ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘನೆ; ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ 4 ವರ್ಷ ಬ್ಯಾನ್
ಕನ್ನಡ ಸುದ್ದಿ  /  ಕ್ರೀಡೆ  /  ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘನೆ; ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ 4 ವರ್ಷ ಬ್ಯಾನ್

ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘನೆ; ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ 4 ವರ್ಷ ಬ್ಯಾನ್

Bajrang Punia Ban: ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ನಾಲ್ಕು ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಅವರು ಯಾವುದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.

ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘನೆ; ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ 4 ವರ್ಷ ಬ್ಯಾನ್
ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘನೆ; ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ 4 ವರ್ಷ ಬ್ಯಾನ್ (Commonwealth Sport Twitter)

ನವದೆಹಲಿ: ಟೊಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ಮಾರ್ಚ್ 10 ರಂದು ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ಸ್ ಸಮಯದಲ್ಲಿ ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಲಾಗಿದೆ. ಹರಿಯಾಣದ ಸೋನೆಪತ್‌ನಲ್ಲಿ ಡೋಪಿಂಗ್ ಪರೀಕ್ಷೆಗೆ ಮೂತ್ರ ಮಾದರಿ ಸಲ್ಲಿಸಲು ನಿರಾಕರಿಸಿದ ಕಾರಣಕ್ಕೆ ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ (NADA) 4 ವರ್ಷಗಳ ಕಾಲ ಅಮಾನತುಗೊಳಿಸಿದೆ.

ಅಮಾನತಿನ ಕಾರಣ ಸ್ಪರ್ಧಾತ್ಮಕ ಕುಸ್ತಿಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಪಾಲ್ಗೊಳ್ಳುವಂತಿಲ್ಲ. ಇದೇ ವರ್ಷ ಏಪ್ರಿಲ್ 23ರಂದು ಅವರನ್ನು ನಾಡಾ ತಾತ್ಕಾಲಿಕವಾಗಿ ಅಮಾನತು ಮಾಡಿತ್ತು. ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯೂ ಇದಕ್ಕೆ ಅಂಗೀಕರಿಸಿ ಆದೇಶ ಹೊರಡಿಸಿತ್ತು. ಆದರೆ ಬಜರಂಗ್ ತಾತ್ಕಾಲಿಕ ಅಮಾನತಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಕ್ರಮ ಪ್ರಶ್ನಿಸಿ ಮೇ 31ರಂದು ನಾಡಾಗೆ ಅರ್ಜಿ ಹಾಕಿದ್ದರು. ಬಳಿಕ ನಾಡಾದ ಶಿಸ್ತು ವಿರೋಧಿ ಡೋಪಿಂಗ್ ಸಮಿತಿ (ADDP) ಆರೋಪಕ್ಕೆ ಸಂಬಂಧಿಸಿ ಔಪಚಾರಿಕ ನೋಟಿಸ್ ನೀಡುವ ತನಕ ಅಮಾನತು ತಾತ್ಕಾಲಿಕವಾಗಿ ತೆಗೆದುಹಾಕಿತು. ಜೂನ್ 23ರಂದು ನಾಡಾಗೆ, ಎಡಿಡಿಪಿ ಔಪಚಾರಿಕವಾಗಿ ಆರೋಪಗಳನ್ನು ಸೂಚಿಸಿತು.

ಅಂತಿಮ ವಿಚಾರಣೆ ಬಳಿಕ ನಿರ್ಧಾರ

ಸಹ ಕುಸ್ತಿಪಟು ವಿನೇಶ್ ಫೋಗಟ್ ಅವರೊಂದಿಗೆ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಮತ್ತು ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡಿದ್ದ ಬಜರಂಗ್ ಅವರು ಜುಲೈ 11ರಂದು ಆರೋಪಗಳ ವಿರುದ್ಧ ಸವಾಲು ಹಾಕಿದ್ದರು. ಆದರೆ ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು ಅಂತಿಮ ವಿಚಾರಣೆ ನಡೆಸಿದ್ದ ನಾಡಾ, ನವೆಂಬರ್ 26ರಂದು ನಾಲ್ಕು ವರ್ಷಗಳ ಕಾಲ ಕುಸ್ತಿಯಿಂದ ಅಮಾನತು ಮಾಡಿ ನಿರ್ಧಾರ ಕೈಗೊಂಡಿದೆ. ಆರ್ಟಿಕಲ್ 10.3.1ರ ಅಡಿಯಲ್ಲಿನ ನಿರ್ಬಂಧಗಳಿಗೆ ಬಜರಂಗ್ ಅವರೇ ಹೊಣೆಗಾರ ಎಂದು ತೀರ್ಮಾನಿಸಿದ ಎಡಿಡಿಪಿ, ಈ ಅಮಾನತು ಪ್ರಕ್ರಿಯೆ ಏಪ್ರಿಲ್ 23ರಿಂದಲೇ ಅನ್ವಯವಾಗುತ್ತಿದೆ ಎಂದು ತಿಳಿಸಿದೆ.

