logo
ಕನ್ನಡ ಸುದ್ದಿ  /  ಕ್ರೀಡೆ  /  Pv Sindhu: ಪಿವಿ ಸಿಂಧು ಹೊಸ ಕೋಚ್ ಮುಹಮ್ಮದ್ ಹಫೀಜ್ ಹಶೀಮ್; 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಹುದ್ದೆ

PV Sindhu: ಪಿವಿ ಸಿಂಧು ಹೊಸ ಕೋಚ್ ಮುಹಮ್ಮದ್ ಹಫೀಜ್ ಹಶೀಮ್; 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಹುದ್ದೆ

Jayaraj HT Kannada

Jul 18, 2023 09:45 AM IST

google News

ಪಿವಿ ಸಿಂಧು

    • PV Sindhu News coach: ಒಲಿಂಪಿಕ್‌ ಪದಕ ವಿಜೇತ ಶಟ್ಲರ್‌ ಪಿವಿ ಸಿಂಧುಗೆ, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನವರೆಗೆ ಮುಹಮ್ಮದ್ ಹಫೀಜ್ ಹಾಶಿಮ್ ಕೋಚಿಂಗ್‌ ನೀಡಲಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು (PTI)

ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿರುವ ಮಲೇಷ್ಯಾದ ಮುಹಮ್ಮದ್ ಹಫೀಜ್ ಹಾಶಿಮ್ (Muhammad Hafiz Hashim) ಅವರನ್ನು ಭಾರತದ ಸ್ಟಾರ್‌ ಅಥ್ಲೀಟ್‌ ಪಿವಿ ಸಿಂಧು ನೂತನ ಕೋಚ್‌ ಆಗಿ ಪಡೆಯಲಿದ್ದಾರೆ. ಹಾಶಿಮ್ ಅವರನ್ನು ಸಿಂಧು ತರಬೇತುದಾರರಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India -SAI) ಅನುಮೋದಿಸಿದೆ. ಹೀಗಾಗಿ ಮುಂಬರುವ ಪಂದ್ಯಾವಳಿಗಳಿಗಳಲ್ಲಿ ಪಿವಿ ಸಿಂಧುಗೆ ಮಲೇಷ್ಯಾದ ಮುಹಮ್ಮದ್ ಹಫೀಜ್ ಮಾರ್ಗದರ್ಶನ ನೀಡಲಿದ್ದಾರೆ.

ಒಲಂಪಿಕ್ಸ್‌ನಲ್ಲಿ ಎರಡೆರಡು ಪದಕ ಗೆದ್ದಿರುವ ಬ್ಯಾಡ್ಮಿಂಟನ್ ತಾರೆ ಕಳೆದ ತಿಂಗಳು ಹಾಶಿಮ್ ಅವರನ್ನು ತಮ್ಮ ಕೋಚ್ ಆಗಿ ನಿಯೋಜಿಸುವಂತೆ ಎಸ್‌ಎಐ ಮತ್ತು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾಗೆ ಮನವಿ ಸಲ್ಲಿಸಿದ್ದರು. ಭಾರತೀಯ ಕ್ರೀಡಾ ಪ್ರಾಧಿಕಾರದ ಮಿಷನ್ ಒಲಿಂಪಿಕ್ ಸೆಲ್ (MOC) ಗುರುವಾರ ಆ ಮನವಿಯನ್ನು ಪುರಸ್ಕರಿಸಿದೆ. ಇವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ವರೆಗೆ ಕೋಚ್‌ ಹುದ್ದೆಯನ್ನು ನಿರ್ವಹಿಸಲಿದ್ದಾರೆ.

ಹೈದರಾಬಾದ್‌ನಲ್ಲಿ ಎರಡು ವಾರಗಳ ಕಾಲ ತರಬೇತಿ ನೀಡಿದ್ದ ಹಾಶಿಮ್

ಈ ವಾರ ಕೊರಿಯಾ ಓಪನ್‌ನಲ್ಲಿ ಆಡುವ ಮಾಜಿ ವಿಶ್ವ ಚಾಂಪಿಯನ್‌ ಅವರನ್ನು ಭೇಟಿಯಾಗಲು ಹಾಶಿಮ್ ಸೋಮವಾರವಷ್ಟೇ ನವದೆಹಲಿಯಿಂದ ಯೆಯೊಸುಗೆ (Yeosu) ಹಾರಿದ್ದರು. ಈಗಗಾಲೇ 40 ವರ್ಷ ವಯಸ್ಸಿನ ಅನುಭವಿ ಕೋಚ್‌ ಹಾಶಿಮ್‌, ಕೆನಡಾ ಮತ್ತು ಯುಎಸ್‌ನಲ್ಲಿ ಎರಡು ಪಂದ್ಯಾವಳಿಗಳನ್ನು ಆಡಲು ತೆರಳುವ ಮೊದಲು ಸಿಂಧುಗೆ ಹೈದರಾಬಾದ್‌ನಲ್ಲಿ ಎರಡು ವಾರಗಳ ಕಾಲ ತರಬೇತಿ ನೀಡಿದ್ದರು.

