ಪಾಕಿಸ್ತಾನ ಚುನಾವಣೆ 2024; ಇಂದು ಮತದಾನ, ನಾಳೆ ಫಲಿತಾಂಶ, ಮತದಾನ ಪ್ರಕ್ರಿಯೆ ಹೀಗಿರುತ್ತೆ, ಜಿದ್ದಾಜಿದ್ದಿ ಕಣದಲ್ಲಿರುವ ಪಮುಖರ ವಿವರ
Feb 08, 2024 11:15 AM IST
ಪಾಕಿಸ್ತಾನ ಚುನಾವಣೆ 2024; ಇಂದು ಮತದಾನ ಪ್ರಗತಿಯಲ್ಲಿದ್ದು ನಾಳೆ ಫಲಿತಾಂಶ ಪ್ರಕಟವಾಗಲಿದೆ. ಪಾಕಿಸ್ತಾನ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಮತ್ತು ಜಿದ್ದಾಜಿದ್ದಿ ಕಣದಲ್ಲಿರುವ ಪಮುಖರ ವಿವರ ಈ ವರದಿಯಲ್ಲಿದೆ.
ಪಾಕಿಸ್ತಾನ ಚುನಾವಣೆ 2024: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆ ಪ್ರಗತಿಯಲ್ಲಿದ್ದು, ಇಂದು ಮತದಾನ ನಡೆಯುತ್ತಿದೆ. ನಾಳೆ ಫಲಿತಾಂಶ ಪ್ರಟಕವಾಗಲಿದೆ. ಜಿದ್ದಾಜಿದ್ದಿ ಕಣದಲ್ಲಿ ಪ್ರಮುಖ ಅಭ್ಯರ್ಥಿಗಳು ಯಾರು, ಮತದಾನ ಪ್ರಕ್ರಿಯೆ ಹೇಗಿರುತ್ತದೆ ಎಂಬಿತ್ಯಾದಿ ವಿವರ ಹೀಗಿದೆ.
ಪಾಕಿಸ್ತಾನದಲ್ಲಿ ನಿರೀಕ್ಷಿತ ಸಾರ್ವತ್ರಿಕ ಚುನಾವಣೆಯ ಮತದಾನ ಇಂದು (ಫೆ.8) ಪ್ರಗತಿಯಲ್ಲಿದೆ. ಫೆಡರಲ್ ಶಾಸಕಾಂಗ ಅಥವಾ ಹೌಸ್ ಅಸೆಂಬ್ಲಿ ಮತ್ತು ನಾಲ್ಕು ರಾಜ್ಯ ಶಾಸಕಾಂಗಗಳ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಹೊಸ ಸರ್ಕಾರಗಳು ರಚನೆಯಾಗಲಿವೆ.
ಫೆಡರಲ್ ಶಾಸಕಾಂಗದಲ್ಲಿ ಒಟ್ಟು 44 ರಾಜಕೀಯ ಪಕ್ಷಗಳು 5,121 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಆದರೆ 12,695 ಅಭ್ಯರ್ಥಿಗಳು ಪಂಜಾಬ್, ಸಿಂಧ್, ಖೈಬರ್ ಪಖ್ತುಂಖ್ವಾ ಮತ್ತು ಬಲೂಚಿಸ್ತಾನದ ನಾಲ್ಕು ಪ್ರಾಂತೀಯ ಅಸೆಂಬ್ಲಿಗಳಿಗೆ ಸ್ಪರ್ಧಿಸುತ್ತಿದ್ದಾರೆ. ಹೆಚ್ಚುವರಿಯಾಗಿ, ಒಟ್ಟು 2.41 ಕೋಟಿ ಜನಸಂಖ್ಯೆಯಲ್ಲಿ, 18 ವರ್ಷಕ್ಕಿಂತ ಮೇಲ್ಪಟ್ಟ 1.28 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.
ಪಾಕಿಸ್ತಾನ ಚುನಾವಣೆ 2024: ಮತದಾನ ಪ್ರಕ್ರಿಯೆ
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಒಟ್ಟು 336 ಸ್ಥಾನಗಳನ್ನು ಹೊಂದಿದೆ. ಈ ಪೈಕಿ 266 ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ಉಳಿದ 70 ಮೀಸಲಿಡಲಾಗಿದೆ, ಅದರಲ್ಲಿ 60 ಮಹಿಳೆಯರಿಗೆ ಮತ್ತು 10 ಮುಸ್ಲಿಮೇತರರಿಗೆ ಮೀಸಲು. ಈ ಮೀಸಲು ಸ್ಥಾನಗಳನ್ನು ವಿಧಾನಸಭೆಯಲ್ಲಿ ಪ್ರತಿ ರಾಜಕೀಯ ಪಕ್ಷಗಳ ಬಲಾಬಲಕ್ಕೆ ಅನುಗುಣವಾಗಿ ಹಂಚಲಾಗುತ್ತದೆ.
ವಿಜೇತ ಅಭ್ಯರ್ಥಿಗಳು ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗುತ್ತಾರೆ. ಆದಾಗ್ಯೂ, ಸ್ವತಂತ್ರ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯ ನಂತರ ಯಾವುದೇ ಪಕ್ಷಕ್ಕೆ ಸೇರಬಹುದು.
