ಪಾಕಿಸ್ತಾನದ ಮಾಜಿ ಬೌಲಿಂಗ್ ಕೋಚ್ ಮೊರೆ ಹೋದ ಗೌತಮ್ ಗಂಭೀರ್; ವಿದೇಶಿ ಕೋಚ್ ಬೇಡವೆಂದರೂ ಪಟ್ಟು ಬಿಡದ ಗೌತಿ
Gautam Gambhir: ಗೌತಮ್ ಗಂಭೀರ್ ಅವರು ದಕ್ಷಿಣ ಆಫ್ರಿಕಾದ ದಿಗ್ಗಜ ಮಾರ್ನೆ ಮಾರ್ಕೆಲ್ ಅವರನ್ನು ಭಾರತದ ಬೌಲಿಂಗ್ ಕೋಚ್ ಆಗಿ ನೇಮಿಸಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ. ಆದರೆ ಬಿಸಿಸಿಐ ವಿದೇಶಿ ಸಹಾಯಕ ಸಿಬ್ಬಂದಿ ನೇಮಿಸಲು ಒಪ್ಪುತ್ತದೆಯೇ?
ದಕ್ಷಿಣ ಆಫ್ರಿಕಾ ತಂಡದ ಮಾಜಿ ವೇಗಿ Morne Morkel ಅವರನ್ನು ಭಾರತ ತಂಡದ ಬೌಲಿಂಗ್ ಕೋಚ್ ಆಗಿ ಪರಿಗಣಿಸುವಂತೆ ನೂತನ ಹೆಡ್ಕೋಚ್ ಗೌತಮ್ ಗಂಭೀರ್ ಅವರು ಬಿಸಿಸಿಐಗೆ ಮನವಿ ಮಾಡಿದ್ದಾರೆ. ವಿನಯ್ ಕುಮಾರ್ ಮತ್ತು ಜಹೀರ್ ಖಾನ್ ನಂತರ ಮಾರ್ಕೆಲ್ ಹೆಸರು ಬೌಲಿಂಗ್ ಕೋಚ್ ಸ್ಥಾನಕ್ಕೆ ತೇಲಿ ಬರುತ್ತಿದೆ. ಆ ಮೂಲಕ ಜಹೀರ್ ಖಾನ್ಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಹೆಚ್ಚು ಅನುಭವ ಹೊಂದಿರದ ಕಾರಣ ವಿನಯ್ ಕುಮಾರ್ ಆಯ್ಕೆಗೆ ಬಿಸಿಸಿಐ ಹಿಂದೇಟು ಹಾಕಿತು.
ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿದ್ದ ಮಾರ್ಕೆಲ್ ಆಯ್ಕೆ ಮಾಡುವಂತೆ ಗಂಭೀರ್ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಮಾರ್ಕೆಲ್ ಪಿಸಿಬಿಯೊಂದಿಗಿನ ಒಪ್ಪಂದವನ್ನು ಅಕಾಲಿಕವಾಗಿ ಕೊನೆಗೊಳಿಸಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿರುವ ಮಾರ್ಕೆಲ್ ಅವರೊಂದಿಗೆ ಬಿಸಿಸಿಐ ಈಗಾಗಲೇ ಚರ್ಚೆ ನಡೆಸಿದೆ ಎಂದು ವರದಿ ತಿಳಿಸಿದೆ. ಆದರೆ, ಅಂತಿಮ ನಿರ್ಧಾರವಾಗಿಲ್ಲ.