"ಕೊರಿಯಾದ ಓಪನ್‌ ಬಳಿಕ, ಜಪಾನ್ ಓಪನ್, ಆಸ್ಟ್ರೇಲಿಯನ್ ಓಪನ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಸಿಂಧುಗೆ ಕೋಚ್ ಆಗಲು ಹಾಶಿಮ್ ಕೂಡಾ ಸಿಂಧೂ ಜೊತೆಗೆ ಪ್ರಯಾಣಿಸುತ್ತಾರೆ" ಎಂದು ಹೈದರಾಬಾದ್‌ನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿ (ಎಸ್‌ಬಿಎ) ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಪ್ರದೀಪ್ ರಾಜು ಹೇಳಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ರಾಜು ಅವರು ಹಾಶಿಮ್ ಅವರನ್ನು ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಗೆ ತರಬೇತುದಾರರಾಗಿ ಕರೆತಂದಿದ್ದರು. ಸಿಂಧು ಇದೇ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಾರೆ.

ಹಾಶಿಮ್‌ ಸಂಭಾವನೆ ಕೊಡವುದು ಯಾರು?

ಕೋಚ್‌ ಹಾಶಿಮ್‌ ಅವರ ಪ್ರಯಾಣ ಮತ್ತು ದೈನಂದಿನ ಭತ್ಯೆಯನ್ನು ಎಸ್‌ಎಐ ಪಾವತಿಸುತ್ತದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಅವರ ಸಂಭಾವನೆಯನ್ನು ಎಸ್‌ಬಿಎ ಮತ್ತು ಕ್ರೀಡಾ ಪ್ರಚಾರ ಸಂಸ್ಥೆ ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ (OGQ) ಪಾವತಿಸುತ್ತದೆ. ಈ ಸಂಸ್ಥೆ ಹಲವು ವರ್ಷಗಳಿಂದ ಸಿಂಧು ಅವರ ಬೆನ್ನಿಗಿದೆ.

ಪಾರ್ಕ್ ಟೈ ಸ್ಯಾಂಗ್ ವಿರುದ್ಧ ಅಸಮಾಧಾನ

ಈ ಹಿಂದೆ ಸಿಂಧೂಗೆ ದಕ್ಷಿಣ ಕೊರಿಯಾದ ಕೋಚ್ ಪಾರ್ಕ್ ಟೈ ಸ್ಯಾಂಗ್ ಕೋಚಿಂಗ್‌ ನೀಡುತ್ತಿದ್ದರು. ಅವರ ಕೋಚಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಂಧು, 40 ವರ್ಷದ ಹಫೀಜ್ ಅವರನ್ನು ವೈಯಕ್ತಿಕ ಕೋಚ್ ಆಗಿ ನೇಮಿಸಲು ಎಸ್‌ಎಐ ಅನುಮತಿ ಕೋರಿದ್ದರು. ಅದಕ್ಕೂ ಮುನ್ನ ಐವರು ತರಬೇತುದಾರರನ್ನು ಬದಲಿಸಿರುವ ಪಿವಿ ಸಿಂಧು, ಮುಂದೆ ಮಲೇಷ್ಯಾದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಮೊಹಮ್ಮದ್ ಹಫೀಜ್ ಹಶೀಮ್ ಬಳಿ ತರಬೇತಿ ಪಡೆಯಲಿದ್ದಾರೆ.

ಈ ವರ್ಷ ಸಿಂಧೂ ಬ್ಯಾಡ್ಮಿಂಟನ್‌ ರಾಕೆಟ್‌ ಅಷ್ಟಾಗಿ ಸದ್ದು ಮಾಡಿಲ್ಲ. ಆಡಿದ 11 ಟೂರ್ನಿಗಳಲ್ಲಿ ಸಿಂಧು ಏಳು ಬಾರಿ ಮೊದಲ ಎರಡು ಸುತ್ತುಗಳಲ್ಲಿ ಸೋತಿದ್ದಾರೆ. ಸ್ಪೇನ್ ಮಾಸ್ಟರ್ಸ್‌ನಲ್ಲಿ ಮಾತ್ರ ಫೈನಲ್ ತಲುಪಿದ್ದರು. ಅದರ ಹೊರತಾಗಿ ಅವರು ಎರಡು ಬಾರಿ ಸೆಮಿಫೈನಲ್ ಮತ್ತು ಒಮ್ಮೆ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. 2022ರ ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಚಿನ್ನಕ್ಕೆ ಮುತ್ತಿಟ್ಟಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