ಚುನಾಯಿತ ರಾಷ್ಟ್ರೀಯ ಅಸೆಂಬ್ಲಿ ಸದಸ್ಯರು ಫಲಿತಾಂಶಗಳನ್ನು ಘೋಷಿಸಿದ ನಂತರ ಸದನದ ನಾಯಕ ಅಥವಾ ಪಾಕಿಸ್ತಾನದ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಆತನಿಗೆ ಸದನದಲ್ಲಿ ಬಹುಮತ ಇರಬೇಕು. ಇದರರ್ಥ ಅವರಿಗೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಕನಿಷ್ಠ 169 ಸದಸ್ಯರ ಮತ ಬೆಂಬಲ ಬೇಕಾಗುತ್ತದೆ. ಯಾವುದೇ ಒಂದು ಪಕ್ಷಕ್ಕೆ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲ ಇಲ್ಲದಿರುವಾಗ ಸಮ್ಮಿಶ್ರ ಸರ್ಕಾರದ ಅಗತ್ಯ ಉಂಟಾಗುತ್ತದೆ.
ಪಾಕಿಸ್ತಾನ ಚುನಾವಣೆ 2024ರ ಪ್ರಮುಖ ಅಭ್ಯರ್ಥಿಗಳು
ಪ್ರಸ್ತುತ, ಮೂರು ಪ್ರಮುಖ ರಾಜಕೀಯ ಪಕ್ಷಗಳು ಪಾಕಿಸ್ತಾನದ ರಾಜಕೀಯ ಸನ್ನಿವೇಶದಲ್ಲಿ ಪ್ರಾಬಲ್ಯ ಹೊಂದಿವೆ. ಅವುಗಳೆಂದರೆ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್), ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ).ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಸ್ಪರ್ಧೆಯಲ್ಲಿರುವ ಪ್ರಮುಖ ಸ್ಪರ್ಧಿಗಳಲ್ಲಿ ಒಂದಾಗಿದೆ.
ಇಬ್ಬರು ಮಾಜಿ ಪ್ರಧಾನಿಗಳಾದ ನವಾಜ್ ಷರೀಫ್ ಮತ್ತು ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರು ಪಿಎಂಎಲ್-ಎನ್ ಮುಖ್ಯಸ್ಥರಾಗಿದ್ದಾರೆ. ಬಿಲಾವಲ್ ಭುಟ್ಟೊ-ಜರ್ದಾರಿ ನೇತೃತ್ವದ ಪಿಪಿಪಿ ಪಿಎಂಎಲ್-ಎನ್‌ನ ಮಿತ್ರಪಕ್ಷವಾಗಿದೆ.
ದಕ್ಷಿಣ ಪಾಕಿಸ್ತಾನದಲ್ಲಿ ಪಕ್ಷಕ್ಕೆ ಬಲವಾದ ನೆಲೆ ಇದೆ. ಆದಾಗ್ಯೂ, ಎಪಿ ಪ್ರಕಾರ ಬಿಲಾವಲ್ ಅವರು ಪ್ರಧಾನಿಯಾಗಲು ಮತಗಳನ್ನು ಗಳಿಸುವಷ್ಟು ಜನಪ್ರಿಯರಾಗಿಲ್ಲ. ನವಾಜ್ ಷರೀಫ್ ಗೆದ್ದರೆ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸ್ಥಾನ ಪಡೆಯಬಹುದು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ನಾಲ್ಕು ಕ್ರಿಮಿನಲ್ ಅಪರಾಧಗಳ ಕಾರಣದಿಂದಾಗಿ ರಾಜಕೀಯ ರೇಸ್‌ನಲ್ಲಿ ಇಲ್ಲ. ಅವರು ಈಗ ಈ ಚುನಾವಣೆಗಳಲ್ಲಿ ಭಾಗವಹಿಸಲು ಅಥವಾ ಸಾರ್ವಜನಿಕ ಹುದ್ದೆಯ ಹೊಣೆಗಾರಿಕೆ ವಹಿಸಲು ಅನರ್ಹರಾಗಿದ್ದಾರೆ.
ಪಾಕಿಸ್ತಾನದ ಕಳೆದ ಸಾರ್ವತ್ರಿಕ ಚುನಾವಣಾ ಫಲಿತಾಂಶ
ಪಾಕಿಸ್ತಾನದಲ್ಲಿ 2018 ರಲ್ಲಿ ನಡೆದ ಚುನಾವಣೆಯಲ್ಲಿ ಶೇಕಡಾ 51.9 ರಷ್ಟು ಮತದಾನವಾಗಿದೆ. 2018 ರ ಚುನಾವಣೆಯಲ್ಲಿ 116 ಸ್ಥಾನಗಳನ್ನು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಗೆದ್ದುಕೊಂಡಿದೆ. ನವಾಜ್ ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) 64 ಸ್ಥಾನಗಳನ್ನು, ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ 43, ಸ್ವತಂತ್ರರು 13 ಸ್ಥಾನಗಳನ್ನು ಗೆದ್ದಿದ್ದಾರೆ ಮತ್ತು 40 ಇತರ ಪಕ್ಷಗಳು ಮತ್ತು ಸದಸ್ಯರು ಗೆದ್ದಿದ್ದಾರೆ.