ಮುಂದಿನ ವಾರದಲ್ಲಿ ಭಾರತದ ಮುಂದಿನ ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ಗಳನ್ನು ಅಂತಿಮಗೊಳಿಸಲು ಮಂಡಳಿ ವಿಫಲವಾದರೆ, ವಿವಿಎಸ್ ಲಕ್ಷ್ಮಣ್ ಅವರ ಎನ್ಸಿಎ ಸಹಾಯಕ ಸಿಬ್ಬಂದಿಯೇ ಜುಲೈ 27ರಿಂದ ಶುರುವಾಗುವ ಶ್ರೀಲಂಕಾ ಎದುರಿನ ಟಿ20ಐ ಸರಣಿಗೆ ಗಂಭೀರ್ ಅವರೊಂದಿಗೆ ಪ್ರಯಾಣಿಸಬಹುದು. ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅಧಿಕಾರಾವಧಿಯೂ ವಿಶ್ವಕಪ್ನೊಂದಿಗೆ ಕೊನೆಗೊಂಡಿತು. ಆದಾಗ್ಯೂ, ದಿಲೀಪ್ ವಿಸ್ತರಣೆ ಪಡೆಯಬಹುದು.
ಒಟ್ಟಿಗೆ ಕೆಲಸ ಮಾಡಿದ್ದಾರೆ ಗಂಭೀರ್ - ಮಾರ್ಕೆಲ್
ಮಾರ್ಕೆಲ್ ಮತ್ತು ಗಂಭೀರ್ ಬಹಳ ಉತ್ತಮವಾದ ಸಂಬಂಧ ಹೊಂದಿದ್ದಾರೆ. ತಾನು ಎದುರಿಸಿದ ಕಠಿಣ ಬೌಲರ್ಗಳಲ್ಲಿ ಮಾರ್ಕೆಲ್ ಕೂಡ ಒಬ್ಬರು ಎಂದು ಗಂಭೀರ್ ಈ ಹಿಂದೆ ಬಣ್ಣಿಸಿದ್ದರು. ಗಂಭೀರ್ ಅವರು ನಾಯಕರಾಗಿದ್ದಾಗ ಕೋಲ್ಕತಾ ನೈಟ್ ರೈಡರ್ಸ್ಗೆ ಮಾರ್ಕೆಲ್ ಅವರನ್ನು ಆಯ್ಕೆ ಮಾಡಿದ್ದರು. ಮಾರ್ಕೆಲ್ 2014ರಿಂದ 2016ರವರೆಗೆ ಕೆಕೆಆರ್ ಪರ ಆಡಿದ್ದರು.
2006 ಮತ್ತು 2018ರ ನಡುವೆ ದಕ್ಷಿಣ ಆಫ್ರಿಕಾ ತಂಡದ ಪರ 86 ಟೆಸ್ಟ್, 117 ಏಕದಿನ ಮತ್ತು 44 ಟಿ20ಐ ಪಂದ್ಯಗಳಲ್ಲಿ ಪ್ರತಿನಿಧಿಸಿದ ವೇಗದ ಬೌಲರ್, ಗಂಭೀರ್ ಅವರ ನಿಕಟ ಸಂಪರ್ಕ ಮುಂದುವರಿಸಿದರು. ಗಂಭೀರ್ ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಆಗಿದ್ದಾಗ ಮಾರ್ಕೆಲ್ರನ್ನು ಅವರ ಬೌಲಿಂಗ್ ಕೋಚ್ ಆಗಿ ನೇಮಿಸಿಕೊಂಡಿದ್ದರು. ಎಲ್ಎಸ್ಜಿ ಪರ ಇಬ್ಬರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ ಗಂಭೀರ್ ಕೆಕೆಆರ್ಗೆ ಮರಳಿದರೆ, ಮಾರ್ಕೆಲ್ ಅದೇ ತಂಡದಲ್ಲೇ ಮುಂದುವರೆದಿದ್ದಾರೆ.
