Year in Review 2022: ರಾಷ್ಟ್ರ ರಾಜಕಾರಣದಲ್ಲಿ ಮಿಂಚುತ್ತಿದೆ ಆಪ್: 10 ವರ್ಷಗಳ ಸಾಧನೆ ಬಾಪ್ ರೇ ಬಾಪ್..!
Dec 21, 2022 03:10 PM IST
ಆಪ್ ನಾಯಕರು (ಸಂಗ್ರಹ ಚಿತ್ರ)
- ನಿಮ್ಮ ನೆಚ್ಚಿನ 'ಹಿಂದುಸ್ತಾನ್ ಟೈಮ್ಸ್ ಕನ್ನಡ' ಡಿಜಿಟಲ್ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ. ಇದರ ಮೂರನೇ ಸರಣಿಯಲ್ಲಿ 2022ರಲ್ಲಿ ಆಮ್ ಆದ್ಮಿ ಪಕ್ಷ(ಆಪ್) ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ಅವಲೋಕಿಸೋಣ.
ಬೆಂಗಳೂರು: 2022 ಸರಿದು 2023 ಬರತ್ತಿದೆ. ಈ ಮೂಲಕ ಭೂಮಿಯ ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರಿಕೊಂಡಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ ನೀ ಸಾಗುವ ದಾರಿಯನ್ನೊಮ್ಮೆ ಹಿಂತಿರುಗಿ ನೋಡು ಎಂಬಂತೆ, ಹೊಸ ವರ್ಷವನ್ನು ಸ್ವಾಗತಿಸುವ ಮೊದಲು ನಾವೆಲ್ಲರೂ 2022ರಲ್ಲಿ ದೇಶ ಸಾಗಿ ಬಂದ ದಾರಿಯ ಮೇಲೆ ಕಣ್ಣಾಡಿಸುವುದು ಅವಶ್ಯ.
ಅದರಲ್ಲೂ ದೇಶದ ರಾಜಕೀಯ ಕ್ಷೇತ್ರದಲ್ಲಿ 2022 ನಿಜಕ್ಕೂ ರೋಚಕ ಕ್ಷಣಗಳನ್ನು ಹೊತ್ತು ತಂದ ವರ್ಷ ಎಂದರೆ ತಪ್ಪಾಗಲಾರದು. ವರ್ಷಪೂರ್ತಿ ನಡೆದ ರಾಜಕೀಯ ಬೆಳವಣಿಗೆಗಳು, ರಾಜಕೀಯ ಪಕ್ಷಗಳು, ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರಗಳು, ರಾಜಕೀಯ ನಿರ್ಣಯಗಳಿಂದ ದೇಶದ ಮೇಲಾದ ಪ್ರಭಾವ ಹೀಗೆ ಎಲ್ಲವನ್ನೂ ಅವಲೋಕಿಸುವುದು ಅವಶ್ಯ.
ಈ ಹಿನ್ನೆಲೆಯಲ್ಲಿ ನಿಮ್ಮ ನೆಚ್ಚಿನ 'ಹಿಂದುಸ್ತಾನ್ ಟೈಮ್ಸ್ ಕನ್ನಡ' ಡಿಜಿಟಲ್ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ.
ಅದರಂತೆ ದೇಶದ ರಾಜಕಾರಣದಲ್ಲಿ ಮಿಂಚುತ್ತಿರುವ ಆಮ್ ಆದ್ಮಿ ಪಕ್ಷ(ಎಎಪಿ-ಆಪ್), 2022ರಲ್ಲಿ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ನಾವು ಮೂರನೇ ಸರಣಿಯಲ್ಲಿ ಅವಲೋಕಿಸೋಣ.
ಆಮ್ ಆದ್ಮಿ ಪಕ್ಷ(ಆಪ್):
ದೇಶದ ಜನಮಾನಸದಲ್ಲಿ ಆಪ್ ಎಂದೇ ಚಿರಪರಿಚಿತವಾಗಿರುವ ಆಮ್ ಆದ್ಮಿ ಪಕ್ಷ, ಕೇವಲ ಹತ್ತು ವರ್ಷಗಳ ಹಿಂದೆ ಹುಟ್ಟಿಕೊಂಡ ರಾಜಕೀಯ ಪಕ್ಷ. ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ನೆರಳಲ್ಲಿ ಜನ್ಮ ತಳೆದ ಈ ಪಕ್ಷ, ದೇಶದ ರಾಜಕೀಯದಲ್ಲಿ ಹೊಸ ಭರವಸೆಯೊಂದಿಗೆ ಪಾದಾರ್ಪಣೆ ಮಾಡಿತು.
ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಭಾಗವಾಗಿದ್ದ ಅರವಿಂದ್ ಕೇಜ್ರಿವಾಲ್ ಮತ್ತವರ ಸಂಗಡಿಗರು ಹುಟ್ಟು ಹಾಕಿದ ಆಪ್, ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಪಕ್ಷದ ಮನ್ನಣೆ ಪಡೆದಿರುವುದು, ಆ ಪಕ್ಷದ ತ್ವರಿತ ಬೆಳವಣಿಗೆಗೆ ಸಾಕ್ಷಿಯಾಗಿದೆ. ಆಪ್ ಇತಿಹಾಸವನ್ನು ಇಲ್ಲಿ ಕೆದಕುವುದು ಬೇಡವಾದರೂ, 2022ರಲ್ಲಿ ಈ ಪಕ್ಷ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ಇಲ್ಲಿ ಚರ್ಚಿಸೋಣ.
ರಾಷ್ಟ್ರ ರಾಜಧಾನಿಯಲ್ಲಿ ಸತತ ಎರಡನೇ ಬಾರಿಗೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಆಪ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ದೆಹಲಿಯನ್ನು ಆಳುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರ ಆಪ್‌ನ ರಾಷ್ಟ್ರೀಯ ಸಂಚಾಲಕರೂ ಹೌದು.
ಪಂಜಾಬ್ ವಿಧಾನಸಭೆ ಚುನಾವಣೆ:
ಆಪ್ ಪಾಲಿಗೆ ಸಿಹಿ ಅನುಭವವಾಗಿದ್ದು 20 ಫೆಬ್ರವರಿ 2022ರಂದು ಘೋಷಣೆಯಾದ ಪಂಜಾಬ್ ವಿಧಾನಸಭಾ ಚುನಾವಣೆ ಫಲಿತಾಂಶ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಮಣ್ಣು ಮುಕ್ಕಿಸಿ,117 ವಿಧಾನಸಭಾ ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳಲ್ಲಿ ಆಪ್ ಬರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ಪಂಜಾಬ್‌ಬಲ್ಲಿ ಆಪ್ ಪಕ್ಷದ ಸರ್ಕಾರ ರಚನೆಯಾಯಿತು.
2017ರ ಚುನಾವಣೆಗಿಂತ ಈ ಬಾರಿ 72 ಹೆಚ್ಚಿನ ಕ್ಷೇತ್ರಗಳನ್ನು ಗೆದ್ದ ಆಪ್, ಕೇವಲ ಕಾಂಗ್ರೆಸ್‌ಗೆ ಮಾತ್ರವಲ್ಲದೇ ಬಿಜೆಪಿ ಮತ್ತದರ ಮಿತ್ರಪಕ್ಷಗಳಿಗೂ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. ದೆಹಲಿ ಹೊರತುಪಡಿಸಿ ಬೇರೊಂದು ರಾಜ್ಯದಲ್ಲಿ ಆಪ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ರಾಷ್ಟ್ರ ರಾಜಕಾರಣದ ಗಮನ ಸೆಳೆಯಿತು. ದೆಹಲಿ ಕೇಂದ್ರಾಡಳಿತ ಪ್ರದೇಶವಾದರೆ, ಪಂಜಾಬ್ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ಹೊಂದಿದೆ ಎಂಬುದು ವಿಶೇಷ.
ಇನ್ನುಳಿದಂತೆ ಉತ್ತರಾಖಂಡ್, ಗೋವಾ, ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯಲ್ಲೀ ಆಪ್ ಸದ್ದು ಮಾಡಿತ್ತಾದರೂ, ಆ ರಾಜ್ಯಗಳಲ್ಲಿ ಆಪ್‌ಗೆ ಯಶಸ್ಸು ದೊರೆಯಲಿಲ್ಲ.
