ಇತಿಹಾಸದ ಪುಸ್ತಕದಲ್ಲಿ ಹೊಸ ದಾಖಲೆ ಪುಟ ತೆರೆದ ಲಿಯೊನೆಲ್ ಮೆಸ್ಸಿ; ಫುಟ್ಬಾಲ್ ಜಗತ್ತಿನಲ್ಲಿ ಈ ಸಾಧನೆಗೈದ ಮೊದಲ ಆಟಗಾರ
Jul 12, 2024 05:53 PM IST
ಇತಿಹಾಸದ ಪುಸ್ತಕದಲ್ಲಿ ಹೊಸ ದಾಖಲೆ ಪುಟ ತೆರೆದ ಲಿಯೊನೆಲ್ ಮೆಸ್ಸಿ; ಫುಟ್ಬಾಲ್ ಜಗತ್ತಿನಲ್ಲಿ ಈ ಸಾಧನೆಗೈದ ಮೊದಲ ಆಟಗಾರ
- Lionel Messi World Record: ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಇತಿಹಾಸದಲ್ಲಿ ಏಳು ವಿಭಿನ್ನ ಅಂತಾರಾಷ್ಟ್ರೀಯ ಟೂರ್ನಿಗಳ ಫೈನಲ್‌ಗೆ ತಲುಪಿದ ವಿಶ್ವದ ಮೊದಲ ಆಟಗಾರ ಎನಿಸಿದ್ದಾರೆ.
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟ ಲಿಯೊನೆಲ್ ಮೆಸ್ಸಿ ಅವರು ಅರ್ಜೆಂಟೀನಾ ತಂಡವನ್ನು 2024ರ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಫೈನಲ್‌ಗೆ ಮುನ್ನಡೆಸಿದ ನಂತರ ದಾಖಲೆ ಪುಸ್ತಕಗಳಲ್ಲಿ ನೂತನ ದಾಖಲೆ ಪುಟವೊಂದನ್ನು ತೆರೆದಿದ್ದಾರೆ. ನ್ಯೂಜೆರ್ಸಿಯ ಮೆಟ್ ಲೈಫ್ ಸ್ಟೇಡಿಯಂನಲ್ಲಿ ನಡೆದ ಸೆಮೀಸ್ನಲ್ಲಿ ಕೆನಡಾ ತಂಡವನ್ನು 2-0 ಅಂತರದ ಗೋಲುಗಳಿಂದ ಸೋಲಿಸಿದ ವಿಶ್ವ ಚಾಂಪಿಯನ್, ಫೈನಲ್‌ನಲ್ಲಿ ಕೊಲಂಬಿಯಾವನ್ನು ಎದುರಿಸಲಿದೆ.
38ರ ಹರೆಯದ ಮೆಸ್ಸಿ ಅವರು ಟೂರ್ನಿಯುದ್ದಕ್ಕೂ ಫಿಟ್ನೆಸ್ ಸಮಸ್ಯೆ ಎದುರಿಸುತ್ತಿದ್ದರೂ ಯಾವುದೇ ಪಂದ್ಯ ತಪ್ಪಿಸಿಕೊಂಡಿಲ್ಲ. ಕ್ವಾರ್ಟರ್ಫೈನಲ್ನಲ್ಲಿ ಈಕ್ವೆಡಾರ್ ವಿರುದ್ಧ ಶೂಟೌಟ್‌ನಲ್ಲಿ ಪೆನಾಲ್ಟಿ ತಪ್ಪಿಸಿಕೊಂಡ ಮೆಸ್ಸಿ, ಸೆಮಿಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಎಂಝೋ ಫೆರ್ನಾಂಡಿಸ್ ಅವರ ಹೊಡೆತವನ್ನು ನೆಟ್‌ಗೆ ತಿರುಗಿಸಿದ ಅವರು ಟೂರ್ನಿಯಲ್ಲಿ ಮೊದಲ ಗೋಲು ಗಳಿಸಲು ಯಶಸ್ವಿಯಾದರು. ಮೆಸ್ಸಿಗೆ ಮ್ಯಾನ್ ಆಫ್ ದಿ ಪ್ರಶಸ್ತಿಯೂ ದೊರೆಯಿತು. ತಂಡವನ್ನು ಫೈನಲ್ಗೇರಿಸಿದ ಲಿಯೊನೆಲ್, ವಿಶ್ವದಾಖಲೆಯನ್ನೂ ನಿರ್ಮಿಸಿದರು.