ಮಾರ್ಕೆಲ್ ಅವರನ್ನು ಸೇರಿಸಿಕೊಳ್ಳಲು ಒಂದೆರಡು ಅಡೆತಡೆಗಳಿವೆ. ವಿದೇಶಿ ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮಂಡಳಿಯು ಹೆಚ್ಚು ಉತ್ಸುಕತೆ ತೋರುತ್ತಿಲ್ಲ. ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿಯಲ್ಲಿ ಯಾವುದೇ ವಿದೇಶಿ ಕೋಚ್ಗಳನ್ನು ನೇಮಿಸಿಕೊಂಡಿರಲಿಲ್ಲ. ಬಿಸಿಸಿಐ ಜಾಂಟಿ ರೋಡ್ಸ್ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ತಿರಸ್ಕರಿಸಲು ಇದು ಒಂದು ಪ್ರಮುಖ ಕಾರಣವಾಗಿದೆ. ಇಷ್ಟಿದ್ದರೂ ಗಂಭೀರ್, ಮತ್ತೆ ವಿದೇಶಿ ಕೋಚ್ ಮೊರೆ ಹೋಗಿದ್ದು, ಪಟ್ಟು ಹಿಡಿದಿದ್ದಾರೆ. ಇವರ ಮಧ್ಯೆ ಜಹೀರ್ ಖಾನ್ ಆಯ್ಕೆ ಕುರಿತು ಚಿಂತನೆಯೂ ನಡೆಯುತ್ತಿದೆ.
ಒಪ್ಪುತ್ತಾರಾ ಮಾರ್ಕೆಲ್?
ಆದರೂ ಬಿಸಿಸಿಐ ಜೊತೆ ಗಂಭೀರ್ ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ. ಗಂಭೀರ್ ಬಿಸಿಸಿಐಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರೆ, 2027ರ ಅಂತ್ಯದವರೆಗೆ ವರ್ಷದಲ್ಲಿ 10 ತಿಂಗಳು ಭಾರತೀಯ ಕ್ರಿಕೆಟ್ ತಂಡದ ಪರ ಸೇವೆ ಸಲ್ಲಿಸಲು ಮಾರ್ಕೆಲ್ ಅವರನ್ನು ಮನವೊಲಿಸುವುದು ಕಷ್ಟವಾಗಲಿದೆ. ಏಕೆಂದರೆ ಅವರು ಉತ್ತರ ಸಿಡ್ನಿಯ ಐಷಾರಾಮಿ ಸೀಫೋರ್ತ್ ಉಪನಗರದಲ್ಲಿ ಚಾನೆಲ್ 9ನಲ್ಲಿ ಕ್ರೀಡಾ ನಿರೂಪಕಿ ಆಗಿರುವ ತಮ್ಮ ಪತ್ನಿ ರೋಜ್ ಕೆಲ್ಲಿ ಅವರೊಂದಿಗೆ ವಾಸಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರನ್ನು ಬಿಟ್ಟು ಬರುವುದು ಕಷ್ಟ ಎಂದು ಹೇಳಲಾಗುತ್ತಿದೆ.
ಆದರೆ, ಮಾರ್ಕೆಲ್ ಕೂಡ ಇದಕ್ಕೆ ಸಮ್ಮತಿ ನೀಡಿದರೆ ಭಾರತದ ಕೋಚಿಂಗ್ ಸಿಬ್ಬಂದಿಗೆ ಅತ್ಯುತ್ತಮ ಸೇರ್ಪಡೆಯಾಗಲಿದ್ದಾರೆ. ಆಟದ ಕುರಿತು ಅತ್ಯುತ್ತಮ ಜ್ಞಾನ ಹೊಂದಿದ್ದಾರೆ. ಅವರ ಕಿರು ಕೋಚಿಂಗ್ ವೃತ್ತಿಜೀವನದಲ್ಲಿ ಅತ್ಯುತ್ತಮ ಹೆಸರು ಸಂಪಾದಿಸಿದ್ದಾರೆ. ಪಾಕಿಸ್ತಾನ ತಂಡದೊಂದಿಗೆ ಸೇವೆ ಸಲ್ಲಿಸಿದ ಸಮಯದಲ್ಲಿ ನಸೀಮ್ ಶಾ, ಹ್ಯಾರಿಸ್ ರವೂಫ್ ಮತ್ತು ವಾಸಿಮ್ ಜೂನಿಯರ್ ಅವರು ಬೆಳೆದಿದ್ದೇ ಮಾರ್ಕೆಲ್ ಗರಡಿಯಲ್ಲಿ.
ವಿಭಾಗ