ನಾಡಾ ವಿರುದ್ಧ ಸಿಡಿದೆದ್ದಿದ್ದ ಬಜರಂಗ್ ಪೂನಿಯಾ

ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಡೋಪಿಂಗ್ ನಿಯಂತ್ರಣಕ್ಕೆ ಸಂಬಂಧಿಸಿ ತನಗೆ ಅನ್ಯಾಯವಾಗಿದೆ ಎಂದು ಬಜರಂಗ್ ನಿರಂತರವಾಗಿ ಹೇಳಿಕೊಂಡಿದ್ದರು. ನಾನು ಮಾದರಿ ನೀಡಲು ಎಂದಿಗೂ ನಿರಾಕರಿಸಲಿಲ್ಲ ಎಂದಿದ್ದರು. ಆದರೆ, 2023ರ ಡಿಸೆಂಬರ್​​​ನಲ್ಲಿ ತಮ್ಮ ಮಾದರಿಗಳಿಗೆ ಕಳುಹಿಸಲಾದ ಅವಧಿ ಮೀರಿದ ಪರೀಕ್ಷಾ ಕಿಟ್​​ಗಳ ಬಳಕೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದೆ. ಅಲ್ಲದೆ, ಈ ಬಗ್ಗೆ ನಾಡಾದಿಂದ ಸ್ಪಷ್ಟೀಕರಣ ಕೋರಿದ್ದೆ ಎಂದು ಈ ಹಿಂದೆ ಹೇಳಿದ್ದರು.

ಆದರೆ ನಾನು ಕೇಳಿದ್ದ ಪ್ರಶ್ನೆಗಳಿಗೆ ನಾಡಾ ಬಳಿ ಉತ್ತರ ಇಲ್ಲ. ನಾಡಾ ಮಾಡಿದ ತಪ್ಪುಗಳಿಗೆ ಹೊಣೆಗಾರರಾಗಲು ಸಿದ್ಧರಿಲ್ಲ. ಕ್ರೀಡಾಪಟುಗೆ ಕಿರುಕುಳ ನೀಡುವುದು ಅವರ (ನಾಡಾ) ಉದ್ದೇಶವಾಗಿದೆ. ಅವರ ವಿರುದ್ಧ ಮಾತನಾಡಿದವರನ್ನು ಗುರಿಯಾಗಿಸಿ ಇಂತಹ ಕೆಲಸ ಮುಂದಾಗುತ್ತಾರೆ. ಅವಧಿ ಮೀರಿದ ಕಿಟ್ ಕೊಟ್ಟಿದ್ದರ ಬಗ್ಗೆ ಏಕೆ ಮೌನ ವಹಿಸಿದೆ. ಮುಂದಿನ ಪಂದ್ಯಕ್ಕೆ ಕೇವಲ 20 ನಿಮಿಷಗಳಿದ್ದ ಅವಧಿಯಲ್ಲಿ ಮಾದರಿ ಸಂಗ್ರಹಿಸಲು ಒತ್ತಡ ಹಾಕಿದ್ದು ಏಕೆ? ಇದ್ಯಾವುದಕ್ಕೂ ಉತ್ತರಿಸುತ್ತಿಲ್ಲ. ಆದರೂ ತನ್ನನ್ನು ತಾನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದರು.

ಅವಧಿ ಮೀರಿದ ಕಿಟ್​ಗಳಿಗೆ ಸಂಬಂಧಿಸಿ ನಾಡಾದಿಂದ ಸ್ಪಷ್ಟನೆ ಪಡೆದ ನಂತರ ಮಾದರಿ ನೀಡಲು ತಾನು ಯಾವಾಗಲೂ ಸಿದ್ಧನಿದ್ದೇನೆ ಎಂದು ಬಜರಂಗ್ ಹೇಳಿದ್ದರು. ಆದಾಗ್ಯೂ, ಅವರು (ಬಜರಂಗ್) ಸಹಕರಿಸಲು ನಿರಾಕರಿಸಿದ್ದು ಉದ್ದೇಶಪೂರ್ವಕ ಮತ್ತು ಉದ್ದೇಶಪೂರ್ವಕವಾಗಿದೆ ಎಂದು ನಾಡಾ ಸಮರ್ಥಿಸಿಕೊಂಡಿದೆ. ಡೋಪಿಂಗ್ ವಿರೋಧಿ ನಿಯಮಗಳು, 2021ರ ಆರ್ಟಿಕಲ್ 20.1 ಮತ್ತು 20.2 ರಲ್ಲಿ ವಿವರಿಸಿದಂತೆ ಅವರು ತಮ್ಮ ಜವಾಬ್ದಾರಿಗಳ ಬಗ್ಗೆ ಸ್ಪಷ್ಟ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ ಎಂದು ಪ್ರತಿಪಾದಿಸಿದೆ.

ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.