕ್ಸ್ ನ್ಯೂಸ್ ಚರ್ಚೆಯನ್ನು ಆಯೋಜಿಸಬೇಕು ಎಂದು ಹೇಳಿದರು. ಟ್ರಂಪ್ ಪ್ರಚಾರದ ವಕ್ತಾರ ಸ್ಟೀವನ್ ಚೆಯುಂಗ್ ಅವರು ಗುರುವಾರ, ಡೆಮಾಕ್ರಟಿಕ್ ಪಕ್ಷದಲ್ಲಿ ತಮ್ಮ ಅಭ್ಯರ್ಥಿಯನ್ನು ಅಂತಿಮಗೊಳಿಸದ ಹೊರತು ಚರ್ಚೆಯ ವಿವರಗಳನ್ನು ಅಂತಿಮಗೊಳಿಸಲಾಗುವುದಿಲ್ಲ ಎಂದು ಹೇಳಿದರು.
ಚರ್ಚೆಯ ಹಾದಿ ತಪ್ಪುತ್ತಿರುವುದನ್ನು ಗಮನಿಸಿದ ಕಮಲಾ ಹ್ಯಾರಿಸ್ ಅವರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ್ದು, "ಟ್ರಂಪ್ ಅವರು ಈಗ ಹಿಂದೇಟು ಹಾಕುತ್ತಿರುವಂತೆ ಕಾಣುತ್ತದೆ. ಮತದಾರರು ಚರ್ಚಾ ವೇದಿಕೆಯ ತೆರೆಮರೆಯಲ್ಲೇನು ನಡೆಯುತ್ತಿದೆ ಎಂಬುದನ್ನು ಅರಿಯುವುದಕ್ಕೆ ಅರ್ಹರಾಗಿದ್ದಾರೆ. ನಾನು ಕೂಡ ಚರ್ಚೆಗೆ ಸಿದ್ಧ. ಆದ್ದರಿಂದ ಚರ್ಚೆ ನಡೆಸೋಣ" ಎಂದಿದ್ದಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)