ಬೃಹತ್ ವಿಶ್ವದಾಖಲೆ ನಿರ್ಮಿಸಿದ ಲಿಯೋನೆಲ್ ಮೆಸ್ಸಿ
2024ರ ಕೋಪಾ ಅಮೆರಿಕಾದ ಫೈನಲ್ ತಲುಪಿದ ನಂತರ ಲಿಯೋನೆಲ್ ಮೆಸ್ಸಿ, ಫುಟ್ಬಾಲ್ ಇತಿಹಾಸದಲ್ಲಿ 7 ವಿಭಿನ್ನ ಅಂತಾರಾಷ್ಟ್ರೀಯ ಟೂರ್ನಿಗಳ ಫೈನಲ್‌ಗೆ ತಲುಪಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅರ್ಜೆಂಟೀನಾದ ದಿಗ್ಗಜ ತನ್ನ ವೃತ್ತಿಜೀವನದಲ್ಲಿ 5ನೇ ಬಾರಿಗೆ ಕೋಪಾ ಅಮೆರಿಕಾ ಫೈನಲ್ ಆಡಲು ಸಜ್ಜಾಗಿದ್ದಾರೆ. ಈ ಹಿಂದೆ 2007, 2015, 2016, 2021ರಲ್ಲಿ ಈ ಟೂರ್ನಿಯ ಫೈನಲ್ ಆಡಿದ್ದಾರೆ. 2024ರಲ್ಲಿ ಫೈನಲ್ ಆಡಲು ಸಜ್ಜಾಗಿದ್ದಾರೆ.
ಅಲ್ಲದೆ, ಅವರು ತಮ್ಮ ವೃತ್ತಿಜೀವನದಲ್ಲಿ ಎರಡು ಫಿಫಾ ವಿಶ್ವಕಪ್ ಫೈನಲ್ಗಳಲ್ಲೂ (2014 ಮತ್ತು 2022) ಆಡಿದ್ದಾರೆ. ಇದರೊಂದಿಗೆ ಈ ಹಿಂದೆ ಬ್ರೆಜಿಲ್‌ನ ಲೆಜೆಂಡರಿ ಜೋಡಿ ಕೆಫು ಮತ್ತು ಕಾರ್ಲೋಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ ಮುರಿದಿದ್ದಾರೆ. ಅವರು ತಲಾ 6 ಬಾರಿ ಫೈನಲ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. ಕೆಫು ಅವರು ಮೂರು ಕೋಪಾ ಅಮೆರಿಕಾ ಫೈನಲ್ (1997, 1999, 2004), ಮೂರು ಫಿಫಾ ವಿಶ್ವಕಪ್ (1994, 1998, 2002) ಫೈನಲ್ಗಳನ್ನು ಆಡಿದ್ದಾರೆ. ಕಾರ್ಲೋಸ್ ಅವರು ಮೂರು ಕೋಪಾ ಅಮೆರಿಕಾ ಫೈನಲ್ (1997, 1999, 2004), ಫಿಫಾ ವಿಶ್ವಕಪ್ (1994, 1998, 2002) ಫೈನಲ್ಗಳನ್ನು ಆಡಿದ್ದಾರೆ.
ಮೊದಲ ಟ್ರೋಫಿ ಗೆದ್ದಿದ್ದು 2021ರಲ್ಲಿ
ಮೆಸ್ಸಿ ತನ್ನ ವೃತ್ತಿಜೀವನದ ಮೊದಲ ಪಂದ್ಯಾವಳಿಯನ್ನು ಗೆಲ್ಲಲು 2021 ರವರೆಗೆ ಕಾಯಬೇಕಾಯಿತು. ಅರ್ಜೆಂಟೀನಾ 2007ರ ಕೋಪಾ ಅಮೆರಿಕಾ ಫೈನಲ್‌ನಲ್ಲಿ ಬ್ರೆಜಿಲ್ ವಿರುದ್ಧ ಸೋತತ್ತು. 2015 ಮತ್ತು 2016 ಎರಡರಲ್ಲೂ ಚಿಲಿ ವಿರುದ್ಧ ಶರಣಾಗಿತ್ತು. 2014ರಲ್ಲಿ ಫಿಫಾ ವಿಶ್ವಕಪ್ ಫೈನಲ್ನಲ್ಲೂ ಜರ್ಮನಿ ಎದುರು ಪರಾಭವಗೊಂಡಿದ್ದರು. ತನ್ನ ವೃತ್ತಿಜೀವನದ ಮೊದಲ ನಾಲ್ಕು ಫೈನಲ್‌ಗಳಲ್ಲಿ ಸೋತಿದ್ದ ಮೆಸ್ಸಿ, 2021ರಲ್ಲಿ ಕೋಪಾ ಅಮೆರಿಕ ಪ್ರಶಸ್ತಿ ಗೆದ್ದರು. 2022ರ ಫಿಫಾ ವಿಶ್ವಕಪ್ನಲ್ಲಿ ಅರ್ಜೆಂಟೀನಾವನ್ನು ಚಾಂಪಿಯನ್ ಮಾಡಿದ್ದರು.
ಪ್ರಸ್ತುತ ಮೆಸ್ಸಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 2024ರ ಕೋಪಾ ಅಮೆರಿಕಾ ಫೈನಲ್‌ಗೆ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿ ತಮ್ಮ ವೃತ್ತಿಜೀವನದ 3ನೇ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆಲ್ಲುವ ಅವಕಾಶ ಹೊಂದಿದ್ದಾರೆ. 2024ರ ಕೋಪಾ ಅಮೆರಿಕ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ಹಾಗೂ ಅರ್ಜೆಟೀನಾ ತಂಡಗಳು ಸೆಣಸಾಟ ನಡೆಸಲಿದ್ದು, ಈ ಪಂದ್ಯಕ್ಕೆ ಜುಲೈ 1ರ ಭಾನುವಾರ ಮಿಯಾಮಿಯ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ.