ಕರ್ನಾಟಕದಲ್ಲಿ ಹುಕ್ಕಾ ಬಾರ್ ಬಂದ್‌; ಹುಕ್ಕಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿ ಅಧಿಸೂಚನೆ ಪ್ರಕಟಿಸಿದೆ ಆರೋಗ್ಯ ಇಲಾಖೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಹುಕ್ಕಾ ಬಾರ್ ಬಂದ್‌; ಹುಕ್ಕಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿ ಅಧಿಸೂಚನೆ ಪ್ರಕಟಿಸಿದೆ ಆರೋಗ್ಯ ಇಲಾಖೆ

ಕರ್ನಾಟಕದಲ್ಲಿ ಹುಕ್ಕಾ ಬಾರ್ ಬಂದ್‌; ಹುಕ್ಕಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿ ಅಧಿಸೂಚನೆ ಪ್ರಕಟಿಸಿದೆ ಆರೋಗ್ಯ ಇಲಾಖೆ

Hookah ban in Karnataka: ಕರ್ನಾಟಕದಲ್ಲಿ ಹುಕ್ಕಾ ಬಾರ್ ಬಂದ್‌ ಆಗಿದ್ದು, ಹುಕ್ಕಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿ ಕರ್ನಾಟಕ ಆರೋಗ್ಯ ಇಲಾಖೆ ಬುಧವಾರ (ಫೆ.7) ಅಧಿಸೂಚನೆ ಪ್ರಕಟಿಸಿದೆ. ಸಾರ್ವಜನಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಸರ್ಕಾರ ಈ ನಡೆಯನ್ನು ಸಮರ್ಥಿಸಿಕೊಂಡಿದೆ.

ಕರ್ನಾಟಕದಲ್ಲಿ ಹುಕ್ಕಾ ಬಾರ್ ಬಂದ್‌ ಆಗಿದೆ. ಹುಕ್ಕಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿ ಆರೋಗ್ಯ ಇಲಾಖೆಯು  ಅಧಿಸೂಚನೆ ಪ್ರಕಟಿಸಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಹುಕ್ಕಾ ಬಾರ್ ಬಂದ್‌ ಆಗಿದೆ. ಹುಕ್ಕಾ ವ್ಯಾಪಾರ ವಹಿವಾಟುಗಳನ್ನು ನಿಷೇಧಿಸಿ ಆರೋಗ್ಯ ಇಲಾಖೆಯು ಅಧಿಸೂಚನೆ ಪ್ರಕಟಿಸಿದೆ. (ಸಾಂಕೇತಿಕ ಚಿತ್ರ) (ANI)

ಬೆಂಗಳೂರು: ಕರ್ನಾಟಕದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ ಮತ್ತು ಜಾಹೀರಾತು, ಪ್ರಚೋದನೆ, ಸಂಗ್ರಹ, ವ್ಯಾಪಾರ ಸೆರಿ ಎಲ್ಲ ರೀತಿಯ ಹುಕ್ಕಾ ವಹಿವಾಟುಗಳನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿ ರಾಜ್ಯ ಆರೋಗ್ಯ ಇಲಾಖೆ ಬುಧವಾರ (ಫೆ.7) ಅಧಿಸೂಚನೆ ಹೊರಡಿಸಿದೆ.

'ಸಾರ್ವಜನಿಕ ಆರೋಗ್ಯ'ವನ್ನು ರಕ್ಷಿಸುವ ದೃಷ್ಟಿಯಿಂದ, ರಾಜ್ಯ ಅಗ್ನಿ ನಿಯಂತ್ರಣ ಮತ್ತು ಅಗ್ನಿ ಸುರಕ್ಷತೆ ಕಾನೂನುಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಸರ್ಕಾರವು ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಮಾರಾಟವನ್ನು ನಿಷೇಧಿಸಿದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಹುಕ್ಕಾ, ತಂಬಾಕು ಸಹಿತ ಅಥವಾ ರಹಿತ, ನಿಕೋಟಿನ್ ಸಹಿತ ಅಥವಾ ರಹಿತ, ಸ್ವಾದಭರಿತ, ಸಾದರಹಿತ, ಮೊಲಾಸಸ್, ಶಿಶಾ ಇದೇ ಮಾದರಿಯ ಹೆಸರುಗಳಿಂದ ಕರೆಯಲಡುವ ಎಲ್ಲಾ ರೀತಿಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಜಾಹೀರಾತು, ಪ್ರಚೋದನೆ, ಸಂಗ್ರಹಣೆ, ವ್ಯಾಪಾರವನ್ನು ಸಂಪೂರ್ಣ ನಿಷೇಧಿಸಿರುವುದಾಗಿ ಇಲಾಖೆ ತಿಳಿಸಿದೆ.

ಕಳೆದ ವರ್ಷ ಕೋರಮಂಗಲದ ಹುಕ್ಕಾ ಬಾರ್‌ನಲ್ಲಿ ಅಗ್ನಿಶಾಮಕ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದ ಬೆಂಕಿ ಅವಘಡದ ಹಿನ್ನೆಲೆಯಲ್ಲಿ ನಿಷೇಧ ಜಾರಿಗೊಳಿಸಲಾಗಿತ್ತು.

ಒಂದು ವೇಳೆ ನಿಷೇಧ ಆದೇಶವನ್ನು ಪಾಲಿಸಿದೇ ಇದ್ದರೆ ಕಾಟಾ 2003 ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ -2015, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ನಿಯಮ 2015, ಭಾರತೀಯ ದಂಡ ಸಂಹಿತೆ, ಅಗ್ನಿ ನಿಯಂತ್ರಣಹಾಗೂ ಅಗ್ನಿಸುರಕ್ಷತೆ ಕಾಯಿದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಇಲಾಖೆ ಎಚ್ಚರಿಸಿದೆ.