ಗುಜರಾತ್ ವಿಧಾನಸಭೆ ಚುನಾವಣೆ:
ಆದರೆ ತೀರ ಇತ್ತೀಚಿಗೆ ಅಂದರೆ ಡಿ.08ರಂದು ಘೋಷಣೆಯಾದ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ, ಆಪ್ ಪಾಲಿಗೆ ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಗುಜರಾತ್‌ನಲ್ಲಿ ಕೇವಲ ಐದು ಕ್ಷೇತ್ರಗಳಲ್ಲಿ ಜಯಗಳಿಸಿದರೂ, ಆಪ್ ಅಧಿಕೃತವಾಗಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದುಕೊಂಡಿತು.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನೇ ಟಕ್ಕರ್ ನೀಡುವ ಹುಮ್ಮಸ್ಸಿನೊಂದಿಗೆ ಆಪ್ ಕಣಕ್ಕಿಳಿದಿತ್ತು. ಚುನಾವಣಾ ಪ್ರಚಾರ ಭರಾಟೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ನ್ನೂ ಹಿಂದಿಕ್ಕಿದ್ದ ಆಪ್, ಒಂದು ಹಂತದಲ್ಲಿ ಬಿಜೆಪಿಯನ್ನೂ ಆತಂಕಕ್ಕೆ ದೂಡಿತ್ತು. ಗುಜರಾತ್‌ನಲ್ಲಿ ಆಪ್ ಸರ್ಕಾರ ರಚನೆ ಖಚಿತ ಎಂಬ ಭರವಸೆಯೊಂದಿಗೆ ಪ್ರಚಾರಕ್ಕಿಳಿದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಡಳಿತಾರೂಢ ಬಿಜೆಪಿಯನ್ನು ಹೈರಾಣಾಗಿಸಿದ್ದು ಸುಳ್ಳಲ್ಲ.
ಆದರೆ ಅಂತಿಮವಾಗಿ ಬಿಜೆಪಿ ಚುನಾವಣೆಯಲ್ಲಿ ಐತಿಹಾಸಿಕ ಗೆಲುವಿನ ನಗೆ ಬೀರಿತು. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ 156 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತು. ಆದರೆ ಈ ಮೊದಲೇ ಹೇಳಿದಂತೆ ಆಪ್ ಈ ಚುನಾವಣೆಯಲ್ಲಿ ಕೇವಲ ಐದು ಕ್ಷೇತ್ರಗಳಲ್ಲಿ ಜಯ ಸಾಧಿಸಿದರೂ, ಅಧಿಕೃತವಾಗಿ ರಾಷ್ಟ್ರೀಯ ಪಕ್ಷದ ಮನ್ನಣೆ ಪಡೆಯಿತು.
ದೆಹಲಿ ಪಾಲಿಕೆ ಚುನಾವಣೆ:
ಆಪ್ ಪಾಲಿಗೆ 2022ರ ವರ್ಷಾಂತ್ಯ ನಿಜಕ್ಕೂ ಸಿಹಿ ಅನುಭವ ನೀಡಿದೆ. ಏಕೆಂದರೆ ದೆಹಲಿ ಪಾಲಿಕೆ(ಎಂಸಿಡಿ) ಚುನಾವಣೆಯಲ್ಲಿ ಆಪ್ ಭರ್ಜರಿ ಪ್ರದರ್ಶನ ತೋರಿ, ಪಾಲಿಕೆಯನ್ನು ತನ್ನ ಕೈವಶ ಮಾಡಿಕೊಂಡಿದೆ. ಎಎಪಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ, 15 ವರ್ಷಗಳ ಬಿಜೆಪಿ ಆಳ್ವಿಕೆಯನ್ನು ಆಪ್ ಅಂತ್ಯಗೊಳಿಸಿತು.
ಹೀಗೆ 2022ರ ವರ್ಷದಲ್ಲಿ ಆಪ್ ರಾಷ್ಟ್ರ ರಾಜಕಾರಣದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದ್ದು, 2023ರಲ್ಲಿ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿದೆ.
ವಿಭಾಗ