logo
ಕನ್ನಡ ಸುದ್ದಿ  /  ಕ್ರೀಡೆ  /  ನಾಡಾ ಅಮಾನತು ಆದೇಶದ ವಿರುದ್ಧ ಮೇಲ್ಮನವಿ; ಬಿಜೆಪಿ ಸೇರಿದ್ರೆ, ನಿಷೇಧ ರದ್ದುಪಡಿಸುತ್ತೇನೆ ಎಂದ ಬಜರಂಗ್ ಪೂನಿಯಾ

ನಾಡಾ ಅಮಾನತು ಆದೇಶದ ವಿರುದ್ಧ ಮೇಲ್ಮನವಿ; ಬಿಜೆಪಿ ಸೇರಿದ್ರೆ, ನಿಷೇಧ ರದ್ದುಪಡಿಸುತ್ತೇನೆ ಎಂದ ಬಜರಂಗ್ ಪೂನಿಯಾ

Prasanna Kumar P N HT Kannada

Nov 28, 2024 12:15 PM IST

google News

ನಾಡಾ ಅಮಾನತು ಆದೇಶದ ವಿರುದ್ಧ ಮೇಲ್ಮನವಿ; ಬಿಜೆಪಿ ಸೇರಿದ್ರೆ, ನಿಷೇಧ ರದ್ದುಪಡಿಸುತ್ತೇನೆ ಎಂದ ಬಜರಂಗ್ ಪೂನಿಯಾ

    • Bajrang Punia: ಡೋಪಿಂಗ್ ಪರೀಕ್ಷೆ ನಿಯಮ ಉಲ್ಲಂಘನೆಗಾಗಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ವಿಧಿಸಿರುವ 4 ವರ್ಷಗಳ ನಿಷೇಧದ ವಿರುದ್ಧ ಸ್ವಿಟ್ಜರ್ಲೆಂಡ್‌ನ ಲೌಸೇನ್‌ನಲ್ಲಿರುವ ಕೋರ್ಟ್ ಆಫ್ ಸ್ಪೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಕುಸ್ತಿಪಟು ಬಜರಂಗ್ ಪುನಿಯಾ ಹೇಳಿದ್ದಾರೆ.
ನಾಡಾ ಅಮಾನತು ಆದೇಶದ ವಿರುದ್ಧ ಮೇಲ್ಮನವಿ; ಬಿಜೆಪಿ ಸೇರಿದ್ರೆ, ನಿಷೇಧ ರದ್ದುಪಡಿಸುತ್ತೇನೆ ಎಂದ ಬಜರಂಗ್ ಪೂನಿಯಾ
ನಾಡಾ ಅಮಾನತು ಆದೇಶದ ವಿರುದ್ಧ ಮೇಲ್ಮನವಿ; ಬಿಜೆಪಿ ಸೇರಿದ್ರೆ, ನಿಷೇಧ ರದ್ದುಪಡಿಸುತ್ತೇನೆ ಎಂದ ಬಜರಂಗ್ ಪೂನಿಯಾ (PTI)

ನವದೆಹಲಿ: ಡೋಪ್ ಪರೀಕ್ಷೆಗೆ ಮೂತ್ರ ಮಾದರಿ ನೀಡಲು ನಿರಾಕರಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ 4 ವರ್ಷಗಳ ಕಾಲ ಅಮಾನತು ಶಿಕ್ಷೆಗೆ ಗುರಿಯಾಗಿರುವ ಒಲಿಂಪಿಕ್ ಪದಕ ವಿಜೇತ ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಗೆ ಸೇರಿದರೆ ನಿಷೇಧ ರದ್ದುಪಡಿಸುತ್ತೇನೆ ಎಂದು ಹೇಳಿದ್ದಾರೆ. ಮಾರ್ಚ್ 10 ರಂದು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಟ್ರಯಲ್ಸ್ ಸಂದರ್ಭದಲ್ಲಿ ಮಾದರಿ ನೀಡಲು ನಿರಾಕರಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದರು ಎಂದು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA) ಹೇಳಿದೆ. ಡೋಪಿಂಗ್ ವಿರೋಧಿ ಸಂಸ್ಥೆಯು ಏಪ್ರಿಲ್ 23ರಂದು ಟೋಕಿಯೋ ಗೇಮ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟುವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿತ್ತು.

ನಿಷೇಧದ ಆದೇಶದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಬಜರಂಗ್ ಪೂನಿಯಾ, ಈ ಆದೇಶದಿಂದ ನಾನು ಆಘಾತಕ್ಕೆ ಒಳಗಾಗಿಲ್ಲ. ಏಕೆಂದರೆ ಕಳೆದ ಒಂದು ವರ್ಷದಿಂದ ವಿಚಾರಣೆ ನಡೆಯುತ್ತಿದೆ. ಹಾಗಾಗಿ ಆಘಾತಕಾರಿ ಅಲ್ಲ. ನಾಡಾಕ್ಕೆ ಮಾದರಿ ನೀಡಲು ನಾನು ನಿರಾಕರಿಸಿಲ್ಲ ಎಂದು ನಾನು ಹಿಂದೆಯೂ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ನಾಡಾ ಅಧಿಕಾರಿಗಳು ಡೋಪ್ ಪರೀಕ್ಷೆ ನಡೆಸಲು ನನ್ನ ಮನೆಗೆ ಭೇಟಿ ನೀಡಿದ್ದರು. ಆದರೆ ಅವಧಿ ಮೀರಿದ ಕಿಟ್​ ನೀಡಿದ್ದಕ್ಕೆ ಪ್ರಶ್ನಿಸಿದ್ದೆ. ಅಲ್ಲದೆ, 2023ರ ಡಿಸೆಂಬರ್​ನಲ್ಲಿ ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಸಹ ಹಾಕಿದ್ದೆ ಎಂದಿದ್ದಾರೆ.

ಸೇಡು ತೀರಿಸಿಕೊಳ್ಳುತ್ತಾರೆ ಎಂದ ಬಜರಂಗ್

ನಾನು ನನ್ನ ಮೂತ್ರದ ಮಾದರಿಯನ್ನು ನೀಡಿದ್ದೇನೆ. ಆದರೆ ನಂತರ ಕಿಟ್ ಅನ್ನು ಪರಿಶೀಲಿಸಿದೆ. ಅದರ ಅವಧಿ ಮೀರಿದೆ ಎಂದು ತಿಳಿಯಿತು. 2020, 2021, 2022 ದಿನಾಂಕದ ಅವಧಿ ಮೀರಿದ ಕಿಟ್​ಗಳಿದ್ದವು. ನಾನು ಮತ್ತು ನನ್ನ ತಂಡ ಕಿಟ್​ನ ವಿಡಿಯೋ ಮಾಡಿ, ಅದನ್ನು ನಾಡಾಗೆ ಮೇಲ್ ಮಾಡಿದ್ದೆ. ತಪ್ಪಿನ ಬಗ್ಗೆ ತಿಳಿಸಲು ನಾಡಾ ಅಧಿಕಾರಿಗಳಿಗೆ ಕರೆ ಮಾಡಿದ್ದೆವು. ಆದರೆ ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ಅದಕ್ಕೆ ನಾಡಾದಿಂದ ಸ್ಪಷ್ಟೀಕರಣ ಕೇಳಿದ್ದೆ. ಆದರೆ ಇದುವರೆಗೂ ಮೌನ ವಹಿಸಿದೆ ಎಂದಿದ್ದಾರೆ.

ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ, ಬಿಜೆಪಿ ರಾಜಕೀಯ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೀರ್ಘಾವಧಿಯ ಧರಣಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರಣ ನಮ್ಮನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡುತ್ತಿದೆ. ಮತ್ತೊಂದೆಡೆ ಸರ್ಕಾರವು ಬ್ರಿಜ್​ಭೂಷಣ್ ಅವರನ್ನು ಮರಳಿ ಪಡೆಯಲು ಚಿಂತನೆ ನಡೆಸುತ್ತಿದೆ ಎಂದು ಕುಸ್ತಿಪಟು ಆರೋಪಿಸಿದ್ದಾರೆ. ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸುವ ನಮ್ಮ ಪ್ರತಿಭಟನೆಯಿಂದ ಎಲ್ಲಾ ಏಜೆನ್ಸಿಗಳು ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅವರು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ನಾನು ಕಳೆದ 10-12 ವರ್ಷಗಳಿಂದ ಸ್ಪರ್ಧಿಸುತ್ತಿದ್ದೇನೆ. ನಾನು ಎಲ್ಲಾ ಟೂರ್ನಿಗಳಲ್ಲೂ ಭಾರತ ಶಿಬಿರಗಳಲ್ಲಿ ಮಾದರಿಯನ್ನು ನೀಡಿದ್ದೇನೆ. ಆದರೆ ನಮ್ಮನ್ನು ಒಡೆಯುಬೇಕೆಂಬುದು ಸರ್ಕಾರದ ಕೆಲಸವಾಗಿದೆ. ಅವರ ಅಡಿ ಆಳಾಗಿ ಇರುವುದು, ಸಲಾಂ ಹೊಡೆಯುತ್ತಾ ಇರಬೇಕು. ನಾನು ಬಿಜೆಪಿಗೆ ಸೇರಿದರೆ ನನ್ನ ಎಲ್ಲಾ ನಿಷೇಧಗಳನ್ನು ತೆಗೆದುಹಾಕಲಾಗುವುದು ಎಂದು ಬಜರಂಗ್ ಹೇಳಿಕೊಂಡಿದ್ದಾರೆ. ಬಜರಂಗ್ ಅವರು ಇದೇ ವರ್ಷ ಏಪ್ರಿಲ್ 23ರಿಂದ ಅನ್ವಯವಾಗುವಂತೆ 2028ರ ಏಪ್ರಿಲ್ 22ರ ತನಕ ಅಮಾನತು ಶಿಕ್ಷೆ ಇರಲಿದೆ. ಈ ಅವಧಿಯಲ್ಲಿ ಬಜರಂಗ್ ಯಾವುದೇ ಸ್ಪರ್ಧಾತ್ಮಕ ಕುಸ್ತಿಯಲ್ಲಿ ಅಥವಾ ವಿದೇಶದಲ್ಲಿ ತರಬೇತುದಾರ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಮೇಲ್ಮನವಿ ಸಲ್ಲಿಸುತ್ತೇನೆ ಎಂದ ಬಜರಂಗ್ ಪೂನಿಯಾ

ನಾಡಾ ವಿಧಿಸಿರುವ 4 ವರ್ಷಗಳ ನಿಷೇಧದ ವಿರುದ್ಧ ಸ್ವಿಟ್ಜರ್ಲೆಂಡ್‌ನ ಲೌಸೇನ್‌ನಲ್ಲಿರುವ ಕೋರ್ಟ್ ಆಫ್ ಸ್ಪೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಬಜರಂಗ್ ಪುನಿಯಾ ಹೇಳಿದ್ದಾರೆ. ನಾನು ಸಿಎಎಸ್​ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ. ಕೊನೆಯವರೆಗೂ ಹೋರಾಡುತ್ತೇನೆ. ನನ್ನ ಬಳಿ ಎಲ್ಲಾ ಪುರಾವೆಗಳಿವೆ ಎಂದು ಪುನಿಯಾ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