ಆಹಾರ ಸುರಕ್ಷತೆ ಗುಣಮಟ್ಟ ಕಾಯಿದೆ ಉಲ್ಲಂಘನೆ

ಹುಕ್ಕಾ ಬಾರ್‌ಗಳಲ್ಲಿ ಆಹಾರ ಸುರಕ್ಷತೆ ಗುಣಮಟ್ಟ ಕಾಯಿದೆಯ ಉಲ್ಲಂಘನೆಯಾಗುತ್ತಿದೆ. ಹೋಟೆಲ್, ಬಾರ್, ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವನೆ ಮಾಡುವುದರಿಂದ ಆಹಾರ ಪದಾರ್ಥಗಳು ಸೇವಿಸುವುದಕ್ಕೆ ಸುರಕ್ಷಿತವಲ್ಲ.

ಕಾಟಾ ಕಾಯಿದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ನಿಷೇಧವಿದೆ. ಹುಕ್ಕಾದಲ್ಲೂ ನಿಕೋಟಿನ್ ಅಂಶ ಇರುತ್ತದೆ. ಹೀಗಾಗಿ ಹುಕ್ಕಾ ಬಾರ್‌ಗಳಲ್ಲಿ ಮುಕ್ತ ಹುಕ್ಕಾ ಸೇವನೆಯಿಂದ ನಿಯಮ ಉಲ್ಲಂಘನೆಯಾಗುತ್ತದೆ. ಅಷ್ಟೇ ಅಲ್ಲ, ಯುವಕರಲ್ಲಿ ಹುಕ್ಕಾ ಸೇವನೆಗೆ ಪ್ರಚೋದನೆ ಉಂಟು ಮಾಡುತ್ತದೆ. ಕರ್ನಾಟಕ ವಿಷ ನಿಯಮ -2015ರ ಅಡಿ ನಿಕೋಟಿನ್ ಅನ್ನು ವಿಷ ಅಥವಾ ಅಪಯಕಾರಿ ರಾಸಾಯನಿಕ ಎಂದು ವರ್ಗೀಕರಿಸಲಾಗಿದೆ.

ಇನ್ನು ಹುಕ್ಕಾವನ್ನು ಮುಚ್ಚಿರುವ ಕೊಠಡಿಯಲ್ಲಿ ನಳಿಕೆ ಅಥವಾ ಪೈಪ್ ಮೂಲಕ ಬಾಯಿಯ ಮೂಲಕ ಸೇವನೆ ಮಾಡಲಾಗುತ್ತದೆ. ಇದರಿಂದ ಬಾಯಿ ಮೂಲಕ ಹರಡುವ ಸಾಂಕ್ರಾಮಿಕಗಳಾದ ಹರ್ಪಿಸ್, ಕ್ಷಯರೋಗ, ಹೆಪಟೈಟಿಸ್, ಕೊರೋನಾ ಸೇರಿ ಇತರೆ ಕಾಯಿಲೆಗಳು ಹರಡಬಹುದು. ಇಷ್ಟೆಲ್ಲ ಕಾರಣಗಳನ್ನು ನೀಡಿ ಹುಕ್ಕಾ ವ್ಯಾಪಾರ ವಹಿವಾಟು ನಿಷೇಧ ಕ್ರಮವನ್ನು ಕರ್ನಾಟಕ ಸರ್ಕಾರ ಸಮರ್ಥಿಸಿಕೊಂಡಿದೆ.

ಕಳೆದ ಚಳಿಗಾಲದ ಅಧಿವೇಶನದಲ್ಲಿ ಕಾನೂನು ಜಾರಿಗೊಳಿಸುವ ಘೋಷಣೆ

2023 ರಲ್ಲಿ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ, ಕರ್ನಾಟಕದ ಗೃಹ ಸಚಿವ ಜಿ ಪರಮೇಶ್ವರ ಅವರು, ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಯಂತ್ರಿಸಲು ಶೀಘ್ರದಲ್ಲೇ ಕಾನೂನನ್ನು ತರುವುದಾಗಿ ಘೋಷಿಸಿದ್ದರು.

“ಸರ್ಕಾರವು ಹುಕ್ಕಾ ಬಾರ್‌ಗಳನ್ನು ಮತ್ತು ಮಾರಾಟವನ್ನು ತಡೆಯಲು ಕಠಿಣ ಕ್ರಮಗಳನ್ನು ಪ್ರಾರಂಭಿಸುತ್ತದೆ. ಇತರ ಮಾದಕ ವಸ್ತುಗಳು. ರಾಜ್ಯದಲ್ಲಿ ಹುಕ್ಕಾ ಬಾರ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಿದೆ ಎಂದು ಸಚಿವರು ಹೇಳಿದ್ದರು.

ವಿಧಾನಸಭೆಯಲ್ಲಿ ಮಂಡಿಸಲಾದ ಮಾಹಿತಿಯ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ 100 ಕ್ಕೂ ಹೆಚ್ಚು ಪ್ರಕರಣಗಳು ಹುಕ್ಕಾ ಬಾರ್‌ಗಳ ವಿರುದ್ಧ ದಾಖಲಾಗಿವೆ. ಈ ಪೈಕಿ 2020 ರಲ್ಲಿ 18, 2021 ರಲ್ಲಿ 25, 2022 ರಲ್ಲಿ 38 ಮತ್ತು 2023 ರಲ್ಲಿ 25 ಪ್ರಕರಣಗಳು.

Whats_app_banner